Laapataa Ladies: ಆಸ್ಕರ್ ಓಟದಿಂದ ಹೊರಬಿದ್ದ ‘ಲಾಪತಾ ಲೇಡಿಸ್‌’; ಅಸಮಾಧಾನ ವ್ಯಕ್ತಪಡಿಸಿದ ಸಿನಿಕರು
ಕನ್ನಡ ಸುದ್ದಿ  /  ಮನರಂಜನೆ  /  Laapataa Ladies: ಆಸ್ಕರ್ ಓಟದಿಂದ ಹೊರಬಿದ್ದ ‘ಲಾಪತಾ ಲೇಡಿಸ್‌’; ಅಸಮಾಧಾನ ವ್ಯಕ್ತಪಡಿಸಿದ ಸಿನಿಕರು

Laapataa Ladies: ಆಸ್ಕರ್ ಓಟದಿಂದ ಹೊರಬಿದ್ದ ‘ಲಾಪತಾ ಲೇಡಿಸ್‌’; ಅಸಮಾಧಾನ ವ್ಯಕ್ತಪಡಿಸಿದ ಸಿನಿಕರು

97ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಅಂತರಾಷ್ಟ್ರೀಯ ಫೀಚರ್ ವಿಭಾಗದಲ್ಲಿ ಭಾರತದಿಂದ ಅಧಿಕೃತ ಪ್ರವೇಶವಾದ 'ಲಾಪತಾ ಲೇಡೀಸ್' ಆಸ್ಕರ್ ರೇಸ್‌ನಿಂದ ಹೊರಗುಳಿದಿದೆ. ಈ ಬಗ್ಗೆ ಸಿನಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಆಸ್ಕರ್ ಓಟದಿಂದ ಹೊರಬಿದ್ದ ‘ಲಾಪತಾ ಲೇಡಿಸ್‌'
ಆಸ್ಕರ್ ಓಟದಿಂದ ಹೊರಬಿದ್ದ ‘ಲಾಪತಾ ಲೇಡಿಸ್‌'

ಪ್ರತಿ ವರ್ಷ ಆಸ್ಕರ್ ಪಡೆಯುವ ಸಿನಿಮಾ ಯಾವುದು ಎಂಬ ಕಾತರತೆ ಎಲ್ಲರಿಗೂ ಇರುತ್ತದೆ. ಅದೇ ರೀತಿ 2025ಕ್ಕೆ ಯಾವ ಸಿನಿಮಾ ಆಸ್ಕರ್ ಓಟದಲ್ಲಿ ಮುನ್ನುಗ್ಗಬಹುದು ಎಂಬ ಚರ್ಚೆ ಕೂಡ ನಡೆಯುತ್ತಿದೆ. ಲಾಪತಾ ಲೇಡಿಸ್ ಕೂಡ ಈ ಓಟದಲ್ಲಿ ಇರುತ್ತದೆ ಎಂದು ನಂಬಲಾಗಿತ್ತು ಆದರೆ ಇದೀಗ ಲಾಪತಾ ಲೇಡಿಸ್ ಸಿನಿಮಾ ಆಸ್ಕರ್ ಓಟದಿಂದ ಹಿಂದಕ್ಕೆ ಸರಿದಿದೆ ಎನ್ನಲಾಗುತ್ತಿದೆ. ಲಾಪತಾ ಲೇಡೀಸ್‌ಗಿಂತ ಪಾಯಲ್ ಕಪಾಡಿಯಾ ಅವರ ಆಲ್ ವಿ ಇಮ್ಯಾಜಿನ್ ಆಸ್ ಲೈಟ್ ಆಸ್ಕರ್ ಪ್ರಶಸ್ತಿಯನ್ನು ಪಡೆಯುವಲ್ಲಿ ಉತ್ತಮ ಚಿತ್ರಣವನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ.

