Hagga Teaser: ಹಾರರ್ ಥ್ರಿಲ್ಲರ್ ಹಗ್ಗ ಸಿನಿಮಾದಲ್ಲಿ ಸೂಪರ್‌ಹೀರೋ ಆದ ನಟಿ ಅನು ಪ್ರಭಾಕರ್!
ಹಾರರ್ ಥ್ರಿಲ್ಲರ್ ಶೈಲಿಯಲ್ಲಿ ಮೂಡಿಬಂದಿರುವ ಹಗ್ಗ ಚಿತ್ರದ ಟೀಸರ್ ಬಿಡುಗಡೆ ಆಗಿದೆ. ನೋಡುಗರ ಎದೆ ಝಲ್ ಎನಿಸುವಂತೆ ಕಥೆ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಅವಿನಾಶ್. ನಟಿ ಅನು ಪ್ರಭಾಕರ್ ಅವರಿಗಿಲ್ಲಿ ವಿಶೇಷ ಪಾತ್ರವೇ ಸಿಕ್ಕಿದೆ.
Hagga Teaser: ಅನು ಪ್ರಭಾಕರ್, ಹರ್ಷಿಕಾ ಪೂಣಚ್ಛ, ವೇಣು ಪ್ರಮುಖ ಪಾತ್ರದಲ್ಲಿ ನಟಿಸಿರುವ ಹಗ್ಗ ಚಿತ್ರದ ಟೀಸರ್ ಬಿಡುಗಡೆ ಸಮಾರಂಭ ಇತ್ತೀಚಿಗೆ ನೆರವೇರಿತು. ಖ್ಯಾತ ನಿರ್ದೇಶಕ ಆರ್ ಚಂದ್ರು ಟೀಸರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ನಿರ್ಮಾಪಕರಾದ ಕೆ.ಮಂಜು, ದಯಾಳ್ ಅವರು ಸೇರಿದಂತೆ ಅನೇಕ ಗಣ್ಯರು "ಹಗ್ಗ" ಚಿತ್ರದ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಅಂದಹಾಗೆ ವಸಂತ ಸಿನಿ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ರಾಜ್ ಭಾರದ್ವಾಜ್ ನಿರ್ಮಿಸಿರುವ ಈ ಸಿನಿಮಾವನ್ನು ಅವಿನಾಶ್ ಎನ್ ನಿರ್ದೇಶನ ಮಾಡಿದ್ದಾರೆ.
ಟೀಸರ್ ಬಿಡುಗಡೆ ನಂತರ ಮಾತನಾಡಿದ ನಿರ್ದೇಶಕ ಅವಿನಾಶ್, ನಾನು ಮೂಲತಃ ಮೆಕಾನಿಕಲ್ ಎಂಜಿನಿಯರ್. ಸಿನಿಮಾ ನಿರ್ದೇಶನ ನನ್ನ ಕನಸು. ಆ ಕನಸು ಹಗ್ಗ ಚಿತ್ರದ ಮೂಲಕ ಈಡೇರಿದೆ. ಈ ಚಿತ್ರದಲ್ಲಿ ಅನು ಪ್ರಭಾಕರ್, ವೇಣು, ಹರ್ಷಿಕಾ ಪೂಣಚ್ಛ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಆದರೆ ಹಗ್ಗವೇ ನಮ್ಮ ಚಿತ್ರದ ನಾಯಕ. ಹಾರರ್ ಜಾನರ್‌ನ ಚಿತ್ರವಾದರೂ, ಚಿತ್ರದಲ್ಲಿ ಒಂದು ಪ್ರಮುಖ ಸಂದೇಶ ಸಹ ಇದೆ ಎಂದರು.
ಚಿತ್ರಕ್ಕೆ ನಾನೇ ಕಥೆ ಬರೆದು ನಿರ್ಮಾಣ ಮಾಡಿದ್ದೇನೆ. ಅವಿನಾಶ್ ನಿರ್ದೇಶನ ಮಾಡಿದ್ದಾರೆ. ಟೀಸರ್ ಬಿಡುಗಡೆ ಬಂದಿರುವ ಎಲ್ಲಾ ಗಣ್ಯರಿಗು ಧನ್ಯವಾದ. ಈಗಾಗಲೇ ಮೋಷನ್ ಪೋಸ್ಟರ್ ಮೂಲಕ ಹಗ್ಗ ಜನರ ಮನಸ್ಸಿಗೆ ಹತ್ತಿರವಾಗಿದೆ. ಈಗ ಟೀಸರ್ ಬಿಡುಗಡೆಯಾಗಿದೆ. ಆಗಸ್ಟ್ ನಲ್ಲಿ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ನಿರ್ಮಾಪಕ ರಾಜ್ ಭಾರದ್ವಾಜ್ ತಿಳಿಸಿದರು.
