Yuva Rajkumar Movie Update: ರಾಜ್ ಕುಟುಂಬದ ಕುಡಿಗೆ ಜೋಡಿಯಾಗಲಿದ್ದಾಳೆ ಮಲಯಾಳಿ ಬ್ಯೂಟಿ; ಕನ್ನಡಕ್ಕೆ ಬರ್ತಿದ್ದಾರಂತೆ ಕಲ್ಯಾಣಿ!
ಸಂತೋಷ್ ಆನಂದ್ ರಾಮ್ ಮತ್ತು ಯುವ ರಾಜ್‌ಕುಮಾರ್ ಕಾಂಬಿನೇಷನ್‌ನಲ್ಲಿ ಘೋಷಣೆ ಆಗಿದ್ದ ಸಿನಿಮಾಕ್ಕೆ ಇದೀಗ ನಾಯಕಿ ಆಯ್ಕೆ ಪ್ರಕ್ರಿಯೆ ಮುಗಿದಿದೆಯಂತೆ.
Yuva Rajkumar Movie Update: ಕನ್ನಡದ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಸದ್ಯ ಹತ್ತು ಹಲವು ಸಿನಿಮಾಗಳನ್ನು ನಿರ್ಮಿಸುತ್ತಿದೆ. ಅದರಲ್ಲಿ ಕೆಲವು ಸಿನಿಮಾಗಳು ಬಿಡುಗಡೆಗೆ ರೆಡಿಯಾಗಿದ್ದರೆ, ಇನ್ನು ಕೆಲವು ಚಿತ್ರೀಕರಣದ ಹಂತದಲ್ಲಿವೆ. ಈ ನಡುವೆ ಹೊಸ ಸಿನಿಮಾ ಘೋಷಣೆಗಳೂ ಆಗುತ್ತಿವೆ. ಇತ್ತ ಕಲಾವಿದರ ಆಯ್ಕೆ ಪ್ರಕ್ರಿಯೆಯೂ ತೆರೆಮರೆಯಲ್ಲಿಯೇ ನಡೆಯುತ್ತಿದೆ. ಹೀಗಿರುವಾಗಲೇ ಹೊಂಬಾಳೆ ಸಂಸ್ಥೆ ಇದೀಗ ಇನ್ನೋರ್ವ ಪರಭಾಷಾ ನಟಿಯನ್ನು ಕನ್ನಡಕ್ಕೆ ಕರೆತರುತ್ತಿದೆ.
ಹೌದು, ಯಾವ ಸಿನಿಮಾ ಎಂಬ ಗೊಂದಲ ನಿಮಗಿರಬಹುದು. ಸಂತೋಷ್ ಆನಂದ್ ರಾಮ್ ಮತ್ತು ಯುವ ರಾಜ್‌ಕುಮಾರ್ ಕಾಂಬಿನೇಷನ್‌ನಲ್ಲಿ ಘೋಷಣೆ ಆಗಿದ್ದ ಸಿನಿಮಾಕ್ಕೆ ಇದೀಗ ನಾಯಕಿ ಆಯ್ಕೆ ಪ್ರಕ್ರಿಯೆ ಮುಗಿದಿದೆಯಂತೆ. ಇನ್ನೇನು ಶೀಘ್ರದಲ್ಲಿ ಈ ವಿಚಾರವನ್ನು ಚಿತ್ರನಿರ್ಮಾಣ ಸಂಸ್ಥೆ ಅಧಿಕೃತಗೊಳಿಸಲಿದೆಯಂತೆ. ಹಾಗಾದರೆ ಯಾರು ಆ ನಟಿ?
