Seetha Rama Serial: ಅವ್ಯವಹಾರದ ಸತ್ಯ ತಿಳಿಯುವಷ್ಟರಲ್ಲೇ ಬಿತ್ತು ಬೆಂಕಿ; ಭಾರ್ಗವಿಯ ರೋಷಾಗ್ನಿಗೆ ಆಫೀಸ್ ಧಗ ಧಗ, ಗೊಂದಲದಲ್ಲಿ ಶ್ರೀರಾಮ
ಕಚೇರಿಯಲ್ಲಿನ ಅವ್ಯವಹಾರದ ಸತ್ಯ ಹುಡುಕಿ ಹೊರಟ ರಾಮನಿಗೆ ವಿಘ್ನ ಎದುರಾಗಿದೆ. ಭಾರ್ಗವಿ ಗೆದ್ದ ಖುಷಿಯಲ್ಲಿ ರಾಮನನ್ನು ಶಪಿಸುತ್ತಿದ್ದಾಳೆ. ಇತ್ತ ಸಿಹಿ ಜತೆಗಿನ ಸ್ನೇಹದಿಂದ ಸೀತಾಗೂ ಹತ್ತಿರವಾಗುತ್ತಿದ್ದಾನೆ ರಾಮ.
Seetha Rama Serial: ಸೀತಾ ರಾಮ ಧಾರಾವಾಹಿ ನೋಡುಗನನ್ನು ದಿನದಿಂದ ದಿನಕ್ಕೆ ರೋಚಕತೆಯ ಕಡೆ ಕರೆದೊಯ್ಯುತ್ತಿದೆ. ಎಲ್ಲಿ ಮನೆ ಕಳೆದುಕೊಳ್ಳುತ್ತೇನೋ ಎಂಬ ಸೀತಾಳ ಸಂಕಷ್ಟ, ಆಕೆಗಾಗಿ ಪರಿತಪಿಸುವ ರಾಮ, ಮುದ್ದು ಸಿಹಿ ಆತಂಕ ನೋಡುಗರನ್ನು ಸೆಳೆಯುತ್ತಿದೆ. ಈ ನಡುವೆ ಕೈಗೆ ಸಿಕ್ಕ ಸೀತಾಗೆ ವಕೀಲ ರುದ್ರಪ್ರತಾಪ್ ಏನು ಮಾಡಬಹುದು ಎಂಬ ಸಣ್ಣ ಅನುಮಾನ ನಿವಾರಣೆ ಆಗಿದೆ. ಕಚೇರಿಯಿಂದ ಮರಳಿದ್ದಾಳೆ ಸೀತಾ.
ಇತ್ತ ಫೋನ್ನಲ್ಲಿಯೇ ಸಿಹಿಗಿದ್ದ ಗೊಂದಲವನ್ನೂ ರಾಮ ನಿವಾರಣೆ ಮಾಡಿದ್ದಾನೆ. ಅಮ್ಮ ಎಲ್ಲೂ ಹೋಗಿಲ್ಲ, ಇಲ್ಲೇ ಆಫೀಸ್ನಲ್ಲಿ ಇದ್ದಾಳೆ ಅನ್ನೋ ಮೂಲಕ ಸಿಹಿ ಮೊಗದಲ್ಲಿ ನಗು ಉಕ್ಕಿಸಿದ್ದಾನೆ. ಇದಾದ ಬಳಿಕ ದಿಢೀರ್ ಎಂದು ರಾತ್ರಿ ಹೊತ್ತಿನಲ್ಲಿಯೇ ಮನೆಗೆ ಎಂಟ್ರಿ ಕೊಡುವ ರಾಮನನ್ನು ಕಂಡು ಸೀತಾಗೂ ಅಚ್ಚರಿ. ಈ ನಡುವೆ ಸಿಹಿ ಮತ್ತು ಸೀತಾಳ ನಡುವೆ ಪ್ಯಾಲೇಸ್ ವಿಚಾರವೂ ಚರ್ಚೆಯಾಗುತ್ತದೆ.
