CBFC: ನಟ ವಿಶಾಲ್‌ನಿಂದ ಲಂಚದ ಆರೋಪ, ಹೀಗಿದೆ ನೋಡಿ ಕೇಂದ್ರ ಸಿನಿಮಾ ಸೆನ್ಸಾರ್ ಮಂಡಳಿ ಪ್ರತಿಕ್ರಿಯೆ
ತಮಿಳು ನಟ ವಿಶಾಲ್ ಅವರು ಕೇಂದ್ರ ಸಿನಿಮಾ ಸೆನ್ಸಾರ್ ಮಂಡಳಿ (ಸಿಬಿಎಫ್‌ಸಿ) ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದರು. ಇದೀಗ ಇವರ ದೂರನ್ನು ಸಿಬಿಎಫ್‌ಸಿ ಗಂಭೀರವಾಗಿ ತೆಗೆದುಕೊಂಡಿದ್ದು, ಸಂಬಂಧಪಟ್ಟ ತಪ್ಪಿತಸ್ಥರ ವಿರುದ್ಧ ಗಂಭೀರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.
ಬೆಂಗಳೂರು: ತಮಿಳು ನಟ ವಿಶಾಲ್ ಅವರು ಕೇಂದ್ರ ಸಿನಿಮಾ ಸೆನ್ಸಾರ್ ಮಂಡಳಿ (ಸಿಬಿಎಫ್‌ಸಿ) ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದರು. ಇದಕ್ಕೆ ಸಂಬಂಧಪಟ್ಟಂತೆ ವಿಡಿಯೋ ಬಿಡುಗಡೆ ಮಾಡಿ "ಮಧ್ಯವರ್ತಿಗಳಿಗೆ ಹಣ ಪಾವತಿಸಿ ಸಿನಿಮಾಕ್ಕೆ ಸೆನ್ಸಾರ್ ಸರ್ಟಿಫಿಕೇಟ್ ಪಡೆಯಬೇಕಾಯಿತು" ಎಂದು ಹೇಳಿದ್ದರು. ಮಾರ್ಕ್ ಆಂಟೋನಿ ಸಿನಿಮಾದ ಹಿಂದಿ ಅವತರಣಿಕೆಯ ಬಿಡುಗಡೆಯ ಸಂದರ್ಭದಲ್ಲಿ ಸೆನ್ಸಾರ್ ಸರ್ಟಿಫಿಕೇಟ್ ಪಡೆಯಲು ಮುಂಬೈ ಸಿಬಿಎಫ್‌ಸಿ ಕಚೇರಿಯಲ್ಲಿ ಸುಮಾರು 6.5 ಲಕ್ಷ ರೂಪಾಯಿ ಪಾವತಿಸಬೇಕಾಯಿತು ಎಂದಿದ್ದರು. ಇದೀಗ ಇವರ ದೂರನ್ನು ಸಿಬಿಎಫ್‌ಸಿ ಗಂಭೀರವಾಗಿ ತೆಗೆದುಕೊಂಡಿದ್ದು, ಸಂಬಂಧಪಟ್ಟ ತಪ್ಪಿತಸ್ಥರ ವಿರುದ್ಧ ಗಂಭೀರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.
ಸಿಬಿಎಫ್‌ಸಿ ಪ್ರತಿಕ್ರಿಯೆ
ನಟ ವಿಶಾಲ್ ಅವರ ಪ್ರಕರಣದಲ್ಲಿ "ಮೂರನೇ ಪಾರ್ಟಿಯ ಕೈವಾಡ" ಕೈವಾಡ ಇರುವ ಶಂಕೆಯನ್ನು ಕೇಂದ್ರ ಸಿನಿಮಾ ಸೆನ್ಸಾರ್ ಮಂಡಳಿ ವ್ಯಕ್ತಪಡಿಸಿದೆ. ಭ್ರಷ್ಟಾಚಾರದ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿ ಹೊಂದಿರುವುದಾಗಿ ಸಿಬಿಎಫ್‌ಸಿ ತಿಳಿಸಿದ್ದು, ಸಂಸ್ಥೆಯ ಕುರಿತು ಕೆಟ್ಟ ಅಭಿಪ್ರಾಯ ಮೂಡಿಸಲು ಪ್ರಯತ್ನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.
