Ravindar Chandrasekaran: ಜೈಲಿಂದ ಬರುತ್ತಿದ್ದಂತೆ ಪತ್ನಿ ಮಹಾಲಕ್ಷ್ಮೀ ನಡವಳಿಕೆ ಬಗ್ಗೆ ಹೇಳಿಕೆ ನೀಡಿ ಕಣ್ಣೀರಿಟ್ಟ ರವೀಂದರ್ ಚಂದ್ರಶೇಖರನ್
Producer Ravindar Chandrasekaran: ಸುದೀರ್ಘ ಒಂದು ತಿಂಗಳ ಕಾಲ ಜೈಲಿನಲ್ಲಿದ್ದು, ಷರತ್ತುಬದ್ಧ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಹೀಗೆ ರಿಲೀಸ್ ಆದ ಬಳಿಕ ತನ್ನ ಪತ್ನಿಯ ಬಗ್ಗೆ ಮತ್ತು ಜೈಲಿನಲ್ಲಿ ಅನುಭವಿಸಿದ ಯಾತನೆ ಬಗ್ಗೆ ರವೀಂದರ್ ಹೇಳಿಕೊಂಡಿದ್ದಾರೆ.
Ravindar Chandrasekaran: ಕಾಲಿವುಡ್‌ನಲ್ಲಿ ಕಳೆದ ವರ್ಷದಿಂದ ಈ ದಿನದ ವರೆಗೂ ಸುದ್ದಿಯಲ್ಲಿದೆ ತಮಿಳು ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಮತ್ತು ಮಹಾಲಕ್ಷ್ಮೀ ಶಂಕರ್ ಜೋಡಿ. ಆಕೆ ಸುಂದರಿ, ಈತ ದಡೂತಿ ದೇಹದ ವ್ಯಕ್ತಿ. ಈ ಇಬ್ಬರ ಜೋಡಿ ನೋಡಿ ಮೆಚ್ಚಿಕೊಂಡವರಿಗಿಂತ ಆಡಿಕೊಂಡವರೇ ಹೆಚ್ಚು. ಹೀಗಿರುವಾಗಲೇ ಮೊದಲ ವರ್ಷದ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡ ಈ ಜೋಡಿ, ಅದಾದ ಬಳಿಕ ಹೆಚ್ಚು ದಿನ ಕೂಡಿ ಇರಲಿಲ್ಲ. ವಂಚನೆ ಪ್ರಕರಣದಲ್ಲಿ ಸೆ. 8ರಂದು ರವೀಂದರ್ ಅವರ ಬಂಧನವಾಗಿತ್ತು. ಇದೀಗ ಸುದೀರ್ಘ ಒಂದು ತಿಂಗಳ ಜೈಲುವಾಸದ ಬಳಿಕ ರವೀಂದರ್ ಹೊರಬಂದಿದ್ದಾರೆ.
ಘನತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಯೋಜನೆಗೆ ಹಣ ಹೂಡಿದರೆ ದುಪ್ಪಟ್ಟು ಲಾಭ ಸಿಗುತ್ತದೆ ಎಂದು ಚೆನ್ನೈನ ಬಾಲಾಜಿ ಗಾಬಾ ಎಂಬುವವರಿಗೆ ರವೀಂದರ್ ನಂಬಿಸಿದ್ದರು. ಅವರಿಂದ 16 ಕೋಟಿ ಹಣವನ್ನು ಹೂಡಿಕೆ ಸಹ ಮಾಡಿಸಿದ್ದರು. ಈ ಯೋಜನೆಯಲ್ಲಿ ಹೂಡಿಕೆ ಮಾಡುವಂತೆ ಹೇಳಿ ನಕಲಿ ದಾಖಲೆಗಳನ್ನು ಬಳಸಿ ವಂಚನೆಯಲ್ಲಿ ತೊಡಗಿದ್ದರು ಎಂದು ಉದ್ಯಮಿ ಬಾಲಾಜಿ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ರವೀಂದರ್ ಅವರನ್ನು ಚೆನ್ನೈ ಪೊಲೀಸರು ಸೆ. 7ರಂದೇ ಬಂಧಿಸಿದ್ದರು. ಇದೀಗ ಸುದೀರ್ಘ ಒಂದು ತಿಂಗಳ ಬಳಿಕ ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆಯಾಗಿ ಮನೆಗೆ ಮರಳಿದ್ದಾರೆ.
