Kannada News  /  Entertainment  /  Sandalwood News Antha Movie Re Release On May 26th With New Technology On Occasion Of Rebel Star Ambareesh Birthday Rsm
ಮೇ 26ಕ್ಕೆ ಅಂತ ಸಿನಿಮಾ ರೀ ರಿಲೀಸ್
ಮೇ 26ಕ್ಕೆ ಅಂತ ಸಿನಿಮಾ ರೀ ರಿಲೀಸ್

Antha Movie: ರೆಬೆಲ್‌ ಸ್ಟಾರ್‌ ಅಂಬರೀಶ್‌ ಬರ್ತ್‌ಡೇ ಸ್ಪೆಷಲ್‌; ಹೊಸ ತಂತ್ರಜ್ಞಾನದೊಂದಿಗೆ ಮತ್ತೆ ರಿಲೀಸ್ ಆಗಲಿದೆ‌ 'ಅಂತ' ಸಿನಿಮಾ

23 May 2023, 17:20 ISTRakshitha Sowmya
23 May 2023, 17:20 IST

ಮೇ 29 ಅಂಬರೀಶ್ 71ನೇ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಮೇ 26 ರಂದು 'ಅಂತ' ಚಿತ್ರವನ್ನು 70 ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಜಯಣ್ಣ ಫಿಲ್ಮ್ಸ್‌ ಬ್ಯಾನರ್‌ ವತಿಯಿಂದ ಬಿಡುಗಡೆ ಮಾಡಲಾಗುತ್ತಿದೆ.

ಮೇ 29 ರೆಬೆಲ್‌ ಸ್ಟಾರ್ ಅಂಬರೀಶ್ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಅವರು ಅಭಿನಯಿಸಿದ್ದ ಸೂಪರ್ ಹಿಟ್ ಸಿನಿಮಾ 'ಅಂತ' ಸಿನಿಮಾ ಮರು ಬಿಡುಗಡೆ ಆಗುತ್ತಿದೆ. ಮೇ 26ರಂದು ಅಂತ ರೀ ರಿಲೀಸ್‌ಗೆ ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು ನಿರ್ಧರಿಸಿದ್ದಾರೆ. 40 ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ಈ ಚಿತ್ರ ಈಗ ನೂತನ ತಂತ್ರಜ್ಞಾನದೊಂದಿಗೆ ರೀ ರಿಲೀಸ್‌ ಆಗ್ತಿದೆ.

1981ರಲ್ಲಿ 'ಅಂತ' ಸಿನಿಮಾ ತೆರೆ ಕಂಡಿತ್ತು. ಸಿನಿಮಾ ರೀ ರಿಲೀಸ್‌ ವಿಚಾರವಾಗಿ ಇತ್ತೀಚೆಗೆ ಸುದ್ದಿಗೋಷ್ಠಿ ಏರ್ಪಡಿಸಿದ್ದ ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು, ಈ ಚಿತ್ರದ ಬಗ್ಗೆ ಮಾತನಾಡಿದರು. ''ಮೊದಲು ಈ ಚಿತ್ರವನ್ನು ಬೇರೆಯವರು ನಿರ್ದೇಶಿಸಬೇಕಿತ್ತು. ಆದರೆ ಪತ್ರಕರ್ತ ಎಂ.ಬಿ. ಸಿಂಗ್ ಅವರ ಮೂಲಕ ಕಥೆ ನನಗೆ ದೊರಕಿತು. ಪರಿಮಳ ಆರ್ಟ್ಸ್ ಬ್ಯಾನರ್‌ ಮೂಲಕ ಮಾರುತಿ, ವೇಣು ಹಾಗೂ ಕೆ.ಸಿ.ಎನ್ ಚಂದ್ರಶೇಖರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಅಂಬರೀಶ್, ಈ ಚಿತ್ರದಲ್ಲಿ ಹೀರೋ ಎಂದು ಫೈನಲ್‌ ಆಯ್ತು. ನಾಯಕಿ ಆಗಿ ಲಕ್ಷ್ಮಿ, ವಜ್ರಮುನಿ, ಸುಂದರಕೃಷ್ಣ ಅರಸ್, ಮುಸುರಿ ಕೃಷ್ಣಮೂರ್ತಿ, ಪ್ರಭಾಕರ್ ಮುಂತಾದವರು ಇದರಲ್ಲಿ ನಟಿಸಿದ್ದಾರೆ.''

