Yash on Bollywood: ನಾನು ಎಲ್ಲೂ ಹೋಗಿಲ್ಲ, ಬಾಲಿವುಡ್‌ನವ್ರನ್ನೇ ನಾನು ಇರೋ ಕಡೆ ಕರೆಸ್ಕೊಂಡಿದಿನಿ ತಲೆಕೆಡಿಸ್ಕೋಬೇಡಿ; ಯಶ್
ನಟ ಯಶ್ ಮಡದಿ ರಾಧಿಕಾ ಪಂಡಿತ್ ಮತ್ತು ಮಕ್ಕಳ ಜತೆಗೆ ಮನೆ ದೇವರು ನಂಜನಗೂಡು ಶ್ರೀಕಂಠೇಶ್ವರನ ಸನ್ನಿಧಾನಕ್ಕೆ ತೆರಳಿ ದರ್ಶನ ಪಡೆದಿದ್ದಾರೆ. ಇದೇ ವೇಳೆ ತಮ್ಮ ಮುಂದಿನ ಸಿನಿಮಾದ ಅಪ್‌ಡೇಟ್ ಮಾಹಿತಿಯನ್ನೂ ನೀಡಿದ್ದಾರೆ. ಊಹಾಪೋಹಗಳಿಗೂ ತೆರೆ ಎಳೆದಿದ್ದಾರೆ.
Yash 19: ಕೆಜಿಎಫ್ ಚಾಪ್ಟರ್ 2 ಸಿನಿಮಾ ಬಿಡುಗಡೆ ಆಗಿ ವರ್ಷದ ಮೇಲೆ ಎರಡು ತಿಂಗಳಾಯಿತು. ಅದಾದ ಮೇಲೆ ಚಾಪ್ಟರ್ 3 ಸಿನಿಮಾ ಸಹ ಬರುವ ಸೂಚನೆ ನೀಡಿತ್ತು ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್. ಇದೆಲ್ಲದರ ನಡುವೆಯೇ ಆ ಸಿನಿಮಾದಲ್ಲಿ ಯಶ್ ನಟಿಸಲಿದ್ದಾರೆ, ಈ ಬಾಷೆಯ ನಿರ್ದೇಶಕರ ಜತೆಗೆ ಕೆಲಸ ಮಾಡಲಿದ್ದಾರೆ.. ಹೀಗೆ ಸರಣಿ ಸುದ್ದಿಗಳು ಹರಿದಾಡಿದ್ದೇ ಆಯಿತೇ, ವಿನಃ ಯಾವುದೂ ಅಧಿಕೃತ ಘೋಷಣೆ ಆಗಲಿಲ್ಲ. ಈ ನಡುವೆ ಮಲಯಾಳಂ ಸಿನಿಮಾ ನಿರ್ದೇಶಕಿ ಜತೆಗೆ ಯಶ್ ಸಿನಿಮಾ ಮಾಡಲಿದ್ದಾರೆ ಎಂಬುದೂ ಸುದ್ದಿಯಾಗಿತ್ತು. ಈಗ ಇದೆಲ್ಲದರ ಬಗ್ಗೆ ಸ್ವತಃ ಯಶ್ ಮಾತನಾಡಿದ್ದಾರೆ.
ಮನೆ ದೇವರ ದರ್ಶನ ಪಡೆದ ಯಶ್ ಕುಟುಂಬ
ಮೈಸೂರಿನ ನಂಜನಗೂಡಿನ ಶ್ರೀಕಂಠೇಶ್ವೇರ ಸ್ವಾಮಿಯ ದರ್ಶನ ಪಡೆದಿದೆ ಯಶ್ ಕುಟುಂಬ. ಅಂದಹಾಗೆ, ಕರೊನಾ ಸಮಯದಿಂದ ಇಲ್ಲಿಗೆ ಭೇಟಿ ನೀಡದ ಯಶ್, ಇದೀಗ ಮನೆ ದೇವರ ದರ್ಶನ ಪಡೆದಿದ್ದಾರೆ. ಮಡದಿ ಮಕ್ಕಳ ಜತೆಗೆ ಆಗಮಿಸಿದ ಯಶ್, ವಿಶೇಷ ಪೂಜೆ ಮಾಡಿಸಿ ಆಶೀರ್ವಾದ ಪಡೆದಿದ್ದಾರೆ. ಹೀಗಿರುವಾಗಲೇ ಯಶ್ ಬಂದ ಸುದ್ದಿ ತಿಳಿಯುತ್ತಿದ್ದಂತೆ, ಸಾಗರೋಪಾದಿಯಲ್ಲಿ ಅವರ ಅಭಿಮಾನಿಗಳು ದೇವಸ್ಥಾನದತ್ತ ಹೆಜ್ಜೆ ಹಾಕಿದ್ದಾರೆ. ದೇವಸ್ಥಾನದಲ್ಲಿಯೇ ಕೆಲವರು ಅವರ ಜತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡರೆ, ಇನ್ನು ಕೆಲವರು, ದೂರದಿಂದಲೇ ಅವರನ್ನು ನೋಡಿ ಕಣ್ತುಂಬಿಕೊಂಡಿದ್ದಾರೆ.
