ದುಬೈನಲ್ಲಿ ಕುಳಿತು ಆನ್‌ ಲೈನ್‌ ಮೂಲಕ ಲಕ್ಷಾಂತರ ರೂಪಾಯಿ ವಂಚನೆ, ಸಹಕಾರ ನೀಡುತ್ತಿದ್ದ ಬೆಂಗಳೂರಿನ 10 ಮಂದಿ ಬಂಧನ
ಕನ್ನಡ ಸುದ್ದಿ  /  ಕರ್ನಾಟಕ  /  ದುಬೈನಲ್ಲಿ ಕುಳಿತು ಆನ್‌ ಲೈನ್‌ ಮೂಲಕ ಲಕ್ಷಾಂತರ ರೂಪಾಯಿ ವಂಚನೆ, ಸಹಕಾರ ನೀಡುತ್ತಿದ್ದ ಬೆಂಗಳೂರಿನ 10 ಮಂದಿ ಬಂಧನ

ದುಬೈನಲ್ಲಿ ಕುಳಿತು ಆನ್‌ ಲೈನ್‌ ಮೂಲಕ ಲಕ್ಷಾಂತರ ರೂಪಾಯಿ ವಂಚನೆ, ಸಹಕಾರ ನೀಡುತ್ತಿದ್ದ ಬೆಂಗಳೂರಿನ 10 ಮಂದಿ ಬಂಧನ

ದುಬೈನಲ್ಲಿ ಕುಳಿತು ಆನ್‌ ಲೈನ್‌ ಮೂಲಕ ವಂಚನೆ, ಸಹಕಾರ ನೀಡುತ್ತಿದ್ದ ಬೆಂಗಳೂರಿನ 10 ಮಂದಿ ಬಂಧನವಾಗಿದೆ. ಬಂಧಿತರಿಂದ 51 ಸ್ಮಾರ್ಟ್‌ಫೋನ್‌ ಸೇರಿ ಹಲವು ವಸ್ತುಗಳನ್ನು ವಶಪಡಿಸಲಾಗಿದೆ. ಬಂಧಿತರನ್ನು ವಿಚಾರಣೆಗೊಳಪಡಿಸಲಾಗಿದ್ದು, ಮುಖ್ಯ ಆರೋಪಿಗಳ ಪತ್ತೆಗೆ ಶೋಧ ನಡೆದಿದೆ. ಪ್ರಕರಣದ ವಿವರ ಇಲ್ಲಿದೆ. (ವರದಿ- ಎಚ್.‌ ಮಾರುತಿ, ಬೆಂಗಳೂರು)

ದುಬೈನಲ್ಲಿ ಕುಳಿತು ಆನ್‌ ಲೈನ್‌ ಮೂಲಕ ವಂಚನೆಗೆ ಸಹಕಾರ ನೀಡುತ್ತಿದ್ದ ಬೆಂಗಳೂರಿನ 10 ಮಂದಿ ಬಂಧನ ಮಾಡಿರುವುದಾಗಿ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ಹೇಳಿದರು.
ದುಬೈನಲ್ಲಿ ಕುಳಿತು ಆನ್‌ ಲೈನ್‌ ಮೂಲಕ ವಂಚನೆಗೆ ಸಹಕಾರ ನೀಡುತ್ತಿದ್ದ ಬೆಂಗಳೂರಿನ 10 ಮಂದಿ ಬಂಧನ ಮಾಡಿರುವುದಾಗಿ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ಹೇಳಿದರು.

