ಪದೇ ಪದೆ ತಪ್ಪು ಮಾಡಿ, ಭಾಗ್ಯಾ ಮೇಲೆ ಆರೋಪ ಹೊರಿಸುತ್ತಿರುವ ತಾಂಡವ್ ಈ ಬಾರಿ ಮಾಡಿದ್ದೇನು?; ಭಾಗ್ಯಲಕ್ಷ್ಮೀ ಧಾರಾವಾಹಿ
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಅಕ್ಟೋಬರ್ 4ರ ಎಪಿಸೋಡ್. ಶ್ರೇಷ್ಠಾ ಮನೆಗೆ ಬಂದಾ ತಾಂಡವ್‌ನನ್ನು ಭಾಗ್ಯಾ ಪ್ರಶ್ನಿಸುತ್ತಾಳೆ. ಆದರೆ ತಾಂಡವ್ ಏನೂ ಉತ್ತರ ಹೇಳದೆ ಅಲ್ಲಿಂದ ಹೊರಡುತ್ತಾನೆ. ಶ್ರೇಷ್ಠಾ ಜೊತೆ ಓಡಾಡುತ್ತಿದ್ದ ಹುಡುಗ ಇವನೇ ಅಂತ ಓನರ್ ಹೇಳಿದಾಗ ಭಾಗ್ಯಾ ಅನುಮಾನ ಇನ್ನಷ್ಟು ಹೆಚ್ಚಾಗುತ್ತದೆ.
Bhagyalakshmi Kannada Serial: ತನ್ನ ಅನುಮಾನಗಳಿಗೆ ಉತ್ತರ ಪಡೆಯಲು ಭಾಗ್ಯಾ ತಾಂಡವ್‌ನನ್ನು ದೇವಸ್ಥಾನಕ್ಕೆ ಕರೆದೊಯ್ಯುತ್ತಾಳೆ. ನನಗೆ ನೀನು ಹೇಳಿದ ಕಡೆಯೆಲ್ಲಾ ಬರಲು ಆಗುವುದಿಲ್ಲ, ನನಗೆ ಆಫೀಸ್ ಇದೆ ಎಂದು ಹೇಳಿ ತಾಂಡವ್, ಭಾಗ್ಯಾ ಜೊತೆ ಸರಿಯಾಗಿ ಮಾತನಾಡದೆ ಆಫೀಸಿಗೆ ಹೊರಡುತ್ತಾನೆ, ಭಾಗ್ಯಾ ಕೂಡಾ ಹೋಟೆಲ್‌ಗೆ ಹೋಗುತ್ತಾಳೆ.
ತರುಣ್ ಫೋಟೋ ತೋರಿಸುವಂತೆ ತಾಂಡವ್‌ನನ್ನು ಕೇಳಿದ ಭಾಗ್ಯಾ
ಕೆಲಸ ಮುಗಿಸಿಕೊಂಡು ಸಂಜೆ ಭಾಗ್ಯಾ, ನನಗೆ ಸ್ವಲ್ಪ ಕೆಲಸ ಇದೆ ಎಂದು ಅತ್ತೆಗೆ ತಿಳಿಸಿ ಶ್ರೇಷ್ಠಾ ಮನೆಗೆ ಹೋಗುತ್ತಾಳೆ. ಅಲ್ಲಿ ಅವಳು ಇಲ್ಲದ್ದನ್ನು ನೋಡಿ ವಾಪಸ್ ಬರಬೇಕು ಎನ್ನುವಷ್ಟರಲ್ಲಿ ಅಲ್ಲಿಗೆ ತಾಂಡವ್ ಬರುತ್ತಾನೆ. ಗಂಡನನ್ನು ನೋಡಿ ಭಾಗ್ಯಾ ಬಚ್ಚಿಟ್ಟುಕೊಳ್ಳುತ್ತಾಳೆ. ತಾಂಡವ್ ಕೂಡಾ ಬಾಗಿಲು ಬಡಿದು ಶ್ರೇಷ್ಠಾ, ಅಲ್ಲಿ ಇಲ್ಲದ್ದನ್ನು ನೋಡಿ ಕೆಳಗೆ ಬರುತ್ತಾನೆ. ಮನೆ ಓನರ್ ಬಳಿ ಶ್ರೇಷ್ಠಾ ಬಗ್ಗೆ ವಿಚಾರಿಸುತ್ತಾನೆ. ಅವಳು ಎಲ್ಲಿ ಹೋದಳು ನಮಗೇನು ಗೊತ್ತು? ಅವಳು ಇಲ್ಲಿ ಇಲ್ಲದಿದ್ದರೆ ನಮಗೆ ಎಷ್ಟೋ ಒಳ್ಳೆಯದು ಎಂದು ಹೇಳುತ್ತಾರೆ. ಶ್ರೇಷ್ಠಾ ಎಲ್ಲಿ ಹೋಗಿದ್ದಾಳೆ ಎಂಬುದು ತಿಳಿಯದೆ ತಾಂಡವ್, ಅಲ್ಲಿಂದ ಹೊರಡಲು ಮುಂದಾಗುತ್ತಾನೆ. ಅಷ್ಟರಲ್ಲಿ ಭಾಗ್ಯಾ ಅವನ ದಾರಿಗೆ ಅಡ್ಡ ಬರುತ್ತಾಳೆ.