ಈ ನಡುವೆ, ಮಾತಿಗೆ ಸಿಕ್ಕ ಯಶ್ ತಮ್ಮ ಮುಂದಿನ ಸಿನಿಮಾ ಬಗ್ಗೆ ಮೊದಲ ಸಲ ಮಾತನಾಡಿದ್ದಾರೆ. ಇನ್ನೂ ಒಂದಷ್ಟು ದಿನ ಕಾಯಲೇ ಬೇಕು ಎಂದು ಪರೋಕ್ಷವಾಗಿ ಹೇಳಿದ್ದಾರೆ. ಶೀಘ್ರದಲ್ಲಿಯೇ ಸಿನಿಮಾದ ಬಗ್ಗೆ ಅಪ್‌ಡೇಟ್ ಮಾಹಿತಿ ನೀಡುವುದಾಗಿ ಯಶ್ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ ಬಾಲಿವುಡ್‌ನಲ್ಲಿಯೂ ಯಶ್ ಸಿನಿಮಾ ಮಾಡ್ತಾರೆ ಎಂಬ ಸುದ್ದಿಯ ಬಗ್ಗೆಯೂ ಸ್ಪಷ್ಟನೆ ನೀಡಿದ್ದಾರೆ. ಹಾಗಾದರೆ ಯಶ್ ಹೇಳಿದ್ದೇನು? ಇಲ್ಲಿದೆ ಪೂರ್ಣ ವಿವರ.
ಫ್ಯಾನ್ಸ್ ಖುಷಿಪಡೋ ರೀತಿಯಲ್ಲಿಯೇ ಬರ್ತಿವಿ..
"ಜನ ದುಡ್ಡು ಕೊಟ್ಟು ಸಿನಿಮಾ ನೋಡ್ತಾರೆ. ಆ ದುಡ್ಡಿಗೊಂದು ವ್ಯಾಲ್ಯೂ ಇರಬೇಕು. ನಾವು ಮಾಡುವ ಕೆಲಸದಲ್ಲಿ ಶ್ರದ್ಧೆ ಇರಬೇಕು. ಇಡೀ ದೇಶ ದೇಶ ಜಗತ್ತು ನೋಡ್ತಿದೆ. ಆ ಜವಾಬ್ದಾರಿ ನನಗಿದೆ. ದೇವರ ಸನ್ನಿಧಾನ, ಸುಮ್ಮನೇ ತೇಲಿಸುವುದು ಬೇಡ. ಆದಷ್ಟು ಬೇಗ, ಎಲ್ಲರೂ ಕಷ್ಟಪಟ್ಟು ಕೆಲಸ ಮಾಡ್ತಿದ್ದೀವಿ. ಎಲ್ಲರೂ ಖುಷಿ ಪಡೋ ರೀತಿಯಲ್ಲಿ ನಿಮ್ಮ ಮುಂದೆ ಬರಲಿದ್ದೇವೆ. ಜನ ಫ್ರೀಯಾಗಿ ಸಿನಿಮಾ ನೋಡುವ ಹಾಗಿದ್ದರೆ, ಹೇಗೆ ಬೇಕೋ ಹಾಗೆ ಮಾಡಬಹುದಿತ್ತು. ಅವರೇ ಬೆಳೆಸಿರೋದು, ಅವ್ರು ಖುಷಿಪಡೋ ಕೆಲಸ ನಾವು ಮಾಡಬೇಕು. ಆ ಜವಾಬ್ದಾರಿ ನನ್ನ ಮೇಲಿದೆ ಅದನ್ನು ಮಾಡ್ತೀವಿ" ಎಂದರು.
