‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯ ಹೊಸ ಸ್ನೇಹಾ ವಿದ್ಯಾರ್ಹತೆ ಏನು, ಅವರ ಸಾಧನೆಗಳೇನು? ನಟಿ ಅಪೂರ್ವ ನಾಗರಾಜ್ ಸಂದರ್ಶನ
ಸಂದರ್ಶನ- ಪದ್ಮಶ್ರೀ ಭಟ್. ನಟಿ ಅಪೂರ್ವ ನಾಗರಾಜ್ ಅವರು ʼಪುಟ್ಟಕ್ಕನ ಮಕ್ಕಳುʼ ಧಾರಾವಾಹಿಯಲ್ಲಿ ಹೊಸ ಸ್ನೇಹಾ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಪೂರ್ವ ನಾಗರಾಜ್ ಯಾರು? ಅವರ ಹಿನ್ನಲೆ ಏನು ಎನ್ನೋದು ಅನೇಕರಿಗೆ ಗೊತ್ತಿಲ್ಲ. ಈ ಬಗ್ಗೆ ಅವರನ್ನೆ ಮಾತನಾಡಿಸಿದಾಗ ಸಿಕ್ಕ ಉತ್ತರ ಇಲ್ಲಿದೆ.
ಪುಟ್ಟಕ್ಕನ ಮಕ್ಕಳುʼ ಧಾರಾವಾಹಿಯಲ್ಲಿ ಈಗಾಗಲೇ ಸ್ನೇಹಾ ಎನ್ನುವ ಪಾತ್ರ ಅಂತ್ಯವಾಗಿದ್ದರೂ ಕೂಡ, ಹೊಸ ಸ್ನೇಹಾ ಪಾತ್ರವೊಂದು ಸೇರ್ಪಡೆಯಾಗಿದೆ. ಆದರೆ ಹಳೇ ಸ್ನೇಹಾಗೂ, ಹೊಸ ಸ್ನೇಹಾಗೂ ತುಂಬ ವ್ಯತ್ಯಾಸ ಇದೆ. ಅಷ್ಟೇ ಅಲ್ಲದೆ ಇದು ರಿಪ್ಲೇಸ್‌ಮೆಂಟ್ ಕೂಡ ಅಲ್ಲ. ಹೊಸ ಸ್ನೇಹಾ ಯಾರು? ಅವರ ಹಿನ್ನಲೆ ಏನು ಅನ್ನೋದು ಅನೇಕರಿಗೆ ಗೊತ್ತಿಲ್ಲ. ಈ ಬಗ್ಗೆ ಸ್ನೇಹಾ ಪಾತ್ರಧಾರಿ ನಟಿ ಅಪೂರ್ವ ನಾಗರಾಜ್ ಅವರೇ ಪಂಚಮಿ ಟಾಕ್ಸ್ ಯುಟ್ಯೂಬ್ ಚಾನೆಲ್ ಜೊತೆಗೆ ಮಾತನಾಡಿದ್ದಾರೆ.
ಪ್ರಶ್ನೆ: ಹೊಸ ಸ್ನೇಹಾ ಆಗಿ ʼಪುಟ್ಟಕ್ಕನ ಮಕ್ಕಳುʼ ಧಾರಾವಾಹಿಯಲ್ಲಿ ಕಾಣಿಸಿಕೊಳ್ತಿದ್ದೀರಾ.