ಭಾಗ್ಯಾಳನ್ನು ಅಲ್ಲಿ ನೋಡಿದ ತಾಂಡವ್, ಗಾಬರಿ ಆಗುತ್ತಾನೆ. ನೀವೇಕೆ ಇಲ್ಲಿ ಬಂದಿದ್ದು? ಆಫೀಸಿನಲ್ಲಿ ಶ್ರೇಷ್ಠಾ ಇಲ್ಲ ಎಂದು ಗೊತ್ತಾಗಿ ಅವಳನ್ನು ಹುಡುಕುತ್ತಾ ಇಲ್ಲಿ ಬಂದ್ರಾ? ಎಂದು ಭಾಗ್ಯಾ ಕೇಳುತ್ತಾಳೆ. ನನ್ನ ವಿಚಾರ ಬಿಡು ನೀನೇಕೆ ಇಲ್ಲಿ ಬಂದೆ ಎಂದು ತಾಂಡವ್ ಹೆಂಡತಿಯನ್ನೇ ಪ್ರಶ್ನಿಸುತ್ತಾನೆ. ನಾನು ನನ್ನ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಪಡೆಯಲು ಇಲ್ಲಿಗೆ ಬಂದೆ, ಆ ತರುಣ್ ಯಾರು ನನಗೆ ಗೊತ್ತಾಗಬೇಕು, ಅವನ ಫೋಟೋ ಇದ್ದರೆ ತೋರಿಸಿ ಎಂದು ಭಾಗ್ಯಾ ಗಂಡನಿಗೆ ಕೇಳುತ್ತಾಳೆ. ಅವನ ಫೋಟೋ ನಾನೇಕೆ ಇಟ್ಟುಕೊಳ್ಳಿ ಎಂದು ತಾಂಡವ್ ಭಾಗ್ಯಾಗೆ ಕೇಳುತ್ತಾನೆ. ಶ್ರೇಷ್ಠಾ ಧಾರೆಗೆ ಸೀರೆ ತೆಗೆಯಲು ಅವಳ ಜೊತೆ ಹೋಗಿದ್ದಿರಿ, ಅವಳ ಫೋಟೋಶೂಟ್ ಮಾಡಿಸಿದ್ರಿ, ಆದ್ರೆ ಆ ಹುಡುಗನ ಫೋಟೋ ನಿಮ್ಮ ಬಳಿ ಇಲ್ವಾ ಎಂದು ಕೇಳುತ್ತಾಳೆ.
ಭಾಗ್ಯಾಗೆ ಊರಿನ ಉಸಾಬರಿ ಏಕೆ ಎಂದು ಅಮ್ಮನ ಬಳಿ ಪ್ರಶ್ನಿಸಿದ ತಾಂಡವ್
ತಾಂಡವ್ ಏನೂ ಮಾತನಾಡದೆ ಅಲ್ಲಿಂದ ಹೊರಡುತ್ತಾನೆ. ಅಷ್ಟರಲ್ಲಿ ಮನೆ ಓನರ್ ಭಾಗ್ಯಾಳನ್ನು ನೋಡಿ ಒಳಗೆ ಕರೆಯುತ್ತಾರೆ. ಅಮ್ಮಾ ಈಗ ಬಂದು ಹೋಗಿದ್ದು ಯಾರು ಎಂದು ಭಾಗ್ಯಾ ಕೇಳುತ್ತಾಳೆ. ಶ್ರೇಷ್ಠಾ ಜೊತೆ ಒಬ್ಬ ಹುಡುಗ ಸದಾ ಓಡಾಡುತ್ತಿದ್ದ ಎಂದು ಹೇಳುತ್ತಿದ್ದೇನಲ್ಲ, ಅವನೇ ಈ ಹುಡುಗ ಎಂದು ಓನರ್ ಹೇಳುತ್ತಾರೆ. ಆ ಮಾತನ್ನು ಕೇಳಿ ಭಾಗ್ಯಾ ಬೇಸರಗೊಳ್ಳುತ್ತಾಳೆ. ಅವರಿಬ್ಬರೂ ಫ್ರೆಂಡ್ಸ್ ಇರಬಹುದು ಅಲ್ವಾ ಎನ್ನುತ್ತಾಳೆ. ನನಗೂ ಒಬ್ಬ ಮಗನಿದ್ದಾನೆ. ಆದರೆ ಈ ರೀತಿ ಅವನು ಯಾವ ಹುಡುಗಿಯರೊಂದಿಗೂ ಓಡಾಡುವುದಿಲ್ಲ ಎಂದು ಓನರ್ ಹೇಳುತ್ತಾರೆ.
