ಕನ್ನಡ ಸುದ್ದಿ  /  Entertainment  /  Puneeth Rajkumar S Achievement Unveiled At The Mysore Dussehra Flower Show

Mysore dasara flower show: ಮೈಸೂರು ದಸರಾ ಫಲಪುಷ್ಪ ಪ್ರದರ್ಶನದಲ್ಲಿ ರಾರಾಜಿಸಲಿರುವ ಪ್ರೀತಿಯ 'ಅಪ್ಪು'

ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಪ್ರಯುಕ್ತ 2022-23ನೇ ಸಾಲಿನ ದಸರಾ ಫಲಪುಷ್ಪ ಪ್ರದರ್ಶನದಲ್ಲೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಾಧನೆ ಅನಾವರಣಗೊಳ್ಳಲಿದೆ.

ಮೈಸೂರಿನ ನಿಶಾದ್ ಭಾಗ್ ಕುಪ್ಪಣ್ಣ ಪಾರ್ಕ್
ಮೈಸೂರಿನ ನಿಶಾದ್ ಭಾಗ್ ಕುಪ್ಪಣ್ಣ ಪಾರ್ಕ್

ಬೆಂಗಳೂರು: 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಬೆಂಗಳೂರಿನ ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನದಲ್ಲಿ ಕರ್ನಾಟಕ ರತ್ನಗಳಾದ ಡಾ.ರಾಜ್ ಕುಮಾರ್ ಮತ್ತು ಡಾ.ಪುನೀತ್ ರಾಜ್ ಕುಮಾರ್ ಅವರ ಚಿತ್ರರಂಗದ ಸಾಧನೆಯನ್ನು ಬಿಂಬಿಸಲಾಗಿತ್ತು. ಇದನ್ನು ಲಕ್ಷಾಂತರ ಮಂದಿ ಕಣ್ತುಂಬಿಕೊಂಡಿದ್ದರಲ್ಲದೆ, ಭಾರಿ ಮೆಚ್ಚುಗೆಗೂ ಪಾತ್ರವಾಗಿತ್ತು. ಇದೀಗ ಇಂತಹದ್ದೇ ಮತ್ತೊಂದು ಫಲಪುಷ್ಪ ಪ್ರದರ್ಶನದಲ್ಲೂ ಪುನೀತ್ ರಾಜ್ ಕುಮಾರ್ ಅವರು ರಾರಾಜಿಸಲಿದ್ದಾರೆ.

ಸೆ.26 ರಿಂದ ಅ.5ರ ವರೆಗೆ ಮೈಸೂರು ದಸರಾ ಫಲಪುಷ್ಪ ಪ್ರದರ್ಶನ:

ಹೌದು, ಕರ್ನಾಟಕದ ಪವರ್ ಸ್ಟಾರ್, ಚಂದನವನದ ಪ್ರೀತಿಯ ಅಪ್ಪು ಅವರ ಸಾಧನೆ ಅನಾವರಣಕ್ಕೆ ವಿಶ್ವ ವಿಖ್ಯಾತ, ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗಿದೆ. ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಪ್ರಯುಕ್ತ 2022-23ನೇ ಸಾಲಿನ ದಸರಾ ಫಲಪುಷ್ಪ ಪ್ರದರ್ಶನವನ್ನು ನಿಶಾದ್ ಭಾಗ್ ಕುಪ್ಪಣ್ಣ ಪಾರ್ಕ್ ನಲ್ಲಿ ಸೆ.26 ರಿಂದ ಅ.5ರ ವರೆಗೆ ಆಯೋಜಿಸಲಾಗಿದೆ.

ಕುಪ್ಪಣ್ಣ ಪಾರ್ಕ್​ನಲ್ಲಿ ಇಂದು ನಡೆದ ಮಾಧ್ಯಮಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರ್ಣಿಮಾ ಬಿ.ಆರ್, 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಈ ಬಾರಿ ಅದ್ಧೂರಿಯಾಗಿ ರಾಷ್ಟ್ರಪತಿ ಭವನವನ್ನು ಕೆಂಪು, ಬಿಳಿ, ಗುಲಾಬಿ ಹಾಗೂ ಸೇವಂತಿಗೆ ಹೂವುಗಳಿಂದ ಸುಮಾರು 20 ಅಡಿ ಎತ್ತರದ ಗಾಜಿನ ಮನೆಯಲ್ಲಿ ನಿರ್ಮಿಸಲಾಗುವುದು ಎಂದು ಹೇಳಿದರು.