ಉತ್ತರ: ಹೌದು, ಇದು ನನಗೆ ಹೊಸ ಅನುಭವ. ಈ ಹಿಂದೆ ನಾನು ರಂಗಭೂಮಿಯಲ್ಲಿ ಕೆಲಸ ಮಾಡಿದ್ದೇನೆ, ಕ್ಯಾಮರಾ ಹೊಸತು. ಉಮಾಶ್ರೀ, ರಮೇಶ್ ಪಂಡಿತ್, ಪ್ರದೀಪ್ ತಿಪಟೂರು, ಮಂಜುಭಾಷಿಣಿ ಮುಂತಾದ ಹಿರಿಯ ಕಲಾವಿದರು ಅವರ ಜೊತೆ ಕೆಲಸ ಮಾಡುತ್ತಿರೋದು ಖುಷಿ ಕೊಟ್ಟಿದೆ. ನಾನು ನಟಿಸುವಾಗ ಸ್ವಲ್ಪ ಎಡವಿದೆರೂ ಕೂಡ ಈ ಕಲಾವಿದರು ತಪ್ಪನ್ನು ಹೇಳಿ ತಿದ್ದುತ್ತಾರೆ, ಇದಂತೂ ತುಂಬ ಖುಷಿ ಕೊಟ್ಟಿದೆ. ನನಗೆ ಇಲ್ಲಿ ಕಲಿಯಲು ದೊಡ್ಡ ಜಾಗ ಸಿಕ್ಕಿದೆ.
ಪ್ರಶ್ನೆ: ನಿಮ್ಮ ಹಿನ್ನಲೆ ಹೇಳಿ
ಉತ್ತರ: ನಾನು ಚೆನ್ನರಾಯಪಟ್ಟಣದ ಹುಡುಗಿ. ಬೆಂಗಳೂರಿಗೆ ಬಂದು ಹತ್ತು ವರ್ಷ ಆಗಿದೆ. ಚನ್ನರಾಯಪಟ್ಟಣದಲ್ಲಿ ಅಪ್ಪ ಆಗ ಮೆಡಿಕಲ್ ಸ್ಟೋರ್ಸ್ ನಡೆಸುತ್ತಿದ್ದರು. ಅಮ್ಮ ಸಿಎ ಮಾಡಿದ್ದರೂ ಕೂಡ ಮದುವೆ ನಂತರ ಕುಟುಂಬದ ಕಡೆಗೆ ಗಮನ ಕೊಟ್ಟರು.
ಪ್ರಶ್ನೆ: ಶಿಕ್ಷಣದ ಬಗ್ಗೆ ಹೇಳಿ
ಉತ್ತರ: ನಾನು ಕ್ರೈಸ್ತ ಯುನಿವರ್ಸಿಟಿಯಲ್ಲಿ ಓದಿದ್ದೇನೆ. ಕರ್ನಾಟಿಕ್ ಸಂಗೀತವನ್ನು ನನ್ನ ತಾಯಿ ಪರಿಚಯ ಮಾಡಿಸಿದ್ದರು. ಭರತನಾಟ್ಯವನ್ನು ಕಲಿಯುತ್ತಿದ್ದೆ. ಬಿಎ ಮಾಡುವಾಗ ಪರ್ಫಾರ್ಮಿಂಗ್ ಆರ್ಟ್ಸ್, ಸೈಕಾಲಜಿ, ಆಪ್ಶನಲ್ ಇಂಗ್ಲಿಷ್ ಇತ್ತು. ಅಲ್ಲಿಂದಲೇ ನಾನು ರಂಗಭೂಮಿ ಕಲಿಕೆ ಶುರು ಆಯ್ತು. 2017ರಲ್ಲಿ ಬಿಎ ಓದಲು ಆರಂಭಿಸಿ, 2020ರಲ್ಲಿ ಶಿಕ್ಷಣ ಮುಗಿಸಿದೆ.
ಪ್ರಶ್ನೆ: ನಟನೆ ಶುರುವಾಗಿದ್ದು ಹೇಗೆ?
ಉತ್ತರ: ಅಬೂರು ಜಯತೀರ್ಥ, ಬಾಬು ಹಿರಣ್ಣಯ್ಯ ಅವರ ನಾಟಕಗಳಲ್ಲಿ ನಟಿಸಿದೆ, ಬೀಚಿ ರಸಾಯನದಲ್ಲಿಯೂ ನಟಿಸಿದೆ. ಅಷ್ಟೇ ಅಲ್ಲದೆ ಪ್ರಸನ್ನ ಹೆಗ್ಗೋಡು ಅವರ ʼನವೋದಯʼ ಥಿಯೇಟರ್‌ನಲ್ಲಿಯೂ ( ವರ್ಕ್‌ಶಾಪ್ ) ನಾನು ಭಾಗವಹಿಸಿದೆ. ಅಷ್ಟೇ ಅಲ್ಲದೆ ನಟನೆ ಜೊತೆಗೆ ಥಿಯರಿ ಕಲಿಯಬೇಕು ಅಂತ ಅವರ ಜೊತೆ ಸ್ವಲ್ಪ ದಿನಗಳ ಕಾಲ ಕೆಲಸ ಮಾಡಿದೆ.