ಬೆಂಗಳೂರು: ಆನ್‌ಲೈನ್‌ ವ್ಯಾಪಾರದ ಹೆಸರಲ್ಲಿ ವಂಚನೆ ನಡೆಸುತ್ತಿದ್ದ 10 ಆರೋಪಿಗಳನ್ನು ಬೆಂಗಳೂರು ಉತ್ತರ ಸೈಬರ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸಾಯಿ ಪ್ರಜ್ವಲ್ (38), ರವಿಶಂಕರ್ (24), ರೆಡ್ಡಿ (41), ಸುರೇಶ್ (43), ಕಿಶೋರ್ ಕುಮಾರ್ (29) ಶ್ರೀನಿವಾಸರೆಡ್ಡಿ (43), ಆಕಾಶ್ (27), ಪ್ರಕಾಶ್ (43), ಸುನಿಲ್ ಕುಮಾರ್ (45), ಮತ್ತು ಒಬುಲ್ ರೆಡ್ಡಿ (29) ಬಂಧಿತ ಆರೋಪಿಗಳು. ಇವರೆಲ್ಲ ಬೆಂಗಳೂರಿನ ವಿವಿಧ ಬಡಾವಣೆಗಳ ನಿವಾಸಿಗಳಾಗಿದ್ದು, ಪ್ರಮುಖ ಆರೋಪಿಗಳು ದುಬೈನಲ್ಲಿ ನೆಲಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ದುಬೈನಲ್ಲಿ ಇದ್ದುಕೊಂಡೇ ವಂಚನೆ ಜಾಲ ರೂಪಿಸಿದ್ದರು. ವಂಚಕರ ಖಾತೆಗಳಿಗೆ 1 ಕೋಟಿ ರೂಪಾಯಿ ವರ್ಗಾವಣೆ ಆಗುತ್ತಿದ್ದಂತೆಯೇ ಆರೋಪಿಗಳಿಗೆ 1 ಲಕ್ಷ ಕಮಿಷನ್ ನೀಡುತ್ತಿದ್ದರು ಎನ್ನುವುದು ತನಿಖೆಯಿಂದ ತಿಳಿದು ಬಂದಿದೆ.

ಆರೋಪಿಗಳಿಂದ 51 ಫೋನ್‌ ಸೇರಿ ಹಲವು ವಸ್ತು ವಶ

ಆರೋಪಿಗಳಿಂದ 51 ಮೊಬೈಲ್ ಫೋನ್‌ಗಳು, 27 ಡೆಬಿಟ್ ಕಾರ್ಡ್‌ಗಳು, 108 ಬ್ಯಾಂಕ್ ಪಾಸ್‌ಬುಕ್ ಮತ್ತು ಚೆಕ್‌ಗಳು, 480 ಸಿಮ್ ಕಾರ್ಡ್‌ಗಳು, ಎರಡು ಲ್ಯಾಪ್‌ಟಾಪ್‌ಗಳು, 2 ಸಿಪಿಯು, 48 ಅಕೌಂಟ್ ಕ್ಯೂಆರ್ ಕೋಡ್, 42 ಸೀಲ್‌ ಗಳು, 103 ಉದ್ಯಮ್ ಮತ್ತು ಜಿಎಸ್‌ಟಿ ದಾಖಲೆಗಳು, ಚಾಲ್ತಿ ಖಾತೆಗೆ ಸಂಬಂಧಿಸಿದ 230 ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ಮಾಹಿತಿ ನೀಡಿದ್ದಾರೆ.

ಆರೋಪಿಗಳು ಬಳಸುತ್ತಿದ್ದ ಬ್ಯಾಂಕ್‌ ಖಾತೆಗಳ ವಿರುದ್ಧ ದೇಶದ ವಿವಿಧ ಭಾಗಗಳಲ್ಲಿ 1467 ಎನ್‌ ಸಿ ಆರ್‌ ಪಿ ದೂರುಗಳು ದಾಖಲಾಗಿವೆ. ಉತ್ತರ ವಿಭಾಗವೊಂದರಲ್ಲಿಯೇ 15 ದೂರುಗಳು ದಾಖಲಾಗಿವೆ. ಆರೋಪಿಗಳು ಸದಾಶಿವನಗರ ಮತ್ತು ತ್ಯಾಗರಾಜನಗರದಲ್ಲಿ ಎರಡು ಪ್ರತ್ಯೇಕ ಕಚೇರಿಗಳನ್ನು ತೆರೆದಿದ್ದರು. ಬ್ಯಾಂಕ್‌ ಖಾತೆಗೆ ಹಣ ವರ್ಗಾವಣೆ ಆಗುತ್ತಿದ್ದಂತೆ ದುಬೈನಲ್ಲಿರುವ ವ್ಯಕ್ತಿಗಳ ಖಾತೆಗೆ ಹಣ ವರ್ಗಾವಣೆ ಮಾಡುತ್ತಿದ್ದರು. ನಂತರ ಅವರಿಂದ ಕಮೀಷನ್‌ ಪಡೆದುಕೊಳ್ಳುತ್ತಿದ್ದರು.

