ಕನಸಲ್ಲಿ ಬಂದು ಪ್ರಶ್ನೆ ಕೇಳಿದಳು; ಪತ್ನಿ ಸ್ಪಂದನಾ ಬಗ್ಗೆ ವಿಜಯ್ ರಾಘವೇಂದ್ರ ಹೇಳಿದ ಮಾತಿದು
ನಟ ವಿಜಯ್ ರಾಘವೇಂದ್ರ ನಟನೆಯ ಕದ್ದ ಚಿತ್ರ ಸಿನಿಮಾ ಬಿಡುಗಡೆಯ ಸನಿಹದಲ್ಲಿದೆ. ಆ ಸಿನಿಮಾದ ಪ್ರಚಾರ ಕಣಕ್ಕಿಳಿದಿರುವ ವಿಜಯ್, ಸಿನಿಮಾ ಕುರಿತು ಸಂದರ್ಶನಗಳನ್ನು ನೀಡುತ್ತಿದ್ದಾರೆ. ಈ ವೇಳೆ ಪತ್ನಿ ಸ್ಪಂದನಾ ಬಗ್ಗೆ ಮತ್ತೆ ಮತ್ತೆ ನೆನಪು ಮಾಡಿಕೊಂಡಿದ್ದಾರೆ.
Vijay Raghavendra: ನಟ ವಿಜಯ್ ರಾಘವೇಂದ್ರ ಪತ್ನಿಯ ನೆನಪಿನಲ್ಲಿದ್ದಾರೆ. ಸಿನಿಮಾ ಕಾರ್ಯಕ್ರಮಗಳಲ್ಲೂ, ರಿಯಾಲಿಟಿ ಶೋಗಳಲ್ಲಿಯೂ ಭಾಗವಹಿಸಿ, ನೋವಿನಲ್ಲಿಯೇ ಸಿನಿಮಾ ನಿರ್ಮಾಪಕರ ಜತೆ ನಿಂತಿದ್ದಾರೆ. ಇನ್ನೇನು ವಿಜಯ್ ರಾಘವೇಂದ್ರ ನಾಯಕನಾಗಿ ನಟಿಸಿರುವ ಕದ್ದ ಚಿತ್ರ ಶೀರ್ಷಿಕೆ ಸಿನಿಮಾ ಬಿಡುಗಡೆ ಆಗಲಿದೆ. ಆ ಸಿನಿಮಾ ಪ್ರಚಾರದಲ್ಲಿ ವಿಜಯ್ ಭಾಗವಹಿಸಿದ್ದಾರೆ. ಸಂದರ್ಶನಗಳನ್ನು ನೀಡುತ್ತಿದ್ದಾರೆ. ಆ ಸಂದರ್ಶನಗಳಲ್ಲಿ ಮಡದಿ ಬಗ್ಗೆಯೇ ನೆನಪು ಮಾಡಿಕೊಳ್ಳುತ್ತಿದ್ದಾರೆ.
ಹೃದಯಾಘಾತದಿಂದ ಅಕಾಲಿಕ ನಿಧನರಾದ ಸ್ಪಂದನಾ, ಇಲ್ಲವಾಗಿ ಇನ್ನೇನು ತಿಂಗಳು ಸಮಿಸುತ್ತ ಬಂತು. ಆದರೆ, ಅವರ ಸಾವು ಮಾತ್ರ ದೊಡ್ಡ ನೋವನ್ನೇ ಕೊಟದ್ಟು ಹೋಗಿದೆ. ಎರಡೂ ಕುಟುಂಬಗಳಲ್ಲಿ ಮಾಸದ ನೋವಾಗಿ ಮಾರ್ಪಟ್ಟಿದೆ. ಸೋಷಿಯಲ್ ಮೀಡಿಯಾದಲ್ಲಿ ಪತ್ನಿಯ ಉತ್ತರ ಕ್ರಿಯೆ ಮುಗಿದ ಬಳಿಕ ಮತ್ತು ವಿವಾಹ ವಾರ್ಷಿಕೋತ್ಸವಕ್ಕೂ ವಿಶೇಷ ಸಾಲುಗಳನ್ನು ಹಂಚಿಕೊಂಡಿದ್ದರು. ಸ್ಯಾಂಡಲ್‌ವುಡ್ ಸಿನಿಮಾ ಮಂದಿ ಸೇರಿ ನೆಟ್ಟಿಗರು ವಿಜಯ್ ಅವರನ್ನು ಸಂಭಾಳಿಸಿದ್ದರು. ಈಗಲೂ ಆ ಕೆಲಸ ಮುಂದುವರಿದಿದೆ.