ಪ್ರಶ್ನೆ: ನಾಟಕ ನಿರ್ದೇಶನ ಯಾವಾಗ ಶುರುವಾಯ್ತು?
ಉತ್ತರ: ʼರಂಗನಾಯಕಿ ಅವಳಿಗೆ ಇದ್ದದ್ದೇ ಇಲ್ಲದೆ ಬದುಕುʼ ಎನ್ನುವ ನಾಟಕ ನಿರ್ದೇಶನ ಮಾಡಿದೆ. ಕ್ರೈಸ್ತ ಯುನಿವರ್ಸಿಟಿಯಲ್ಲಿ ಮೊದಲು ಇದರ ಪ್ರದರ್ಶನ ಆಗಿ ಹೊರಗಡೆ ಕೂಡ ಅದರ ಪ್ರದರ್ಶನ ಮಾಡಲು ಅವಕಾಶ ಸಿಕ್ಕಿತು. ಎನ್ ಸಿ ಮಹೇಶ್ ಅವರು ಬರೆದಿರುವ ʼರಾಧಾ ಮಾಧವ ವಿನೋದ ಹಾಸʼ ಎನ್ನುವ ಮ್ಯೂಸಿಕಲ್ ನಾಟಕವನ್ನು ನಾನು ನಿರ್ದೇಶನ ಮಾಡಿದ್ದೆ. ಈ ನಾಟಕ ಆಮೇಲೆ ʼನ್ಯಾಶನಲ್ ಲೆವೆಲ್ ಬಹುರೂಪಿ ಥಿಯೇಟರ್ ಫೆಸ್ಟ್ʼಗೆ ಆಯ್ಕೆ ಆಗಿತ್ತು. ನನ್ನ ಅಣ್ಣ ಅನಘ ನರಸಿಂಹ ವಕೀಲ ಆದರೂ ಕೂಡ ಬರೆಯುತ್ತಾನೆ. ನನ್ನ ಮೊದಲ ನಾಟಕಕ್ಕೂ ಅವನೇ ಬರೆದಿದ್ದ. ʼಕ್ಲೌಂಡ್ಸ್ ಲೆವೆರಿʼ ಎನ್ನುವ ಥಿಯೇಟರ್ ಕಂಪೆನಿ ಆರಂಭಿಸಿ, ನಾಟಕಗಳನ್ನು ಮಾಡುತ್ತಿದ್ದೇವೆ.
ಪ್ರಶ್ನೆ: ʼಪುಟ್ಟಕ್ಕನ ಮಕ್ಕಳುʼ ಸೀರಿಯಲ್ ಆಫರ್ ಹೇಗೆ ಬಂತು?
ಉತ್ತರ: ರಂಗಭೂಮಿಯಲ್ಲಿಯೇ ಸಕ್ರಿಯವಾಗಿದ್ದ ನಾನು ಸೀರಿಯಲ್‌ಗೆ ಆಡಿಷನ್ ಕೊಡುತ್ತಿದ್ದೆ. ಹಾಗೆಯೇ ʼಪುಟ್ಟಕ್ಕನ ಮಕ್ಕಳುʼ ಸೀರಿಯಲ್ ಆಡಿಷನ್‌ನಲ್ಲಿ ಭಾಗವಹಿಸಿ ಆಯ್ಕೆ ಆದೆ. ಈಗ ಜನರ ಮುಂದೆ ಸ್ನೇಹಾ ಆಗಿ ಕಾಣಿಸಿಕೊಳ್ಳುತ್ತಿದ್ದೇನೆ.
ಸಂದರ್ಶನ- ಪದ್ಮಶ್ರೀ ಭಟ್