ಬಾಲಿವುಡ್ ಬಗ್ಗೆಯೂ ಯಶ್ ಮಾತು..
"ನಾನಂತೂ ಒಂದು ದಿನ ಒಂದು ಕ್ಷಣವನ್ನೂ ವೇಸ್ಟ್ ಮಾಡ್ತಿಲ್ಲ. ಅಷ್ಟು ಕೆಲಸ ಇದೆ. ಅಷ್ಟೊಂದು ಕೆಲಸ ಕೈ ಹಿಡಿತೀದೆ. ಆದಷ್ಟು ಬೇಗ ಬರ್ತಿವಿ ಎಂದು ಹೇಳಿದ್ದಾರೆ ಯಶ್. ಈ ನಡುವೆ ಬಾಲಿವುಡ್‌ಗೂ ಹೋಗ್ತಿದ್ದೀರಂತೆ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಯಶ್, ನಾನು ಎಲ್ಲೂ ಹೋಗಿಲ್ಲ, ಬಾಲಿವುಡ್‌ನವ್ರನ್ನೇ ನಾನು ಇರೋ ಕಡೆ ಕರೆಸ್ಕೊಂಡಿದೀನಿ ತಲೆಕೆಡೆಸ್ಕೋಬೇಡಿ" ಎಂದಿದ್ದಾರೆ ಯಶ್.
ಸಫಾರಿ ವೇಳೆ ಯಶ್ ದಂಪತಿಗೆ ಕಾಣಲಿಲ್ಲ ಹುಲಿ
ಕನ್ನಡದ ರಾಕಿಂಗ್ ಸ್ಟಾರ್‌ಗೆ ಕರುನಾಡ ಕಾಡಲ್ಲಿ ಕಾಣಲಿಲ್ಲ ಹುಲಿರಾಯ. ಎರಡು ದಿನ ಕಾಡಿನಲ್ಲಿಯೇ ವಾಸ್ತವ್ಯ ಹೂಡಿ ಸಫಾರಿ ಕೈಗೊಂಡರೂ ಯಶ್ ಹಾಗೂ ಅವರ ಪತ್ನಿ, ನಟಿ ರಾಧಿಕಾ ಪಂಡಿತ್‌ಗೆ ಹುಲಿ ದರ್ಶನವಾಗಲಿಲ್ಲ. ಸಿನೆಮಾ ಗಡಿಬಿಡಿಯ ನಡುವೆಯೂ ಯಶ್ ದಂಪತಿ ಮೈಸೂರು ಜಿಲ್ಲೆ ಎಚ್‌ಡಿಕೋಟೆ ತಾಲ್ಲೂಕಿನ ಬೀರಂಬಳ್ಳಿಯ ಕಬಿನಿ ಹಿನ್ನೀರಿಗೆ ಹೊಂದಿಕೊಂಡಂತೆ ಇರುವ ಆರೆಂಜ್ ಕೌಂಟಿ ರೆಸಾರ್ಟ್‌ನಲ್ಲಿ ಎರಡು ದಿನ ವಾಸ್ತವ್ಯ ಹೂಡಿದ್ದರು. ಸೋಮವಾರ ಮಧ್ಯಾಹ್ನ ಹೆಲಿಕಾಪ್ಟರ್ ನಲ್ಲಿ ಪತ್ನಿ, ಇಬ್ಬರು ಮಕ್ಕಳು ಹಾಗೂ ಪೋಷಕರೊಂದಿಗೆ ಆಗಮಿಸಿದ್ದ ಯಶ್ ಬುಧವಾರ ಬೆಳಗ್ಗೆ ಬೆಂಗಳೂರಿನತ್ತ ಹೊರಟರು. ನಾಗರಹೊಳೆ ಹಾಗೂ ಬಂಡೀಪುರ ರಾಷ್ಟ್ರೀಯ ಉದ್ಯಾನಕ್ಕೆ ಹೊಂದಿಕೊಂಡಂತೆ ಇರುವ ರೆಸಾರ್ಟ್‌ನಲ್ಲಿ ಇಡೀ ಕುಟುಂಬ ಎರಡು ಕುಟುಂಬ ರಿಲಾಕ್ಸ್ ಆಗಿಯೇ ಕಾಲ ಕಳೆಯಿತು.