Pavitra Lokesh: ವಿವಾದಗಳ ನಡುವೆಯೇ CET ಪರೀಕ್ಷೆ ಪಾಸ್ ಆದ ಪವಿತ್ರಾ ಲೋಕೇಶ್; ಬೆಳಗಾವಿಯಲ್ಲಿ ಪಿಎಚ್‌ಡಿ ಸಂಶೋಧನೆ
ಬಹುಭಾಷಾ ನಟಿ ಪವಿತ್ರಾ ಲೋಕೇಶ್ ಸಿನಿಮಾ ನಟನೆಯ ಜತೆಗೆ ಶೈಕ್ಷಣಿಕ ವಿಚಾರದಲ್ಲಿಯೂ ಮುಂದಿದ್ದಾರೆ. ಪಿಎಚ್‌ಡಿ ಪದವಿ ಪಡೆಯುವುದಕ್ಕೆ ತಯಾರಿ ನಡೆಸಿದ್ದಾರೆ. ಇತ್ತೀಚೆಗೆ ಅದರ ಪ್ರವೇಶ ಪರೀಕ್ಷೆಯನ್ನೂ ಬರೆದಿದ್ದು, ಇದೀಗ ಆ ಪರೀಕ್ಷೆಯಲ್ಲಿ ಪವಿತ್ರಾ ಲೋಕೇಶ್ ತೇರ್ಗಡೆಯಾಗಿದ್ದಾರೆ.
Pavitra Lokesh: ಬಹುಭಾಷಾ ನಟಿ ಪವಿತ್ರಾ ಲೋಕೇಶ್ ಇತ್ತೀಚಿನ ಕೆಲ ದಿನಗಳಿಂದ ಸದಾ ಸುದ್ದಿಯಲ್ಲಿದ್ದಾರೆ. ಆ ಪೈಕಿ ಹೆಚ್ಚು ಸುದ್ದಿಯಾಗಿದ್ದು ತೆಲುಗು ನಟ ನರೇಶ್ ಜತೆ ಕಾಣಿಸಿಕೊಂಡಿದ್ದರಿಂದ. ಎಲ್ಲೆಂದರಲ್ಲಿ ಕಾಣಿಸಿಕೊಂಡು, ಒಟ್ಟಿಗೆ ಸಿನಿಮಾ ಮಾಡಿ, ತಮ್ಮ ನಿಜ ಜೀವನವನ್ನೇ ತೆರೆಮೇಲೆ ತಂದು ಸಾಕಷ್ಟು ಗುಲ್ಲೆಬ್ಬಿಸಿದ್ದರು. ಇದೀಗ ಇದೆಲ್ಲದ ನಡುವೆಯೇ ಸಿನಿಮಾ ಆಚೆಗಿನ ತಮ್ಮಿಷ್ಟದ ಕೆಲಸವೊಂದಕ್ಕೂ ಕೈ ಹಾಕಿ ಆರಂಭಿಕ ಯಶಸ್ಸು ಪಡೆದುಕೊಂಡಿದ್ದಾರೆ.
ನಟಿಯಾಗಿ ಗುರುತಿಸಿಕೊಂಡಿರುವ ಪವಿತ್ರಾ ಲೋಕೇಶ್ ಶೈಕ್ಷಣಿಕವಾಗಿಯೂ ತುಂಬ ಸ್ಟ್ರಾಂಗ್. ಆ ಕಾರಣಕ್ಕೆ ಪಿಎಚ್‌ಡಿ ಪದವಿ ಪಡೆಯುವುದಕ್ಕೆ ಸಕಲ ತಯಾರಿಯನ್ನೂ ನಡೆಸಿದ್ದರು. ಅದರಂತೆ ಇದೀಗ ಪಿಎಚ್‌ಡಿ ಪದವಿಗಾಗಿ ನಡೆಸುವ ಆರಂಭಿಕ ಪ್ರವೇಶ ಪರೀಕ್ಷೆಯಲ್ಲಿ ಪವಿತ್ರಾ ತೇರ್ಗಡೆಯಾಗಿದ್ದಾರೆ. ಈ ಮೂಲಕ ಮುಂದಿನ ಹಲವು ವರ್ಷ ವಿಷಯವೊಂದರ ಮೇಲೆ ಅಧ್ಯಯನ ನಡೆಸಲಿದ್ದಾರೆ.
ಹಂಪಿ ಕನ್ನಡ ವಿಶ್ವವಿದ್ಯಾಲಯ ಪಿಎಚ್‌ಡಿಗಾಗಿ ಪ್ರವೇಶ ಪರೀಕ್ಷೆ ಬರೆದವರ ಫಲಿತಾಂಶವನ್ನು ಪ್ರಕಟಿಸಿದೆ. ಒಟ್ಟು 980ಕ್ಕೂ ಅಧಿಕ ಮಂದಿ ಈ ಸಲ ಪಿಎಚ್‌ಡಿ ಸಾಮಾನ್ಯ ಪ್ರವೇಶ ಪರೀಕ್ಷೆ ಬರೆದಿದ್ದರು. ಆ ಪೈಕಿ 259 ಮಂದಿ ಉತ್ತೀರ್ಣರಾಗಿದ್ದಾರೆ ಎಂದು ವಿವಿ ಕುಲಸಚಿವ ಡಾ. ಸುಬ್ಬಣ್ಣ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಇದೇ ವರ್ಷದ ಮೇ 30ರಂದು ಪಿಎಚ್‌ಡಿ ಪ್ರವೇಶ ಪರೀಕ್ಷೆ ನಡೆದಿತ್ತು. ಆ ಪೈಕಿ ಪರೀಕ್ಷೆಗೆ ಹಾಜರಾಗಿದ್ದ ಪವಿತ್ರಾ ಲೋಕೇಶ್, ಭಾಷಾ ನಿಕಾಯದ ಅಡಿಯಲ್ಲಿ ಬೆಳಗಾವಿ ವಿಸ್ತರಣಾ ಕೇಂದ್ರದಲ್ಲಿ ಸಂಶೋಧನಾ ಕೈಗೊಳ್ಳಲು ಪರೀಕ್ಷೆಗೆ ಹಾಜರಾಗಿದ್ದರು. ಅದರಂತೆ ಇದೀಗ ಆ ಸಿಯಟಿ ಪರೀಕ್ಷೆಯಲ್ಲಿ ಪವಿತ್ರಾ ಲೋಕೇಶ್ ತೇರ್ಗಡೆಹೊಂದಿದ್ದಾರೆ.
ಮನರಂಜನೆ ಕುರಿತ ಮತ್ತಷ್ಟು ಸುದ್ದಿಗಳಿಗಾಗಿ ಕ್ಲಿಕ್ ಮಾಡಿ