ಫೋನ್ ಕರೆ ಸ್ವೀಕರಿಸದಿದ್ದಕ್ಕೂ, ಎಲ್ಲಿ ಹೋದೆ ಎಂದು ಹೇಳದಿದ್ದಕ್ಕೂ ಕೊಂಚ ಕೋಪದಲ್ಲಿಯೇ ಇದ್ದ ರಾಮನಿಗೆ ಮತ್ತೊಂದು ಕಡೆ ಸೀತಾಳ ಸ್ವಾಭಿಮಾನದ ಮೇಲೂ ಗೌರವ ಮೂಡುತ್ತದೆ. ಈ ವೇಳೆ ಕೇಳ್ದೆ ಇದ್ದರೂ ಕೊಡುವುದರಲ್ಲಿ ಖುಷಿ ಇರುತ್ತೆ ಎನ್ನುತ್ತಾನೆ. ಇದಕ್ಕೆ ತಾತ ಮತ್ತು ಅಜ್ಜಿಯ ಕಡೆಯಿಂದಲೂ ಸಹಕಾರ ಸಿಗುತ್ತದೆ. ರಾಮನ ಮಾತಿಗೂ ಅವರೂ ಒಪ್ಪುತ್ತಾರೆ. ಮನೆಯ ದಾಖಲೆ ತಂದು ಸೀತಾಳ ಕೈಗಿಟ್ಟು, ಮೊದಲು ಇದನ್ನು ಅಡವಿಟ್ಟು ಮನೆ ಉಳಿಸಿಕೋ ಎಂದು ಸಲಹೆ ನೀಡುತ್ತಾರೆ. ಯಾರಾದ್ರೂ ಹೆಲ್ಪ್ ಮಾಡೋಕೆ ಮುಂದೆ ಬಂದಾಗ, ಅದನ್ನೂ ಪರಿಗಣನೆಗೆ ತೆಗೆದುಕೊಳ್ಳಿ. ಎಲ್ಲದಕ್ಕೂ ಪರಿಹಾರ ಇದ್ದೇ ಇರುತ್ತೆ ಎಂದು ಹೇಳಿ ಹೊರಡುತ್ತಾನೆ ರಾಮ.
ಸೀತಾಳ ಮನೆಯಲ್ಲಿಯೇ ರಾಮ್ ಇರಬಹುದು ಎಂಬ ಅನುಮಾನದಿಂದ ಸ್ನೇಹಿತ ಅಶೋಕ್ ಸಹ ಅಲ್ಲಿಗೆ ಬರುತ್ತಾನೆ. ಕಚೇರಿಯಲ್ಲಿನ ಅವ್ಯವಹಾರಕ್ಕೆ ಸಂಬಂಧಿಸಿದ ಕೆಲ ಮಹತ್ವದ ದಾಖಲೆಗಳು ಕೋರಮಂಗಲ ಆಫೀಸ್ನಲ್ಲಿವೆ ಎಂಬ ವಿಚಾರವನ್ನು ರಾಮನಿಗೆ ಹೇಳುತ್ತಾನೆ ಅಶೋಕ. ಹೀಗಿರುವಾಗಲೇ ಮನೆಯಿಂದ ತಾತನಿಂದ ರಾಮ್ಗೆ ಫೋನ್ ಬರುತ್ತದೆ. ಕೋರಮಂಗಲ ಆಫೀಸ್ಗೆ ಹೋಗುತ್ತಿರುವ ವಿಚಾರವನ್ನು ತಾತನಿಗೂ ತಿಳಿಸುತ್ತಾನೆ. ಮರೆಯಲ್ಲಿ ನಿಂತಿದ್ದ ಭಾರ್ಗವಿಗೂ ಈ ವಿಚಾರ ಕಿವಿಗೆ ಬೀಳುತ್ತದೆ.
ಮುಂದುವರಿದು ಇಬ್ಬರೂ ಆಫೀಸ್ ಕಡೆ ಬರಬೇಕೆನ್ನುವಷ್ಟರಲ್ಲಿ ಕೋರಮಂಗಲ ಆಫೀಸ್ಗೆ ಶಾರ್ಟ್ ಸರ್ಕೀಟ್ನಿಂದ ಬೆಂಕಿ ಬಿದ್ದ ವಿಚಾರ ತಿಳಿಯುತ್ತದೆ. ಇನ್ನೇನು ಅವ್ಯವಹಾರದ ಸತ್ಯ ಹೊರಬಿತ್ತು ಎನ್ನುವಷ್ಟರಲ್ಲಿ ಅನಾಹುತ ಕಂಡು ಅಶೋಕ ಮತ್ತು ರಾಮನಲ್ಲಿನ ಅನುಮಾನಗಳು ಹೆಚ್ಚಾಗುತ್ತವೆ. ಇತ್ತ ಗೆದ್ದ ಖುಷಿಯ ನಗು ಭಾರ್ಗವಿ ಮುಖದಲ್ಲಿದೆ. ಹಾಗಾದರೆ ಸತ್ಯ ಸುಟ್ಟಿತಾ? ರಾಮನ ಮುಂದಿನ ನಡೆ ಏನು?