ನಾನು ದುಷ್ಮನ್ ಆಗಿರಬಹುದು ಎಂದುಕೊಂಡು ಇಷ್ಟುದ್ದ ಡ್ರ್ಯಾಗರ್ ಎಳೆದುಬಿಟ್ಟ ಆ ಮಾದಕ ವ್ಯಸನಿ; ಭೀಮ ನಟ ದುನಿಯಾ ವಿಜಯ್ ಅನುಭವ
Dunia Vijay Bheema Movie: ಸ್ಯಾಂಡಲ್‌ವುಡ್ ಸಲಗ ಖ್ಯಾತಿಯ ದುನಿಯಾ ವಿಜಯ್ ನಟನೆಯ ಭೀಮ ಸಿನಿಮಾ ಇಂದು ಬಿಡುಗಡೆಯಾಗಿದ್ದು, ಸಕಾರಾತ್ಮಕ ವಿಮರ್ಶೆ ಪಡೆಯುತ್ತಿದೆ. ಈ ಸಿನಿಮಾದ ಪ್ರಮುಖ ಥೀಮ್ ಆಗಿರುವ ಮಾದಕ ವ್ಯಸನ ಜಾಗೃತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಬೆಂಗಳೂರು: ದುನಿಯಾ ವಿಜಯ್ ನಟನೆಯ ಭೀಮ ಸಿನಿಮಾ ಇಂದು ಬಿಡುಗಡೆಯಾಗಿದ್ದು, ಸಕಾರಾತ್ಮಕ ವಿಮರ್ಶೆ ಪಡೆಯುತ್ತಿದೆ. ಈ ಸಿನಿಮಾದ ಪ್ರಮುಖ ಥೀಮ್ ಆಗಿರುವ ಮಾದಕ ವ್ಯಸನ ಜಾಗೃತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇದೇ ಸಂದರ್ಭದಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಿದ್ದ ಸಂದರ್ಭದಲ್ಲಿ ಒಂದ್ಸಲ ನನಗೂ ಒಬ್ಬ ಮಾದಕ ವ್ಯಸನಿ ಚುಚ್ಚಲು ಡ್ರ್ಯಾಗರ್ ಎಳೆದಿದ್ದ ಎಂಬ ಮಾಹಿತಿಯನ್ನು ದುನಿಯಾ ವಿಜಯ್ ಹಂಚಿಕೊಂಡಿದ್ದಾರೆ. ಲೋಕಲ್ ಹುಡುಗರು ಹೇಗೆ ಮಾದಕ ವ್ಯಸನಗಳಿಗೆ ಬಲಿಯಾಗುತ್ತಿದ್ದಾರೆ ಎಂಬ ಚಿತ್ರಣವನ್ನು ಭೀಮ ಸಿನಿಮಾದಲ್ಲಿ ತೋರಿಸಲಾಗಿದೆ. ಡ್ರಗ್ಸ್ ಜಗತ್ತಿನ ಕರಾಳ ಮುಖವನ್ನೇ ಈ ಸಿನಿಮಾದಲ್ಲಿ ತೋರಿಸಲಾಗಿದೆ.
ದುನಿಯಾ ವಿಜಯ್ ಭೀಮ ಸಿನಿಮಾಕ್ಕಾಗಿ ಕಳೆದ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಪ್ರತಿದಿನ ಮುಂದಿನ ಸೀನ್ ಏನಾಗಿರಬೇಕು, ಹೇಗಿರಬೇಕು ಎಂದು ಸಾಕಷ್ಟು ತಲೆಕೆಡಿಸಿಕೊಂಡಿದ್ದಾರೆ. ಪ್ರತಿನಿತ್ಯ ತನ್ನ ಟೀಮ್ ಜತೆ ಚರ್ಚಿಸುತ್ತಿದ್ದಾರೆ. ನಿಮಗೂ ಮಾದಕ ವ್ಯಸನಿಗಳಿಂದ ಏನಾದರೂ ಕೆಟ್ಟ ಅನುಭವ ಆಗಿತ್ತ ಎಂಬ ಮಾಧ್ಯಮಗಳ ಪ್ರಶ್ನೆಗೆ ದುನಿಯಾ ವಿಜಯ್ ಉತ್ತರಿಸಿದ್ದಾರೆ. "ನಾನು ನನ್ನ ಸುತ್ತಮುತ್ತ ಇದಕ್ಕೆ ಅವಕಾಶ ನೀಡುವುದಿಲ್ಲ. ಅಂದೊಮ್ಮೆ ವ್ಯಕ್ತಿಯೊಬ್ಬನನ್ನು ಭೇಟಿಯಾಗಲು ಹೋದಾಗ ಆತ ಡ್ರ್ಯಾಗನ್ ಎತ್ತಿದ್ದ. ಆತ ಡ್ರಗ್ಸ್ ಸೇವಿಸಿದ್ದ. ಆತ ಡ್ರ್ಯಾಗನ್ ತೆಗೆದಾಗ ಹೇ ಹೇ ಎಂದು ಹೇಳಿ ತಪ್ಪಿಸಿದೆ. ಅವರಿಗೆ ಈ ಜಗತ್ತಿನ ಪರಿವೆ ಇರೋದಿಲ್ಲ. ಯಾರೋ ಪೊಲೀಸರು, ದುಷ್ಮನ್ ಬಂದಿದ್ದಾರೆ ಎಂದುಕೊಳ್ಳುತ್ತಾರೆ" ಎಂದು ದುನಿಯಾ ವಿಜಯ್ ಮಾಹಿತಿ ನೀಡಿದ್ದಾರೆ.