ಪತ್ನಿ ಬಗ್ಗೆ ಮಾತನಾಡಿದ ರವೀಂದರ್
ಜೈಲಿಂದ ಮರಳಿದ ಬಳಿಕ ತಮಿಳು ಯೂಟ್ಯೂಬ್ ಸಂದರ್ಶನವೊಂದರಲ್ಲಿ ತಮ್ಮ ಜೈಲುವಾಸ ಮತ್ತು ಪತ್ನಿಯ ಬಗ್ಗೆ ರವೀಂದರ್ ಚಂದ್ರಶೇಖರ್ ಹೇಳಿಕೊಂಡಿದ್ದಾರೆ. "ಅವಳಿಗೆ ನಾನೆಂದರೆ ತುಂಬ ಪ್ರೀತಿ. ಕೋಪ ಹೆಚ್ಚಿದ್ದರೂ, ನಿನ್ನನ್ನು ಈ 30 ದಿನ ನೋಡದೇ ಇರಲು ಆಗಲಿಲ್ಲ ಎಂದಳು. ಆದರೆ, ನಾನು ಹೊರಗೆ ಬರುವುದು ಅವಳಿಗೆ ನನಗಿಂತ ಹೆಚ್ಚು ಖಚಿತವಾಗಿತ್ತು. ನಾನು ಜೈಲು ಸೇರಿದ ಮೊದಲ ದಿನದಿಂದಲೇ ಅವಳು ನನ್ನ ಪರವಾಗಿ ನಿಂತಳು. ನನ್ನ ಮಾವ ಮತ್ತು ಅತ್ತೆ ಕೂಡ ನನ್ನನ್ನು ತಪ್ಪಾಗಿ ಭಾವಿಸಲಿಲ್ಲ. ಅವರಿಂದಲೂ ಆಶೀರ್ವಾದ ಪಡೆದೆ" ಎಂದಿದ್ದಾರೆ ರವೀಂದರ್.
ನನ್ನ ಜೀವನದಲ್ಲಿ ಅಮ್ಮನ ಬಳಿಕ ಸಿಕ್ಕವಳೇ ಮಹಾಲಕ್ಷ್ಮೀ. ಹೆಸರಿಗೇ ತಕ್ಕಂತೆಯೇ ಅವಳು ಮಹಾಲಕ್ಷ್ಮೀ. ಯಾಕೆಂದರೆ, ನಾನು ಅರೆಸ್ಟ್ ಆದ ಬಳಿಕ ನನ್ನ ಬಗ್ಗೆ ಸಾಕಷ್ಟು ಸುದ್ದಿಗಳು ಹಬ್ಬಿದವು. ವಂಚನೆ ಮಾಡಿದ, ಹಣ ಎಗರಿಸಿದ ಎಂದೆಲ್ಲ ಸುದ್ದಿಯಾದವು. ಇಷ್ಟೆಲ್ಲ ಆದರೂ, ನನ್ನ ಹೆಂಡತಿ, ನನ್ನ ಮಾವ, ಅತ್ತೆ ನನ್ನನ್ನು ಬಿಟ್ಟುಕೊಡಲಿಲ್ಲ. ಅದೇ ನನಗೆ ಬಿಗ್ ಸಪೋರ್ಟ್. ಬಂಧನದ ಬಳಿಕ ನನ್ನನ್ನು ಪುಝಲ್ ಜೈಲಿಗೆ ಕರೆದೊಯ್ಯಲಾಯ್ತು. ಅಚ್ಚರಿ ಏನೆಂದರೆ ಅಲ್ಲಿ ಕುಳಿತುಕೊಳ್ಳುವುದೇ ನನಗೆ ಎದುರಾದ ದೊಡ್ಡ ಸಮಸ್ಯೆ" ಎಂದು ಆ ದಿನಗಳನ್ನು ನೆನೆದು ಕಣ್ಣೀರಾದರು ರವೀಂದರ್.
ಜೈಲಿನಲ್ಲಿ ಕಳೆದ ದಿನಗಳು..
ಮೊದಲ ದಿನ ಪುಝಲ್ ಜೈಲಿಗೆ ಹೋದಾಗ ಬಾಗಿಲು ಕಂಡರೆ ಭಯವಾಯಿತು. ಬಾಗಿಲು ತೆರೆದಾಗ ಇಡೀ ದೇಹ ನಡುಗಿತು. ಒಳಹೋಗುವಾಗ ಬಟ್ಟೆ ಕಳಚಿ ಎಲ್ಲ ಪರೀಕ್ಷೆಗಳನ್ನೂ ಮಾಡಿದರು. ಇಡೀ ದೇಹವನ್ನು ಸ್ಕ್ಯಾನ್ ಮಾಡಿದರು. ಅದನ್ನು ನೋಡಿ ತುಂಬಾ ನೋವಾಗಿತ್ತು. ನಾನೇನು ಲೈಂಗಿಕ ದೌರ್ಜನ್ಯದ ಆರೋಪಿಯಲ್ಲ ಎಂದೂ ಅಲ್ಲಿ ಹೇಳಿಕೊಂಡಿದ್ದೆ. ಮೊದಲ 5 ದಿನಗಳು ನನ್ನ ಪಾಲಿಗೆ ನರಕವಾಗಿತ್ತು. ನಾನು ಇಲ್ಲಿಯೇ ಸಾಯಬಹುದು ಎಂದುಕೊಂಡೆ. ಜೈಲಿನಲ್ಲಿ ಬಾತ್ ರೂಮಿಗೂ ಹೋಗುವುದೂ ಕಷ್ಟವಿತ್ತು. ನಾನು ತುಂಬಾ ಬಳಲಿದ್ದೆ. ಕುಳಿತುಕೊಳ್ಳುವುದಕ್ಕೂ ಸಾಧ್ಯವಾಗುತ್ತಿರಲಿಲ್ಲ. ಕೊನೆಗೆ ಅಲ್ಲಿನ ಜೈಲರ್ ನನಗೆ ಸಹಾಯ ಮಾಡಿದರು" ಎಂದು ಹೇಳಿಕೊಂಡಿದ್ದಾರೆ ರವೀಂದರ್ ಚಂದ್ರಶೇಖರನ್.
ಮನರಂಜನೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ವಿಭಾಗ