‘ಮಿಸ್ಟರ್ ದಳಪತಿ ವಿಜಯ್, ಕನ್ನಡಿಗರ ಮೇಲೆ ಯಾಕಿಷ್ಟು ತಮಿಳಿನ ಹೇರಿಕೆ!’ GOAT ಚಿತ್ರಕ್ಕೆ ಕರ್ನಾಟಕದಲ್ಲಿ ತಟ್ಟಿತು ಬಾಯ್ಕಾಟ್ ಬಿಸಿ
ಕಾಲಿವುಡ್ ನಟ ದಳಪತಿ ವಿಜಯ್ ನಟನೆಯ ಗೋಟ್ ಸಿನಿಮಾಕ್ಕೆ ಚೆನ್ನೈಗಿಂತಲೂ ಬೆಂಗಳೂರಿನಲ್ಲಿಯೇ ಕ್ರೇಜ್ ಹೆಚ್ಚಾದಂತಿದೆ. 1200ಕ್ಕೂ ಅಧಿಕ ಶೋಗಳು, ಬೆಳಗಿನ 4 ಗಂಟೆ ಶೋಗಳು ಈ ಚಿತ್ರಕ್ಕೆ ಸಿಕ್ಕಿವೆ. ಟಿಕೆಟ್ ದರ ಚೆನ್ನೈಗಿಂತಲೂ 10 ಪಟ್ಟು ಅಧಿಕ. ಈ ಎಲ್ಲ ಬೆಳವಣಿಗೆಗಳೇ ಇದೀಗ ಕನ್ನಡಿಗರ ಕಣ್ಣು ಕೆಂಪಗಾಗಿಸಿವೆ.
Greatest of All Time Movie: ತಮಿಳಿನ ಸೂಪರ್‌ಸ್ಟಾರ್ ನಟ ದಳಪತಿ ವಿಜಯ್ ಅವರ GOAT ಗ್ರೇಟೆಸ್ಟ್ ಆಫ್ ಆಲ್ ಟೈಮ್ ಸಿನಿಮಾ ಇಂದು (ಸೆ. 5) ಬಿಡುಗಡೆ ಆಗಿದೆ. ಮೂಲ ತಮಿಳು ಸಿನಿಮಾಕ್ಕೆ ತಮಿಳಿನಾಡಿನಲ್ಲಿ ಸಿಗದ ಸ್ವಾಗತ ಕರ್ನಾಟಕದ ಬೆಂಗಳೂರಿನಲ್ಲಿ ಸಿಕ್ಕಿದೆ ಎಂದರೆ ಅಚ್ಚರಿಯೇ ಸರಿ. ನಟ ವಿಜಯ್ ಅವರಿಗೆ ಬೆಂಗಳೂರಿನಲ್ಲಿಯೂ ಅಪಾರ ಪ್ರಮಾಣದ ಫ್ಯಾನ್ಸ್ ಮತ್ತು ಸಿನಿಮಾ ನೋಡುವ ಪ್ರೇಕ್ಷಕ ವರ್ಗವೇ ಇದೆ. ಈ ಕಾರಣಕ್ಕೆ ಅವರ ಸಿನಿಮಾಗಳಿಗೆ ಬೆಂಗಳೂರಿನಲ್ಲಿ ಕೆಂಪು ಹಾಸಿನ ಸ್ವಾಗತ ಸಿಗುತ್ತಲೇ ಬಂದಿದೆ. ಇದೀಗ ಅದು ಗೋಟ್ ಸಿನಿಮಾಕ್ಕೂ ಮುಂದುವರಿದಿದ್ದು, ದೊಡ್ಡ ಮಟ್ಟದಲ್ಲಿಯೇ ರಿಲೀಸ್ ಆಗಿದೆ. ಈ ನಡುವೆ ಕೆಲವು ಕನ್ನಡ ಪರ ಸಂಘಟನೆಗಳ ಕೆಂಗಣ್ಣಿಗೂ ಈ ಸಿನಿಮಾ ಗುರಿಯಾಗಿದೆ.