ಈಗಾಗಲೇ ಮಲಯಾಳಂ, ತೆಲುಗು ಮತ್ತು ತಮಿಳು ಸಿನಿಮಾ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡಿರುವ ಕಲ್ಯಾಣಿ ಪ್ರಿಯದರ್ಶನ್, ಕನ್ನಡಕ್ಕೆ ಬರಲು ಕಾತರದಲ್ಲಿದ್ದಾರೆ. ಮಾಲಿವುಡ್‌ನ ನಿರ್ದೇಶಕ ಪ್ರಿಯದರ್ಶನ್ ಮತ್ತು ಲಿಸ್ಸಿ ದಂಪತಿಯ ಪುತ್ರಿಯೇ ಈ ಕಲ್ಯಾಣಿ. ಕನ್ನಡ ಹೊರತುಪಡಿಸಿ ಇನ್ನುಳಿದ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮ ಅಭಿನಯದ ಮೂಲಕವೇ ಎಲ್ಲರ ಗಮನ ಸೆಳೆದಿದ್ದಾರೆ.
ಇದೀಗ ಡಾ. ರಾಜ್‌ಕುಮಾರ್ ಮೊಮ್ಮಗ, ರಾಘವೇಂದ್ರ ರಾಜ್‌ಕುಮಾರ್ ಕಿರಿಮಗ ಯುವ ರಾಜ್‌ಕುಮಾರ್‌ಗೆ ಕಲ್ಯಾಣಿ ಜೋಡಿಯಾಗಲಿದ್ದಾರೆ ಎಂಬ ಸುದ್ದಿ ಸ್ಯಾಂಡಲ್‌ವುಡ್ ಅಂಗಳದಲ್ಲಿ ದಟ್ಟವಾಗಿ ಹರಿದಾಡುತ್ತಿದೆ. ಇನ್ನೇನು ಈ ವಿಚಾರ ಅಧಿಕೃತವಾಗಿ ಘೋಷಣೆ ಆಗಬೇಕಿದೆ.
ಇನ್ನೊಂದು ವಿಚಾರ ಏನೆಂದರೆ, ಕಲ್ಯಾಣಿ ಅವರ ತಂದೆ ಪ್ರಿಯದರ್ಶನ್‌ಗೂ ಕನ್ನಡಕ್ಕೂ ಅವಿನಾಭಾವ ನಂಟಿದೆ. ಅದಕ್ಕೆ ಕಾರಣ; ಅವರ ನಿರ್ದೇಶನದ ಸಾಕಷ್ಟು ಸಿನಿಮಾಗಳು ಕನ್ನಡಕ್ಕೆ ರಿಮೇಕ್ ಆಗಿವೆ. ವಿಷ್ಣುವರ್ಧನ್ ನಟಿಸಿದ ರಾಯರು ಬಂದರು ಮಾವನ ಮನೆಗೆ, ಆಪ್ತಮಿತ್ರ, ಸಾಹುಕಾರ, ದೇವ್ರು, ನೀ ಟಾಟಾ ನಾ ಬಿರ್ಲಾ, ಕವಚ ಸೇರಿ ಹಲವು ಸಿನಿಮಾಗಳು ರಿಮೇಕ್ ಆಗಿವೆ.
ಸಂತೋಷ್ ಆನಂದ್ ರಾಮ್ ನಿರ್ದೇಶನದ ಹೊಸ ಸಿನಿಮಾದಲ್ಲಿ ಯುವ ರಾಜ್‌ಕುಮಾರ್ ನಟಿಸುವುದು ಅಧಿಕೃತವಾಗಿದೆ. ಇತ್ತೀಚೆಗಷ್ಟೇ ಕೆಲವೊಂದಿಷ್ಟು ಲುಕ್ ಬಿಡುಗಡೆ ಮಾಡುವ ಮೂಲಕ ಯುವನ ಹೊಸ ಅವತಾರವನ್ನು ಹೊರಗೆಡವಿದ್ದರು. ತೆರೆಮರೆಯಲ್ಲಿಯೇ ಕೆಲಸ ಆರಂಭಿಸಿರುವ ನಿರ್ದೇಶಕರು ಮತ್ತು ನಿರ್ಮಾಪಕರು ತಾರಾಗಣದ ಆಯ್ಕೆ ಮಾಡುವುದರಲ್ಲಿ ಬಿಜಿಯಾಗಿದ್ದಾರೆ. ಮೊದಲ ಸದ್ದಿನಲ್ಲಿ ನಾಯಕಿ ವಿಚಾರ ಮುನ್ನೆಲೆಗೆ ಬಂದಿದೆ.