ಮೈಸೂರಿನಲ್ಲಿ ನಡೆದಿತ್ತು ಬಹುತೇಕ ಚಿತ್ರೀಕರಣ

''ಇಡೀ ಸಿನಿಮಾ ಚಿತ್ರೀಕರಣ ಮೈಸೂರಿನಲ್ಲೇ ನಡೆದಿದೆ. ಚಿತ್ರಕ್ಕಾಗಿ ಹದಿನೆಂಟು ಅದ್ದೂರಿ ಸೆಟ್ ಹಾಕಲಾಗಿತ್ತು. ಅಂತ ಸಿನಿಮಾ ನಿರೀಕ್ಷೆಗೂ ಮೀರಿದ ಯಶಸ್ಸು ಗಳಿಸಿತ್ತು. ನನಗೆ ತಿಳಿದಿರುವ ಪ್ರಕಾರ ಈ ಚಿತ್ರದ ಸ್ಪೂರ್ತಿಯಿಂದ ಸಾವಿರಾರು ಚಿತ್ರಗಳು ಬಂದಿದೆ. 'ಅಂತ' ಆಗಲೇ ಪ್ಯಾನ್ ಇಂಡಿಯಾ ಸಿನಿಮಾ ಆಗಿತ್ತು. ಬೇರೆ ಬೇರೆ ಭಾಷೆಯಲ್ಲಿ ತುಂಬಾ ಬೇಡಿಕೆಯಿತ್ತು. ನನ್ನ ಪ್ರಕಾರ ಚಿತ್ರದ ನಿಜವಾದ ಹೀರೋ ಕಥೆ. ಯಾವುದೇ ಸಿನಿಮಾದಲ್ಲಾದರೂ ಕಥೆ ಚೆನ್ನಾಗಿದೆ ಎಂದರೆ ಯಶಸ್ಸು ಖಂಡಿತ. ಇಂತಹ ಅದ್ಭುತ ಕಥೆ ಇರುವ 'ಅಂತ' ಸಿನಿಮಾ ಇದೇ ಮೇ 26 ಮರು ಬಿಡುಗಡೆಯಾಗುತ್ತಿದೆ. ಸಿನಿಪ್ರಿಯರು ಹೊಸ ಬದಲಾವಣೆಗಳೊಂದಿಗೆ ಬಿಡುಗಡೆ ಆಗುತ್ತಿರುವ ಈ ಸಿನಿಮಾ ನೋಡಿ'' ಎಂದು ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಹೇಳಿದರು.

70ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರೀ ರಿಲೀಸ್‌

ನಿರ್ಮಾಪಕ ವೇಣು ಮಾತನಾಡಿ, ''ಮೇ 29 ಅಂಬರೀಶ್ 71ನೇ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಮೇ 26 ರಂದು 'ಅಂತ' ಚಿತ್ರವನ್ನು 70 ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಮರು ಬಿಡುಗಡೆ ಮಾಡುತ್ತಿದ್ದೇವೆ. ಜಯಣ್ಣ ಫಿಲ್ಮ್ಸ್‌ ಬ್ಯಾನರ್‌ ವತಿಯಿಂದ ಸಿನಿಮಾ ಬಿಡುಗಡೆ ಆಗುತ್ತಿದೆ. ಚಿತ್ರವನ್ನು 35 ಎಂಎಂ ನಿಂದ 70 ಎಂಎಂ ಮಾಡಲಾಗಿದೆ. ಸೌಂಡ್, ಕಲರಿಂಗ್ ಎಲ್ಲವನ್ನೂ ಈಗಿನ ರೀತಿಗೆ ಬದಲಿಸಲಾಗಿದೆ ಎಂದು ಮಾಹಿತಿ ನೀಡಿದರು.

ಹುಟ್ಟುಹಬ್ಬ ಅಥವಾ ಇನ್ನಿತರ ವಿಶೇಷ ಸಂದರ್ಭಗಳಲ್ಲಿ ಹಿರಿಯ ನಟರ ಸಿನಿಮಾಗಳು ಈ ರೀತಿ ರೀ ರಿಲೀಸ್‌ ಆಗುವುದು ಸಾಮಾನ್ಯ. ಇದೀಗ ಅಂಬರೀಶ್‌ ಬರ್ತ್‌ಡೇಗಾಗಿ 'ಅಂತ' ಸಿನಿಮಾ ಮರು ಬಿಡುಗಡೆ ಆಗುತ್ತಿರುವುದು ಸಿನಿಪ್ರಿಯರಿಗೆ ಖುಷಿ ನೀಡಿದೆ. ಹೊಸ ಟೆಕ್ನಾಲಜಿಯಲ್ಲಿ ಬರುತ್ತಿರುವ ಸಿನಿಮಾ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.