"ಡ್ರಗ್ಸ್ ವಿಷಯದ ಕುರಿತು ಸಿನಿಮಾ ಮಾಡುವುದಕ್ಕೆ ನಾನು ಭಯಪಟ್ಟಿಲ್ಲ. ಸತ್ಯ ಹೇಳಲು ಭಯಪಡುವ ಅಗತ್ಯವಿಲ್ಲ" ಎಂದು ದುನಿಯಾ ವಿಜಯ್ ಹೇಳಿದ್ದಾರೆ.
ಭೀಮ ಸಿನಿಮಾದಲ್ಲಿ ಡ್ರಗ್ಸ್ ಕಥೆ
ಇಂದು ಬಿಡುಗಡೆಯಾದ ಭೀಮ ಸಿನಿಮಾದಲ್ಲಿ ಡ್ರಗ್ಸ್ ವ್ಯಸನದ ಕುರಿತು ಸಾಕಷ್ಟು ವಿವರ ನೀಡಲಾಗಿದೆ. ಲೋಕಲ್ ಹುಡುಗರು ಗಾಂಜಾ ವ್ಯಸನಕ್ಕೆ ಬಲಿಯಾಗುತ್ತಿರುವ ಕುರಿತು ಇಂಚಿಂಚು ತೋರಿಸಲಾಗಿದೆ. ಜತೆಗೆ, ಇದರ ಪರಿಣಾಮಗಳ ಕುರಿತೂ ತಿಳಿಸಲಾಗಿದೆ. ಮಾದಕ ವ್ಯಸನದಲ್ಲಿ ಬೀಳದಂತೆ ಈ ಸಿನಿಮಾದಲ್ಲಿ ಯುವ ಜನತೆಯನ್ನು ಎಚ್ಚರಿಸಲಾಗಿದೆ.
ಭೀಮ ಸಿನಿಮಾದ ರಿವ್ಯೂ
ಸಿನಿಮಾಕ್ಕಾಗಿ ಆಯ್ಕೆ ಮಾಡಿಕೊಂಡ ವಿಷಯ ಮತ್ತು ಅದನ್ನು ಪ್ರಸ್ತುತಪಡಿಸಿದ ರೀತಿ ಇಷ್ಟವಾಗುತ್ತದೆ. ಡ್ರಗ್ಸ್ ಜಾಲದ ಕುರಿತು ಸಾಕಷ್ಟು ಹೋಂವರ್ಕ್ ಮಾಡಿರುವುದು ಕಾಣಿಸುತ್ತದೆ. ಇಂತಹ ವ್ಯಸನಗಳಿಗೆ ಬಲಿಬೀಳುವ ಜನತೆಗೆ ಯಾವ ರೀತಿಯಲ್ಲಿ ಬುದ್ಧಿ ಹೇಳಿದರೆ ಸರಿಯಾಗುತ್ತೋ ಅದೇ ದಾಟಿಯಲ್ಲಿ ಬುದ್ಧಿ ಹೇಳಿದ್ದಾರೆ. ಈ ಸಿನಿಮಾ ನೋಡಿದ ಯುವಜನತೆ ಇಂತಹ ವ್ಯಸನಗಳಿಂದ ದೂರವಾದರೆ ಸಿನಿಮಾದ ಪರಿಶ್ರಮ ಸಾರ್ಥಕವಾಗಬಹುದು. ಭೀಮ- ದುನಿಯಾ ವಿಜಯ್ ಕರಿಯರ್‌ನಲ್ಲಿ ಅತ್ಯುತ್ತಮ ಸಿನಿಮಾ ಎನ್ನಬಹುದು. ಅಮಲು ಹಿಡಿಸಿ ಅಮಲು ಬಿಡಿಸೋ ಭೀಮ ಇದು ಎಂದರೂ ತಪ್ಪಾಗದು. ರಕ್ತಪಾತ ತುಸು ಕಡಿಮೆ ಇದ್ದರೆ ಫ್ಯಾಮಿಲಿ ಸಮೇತ ಹೋಗಿ ನೋಡಿಬನ್ನಿ ಎನ್ನಬಹುದಿತ್ತು. ಹದಿಹರೆಯದವರೂ ನೋಡಬೇಕಾದ ಸಿನಿಮಾವಿದು. ಆದರೆ, ಎ ಸರ್ಟಿಫಿಕೇಟ್ ದೊರಕದಂತೆ ಚಿತ್ರತಂಡ ಎಚ್ಚರಿಕೆ ವಹಿಸಬೇಕಿತ್ತು ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡದ ವಿಮರ್ಶೆ ತಿಳಿಸಿದೆ.