ಸಿಬಿಎಫ್‌ಸಿ ಸ್ಟೇಟ್‌ಮೆಂಟ್ ಹೀಗಿದೆ. " ಆನ್‌ಲೈನ್ ಸೆನ್ಸಾರ್ ವ್ಯವಸ್ಥೆ ಅಂದರೆ ಇ-ಸಿನಿಪ್ರಮಾನ್ ಜಾರಿಯಲ್ಲಿದ್ದರೂ ಮತ್ತು ಚಲನಚಿತ್ರ ನಿರ್ಮಾಪಕರು/ಅರ್ಜಿದಾರರಿಗೆ ಹೊಸ ವ್ಯವಸ್ಥೆ ನೀಡಲಾಗಿದ್ದರೂ ಇನ್ನೂ ಅವರು ಮಧ್ಯವರ್ತಿಗಳು ಅಥವಾ ಏಜೆಂಟರ ಮೂಲಕ ಅರ್ಜಿ ಸಲ್ಲಿಕೆ ಮಾಡಿರುತ್ತಾರೆ. ಇದು ಪ್ರಮಾಣೀಕರಣ ಪ್ರಕ್ರಿಯೆಯಲ್ಲಿ ಮೂರನೇ ವ್ಯಕ್ತಿಯ ಪಾಲ್ಗೊಳ್ಳುವಿಕೆಯ ಸಂಸ್ಥೆಯ ಉದ್ದೇಶಕ್ಕೆ ವಿರುದ್ಧವಾಗಿದೆ. ಹೀಗಿದ್ದರೂ, ಸದ್ಯ ವರದಿಯಾಗಿರುವ ದೂರನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಭ್ರಷ್ಟಾಚಾರದ ವಿರುದ್ಧ ಸಿಬಿಎಫ್‌ಸಿಯು ಶೂನ್ಯ ಸಹಿಷ್ಣುತೆಯನ್ನು ಹೊಂದಿದೆ. ಈ ಘಟನೆಯಲ್ಲಿ ಯಾರೇ ಭಾಗಿಯಾಗಿದ್ದರೂ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಇದಕ್ಕೆ ಸಂಬಂಧಪಟ್ಟಂತೆ ನಾವು ಮಾಹಿತಿ ಪಡೆದು ಕ್ರಮ ವಹಿಸುತ್ತೇವೆ. ಸಿಬಿಎಫ್‌ಸಿಯ ಇಮೇಜ್‌ಗೆ ಧಕ್ಕೆ ತರುವ ಯಾವುದೇ ಪ್ರಯತ್ನವನ್ನು ಸಹಿಸಲಾಗುವುದಿಲ್ಲ" ಎಂದು ಸಿಬಿಎಫ್‌ಸಿ ಪ್ರಕಟಣೆಯಲ್ಲಿ ತಿಳಿಸಿದೆ.
