Bhagyalakshmi Serial: ಲೊಹ್ರಿ ಪಾರ್ಟಿಯಲ್ಲಿ ಗಾಳಿಪಟ ಸ್ಪರ್ಧೆ; ನಾನೇ ಗೆಲ್ಲೋದು ಅಂತ ಕನಸು ಕಾಣ್ತಿರೋ ತಾಂಡವ್; ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Serial Today Episode: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಜನವರಿ 25ರ ಸಂಚಿಕೆ ಹೀಗಿದೆ. ಲೊಹ್ರಿ ಪಾರ್ಟಿಗೆ ಬಂದ ಜೋಡಿಗಳಿಗೆ ಬಾಸ್ ಹಾಗೂ ಪತ್ನಿ ಗಾಳಿಪಟ ಸ್ಪರ್ಧೆ ಆಯೋಜಿಸುತ್ತಾರೆ. ಆದರೆ ತಾಂಡವ್ ಒಲ್ಲದ ಮನಸ್ಸಿನಿಂದಲೇ ಭಾಗ್ಯಾ ಜೊತೆ ನಿಲ್ಲುತ್ತಾನೆ.
Bhagyalakshmi Kannada Serial: ಬಾಸ್ ಮನೆ ಲೊಹ್ರಿ ಪಾರ್ಟಿಯಲ್ಲಿ ಕುಸುಮಾ, ಭಾಗ್ಯಾ ಮಕ್ಕಳು , ತಾಂಡವ್ ಎಲ್ಲರೂ ಒಟ್ಟಿಗೆ ಸೇರಿದ್ದಾರೆ. ಮನೆಯವರನ್ನು ನೋಡುತ್ತಿದ್ದಂತೆ ತಾಂಡವ್ ಕೋಪಗೊಳ್ಳುತ್ತಾನೆ. ಭಾಗ್ಯಾ ನನಗೆ ತಕ್ಕ ಹೆಂಡತಿಯಲ್ಲ ಎಂದು ತಾಂಡವ್ ಅಮ್ಮನ ಬಳಿ ಮನಸ್ಸಿನಲ್ಲಿರುವುದನ್ನು ಬಾಯಿ ಬಿಡುತ್ತಾನೆ. ಮಗನ ಮಾತು ಕೇಳಿ ಕುಸುಮಾ ಬೇಸರಗೊಳ್ಳುತ್ತಾಳೆ.
ಸುಂದರಿ ಬಗ್ಗೆ ಅತ್ತೆಗೆ ಹೇಳುವ ಭಾಗ್ಯಾ
ಇತ್ತ ಭಾಗ್ಯಾ, ಕಳ್ಳಿ ಸುಂದರಿಯ ಬಗ್ಗೆ ಹೇಳಲು ಅತ್ತೆಯ ಬಳಿ ಓಡಿ ಬರುತ್ತಾಳೆ. ನಮ್ಮ ಮನೆಯಲ್ಲಿ ಬೆಳ್ಳಿ ಸಾಮಗ್ರಿಗಳನ್ನು ಕದ್ದ ಕಳ್ಳಿ ಇಲ್ಲೇ ಇದ್ದಾಳೆ ಎಂದು ಹೇಳುತ್ತಾಳೆ. ಅದನ್ನು ಕೇಳಿ ಕುಸುಮಾ ಗಾಬರಿ ಆಗುತ್ತಾಳೆ. ಇದನ್ನು ಬಾಸ್ ಹಾಗೂ ಪತ್ನಿ ವೀಣಾಗೆ ಹೇಳಬೇಕು ಎಂದುಕೊಳ್ಳುವಷ್ಟರಲ್ಲಿ ವೀಣಾ ಅನೌನ್ಸ್‌ಮೆಂಟ್ ಮಾಡುತ್ತಾರೆ. ಕಾರ್ಯಕ್ರಮ ಶುರುವಾಗಿದೆ ಎಂದು ಎಲ್ಲರೂ ಅಲ್ಲಿ ಸೇರುತ್ತಾರೆ. ಪಾರ್ಟಿಗೆ ಬಂದಿರುವವರಿಗಾಗಿ ಅಲ್ಲಿ ಒಂದು ಗೇಮ್ ಆಯೋಜಿಸಲಾಗಿರುತ್ತದೆ. ಗಾಳಿಪಟ ಸ್ಪರ್ಧೆಗೆ ಜೋಡಿಗಳನ್ನು ಆಹ್ವಾನಿಸಲಾಗುತ್ತದೆ. 4 ಜೋಡಿಗಳು ಆಟ ಆಡಲು ಮುಂದೆ ಬಂದು ನಿಲ್ಲುತ್ತಾರೆ. ಆದರೆ ತಾಂಡವ್ ಹಾಗೂ ಭಾಗ್ಯಾ ಹಿಂದೆಯೇ ಉಳಿಯುತ್ತಾರೆ. ಅವರನ್ನು ನೋಡಿ ವೀಣಾ ಆಶ್ಚರ್ಯ ವ್ಯಕ್ತಪಡಿಸುತ್ತಾರೆ.