2025 ರ ಆಸ್ಕರ್‌ನಲ್ಲಿ ಅತ್ಯುತ್ತಮ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಅರ್ಹವಾದ 15 ಚಲನಚಿತ್ರಗಳ ಕಿರುಪಟ್ಟಿಯನ್ನು ಅಕಾಡೆಮಿ ಆಫ್ ಮೋಷನ್ ಪಿಕ್ಚರ್ಸ್, ಆರ್ಟ್ಸ್ ಮತ್ತು ಸೈನ್ಸಸ್ ಪ್ರಕಟಿಸಿತ್ತು. ಆದರೆ ಈ ಪಟ್ಟಿಯಲ್ಲಿ ಲಾಪತಾ ಲೇಡಿಸ್‌ ಸಿನಿಮಾ ಕಂಡುಬಂದಿಲ್ಲ. ಕಿರಣ್ ರಾವ್ ನಿರ್ದೇಶನದ ಲಾಪತಾ ಲೇಡೀಸ್ ಅನ್ನು ಈ ವರ್ಷದ ಆರಂಭದಲ್ಲಿ ಅಕಾಡೆಮಿ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಅಂತರಾಷ್ಟ್ರೀಯ ಚಲನಚಿತ್ರ ವಿಭಾಗಕ್ಕಾಗಿ ಭಾರತದ ಅಧಿಕೃತ ಪ್ರವೇಶವಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿತ್ತು.

ಇದನ್ನೂ ಓದಿ: OTT Action Thriller: ಕೆಲವೇ ದಿನಗಳಲ್ಲಿ ಒಟಿಟಿಗೆ ಬರಲಿದೆ ಆಕ್ಷನ್ ಥ್ರಿಲ್ಲರ್ ಸಿನಿಮಾ 'ಮುರಾ'; ಮನೆಯಲ್ಲೇ ಕುಳಿತು ನೋಡಿ

ಇದೇ ಕಾರಣದಿಂದ ಎಲ್ಲರಲ್ಲೂ ಭರವಸೆ ಮೂಡಿತ್ತು. ಲಾಪತಾ ಲೇಡಿಸ್ ಸಿನಿಮಾ ನೋಡಿ ಮೆಚ್ಚಿಕೊಂಡ ಸಾಕಷ್ಟು ಜನರು ಇದು ಅವಾರ್ಡ್‌ಗೆ ಯೋಗ್ಯವಾದ ಸಿನಿಮಾ ಎಂದು ಅಭಿಪ್ರಾಯಪಟ್ಟಿದ್ದರು. ಆದರೆ ಈ ರೀತಿ ಆಗಿರುವುದು ಎಲ್ಲರಿಗೂ ಬೇಸರ ತಂದಿದೆ. ಇಂತಹ ಸಿನಿಮಾಗಳಿಗೆ ಅವಾರ್ಡ್‌ ಸಿಗಬೇಕಿತ್ತು ಎಂದು ಹೇಳಲಾಗುತ್ತಿದೆ. ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾದ ನಿರ್ಧಾರ ಸರಿಯಿಲ್ಲ ಎಂದು ಹೇಳಲಾಗುತ್ತಿದೆ. 97ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಅಂತರಾಷ್ಟ್ರೀಯ ಫೀಚರ್ ವಿಭಾಗದಲ್ಲಿ ಭಾರತದಿಂದ ಅಧಿಕೃತ ಪ್ರವೇಶವಾದ 'ಲಾಪತಾ ಲೇಡೀಸ್' ಆಸ್ಕರ್ ರೇಸ್‌ನಿಂದ ಹೊರಗುಳಿದಿದೆ ಎಂದು ಹಲವರು ಬೇಸರಿಸಿಕೊಂಡಿದ್ದಾರೆ.