ಕನ್ನಡದ ಸಿನಿಮಾಗಳಿಗೆ ಕರ್ನಾಟಕದಲ್ಲಿಯೇ ಈ ಮಟ್ಟದ ಕ್ರೇಜ್ ಕಡಿಮೆ. ಇತ್ತೀಚಿಗೆ ತೆರೆಕಂಡ ಕನ್ನಡದ ಸಿನಿಮಾಗಳಿಗೆ ಬೆಳಗಿನ 4 ಗಂಟೆಯೇ ಶೋ ಸಿಕ್ಕಿರಲಿಲ್ಲ. ಇದೀಗ ಇದೇ ಗೋಟ್ ಸಿನಿಮಾಕ್ಕೆ ಬೆಳಗಿನ 4 ಗಂಟೆ ಶೋಗಳು ಸಿಕ್ಕಿವೆ. ಇದಷ್ಟೇ ಅಲ್ಲ ಬೆಂಗಳೂರೊಂದರಲ್ಲಿಯೇ ಸಾವಿರಾರು ಶೋಗಳು ಬುಕ್ ಆಗಿವೆ. ಗುರುವಾರವೊಂದೇ ದಿನ ಒಟ್ಟಾರೆಯಾಗಿ 1200ಕ್ಕೂ ಅಧಿಕ ಶೋಗಳು ಸಿಕ್ಕಿವೆ. ಇನ್ನೊಂದು ವಿಚಾರ ಗೊತ್ತಿರಲಿ, ಚೆನ್ನೈನಲ್ಲಿ ಸಿನಿಮಾ ಶೋ ಶುರುವಾಗುವುದೇ 9 ಗಂಟೆಯ ನಂತರ. ಆದರೆ, ಕರ್ನಾಟಕದಲ್ಲಿ ಮಾತ್ರ ಈ ಸಿನಿಮಾ ಬೆಳಗಿನ 4 ಗಂಟೆಯಿಂದಲೇ ಪ್ರದರ್ಶನ ಕಾಣುತ್ತಿದೆ. ಈ ಬೆಳವಣಿಗೆಯೂ ಕನ್ನಡಿಗರ ಕಣ್ಣು ಕೆಂಪಗಾಗಿಸಿದೆ.
ಚೆನ್ನೈನಲ್ಲಿ 60 ರೂ ಟಿಕೆಟ್, ಬೆಂಗಳೂರಲ್ಲಿ 1000 ರೂ!
ಸಾವಿರಾರು ಸಂಖ್ಯೆಯ ಶೋಗಳ ಜತೆಗೆ ತಲಾ ಒಂದು ಟಿಕೆಟ್‌ಗೆ ಸಾವಿರಾರು ಚಾರ್ಜ್ ಮಾಡಲಾಗುತ್ತಿದೆ. ಇದೇ ಸಿನಿಮಾ ಚೆನ್ನೈನಲ್ಲಿ ರಿಲೀಸ್ ಆಗಿದೆ. ಅಲ್ಲಿನ ಪ್ರೇಕ್ಷಕ ಈ ಸಿನಿಮಾ ನೋಡಲು ವ್ಯಯಿಸುವ ಟಿಕೆಟ್ ಖರ್ಚು ಕನಿಷ್ಠ 60 ಗರಿಷ್ಠ 190 ರೂಪಾಯಿ ಮಾತ್ರ. ಆದರೆ, ಇದೇ ಸಿನಿಮಾವನ್ನು ಬೆಂಗಳೂರಿನಲ್ಲಿ ನೋಡುವುದಾದರೆ, ಇಲ್ಲಿನವರೆಗೆ ಮಲ್ಟಿಫ್ಲೆಕ್ಸ್‌ಗಳಲ್ಲಿ ಒಂದು ಟಿಕೆಟ್‌ಗೆ 480ರಿಂದ 1000 ರೂಪಾಯಿ ವರೆಗೂ ವ್ಯಯಿಸಬೇಕು. ಇದೆಲ್ಲವನ್ನು ನೋಡಿಯೇ ಇದೀಗ ಕನ್ನಡ ಪರ ಹೋರಾಟಗಾರರ ಸೋಷಿಯಲ್ ಮೀಡಿಯಾದಲ್ಲಿ ಬೆಂಗಳೂರು ಪೊಲೀಸ್‌ಗೆ ಟ್ಯಾಗ್ ಮಾಡಿ, ಸಿನಿಮಾ ಪ್ರದರ್ಶನದ ನಿಯಮಗಳ ಉಲ್ಲಂಘನೆಯಾಗಿದೆ ಎಂದಿದ್ದಾರೆ.