ಸೂಪರ್ ಹೀರೋ ಆದ ಅನುಪ್ರಭಾಕರ್
ಅವಿನಾಶ್ ಅವರು ಚಿತ್ರದ ಕುರಿತು ಹೇಳಿದಾಗ ನನ್ನ ಪಾತ್ರ ಬಹಳ ಇಷ್ಟವಾಯಿತು. ನನ್ನನ್ನು ಸೂಪರ್ ಹೀರೋ ಎಂದು ತೋರಿಸಿದ್ದಾರೆ. ಪಾತ್ರದ ಬಗ್ಗೆ ಹೆಚ್ಚು ಹೇಳುವ ಹಾಗಿಲ್ಲ. ಆದರೆ ಒಳ್ಳೆಯ ಪಾತ್ರಕೊಟ್ಟ ನಿರ್ದೇಶಕರಿಗೆ ಹಾಗೂ ನಿರ್ಮಾಪಕರಿಗೆ ಧನ್ಯವಾದ ಎಂದರು ನಟಿ ಅನು ಪ್ರಭಾಕರ್.
ಹಗ್ಗದ ಬಗ್ಗೆ ಕಲಾವಿದರ ಅಭಿಪ್ರಾಯವೇನು?
ನನ್ನದು ಈ ಚಿತ್ರದಲ್ಲಿ ಪತ್ರಕರ್ತೆಯ ಪಾತ್ರ. ಯಾವುದೋ ಒಂದು ವಿಷಯದ ಅನ್ವೇಷಣೆಗಾಗಿ ಹಳ್ಳಿಗೆ ಹೋಗುತ್ತೇನೆ. ಈ ಚಿತ್ರದಲ್ಲಿ ಜೀಪ್ ಕೂಡ ಡ್ರೈವ್ ಮಾಡಿದ್ದೇನೆ ಎಂದು ಹರ್ಷಿಕಾ ಪೂಣಚ್ಛ ತಿಳಿಸಿದರು. ಇದು ನನ್ನ ಮೊದಲ ಚಿತ್ರ. ನಟನೆಗೆ ತಬಲನಾಣಿ ಅವರು ಬಹಳ ಸಹಾಯ ಮಾಡಿದರು. ನಮ್ಮ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದರು ನಾಯಕ ವೇಣು. ನಟ ತಬಲ ನಾಣಿ ಸಹ ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿದರು.
ಚಿತ್ರದ ತಾಂತ್ರಿಕ ಬಳಗ, ಪಾತ್ರವರ್ಗ ಹೀಗಿದೆ..
ನಿರ್ಮಾಪಕ ರಾಜ್ ಭಾರದ್ವಾಜ್ ಹಗ್ಗ ಚಿತ್ರಕ್ಕೆ ಕಥೆ ಬರೆದಿದ್ದು, ಚಿತ್ರಕಥೆ ರಾಜ್ ಭಾರದ್ವಾಜ್, ಅವಿನಾಶ್ ಹಾಗೂ ಮನೋಹರ್ ಅವರದು. ಮ್ಯಾಥ್ಯೂಸ್ ಮನು ಸಂಗೀತ ನಿರ್ದೇಶನ, ಸಿನಿಟೆಕ್ ಸೂರಿ ಛಾಯಾಗ್ರಹಣ ಹಾಗೂ ಎನ್ ಎಂ ವಿಶ್ವ ಅವರ ಸಂಕಲನವಿರುವ ಈ ಚಿತ್ರಕ್ಕೆ ಮನೋಹರ್ ಎಸ್ ಪಿ ಸಂಭಾಷಣೆ ಬರೆದಿದ್ದಾರೆ. ಅನು ಪ್ರಭಾಕರ್, ವೇಣು, ಹರ್ಷಿಕಾ ಪೂಣಚ್ಛ, ತಬಲನಾಣಿ, ಅವಿನಾಶ್, ಭವಾನಿ ಪ್ರಕಾಶ್, ಸುಧಾ ಬೆಳವಾಡಿ, ಪ್ರಿಯ ಹೆಗ್ಡೆ, ಮೈಕೋ ಮಂಜು, ಸಂಜು ಬಸಯ್ಯ, ಸದಾನಂದ ಕಾಳಿ ಮುಂತಾದವರು ತಾರಾಬಳಗದಲ್ಲಿದ್ದಾರೆ.