ಫಲಪುಷ್ಪ ಪ್ರದರ್ಶನದಲ್ಲಿ ಅಪ್ಪು ಸಾಧನೆ ಅನಾವರಣ:

ನಟ ಪುನೀತ್ ರಾಜ್ ಕುಮಾರ್ ಸ್ಮರಣಾರ್ಥವಾಗಿ ಈ ಬಾರಿ ಅಪ್ಪು ಅವರ ಸಾಧನೆಯ ವಿವರದೊಂದಿಗೆ ಪುತ್ಥಳಿಯನ್ನು ಸ್ಥಾಪಿಸಿ ಹೂವಿನೊಂದಿಗೆ ಅಲಂಕರಿಸಲಾಗುವುದು. ಮೈಸೂರು ರಾಜರು ತಮ್ಮ ಆಳ್ವಿಕೆಯ ಸಮಯದಲ್ಲಿ ಜನರು ವಿಶ್ರಾಂತಿ ಪಡೆಯಲು ತಂಡೀ ಸಡಕ್ ಅನ್ನು ನಿರ್ಮಿಸುತ್ತಿದ್ದರು. ಅದರ ಪ್ರತಿರೂಪವನ್ನು ಗಾಜಿನ ಮನೆಯ ಮುಂದೆ ನಿರ್ಮಿಸಲಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಮಾಹಿತಿ ನೀಡಿದ್ದಾರೆ.

7 ಅಡಿ ಜೇನುಹುಳು, 12 ಅಡಿ ಜಿರಾಫೆ ಹಾಗೂ ಮಕ್ಕಳಿಗೆ ಸಂಬಂಧಿಸಿದ ಹಲವು ಗೊಂಬೆಗಳನ್ನು ಹೂವಿನಿಂದ ಅಲಂಕರಿಸಲಾಗುತ್ತದೆ. 7 ಅಡಿ ದಪ್ಪ ಮೆಣಸಿನ ಕಾಯಿಯಿಂದ ಒಂದು ಮನೆಯನ್ನು ನಿರ್ಮಿಸಲಾಗುವುದು. ಇತರೆ ವೈವಿಧ್ಯಮಯದಿಂದ ಕೂಡಿದ ಕಾನ್ಸೆಪ್ಟ್​ಗಳನ್ನು ನಿರ್ಮಿಸಲಾಗುವುದು. ಡೈರಿ ಡೇ, ಉಲ್ಲಾಸ್ ಅಗರ್ ಬತ್ತೀಸ್, ಸುವರ್ಣ ಚಾನೆಲ್ ಪ್ರಾಯೋಜಕತ್ವ ವಹಿಸಿದ್ದು, ಸಂಜೆಯ ವೇಳೆ ಅನೇಕ ಮನರಂಜನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಇಲಾಖೆಯಿಂದ 50 ಸಾವಿರಕ್ಕೂ ಹೆಚ್ಚು ಹೂವಿನ ಗಿಡಗಳನ್ನು ಬೆಳೆಸಿದ್ದು, ಇಡೀ ಕುಪ್ಪಣ್ಣ ಪಾರ್ಕ್ ಅನ್ನು ಹೂವುಗಳಿಂದ ಅಲಂಕರಿಸಲಾಗುವುದು. ಅವುಗಳಲ್ಲಿ ಮುಖ್ಯವಾಗಿ ಮಾರಿಗೋಲ್ಡ್, ಫ್ರೆಂಚ್ ಮಾರಿಗೋಲ್ಡ್, ಜಿನಿಯಾ, ಡಾಲಿಯಾ ಸೇರಿದಂತೆ ಹಲವು ಪ್ರಭೇದದ ಹೂವಿನ ಗಿಡಗಳು, ಪುಣೆಯಿಂದ ವಿಶೇಷ ಅಲಂಕಾರಿಕ ಗಿಡಗಳನ್ನು ತರಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇಲಾಖೆಗೆ ಸಂಬಂಧಿಸಿದ ಮಳಿಗೆಗಳು, ಸಾವಯವ ಮಳಿಗೆಗಳು, ಕೃಷಿಗೆ ಸಂಬಂಧಿಸಿದ ಮಳಿಗೆಗಳು, ಐಐಹೆಚ್​ಆರ್, ಸಿಡಿಬಿ, ಎನ್ ಹೆಚ್ ಬಿ, ಸಿಎಫ್ ಟಿಆರ್ ಐ ಸಂಸ್ಥೆಗಳಿಗೆ ಪತ್ರ ಬರೆದಿದ್ದು, ರೈತರಿಗೆ ದೊರಕುವ ಸೌಲಭ್ಯಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದರು. ಇದೇ ಸಂದರ್ಭದಲ್ಲಿ ಭಿತ್ತಿ ಪತ್ರವನ್ನು ಬಿಡುಗಡೆಗೊಳಿಸಲಾಯಿತು. ದಸರಾ ಉಪಸಮಿತಿಯ ಫಲಪುಷ್ಪ ಪ್ರದರ್ಶನ ಸಮಿತಿಯ ಅಧ್ಯಕ್ಷ ಎಸ್.ಆರ್.ನಂಜಪ್ಪ ಸೇರಿದಂತೆ ಮತ್ತಿತರು ಮಾಧ್ಯಮಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಈ ಬಾರಿಯ ಮೈಸೂರು ದಸರಾವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಉದ್ಘಾಟನೆ ಮಾಡುತ್ತಿರುವ ವಿಶೇಷವಾಗಿದೆ.

ಹೆಚ್ಚಿನ ಸುದ್ದಿಗಳಿಗೆ ನಮ್ಮನ್ನು ಫೇಸ್‌ಬುಕ್‌ ಮತ್ತು ಟ್ವಿಟರ್‌ ನಲ್ಲಿ ಫಾಲೋಮಾಡಿ.

IPL_Entry_Point