ತನಿಖೆ ಮಾಡುವುದಾಗಿ ತಿಳಿಸಿದ ಸಚಿವಾಲಯ
ಸಿಬಿಎಫ್‌ಸಿ ಪ್ರತಿಕ್ರಿಯೆ ನೀಡುವ ಮೊದಲು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವೂ ನಟ ವಿಶಾಲ್ ದೂರಿನ ಕುರಿತು ತನಿಖೆ ಮಾಡುವುದಾಗಿ ತಿಳಿಸಿತ್ತು. "ಇಂಡಿಯನ್ ಫಿಲ್ಮ್ ಆಂಡ್ ಟೆಲಿವಿಷನ್ ಡೈರೆಕ್ಟರ್ ಅಸೋಸಿಯೇಷನ್ ಪರವಾಗಿ ನಾವು ಪ್ರಸೂನ್ ಜೋಶಿಯವರಿಗೆ ಪತ್ರ ಬರೆಯುತ್ತಿದ್ದೇವೆ. ಈ ಪ್ರಕರಣವನ್ನು ಸಿಬಿಐ ಮೂಲಕ ತನಿಖೆ ಮಾಡಿಸಬೇಕು. ಈ ರೀತಿ ಹಣ ಪಡೆದವರು ಸಿಬಿಎಫ್‌ಸಿ ಉದ್ಯೋಗಿಗಳು ಅಲ್ಲದೆ ಇದ್ದರೂ, ಈ ಘಟನೆಯಲ್ಲಿ ಯಾರ ಪಾತ್ರವಿದೆಯೋ ಅವರ ವಿರುದ್ಧ ಕ್ರಮಕೈಗೊಳ್ಳಬೇಕು" ಎಂದು ಸಿಬಿಎಫ್‌ಸಿ ಮಾಜಿ ಸದಸ್ಯ ಅಶೋಕ್ ಪಂಡಿತ್ ಮಾಧ್ಯಮಗಳಿಗೆ ತಿಳಿಸಿದ್ದರು. ಈ ಘಟನೆ ಕುರಿತು ತನಿಖೆ ನಡೆಸುವುದಾಗಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಟ್ವೀಟ್ ಮಾಡಿದೆ.
ವಿಶಾಲ್ ದೂರಿನ ವಿವರ
ಮಾರ್ಕ್ ಆಂಟೋನಿ ನಟ ವಿಶಾಲ್ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ(ಸಿಬಿಎಫ್‌ಸಿ) ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದರು. ಮಾರ್ಕ್ ಆಂಟೋನಿ ಹಿಂದಿ ಅವತರಣಿಕೆ ಬಿಡುಗಡೆ ಮಾಡಲು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ ಮಧ್ಯವರ್ತಿಗಳು 6.5 ಲಕ್ಷ ರೂಪಾಯಿ ಲಂಚ ಕೇಳಿದ್ದಾರೆ ಎಂದು ಆರೋಪಿಸಿದ್ದರು. ಮಾರ್ಕ್ ಆಂಟೋನಿ ಸಿನಿಮಾದ ಹಿಂದಿ ಆವೃತ್ತಿಯು ಸೆಪ್ಟೆಂಬರ್ 28ರಂದು ಬಿಡುಗಡೆಯಾಗಿತ್ತು. ಈ ಕುರಿತು ನಟ ವಿಶಾಲ್ ವಿಡಿಯೋ ಬಿಡುಗಡೆ ಮಾಡಿದ್ದರು.
"ನಾನು ಈ ವಿಡಿಯೋ ಬಿಡುಗಡೆ ಮಾಡುತ್ತಿರುವುದು ಮಾರ್ಕ್ ಆಂಟೋನಿ ಸಿನಿಮಾ ಪ್ರಮೋಷನ್‌ಗಾಗಿ ಅಲ್ಲ. ಸಿನಿಮಾ ಸರ್ಟಿಫಿಕೇಟ್ ವಂಚನೆ ಕುರಿತು ಮಾಹಿತಿ ನೀಡುವ ಸಲುವಾಗಿ ಈ ವಿಡಿಯೋ ಮಾಡುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ. "ನಾವು ಆನ್‌ಲೈನ್ ಮೂಲಕ ಸಿನಿಮಾದ ಹಿಂದಿ ಅವತರಣಿಕೆಯ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಿದೆವು. ಕೆಲವೊಂದು ತಾಂತ್ರಿಕ ಕಾರಣಗಳಿಂದ ಕೊನೆಯ ಕ್ಷಣದಲ್ಲಿ ತೊಂದರೆಯಾಯಿತು. ಬಳಿಕ ನಾವು ಮುಂಬೈಯ ಸಿಬಿಎಫ್‌ಸಿ ಕಚೇರಿಯನ್ನು ಸಂಪರ್ಕಿಸಿದೆವು. ನಾವು ಆ ಆಫೀಸ್‌ಗೆ ಭೇಟಿ ನೀಡಿದಾಗ ಅಲ್ಲಿದ್ದ ವ್ಯಕ್ತಿಯು 6.5 ಲಕ್ಷ ರೂಪಾಯಿ ನೀಡಿದರೆ ಇಂದೇ ಸರ್ಟಿಫಿಕೇಟ್ ನೀಡುವುದಾಗಿ ತಿಳಿಸಿದರು. ನಮಗೆ ಬೇರೆ ಆಯ್ಕೆಯೇ ಇರಲಿಲ್ಲ" ಎಂದು ಅವರು ವಿಡಿಯೋದಲ್ಲಿ ಹೇಳಿದ್ದರು.
