Renuka Swamy Photos: ರೇಣುಕಾಸ್ವಾಮಿ ಅಂಗಲಾಚುತ್ತಿರುವ ಫೋಟೋಗಳು ವೈರಲ್‌, ದರ್ಶನ್‌ ನೀನೆಷ್ಟು ಕ್ರೂರಿ ಎಂದ ಜನರು
ಕನ್ನಡ ಸುದ್ದಿ  /  ಮನರಂಜನೆ  /  Renuka Swamy Photos: ರೇಣುಕಾಸ್ವಾಮಿ ಅಂಗಲಾಚುತ್ತಿರುವ ಫೋಟೋಗಳು ವೈರಲ್‌, ದರ್ಶನ್‌ ನೀನೆಷ್ಟು ಕ್ರೂರಿ ಎಂದ ಜನರು

Renuka Swamy Photos: ರೇಣುಕಾಸ್ವಾಮಿ ಅಂಗಲಾಚುತ್ತಿರುವ ಫೋಟೋಗಳು ವೈರಲ್‌, ದರ್ಶನ್‌ ನೀನೆಷ್ಟು ಕ್ರೂರಿ ಎಂದ ಜನರು

Renuka Swamy Photos: ಚಿತ್ರದುರ್ಗದ ರೇಣುಕಾಸ್ವಾಮಿ ಸಾಯುವ ಮುನ್ನ ಅಂಗಲಾಚುತ್ತಿರುವ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ. ಒಂದು ಫೋಟೋದಲ್ಲಿ ಪ್ರಾಣಭಿಕ್ಷೆ ಬೇಡುತ್ತಿದ್ದರೆ, ಇನ್ನೊಂದು ಫೋಟೋದಲ್ಲಿ ಪ್ರಜ್ಞೆ ತಪ್ಪಿ ಬಿದ್ದಿರುವ ಚಿತ್ರಣವಿದೆ.

ರೇಣುಕಾಸ್ವಾಮಿ ಅಂಗಲಾಚುತ್ತಿರುವ ಫೋಟೋ (ಕೃಪೆ: ಸೋಷಿಯಲ್‌ ಮೀಡಿಯಾ) ಇನ್ನೊಂದು ಫೋಟೋ ನಟ ದರ್ಶನ್‌ ಡೆವಿಲ್‌ ಸಿನಿಮಾದ ಪೋಸ್ಟರ್‌ (ಸಾಂದರ್ಭಿಕ)
ರೇಣುಕಾಸ್ವಾಮಿ ಅಂಗಲಾಚುತ್ತಿರುವ ಫೋಟೋ (ಕೃಪೆ: ಸೋಷಿಯಲ್‌ ಮೀಡಿಯಾ) ಇನ್ನೊಂದು ಫೋಟೋ ನಟ ದರ್ಶನ್‌ ಡೆವಿಲ್‌ ಸಿನಿಮಾದ ಪೋಸ್ಟರ್‌ (ಸಾಂದರ್ಭಿಕ)

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಸಾಯುವ ಮುನ್ನ ಅಂಗಲಾಚುತ್ತಿರುವ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ. ಈ ಫೋಟೋಗಳಲ್ಲಿರುವ ಬಡಕಲು ಜೀವದ ರೇಣುಕಾಸ್ವಾಮಿಯ ಕಣ್ಣಲ್ಲಿ ಕಾಣುವ ಯಾತನೆ, ಅಂಗಲಾಚುತ್ತಿರುವ ಪರಿಯನ್ನು ಕಂಡು ಸಾಕಷ್ಟು ಜನರು ವಿಹ್ವಲ ಮರುಗಿದ್ದಾರೆ. ಇದೇ ಸಮಯದಲ್ಲಿ ದರ್ಶನ್‌ ನೀನೆಷ್ಟು ಕ್ರೂರಿ ಎಂದು ಈ ಫೋಟೋಗಳನ್ನು ಸಾಕಷ್ಟು ಜನರು ಹಂಚಿಕೊಳ್ಳುತ್ತಿದ್ದಾರೆ. ಸದ್ಯ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳು ಕರ್ನಾಟಕದ ವಿವಿಧ ಜೈಲುಗಳಲ್ಲಿದ್ದಾರೆ. ನಟ ದರ್ಶನ್‌ ಬಳ್ಳಾರಿ ಜೈಲಿನಲ್ಲಿದ್ದಾರೆ.

ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಅಂಗಲಾಚುತ್ತಿರುವ ಈ ಫೋಟೋವನ್ನು ನೋಡಿ ಕರಳು ಚುರುಕ್‌ ಎನ್ನುತ್ತಿದೆ ಎಂದು ಸಾಕಷ್ಟು ಜನರು ಹೇಳುತ್ತಿದ್ದಾರೆ. ಈ ಫೋಟೋದಲ್ಲಿ ಎರಡು ಲಾರಿಗಳೂ ಕಾಣಿಸಿವೆ. "ನನ್ನ ಮಗನಿಗೆ ಆದ ಗತಿ ಆರೋಪಿಗಳಿಗೂ ಆಗಬೇಕು. ಯಾರಿಗೂ ಮನುಷ್ಯತ್ವ ಇಲ್ಲ. ನಮ್ಮ ಆರೋಗ್ಯ ಹಾಳಾಗುತ್ತಿದೆ" ಎಂದು ಮಾಧ್ಯಮಗಳಿಗೆ ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ ಪ್ರತಿಕ್ರಿಯೆ ನೀಡಿದ್ದಾರೆ.

ಒಂದು ಫೋಟೋದಲ್ಲಿ ರೇಣುಕಾಸ್ವಾಮಿ ಲಾರಿಗಳ ಮುಂದೆ ಕುಳಿತು ಜೀವಕ್ಕಾಗಿ ಅಂಗಲಾಚುತ್ತಿದ್ದಾರೆ. ಈ ದೃಶ್ಯ ನೋಡಿ ಸಾಕಷ್ಟು ಜನರು ಮರುಗಿದ್ದಾರೆ. ಸಾಯುವ ಮುನ್ನ ಎಷ್ಟೊಂದು ಹಿಂಸೆ ಅನುಭವಿಸಿರಬಹುದು. ಪ್ರಾಣರಕ್ಷಣೆಗಾಗಿ ಎಷ್ಟು ಮೊರೆ ಇಟ್ಟಿರಬಹುದು. ಇಷ್ಟಾದರೂ ಕ್ರೂರಿಗಳ ಮನಸ್ಸು ಕರಗಲಿಲ್ಲ ಏಕೆ ಎಂದೆಲ್ಲ ಜನರು ಮಾತನಾಡಿಕೊಳ್ಳುತ್ತಿದ್ದಾರೆ.

ವೈರಲ್‌ ಆದ ಇನ್ನೊಂದು ಫೋಟೋದಲ್ಲಿ ರೇಣುಕಾಸ್ವಾಮಿ ಹುಲ್ಲು ಪೊದೆಗಳಿರುವ ನೆಲದಲ್ಲಿ ಅಂಗಾತ ಬಿದ್ದಿದ್ದಾರೆ. ಕೈ ಎದೆಯ ಮೇಲಿದೆ. ಮೃತಪಟ್ಟ ಬಳಿಕದ ಫೋಟೋ ಅಥವಾ ಪ್ರಜ್ಞೆ ತಪ್ಪಿಬಿದ್ದಿರುವ ಫೋಟೋ ಇದಾಗಿರಬಹುದೇ ಎಂದು ತಿಳಿದುಬಂದಿಲ್ಲ. ಆರೋಪಿಗಳ ಮೊಬೈಲ್‌ ಫೋನ್‌ಗಳಿಂದ ರಿಟ್ರೈವ್‌ ಮಾಡಲಾದ ಫೋಟೋಗಳು ಇದಾಗಿದೆ.

