Olle Huduga Pratham: ಸಂತೋಷ್ ರಾವ್‌ಗೆ ಆಗಿರೋ ಅನ್ಯಾಯಕ್ಕೆ ಬೇಸರವಾಗ್ತಿದೆ, ಮುಂದಿನ 2 ಕಾರ್ಯಕ್ರಮಗಳ ದುಡ್ಡು ಅವರಿಗೆ ಕೊಡ್ತೀನಿ; ಪ್ರಥಮ್
ಸಿನಿಮಾ ಮಾಡಿ ಸಾಲದಲ್ಲಿರೋದ್ರಿಂದ ಸದ್ಯಕ್ಕೆ ದುಡ್ಡಿಲ್ಲ. ಮುಂದೆ ನಾನು ಅಟೆಂಡ್ ಮಾಡುವ ಯಾವುದೇ 2 ಕಾರ್ಯಕ್ರಮಗಳ ದುಡ್ಡನ್ನು ಸಂತೋಷ್ ರಾವ್ ಕುಟುಂಬಕ್ಕೆ ಕೊಡಬೇಕೆಂದಿದ್ದೇನೆ ಎಂದು ಪ್ರಥಮ್ ಹೇಳಿದ್ದಾರೆ.
ಒಳ್ಳೆ ಹುಡುಗ ಪ್ರಥಮ್, ನೇರ ವ್ಯಕ್ತಿ. ತನಗೆ ಅನ್ನಿಸಿದ್ದನ್ನು ಯಾವ ಅಳುಕು ಇಲ್ಲದೆ ನೇರವಾಗಿ ಹೇಳಿಬಿಡುತ್ತಾರೆ. ಇದೀಗ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಥಮ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಸೌಜನ್ಯ ಸಾವಿಗೆ ಹಾಗೂ ಸಂತೋಷ್ ರಾವ್‌ಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ಕೊಡಿಸುವಂತೆ ಸಂಬಂಧಪಟ್ಟವರಿಗೆ ಮನವಿ ಮಾಡಿದ್ದಾರೆ.
11 ವರ್ಷಗಳಾದರೂ ಅಪರಾಧಿಗಳ ಅರೆಸ್ಟ್ ಆಗಿಲ್ಲ
11 ವರ್ಷಗಳಾದರೂ ಸೌಜನ್ಯ ಕೊಲೆ ಮಾಡಿದ ಅಪರಾಧಿಗಳು ಇನ್ನೂ ಪತ್ತೆಯಾಗಿಲ್ಲ. ಪ್ರಕರಣ ನಡೆದಾಗ ಅರೆಸ್ಟ್ ಆಗಿದ್ದ ಸಂತೋಷ್ ರಾವ್, ದೋಷಮುಕ್ತ ಎಂದು ಇತ್ತೀಚೆಗೆ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿತ್ತು. ಇದರ ಬೆನ್ನಲ್ಲೇ ಮತ್ತೆ ಸೌಜನ್ಯ ಪ್ರಕರಣ ಮುನ್ನೆಲೆಗೆ ಬಂದಿದೆ. ಇತ್ತೀಚೆಗಷ್ಟೇ ದುನಿಯಾ ವಿಜಯ್ ಈ ಕೇಸ್ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡು ಬೇಸರ ವ್ಯಕ್ತಪಡಿಸಿದ್ದರು. ಆ ಹೆಣ್ಣು ಮಗುವಿನ ಪೋಷಕರಿಗೆ ನ್ಯಾಯ ದೊರೆಯುವವರೆಗೂ ಧರ್ಮಸ್ಥಳಕ್ಕೆ ಹೋಗದಿರಲು ನಿರ್ಧರಿಸಿರುವುವಾಗಿ ಹೇಳಿಕೊಂಡಿದ್ದರು. ವಿಜಯ್ ಪೋಸ್ಟ್‌ಗೆ ಪರ ವಿರೋಧ ಚರ್ಚೆ ಎದುರಾಗಿತ್ತು. ಚೇತನ್ ಅಹಿಂಸಾ ಕೂಡಾ ಧರ್ಮಸ್ಥಳದಲ್ಲಿ ಧರ್ಮಶಕ್ತಿಗಳು ಏನು ಮಾಡುತ್ತಿವೆ ಎಂದು ಪ್ರಶ್ನಿಸಿದ್ದರು. ಇದೀಗ ಪ್ರಥಮ್ ಸರದಿ.