ಗೋಟ್ ವಿರುದ್ಧ ಅಪಸ್ವರ
ಪರಭಾಷೆ ಸಿನಿಮಾಗಳು ಕನ್ನಡ ನೆಲದಲ್ಲಿ ಬೇಕಾಬಿಟ್ಟಿ ಬೆಲೆ ವಿಧಿಸಿ, ಸಾವಿರಾರು ಸ್ಕ್ರೀನ್‌ಗಳ ಮೇಲೆ ತೆರೆಕಂಡಿದ್ದೇ ತಡ, ನೆಟ್ಟಿಗರು ಕೊಂಚ ಗರಂ ಆಗಿದ್ದಾರೆ. ವಾಸ್ತವದ ವಿಚಾರವನ್ನು ಹಂಚಿಕೊಂಡು, ಈ ಕೂಡಲೇ ಗೋಟ್ ಸಿನಿಮಾವನ್ನು ಬಾಯ್ಕಾಟ್ ಮಾಡಬೇಕು ಎಂದು ಆಗ್ರಹಿಸುತ್ತಿದ್ದಾರೆ. "ಕನ್ನಡಿಗರಿಗೆ ನಾಚಿಕೆಯಾಗಬೇಕು, ತಮಿಳು ಚಿತ್ರವೊಂದು ಬೆಂಗಳೂರು ನಗರದಲ್ಲಿ 1260/1500 ಪ್ರದರ್ಶನಗಳನ್ನು ಪಡೆಯುತ್ತದೆ. ನಟ ವಿಜಯ್ ಯಾಕೆ ಕನ್ನಡಿಗರ ಮೇಲೆ ತಮಿಳನ್ನು ಡಂಪ್ ಮಾಡುತ್ತಿದ್ದೀರಿ? ಸಿನಿಮಾ ಪ್ರದರ್ಶನ ನಿಯಮಗಳ ಉಲ್ಲಂಘನೆಯಾಗಿದೆ. ಬೆಂಗಳೂರು ಪೊಲೀಸರೇ ಏನ್ಮಾಡ್ತಿದ್ದೀರಿ? ನಾರಾಯಣ ಗೌಡ್ರೆ, ರೂಪೇಶ್ ರಾಜಣ್ಣ.. ಯಾಕ್ರೀ ಸ್ವಾಮಿ ಇದು ಕಣ್ಣಿಗೆ ಕಾಣಿಸ್ತಿಲ್ವಾ?? ಇದರ ಬಗ್ಗೆ ನಿಮ್ಮ ಗಮನ ಯಾವಾಗ???
ಸಿಎಂ, ಡಿಸಿಎಂಗೂ ಮನವಿ
ಸಿದ್ದರಾಮಯ್ಯನವ್ರೇ, ಡಿ ಕೆ ಶಿವಕುಮಾರ್ ಅವರೇ ಎಲ್ರಿ ಸ್ವಾಮಿ ನಿಮ್ಮ ಕನ್ನಡ ಅಭಿಮಾನ?? ಕನ್ನಡ ಚಿತ್ರೋದ್ಯಮದಲ್ಲಿರುವ ಎಲ್ಲಾ ನಟರು, ತಂತ್ರಜ್ಞರು ಏನ್ಮಾಡ್ತಾವ್ರೆ?? ನೀವು ನಿಮ್ಮನು ಮಾರಿಕೊಳ್ಳಿ ಕನ್ನಡವನ್ನು ಯಾಕ್ರೀ ನಿಮ್ಮ ತೆವಲಿಗೆ ಮಾರ್ತೀರ?? ಡಾ. ರಾಜ್‌ಕುಮಾರ್ ಕಟ್ಟಿದ ಈ ಸಂಸ್ಥೆ ಯನ್ನು ಹಾಳು ಮಾಡಿದ್ದೀರಾ.. ಎಷ್ಟೋ ಪ್ಲೆಕ್ಸ್ ಗಳಲ್ಲಿ ಕನ್ನಡ ಆಟ ಇಲ್ಲಾ ಗುರುವಾರ" ಎಂದು ಕನ್ನಡ ಡೈನಾಸ್ಟಿ ಟ್ವಿಟರ್ ಪುಟದಲ್ಲಿ ಪೋಸ್ಟ್ ಹಂಚಿಕೊಂಡಿದೆ.
"ಈ ಕನ್ನಡ ನೆಲದಲ್ಲಿ ಉಂಡ ಮನೆಗೆ ದ್ರೋಹ ಬಗೆಯುವವರು ಒಬ್ಬರ ಇಬ್ಬರ??? ಒಂದು rock ಇನ್ನೊಂದು rockline! ಒಬ್ಬರು ಕನ್ನಡವನ್ನು ಬಳಸಿ ರಾಜ್ಯ ಪಟ್ಟಕ್ಕೆ ಏರಿದರು ಇನ್ನೊಬ್ಬರು ಕನ್ನಡ ಚಿತ್ರ ರಂಗದ ಮುಖ್ಯರು! ಇವರ ಮಾಲಿಕತ್ವದ ಮಾಲ್ ನಲ್ಲಿ ತಮಿಳು ಚಿತ್ರಕ್ಕೆ ಶೋ ಗಳು ನೋಡಿ" ಎಂದೂ ಪೋಸ್ಟ್ ಹಂಚಿಕೊಂಡಿದೆ.