"ಸಿಬಿಎಫ್‌ಸಿಯಲ್ಲಿ ಸಿನಿಮಾ ಪ್ರದರ್ಶಿಸಲು ನಾವು 3 ಲಕ್ಷ ರೂಪಾಯಿ ನೀಡಬೇಕಾಯಿತು. 3.5 ಲಕ್ಷ ರೂಪಾಯಿ ಸರ್ಟಿಫಿಕೇಟ್‌ಗಾಗಿ ನೀಡಬೇಕಾಯಿತು" ಎಂದು ನಟ ವಿಶಾಲ್ ಹೇಳಿದ್ದಾರೆ. ಈ ಹಣಕಾಸು ವಹಿವಾಟು ನಡೆಸಿದ ಮಹಿಳೆಯು "ಈ ರೀತಿ ಹಣ ನೀಡುವುದು ಇಲ್ಲಿ ಮಾಮೂಲು. ಸಿನಿಮಾ ಬಿಡುಗಡೆಗೆ 15 ದಿನ ಮೊದಲು ಅರ್ಜಿ ಸಲ್ಲಿಸಿದರೆ 4 ಲಕ್ಷ ರೂಪಾಯಿ ಪಡೆಯಲಾಗುತ್ತದೆ ಎಂದು ಆ ಮಹಿಳೆ ತಿಳಿಸಿದರು" ಎಂದು ನಟ ವಿಶಾಲ್ ವಿಡಿಯೋದಲ್ಲಿ ಆರೋಪಿಸಿದ್ದರು.
"ನಮಗೆ ಬೇರೆ ಆಯ್ಕೆ ಇರಲಿಲ್ಲ. ನಾವು ಎರಡು ಕಂತಿನ ಮೂಲಕ ಹಣ ಪಾವತಿಸಿದೆವು. ಈ ಘಟನೆ ಸರಕಾರಿ ಕಚೇರಿಯಲ್ಲಿ ನಡೆಯುತ್ತಿದ್ದರೆ ಈ ಸಮಸ್ಯೆ ಬಗೆಹರಿಸುವಂತೆ ಉನ್ನತ ಅಧಿಕಾರಿಗಳಿಗೆ ತಿಳಿಸುತ್ತಿದ್ದೆ" ಎಂದು ಅವರು ಹೇಳಿದ್ದಾರೆ. "ಭ್ರಷ್ಟಾಚಾರವನ್ನು ಸಿನಿಮಾದಲ್ಲಿ ತೋರಿಸುವುದು ಸರಿ, ಆದರೆ, ನಿಜವಾದ ಬದುಕಿನಲ್ಲಿ ಇದು ಇರಬಾರದು. ವಿಶೇಷವಾಗಿ ಸರಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಇರಬಾರದು. ಇದೀಗ ಸಿಬಿಎಫ್‌ಸಿ ಮುಂಬೈ ಕಚೇರಿಯಲ್ಲಿ ಭ್ರಷ್ಟಾಚಾರ ನಡೆದಿರುವುದು ಕೆಟ್ಟ ಸಂಗತಿ. ಮಾರ್ಕ್ ಆಂಟೋನಿ ಹಿಂದಿ ಅವತರಣಿಕೆಯ ಸರ್ಟಿಫಿಕೇಟ್ ಪಡೆಯಲು ನಾವು 6.5 ಲಕ್ಷ ಪಾವತಿಸಿದೆವು" ಎಂದು ನಟ ವಿಶಾಲ್ ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಿದ್ದರು. ಇದೀಗ ಈ ಕುರಿತು ಸಿಬಿಎಫ್‌ಸಿ ಪ್ರತಿಕ್ರಿಯೆ ನೀಡಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.