ದುಬೈನಲ್ಲಿ ಕುಳಿತು ಆನ್‌ ಲೈನ್‌ ಮೂಲಕ ವಂಚನೆ; ಹೇಗೆ

ಮಹಾಲಕ್ಷ್ಮಿ ಲೇಔಟ್‌ ನಿವಾಸಿ, ಟೆಕ್ಕಿಯೊಬ್ಬರಿಗೆ ಆರೋಪಿಗಳು ಆಮಿಷವೊಡ್ಡಿ ರೂ.88.83 ಲಕ್ಷ ವಂಚಿಸಿದ್ದರು. ಅವರು ನೀಡಿದ ದೂರು ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ದೂರುದಾರರು ಕೆಲವು ದಿನಗಳ ಹಿಂದೆ ಫೇಸ್‌ಬುಕ್ ಪೇಜ್‌ವೊಂದರಲ್ಲಿ ಬಂದ ಜಾಹೀರಾತಿನ ಲಿಂಕ್ ಮೂಲಕ ಬ್ರ್ಯಾಂಡ್‌ ವೈನ್ ಗ್ರೂಪ್ ಮತ್ತು ಇ-8 ಬ್ರ್ಯಾಂಡ್‌ ವೈನ್ ಗ್ರೂಪ್ ಮಾರ್ಕೆಟಿಂಗ್‌ ಆಪ್‌ ಗಳನ್ನು ಡೌನ್‌ಲೋಡ್ ಮಾಡಿಕೊಂಡಿದ್ದರು. ಬಳಿಕ ವಾಟ್ಸ್ಆ್ಯಪ್ ಗ್ರೂಪ್‌ಗೆ ಸೇರಿಕೊಂಡಿದ್ದರು. ಅದಾದ ಮೇಲೆ ಆ್ಯಪ್ ಡೌನ್‌ಲೋಡ್ ಮಾಡಿಕೊಂಡರೆ ಹೆಚ್ಚಿನ ಲಾಭ ಬರಲಿದೆ ಎಂದು ಆಮಿಷ ಒಡ್ಡಲಾಗಿತ್ತು.

ಅಕ್ಟೋಬರ್‌ 10 ರಿಂದ ನವಂಬರ್‌ 9ರವರೆಗೆ ವಿವಿಧ ಹಂತಗಳಲ್ಲಿ ಟೆಕಿಯಿಂದ ರೂ. 88.83 ಲಕ್ಷ ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿಸಿಕೊಂಡಿದ್ದರು. ಕೆಲವು ದಿನಗಳ ಬಳಿಕ ಅವರಿಗೆ ವಂಚನೆಗೆ ಒಳಗಾಗಿರುವುದು ಅರಿವಿಗೆ ಬಂದು ದೂರು ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ವಂಚನೆಯ ಬಂಧಿತ ಆರೋಪಿ ರವಿಶಂಕರ್ ದುಬೈನಲ್ಲಿ ನೆಲೆಸಿ ಉದ್ಯೋಗ ಮಾಡುತ್ತಿದ್ದ. ಅಲ್ಲಿ ಸೈಬರ್ ವಂಚಕರ ಪರಿಚಯವಾಗಿತ್ತು. ಅಲ್ಲಿ ಕೆಲಸ ಬಿಟ್ಟು ಬಂದು ತಾನೂ ವಂಚನೆಯ ಕೆಲಸಕ್ಕೆ ಇಳಿದಿದ್ದ. ಇತರೆ ಆರೋಪಿಗಳ ಜತೆ ಸೇರಿಕೊಂಡು ಕೆಲವು ಅಮಾಯಕರಿಗೆ ಹೆಚ್ಚಿನ ಕಮಿಷನ್ ಆಮಿಷವೊಡ್ಡಿ ಅವರ ಆಧಾರ್ ಕಾರ್ಡ್, ಪಾನ್ ಕಾರ್ಡ್ ಪಡೆದು ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿತ್ತು. ದುಬೈನ ವಂಚಕರಿಂದ ಹಣ ಪಡೆದು ಈ ಖಾತೆಗಳ ವಿವರವನ್ನು ನೀಡುತ್ತಿದ್ದರು. ವಂಚಕರು ಸಾಮಾಜಿಕ ಜಾಲತಾಣ ಬಳಸಿಕೊಂಡು ಹಣ ಹೂಡಿಕೆ ಮಾಡಿದರೆ ಹಣ ದುಪ್ಪಟ್ಟಾಗುತ್ತದೆ ಎಂದು ಹೂಡಿಕೆಯ ಲಿಂಕ್ ಕಳುಹಿಸುತ್ತಿದ್ದರು. ಆ ಮೂಲಕ ವಂಚನೆ ಎಸಗುತ್ತಿದ್ದರು ಎಂದು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ. ದಯಾನಂದ ತಿಳಿಸಿದ್ದಾರೆ.

(ವರದಿ- ಎಚ್ ಮಾರುತಿ, ಬೆಂಗಳೂರು)

Whats_app_banner