ತಾಂಡವ್ ಹಾಗೂ ಭಾಗ್ಯಾ ಹೊಸದಾಗಿ ಮದುವೆ ಆದವರಂತೆ ಹೀಗೇಕೆ ದೂರ ನಿಂತಿದ್ದೀರಿ. ಮುಂದೆ ಬಂದು ಒಟ್ಟಿಗೆ ನಿಲ್ಲಿ, ಸ್ಪರ್ಧೆಯಲ್ಲಿ ಭಾಗವಹಿಸಿ ಎಂದು ಒತ್ತಾಯ ಮಾಡಿದ ನಂತರ ಭಾಗ್ಯಾ ಮುಂದೆ ಬರುತ್ತಾಳೆ. ತಾಂಡವ್ ಒಲ್ಲದ ಮನಸ್ಸಿನಿಂದಲೇ ಭಾಗ್ಯಾ ಜೊತೆ ಬಂದು ನಿಲ್ಲುತ್ತಾನೆ. ಆದರೆ ತಾಂಡವ್ ಯಾರಿಗೂ ಕೇಳಿಸದೆ ಭಾಗ್ಯಾಗೆ ಮಾತ್ರ ಕೇಳಿಸುವಂತೆ ಆಕೆಗೆ ಚುಚ್ಚು ಮಾತುಗಳನ್ನಾಡುತ್ತಾನೆ. ಮನೆಯಲ್ಲಿ ನನ್ನನ್ನು ನೆಮ್ಮದಿಯಾಗಿರಲು ಬಿಡಲಿಲ್ಲ, ಇಲ್ಲಾದರೂ ನನ್ನ ನೆಮ್ಮದಿಯಾಗಿಡಲು ಬಿಡುತ್ತಿಲ್ಲ, ಇಲ್ಲಿಗೇಕೆ ಬಂದೆ ಎಂದು ಕೇಳುತ್ತಾನೆ. ತಾಂಡವ್ ಪ್ರಶ್ನೆಗೆ ಭಾಗ್ಯಾ ಏನೂ ಮಾತನಾಡದಂತೆ ಮೌನವಾಗಿ ನಿಲ್ಲುತ್ತಾಳೆ. ಇದೆಲ್ಲವನ್ನೂ ಕುಸುಮಾ ಗಮನಿಸುತ್ತಲೇ ಇರುತ್ತಾಳೆ.
ಸೊಸೆಗೆ ಮುಜುಗರ ತಪ್ಪಿಸಲು ಕುಸುಮಾ ಪ್ರಯತ್ನ
ವೀಣಾಗೆ ಯಾವುದೋ ಕರೆ ಬರುವುದರಿಂದ ಪಕ್ಕಕ್ಕೆ ಹೋಗಿ ಮಾತನಾಡುತ್ತಾಳೆ. ಅವಳ ಹಿಂದೆಯೇ ಬರುವ ಕುಸುಮಾ ಕಪಲ್‌ಗಳು ಜೊತೆಯಾಗಿ ಆಡುವುದು ಸಾಮಾನ್ಯ, ಒಂದು ವೇಳೆ ಯಾವುದೇ ಜೋಡಿ ಗೆದ್ದರೂ, ಅದರ ಕ್ರೆಡಿಟ್ಸ್ ಹೋಗುವುದು ಪುರುಷರಿಗೆ ಆದ್ದರಿಂದ ಈ ಸ್ಪರ್ಧೆಯನ್ನು ಮಹಿಳೆಯರು ಮತ್ತು ಪುರುಷರ ಮಧ್ಯೆ ಇಟ್ಟರೆ ಒಳ್ಳೆಯದು ಎಂದು ಐಡಿಯಾ ಕೊಡುತ್ತಾಳೆ. ಇದು ವೀಣಾಗೂ ಸರಿ ಎನಿಸುತ್ತದೆ. ಗೇಮ್‌ನಲ್ಲಿ ಸಣ್ಣ ಬದಲಾವಣೆ ಇದೆ, ಸ್ಪರ್ಧೆ ಕಪಲ್‌ಗಳ ನಡುವೆ ನಡೆಯುವುದಿಲ್ಲ. ಪುರುಷರು, ಮಹಿಳೆಯರ ನಡುವೆ ನಡೆಯುತ್ತದೆ ಎಂದಾಗ ತಾಂಡವ್‌ಗೆ ಖುಷಿಯಾಗುತ್ತದೆ. ಈ ದರಿದ್ರದವಳ ಎದುರು ನಾನೇ ಗೆಲ್ಲೋದು ಎಂದು ಆಗಲೇ ಕನಸು ಕಾಣಲು ಆರಂಭಿಸುತ್ತಾನೆ.
ಮತ್ತೊಂದೆಡೆ ಭಾಗ್ಯಾಳಿಂದ ತಪ್ಪಿಸಿಕೊಂಡ ಸುಂದರಿ, ಮತ್ತೆ ಮೆಲ್ಲಗೆ ಬಂದು ಎಲ್ಲರ ಪರ್ಸ್ ಕದಿಯಲು ಆರಂಭಿಸುತ್ತಾಳೆ. ನಾನ್ ಶ್ರೇಷ್ಠಾ ಅತ್ತೆ, ನನ್ನ ಮಗನನ್ನು ಅವಳು ಮದುವೆ ಆಗುತ್ತಿದ್ದಾಳೆ ಎಂದು ಹೇಳುತ್ತಾ ಎಲ್ಲರನ್ನು ಪರಿಚಯ ಮಾಡಿಕೊಂಡು ಪರ್ಸ್, ಸರ ಕದಿಯುತ್ತಾಳೆ.
ಗಾಳಿಪಟ ಸ್ಪರ್ಧೆಯಲ್ಲಿ ತಾಂಡವ್ ನಿಜಕ್ಕೂ ಭಾಗ್ಯಾ ವಿರುದ್ಧ ಗೆಲ್ಲುತ್ತಾನಾ? ಕಳ್ಳಿ ಸುಂದರಿ ಸಿಕ್ಕಿ ಹಾಕಿಕೊಳ್ಳುತ್ತಾಳಾ ಅನ್ನೋದು ಮುಂದಿನ ಎಪಿಸೋಡ್‌ನಲ್ಲಿ ತಿಳಿಯಲಿದೆ.