ಸಿನಿಮಾದ ಕಥೆ
ಲಾಪತಾ ಲೇಡಿಸ್‌ 2023ರ ಸಿನಿಮಾ. ಈಗಷ್ಟೇ ಮದುವೆಯಾದ ಎರಡು ಹೊಸ ಜೋಡಿ ರೈಲಲ್ಲಿ ಅದಲುಬದಲಾಗುತ್ತಾರೆ. ಅಂದರೆ, ರೈಲು ಇಳಿದು ಒಬ್ಬ ವರ ಬೇರೊಬ್ಬಳು ವಧುವನ್ನು ಕರೆದುಕೊಂಡು ಹೋಗುತ್ತಾನೆ. ರೈಲಿನಲ್ಲಿ ಗ್ರಾಮವೊಂದಕ್ಕೆ ಪ್ರಯಾಣ ಬೆಳೆಸುವ ಸಂದರ್ಭದಲ್ಲಿ ಮುಖಕ್ಕೆ ಮುಖಗವಸು ಹಾಕಿಕೊಂಡಿರುವ ಈ ಇಬ್ಬರು ಹೆಣ್ಣು ಮಕ್ಕಳು ಪ್ರತ್ಯೇಕಗೊಳ್ಳುತ್ತಾರೆ. ಇಬ್ಬರು ಬೇರೆಬೇರೆ ಗ್ರಾಮಕ್ಕೆ ವಧುಗಳಾಗಿ ಹೋಗುತ್ತಾರೆ. ಆ ನಂತರ ಮತ್ತೆ ಹೇಗೆ ಅವರು ಒಂದಾಗುತ್ತಾರೆ ಎಂಬ ಕಥೆ ಇದೆ. ಈ ಸಿನಿಮಾವು ವೀಕ್ಷಕರಿಂದ ಮೆಚ್ಚುಗೆ ಪಡೆದಿತ್ತು. ಬಾಕ್ಸ್‌ ಆಫೀಸ್‌ನಲ್ಲಿ ಮೊದಲ ಕೆಲವು ದಿನ ಅತ್ಯುತ್ತಮವಾಗಿ ಪ್ರದರ್ಶನ ಕಾಣಲಿಲ್ಲ. ಆಮೇಲೆ ಈ ಸಿನಿಮಾ ಚೆನ್ನಾಗಿದೆ ಎಂಬ ಬಾಯ್ಮಾತಿನ ಪ್ರಚಾರದ ಮೂಲಕವೇ ಗಳಿಕೆ ಹೆಚ್ಚಿಸಿಕೊಂಡಿತ್ತು.

ಸಿನಿಮಾ ತಂಡ ಹೀಗಿದೆ

ಲಾಪತಾ ಲೇಡಿಸ್‌ ಸಿನಿಮಾಕ್ಕೆ ಕಿರಣ್‌ ರಾವ್ ನಿರ್ದೇಶನ ಮಾಡಿದ್ದಾರೆ. ಬಾಲಿವುಡ್‌ ನಟ ಅಮಿರ್‌ ಖಾನ್‌ ಮತ್ತು ಜ್ಯೋತಿ ದೇಶ್‌ಪಾಂಡೆ ನಿರ್ಮಾಣ ಮಾಡಿದ್ದಾರೆ. ರವಿ ಕಿಶನ್ ಜೊತೆಗೆ ನಿತಾಂಶಿ ಗೋಯೆಲ್, ಪ್ರತಿಭಾ ರಂತ, ಸ್ಪರ್ಶ ಶ್ರೀವಾತ್ಸವ್ ಸೇರಿದಂತೆ ಅನೇಕ ಹೊಸ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರಕಥೆ ಮತ್ತು ಸಂಭಾಷಣೆಯನ್ನು ಸ್ನೇಹಾ ದೇಸಾಯಿ, ಒಂದಿಷ್ಟು ಸಂಭಾಷಣೆಯನ್ನು ದಿವ್ಯನಿಧಿ ಶರ್ಮಾ ಬರೆದಿದ್ದಾರೆ. ಈ ಚಲನಚಿತ್ರ ಟೊರೊಂಟೊ ಇಂಟರ್‌ನ್ಯಾಷನಲ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಪ್ರದರ್ಶನಗೊಂಡು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.

Whats_app_banner