ಇತ್ತ ಮನೆಗೆ ಬರುವ ತಾಂಡವ್ ನಿನ್ನ ಸೊಸೆ ಚಿನ್ನ ಅಂತ ಹೇಳುತ್ತಿದ್ದೆ, ಅದರೆ ಈಗ ಅವಳು ಮಾಡಿದ್ದೇನು? ಶ್ರೇಷ್ಠಾ ಮನೆಗೆ ಹೋಗಿ ತರುಣ್ ಯಾರು ಎಂದು ತಿಳಿದುಕೊಳ್ಳಲು ಹೋಗಿದ್ದಾಳೆ. ಒಂದು ತಿಂಗಳಲ್ಲಿ ನೀನು ಮೆಚ್ಚುವಂತೆ ಮಾಡುತ್ತೇನೆ ಎಂದು ಹೇಳುತ್ತಿದ್ದೆ, ಹೀಗೆಲ್ಲಾ ಮಾಡಿದರೆ ನನಗೆ ಅವಳ ಮೇಲೆ ಪ್ರೀತಿ ಬರುವುದಿರಲಿ, ದ್ವೇಷ ಇನ್ನಷ್ಟು ಹೆಚ್ಚುತ್ತದೆ, ಊರ ಉಸಾಬರಿ ಅವಳಿಗೆ ಏಕೆ ಎಂದು ತಾಂಡವ್ ಭಾಗ್ಯಾ ಮೇಲೆ ಆರೋಪ ಹೊರಿಸುತ್ತಾನೆ. ನನ್ನ ಸೊಸೆ ಎಂಥವಳು ಅನ್ನೋದು ನನಗೆ ಗೊತ್ತು ನೀನು ಅದನ್ನು ನನಗೆ ಹೇಳಿಕೊಡಬೇಡ ಎಂದು ಕುಸುಮಾ ಹೇಳುತ್ತಾಳೆ. ಅಷ್ಟರಲ್ಲಿ ಭಾಗ್ಯಾ ಅಲ್ಲಿಗೆ ಬರುತ್ತಾಳೆ. ಶ್ರೇಷ್ಠಾ ಸಹವಾಸಕ್ಕೆ ಹೋಗಬೇಡ ಎಂದು ಎಷ್ಟು ಸಲ ಹೇಳಿದ್ದೆ ಮತ್ತೆ ಏಕೆ ಅವಳ ಮನೆಗೆ ಹೋಗಿದ್ದೆ ಎಂದು ಕುಸುಮಾ ಕೇಳುತ್ತಾಳೆ. ಸತ್ಯ ತಿಳಿದುಕೊಳ್ಳಲು ಹೋಗಿದ್ದೆ, ನೀವು ಮುಚ್ಚಿಟ್ಟಿದ್ದ ಸತ್ಯ ಒಂದಲ್ಲಾ ಒಂದು ದಿನ ಹೊರಗೆ ಬರುತ್ತದೆ ಎಂದು ಭಾಗ್ಯಾ ಹೇಳುತ್ತಾಳೆ. ದಿನೇ ದಿನೆ ಇವಳಿಗೆ ಅನುಮಾನ ಹೆಚ್ಚಾಗುತ್ತಿದೆ. ಇದನ್ನು ಕಡಿಮೆ ಮಾಡಲು ಏನಾದರೂ ಮಾಡಬೇಕು ಎಂದು ಕುಸುಮಾ ಯೋಚಿಸುತ್ತಾಳೆ.
ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ - ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್
ವಿಭಾಗ