ಆಗಿದ್ದ ಪೊಲೀಸಪ್ಪನ ಜಾಡಿಸಬೇಕು ಎಂದ ಪ್ರಥಮ್
''ಸೌಜನ್ಯ ಕುಟುಂಬದ ಬಗ್ಗೆ ನೋವಿದೆ. ಮಧ್ಯರಾತ್ರಿಯಾದ್ರೂ ನಿದ್ರೆ ಬರ್ತಿಲ್ಲ, ತನಿಖೆಯಿಂದ ಪ್ರಯೋಜನವಿಲ್ಲ, 2012ರಲ್ಲಿ ರೇಪ್ ಆದಾಗ ಇದ್ದ ಪೊಲೀಸನ ಜಾಡಿಸಿದರೆ ಮಾತ್ರ ಸತ್ಯ ತಿಳಿಯುತ್ತದೆ. ನನ್ನ ಬೇಸರ ಸಂತೋಷ್ ರಾವ್‌ಗೆ ಅನ್ಯಾಯವಾಗಿರೋ ಬಗ್ಗೆ, ನನಗಿರೋ ಕಾಂಟಾಕ್ಟ್‌ನಲ್ಲಿ ವಿಚಾರಿಸಿದೆ. ಸಂತೋಷ್ ರಾವ್‌ಗೆ ಆಗಿರುವ ಅನ್ಯಾಯದ ಬಗ್ಗೆ ತೀವ್ರ ದುಃಖವಾಗುತ್ತಿದೆ, ಮಧ್ಯರಾತ್ರಿ ಒಂದೂವರೆಗೆ ಈ ಟ್ವೀಟ್ ಮಾಡುವಾಗ ನಿಜಕ್ಕೂ ನೋವಾಯ್ತು, ಸಿನಿಮಾ ಮಾಡಿ ಸಾಲದಲ್ಲಿರೋದ್ರಿಂದ ಸದ್ಯಕ್ಕೆ ದುಡ್ಡಿಲ್ಲ. ಮುಂದೆ ನಾನು ಅಟೆಂಡ್ ಮಾಡುವ ಯಾವುದೇ 2 ಕಾರ್ಯಕ್ರಮಗಳ ದುಡ್ಡನ್ನ ಸಂತೋಷ್ ರಾವ್ ಕುಟುಂಬಕ್ಕೆ ಕೊಡಬೇಕೆಂದಿದ್ದೇನೆ.''
ಸಂತೋಷ್ ರಾವ್‌ಗೆ ದುಡ್ಡು ಕೊಡ್ತೀನಿ
''ಸೌಜನ್ಯಗೆ ನ್ಯಾಯ ಸಿಗಬೇಕಾದ್ರೆ ಆಗಿನ ಇನ್ವೆಷ್ಟಿಗೇಷನ್ ಆಫೀಸರ್‌ನ ಮೊದಲು ವಿಚಾರಣೆಗೆ ಒಳಪಡಿಸಿ. ಸಂತೋಷ್‌ಗೆ ಆಗಿರೋ ಅನ್ಯಾಯಕ್ಕೆ ಸರ್ಕಾರ ಕೂಡಲೇ 50 ಲಕ್ಷ ಪರಿಹಾರ ಕೊಡಬೇಕು. ಸಿನಿಮಾದ ಸಾಲವೇ ಜಾಸ್ತಿ ಇದೆ, ನನ್ನ ಹರ್ತಿರ ದುಡ್ಡಿಲ್ಲ. ನಾನಂತೂ ಬದುಕಿರುವವರೆಗೂ ಈಶ್ವರನ ಪೂಜೆ ಮಾಡೋದನ್ನ ನಿಲ್ಲಿಸೋದಿಲ್ಲ, ಧರ್ಮಸ್ಥಳಕ್ಕೆ ಹೋಗ್ತೀನಿ. ಮಂಜುನಾಥನಲ್ಲಿ ಎಲ್ಲವನ್ನೂ ತೊರೆದು ಶರಣಾಗ್ತೀನಿ'' ಎಂದು ಪ್ರಥಮ್ ಪೋಸ್ಟ್ ಹಂಚಿಕೊಂಡಿದ್ದಾರೆ.