ತನ್ನ ಮಗ ಕೈಮುಗಿದು ಅಂಗಲಾಚುತ್ತಿರುವ ಫೋಟೋವನ್ನು ನೋಡಿ ರೇಣುಕಾಸ್ವಾಮಿ ತಂದೆ ಕಣ್ಣೀರಿಟ್ಟಿದ್ದಾರೆ. "ಅವರು ಮಗನ ಮೇಲೆ ಕರುಣೆ ತೋರಿಸಿ ಬಿಡಬಹುದಿತ್ತು. ಆದರೆ, ಅಷ್ಟೊಂದು ಬೇಡಿಕೊಂಡರು ಬಿಡಲಿಲ್ಲ. ಹೊಡೆದು ಸಾಯಿಸಿದ್ದಾರೆ. ಈ ರೀತಿ ಅಂಗಲಾಚುತ್ತಿರುವಾಗ ದರ್ಶನ್‌ ಮತ್ತು ಇತರರು ಯೋಚಿಸಬೇಕಿತ್ತು. ಈತನಿಗೆ ಏನಾದರೂ ಆದರೆ ನಾಳೆ ನಮ್ಮ ಗತಿಯೇನು ಎಂದು ಯೋಚಿಸಬೇಕಿತ್ತು. ಒಂದೆರಡು ಏಟು ಕೊಟ್ಟು ಕಳುಹಿಸಬೇಕಿತ್ತು. ಕಾನೂನಿನಲ್ಲಿ ಏನಿದೆ ಶಿಕ್ಷೆ, ಅದು ಅವರೆಲ್ಲರಿಗೆ ದೊರಕಲ. ನನ್ನ ಮಗ ನರಳಿ ನರಳಿ ಸತ್ತಿದ್ದಾನೆ. ಎಲ್ಲರಿಗೂ ಕಠಿಣ ಶಿಕ್ಷೆ ಆಗಬೇಕು. ನನ್ನ ಸೊಸೆಯ ಭವಿಷ್ಯದ ಕುರಿತು ಚಿಂತೆಯಾಗಿದೆ" ಎಂದು ರೇಣುಕಾಸ್ವಾಮಿ ತಂದೆ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಟ್ಟು 17 ಜನರನ್ನು ಪೊಲೀಸರು ಬಂಧಿಸಿದ್ದಾರೆ. ದರ್ಶನ್‌, ಪವಿತ್ರಾ ಗೌಡ ಬೇರೆಬೇರೆ ಜೈಲುಗಳಲ್ಲಿದ್ದಾರೆ. ಇದೇ ಸಮಯದಲ್ಲಿ ತನಿಖಾಧಿಕಾರಿಗಳು ಚಾರ್ಚ್‌ಶೀಟ್‌ ಸಿದ್ದಪಡಿಸಿದ್ದಾರೆ. ಆರೋಪಿಗಳ ವಿರುದ್ಧದ ಪ್ರತ್ಯಕ್ಷ, ಪರೋಕ್ಷ, ಸಾಂದರ್ಭಿಕ ಸಾಕ್ಷಿಗಳು ಮಾತ್ರವಲ್ಲದೆ ತಾಂತ್ರಿಕ, ವೈಜ್ಞಾನಿಕ ಸಾಕ್ಷ್ಯಗಳನ್ನೂ ರೆಡಿ ಮಾಡಿದ್ದಾರೆ. ಈಗಾಗಲೇ ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್‌ಗೆ ದೋಷಾರೋಪಣಾ ಪಟ್ಟಿ ಸಲ್ಲಿಕೆ ಮಾಡಲಾಗಿದೆ. 231 ಸಾಕ್ಷಿ, 3,991 ಪುಟಗಳ ಚಾರ್ಜ್‌ ಶೀಟ್‌ ಒಟ್ಟು 7 ಸಂಪುಟ ಮತ್ತು 10 ಫೈಲ್‌ಗಳನ್ನು ಒಳಗೊಂಡಿದೆ. "17 ಆರೋಪಿಗಳ ವಿರುದ್ಧ ಅಂತಿಮ ವರದಿ ರೆಡಿಯಾಗಿದೆ. ಒಟ್ಟು 3991 ಪುಟಗಳ ಚಾರ್ಚ್‌ಶೀಟ್‌ ಇದಾಗಿದೆ" ಎಂದು ಪೊಲೀಸ್‌ ಆಯುಕ್ತ ಬಿ. ದಯಾನಂದ್‌ ಮಾಹಿತಿ ನೀಡಿದ್ದಾರೆ.

Whats_app_banner