ಶೌರ್ಯನ ಹೋಮ್‌ವರ್ಕ್ ಬಗ್ಗೆ ಕೇಳಿದಳು..
ಇದೀಗ ಪತ್ನಿಯು ಕನಸಿನಲ್ಲಿ ಬಂದ ಬಗ್ಗೆ ವಿಜಯ್ ರಾಘವೇಂದ್ರ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. "ಅದು ಹೇಳಿಕೊಳ್ಳದೇ ಇರುವ ಕನಸಲ್ಲ. ಬೆಳಗಿನ ಜಾವ ಬಂದ ಕನಸು. ಶೌರ್ಯ ಹೋಮ್‌ವರ್ಕ್ ಮಾಡದೇ ಇದ್ದರೆ, ಅವಳದೇ ಆದ ಟೋನ್‌ನಲ್ಲಿ ಕೇಳುತ್ತಿದ್ದಳು. ಶೌರ್ಯನಿಗೆ ಇವತ್ತು ಹೋಮ್‌ವರ್ಕ್ ಇದೆಯಾ ಎಂದಿದ್ದಾಳೆ. ನಾನದಕ್ಕೆ ಇದೆಯೋ ಇಲ್ಲವೋ ಗೊಂದಲದಲ್ಲಿ, ಇದೇ ಅಂದ್ರೆ ಶೌರ್ಯ ಬೈಸಿಕೊಳ್ಳುತ್ತಾನೆ. ಇಲ್ಲ ಅಂದ್ರೆ ನಾನು ಬೈಸಿಕೊಳ್ಳುತ್ತೇನೆ. ಆ ಮೇಲೆ ಎದ್ದು ಮಗ ಏನಾದ್ರೂ ಹೋಮ್‌ವರ್ಕ್ ಇದೆಯೆನೋ ನಿಂದು ಎಂದೆ. ಅದಕ್ಕವನು ಇಲ್ಲ ಡ್ಯಾಡಿ ಅಂದ" ಹೀಗೆ ಹೇಳಿಕೊಂಡಿದ್ದಾರೆ ವಿಜಯ್.
"ಬೆಳಗ್ಗೆಯಿಂದ ಹಿಡಿದು ರಾತ್ರಿವರೆಗೂ ನನ್ನನ್ನು ಆವರಿಸಿಕೊಂಡಿದ್ದಳು. ನಾನು ಈ ಸಾವಿಗೆ ಯಾರನ್ನೂ ದೂಷಣೆ ಮಾಡಲಿ. ದೇವರನ್ನು ದೂಷಣೆ ಮಾಡಲು ಆಗದು. ಆದರೆ, ಅದೇ ದೇವರ ಬಳಿ, ಈ ನೋವನ್ನು ತಡೆದುಕೊಳ್ಳುವ ಶಕ್ತಿ ನೀಡು ಎಂದು ಕೇಳಬಹುದು. ಹಿಂದೆ ಮುಂದೆ ಹೆಜ್ಜೆ ಇಡುವಾಗ, ಸರಿಯಾಗಿ ಹೆಜ್ಜೆ ಇಡಬೇಕು. ಸರಿ ಮಾಡಿದ್ರೆ, ಸರಿ, ತಪ್ಪು ಮಾಡಿದ್ರೆ ತಪ್ಪು. ಏನೇ ಹೇಳುವುದಿದ್ದರೆ ಕಡ್ಡಿ ಮುರಿದಂತೆ ಹೇಳುತ್ತಿದ್ದಳು. ಹಾಗಾಗಿಯೇ ಆಕೆ ನನ್ನ ಬೆಸ್ಟ್ ಕ್ರಿಟಿಕ್" ಎಂದು ಪತ್ನಿಯನ್ನು ನೆನಪು ಮಾಡಿಕೊಂಡಿದ್ದಾರೆ ವಿಜಯ್.