ಕಾಟೇರ ಸಿನಿಮಾ ನೋಡಬೇಕೆ? 40 ರೂಪಾಯಿ ನೀಡಿ ಟೆಲಿಗ್ರಾಂ ಲಿಂಕ್‌ ಪಡೆಯಿರಿ; ದರ್ಶನ್‌ ಸಿನೆಮಾ ಪೈರಸಿ ಮಾಡಿದ ಆರೋಪಿ ಬಂಧನ
ಕನ್ನಡ ಸುದ್ದಿ  /  ಮನರಂಜನೆ  /  ಕಾಟೇರ ಸಿನಿಮಾ ನೋಡಬೇಕೆ? 40 ರೂಪಾಯಿ ನೀಡಿ ಟೆಲಿಗ್ರಾಂ ಲಿಂಕ್‌ ಪಡೆಯಿರಿ; ದರ್ಶನ್‌ ಸಿನೆಮಾ ಪೈರಸಿ ಮಾಡಿದ ಆರೋಪಿ ಬಂಧನ

ಕಾಟೇರ ಸಿನಿಮಾ ನೋಡಬೇಕೆ? 40 ರೂಪಾಯಿ ನೀಡಿ ಟೆಲಿಗ್ರಾಂ ಲಿಂಕ್‌ ಪಡೆಯಿರಿ; ದರ್ಶನ್‌ ಸಿನೆಮಾ ಪೈರಸಿ ಮಾಡಿದ ಆರೋಪಿ ಬಂಧನ

Kannada Kaatera Movie: ಕನ್ನಡ ಸಿನಿಮಾ ಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿರುವ ದರ್ಶನ್‌ ಸಿನಿಮಾ ಕಾಟೇರಕ್ಕೆ ಪೈರಸಿ ಕಾಟ ಆರಂಭವಾಗುತ್ತಿದೆ. ಟೆಲಿಗ್ರಾಂನಲ್ಲಿ ಪೈರಸಿ ಸಿನಿಮಾವನ್ನು ಅಪ್ಲೋಡ್‌ ಮಾಡಿ ಲಿಂಕ್‌ಗಳನ್ನು 40 ರೂಪಾಯಿಗೆ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

Kaatera: ದರ್ಶನ್‌ ಸಿನೆಮಾ ಕಾಟೇರ ಪೈರೆಸಿ ಮಾಡಿದ ಆರೋಪಿ ಬಂಧನ
Kaatera: ದರ್ಶನ್‌ ಸಿನೆಮಾ ಕಾಟೇರ ಪೈರೆಸಿ ಮಾಡಿದ ಆರೋಪಿ ಬಂಧನ

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌, ಆರಾಧನಾ ರಾಮ್‌ ನಟನೆಯ ಕನ್ನಡ ಬ್ಲಾಕ್‌ಬಸ್ಟರ್‌ ಸಿನಿಮಾ ಕಾಟೇರಕ್ಕೆ ಪೈರಸಿ ಕಾಟ ಆರಂಭವಾಗಿದೆ. ಟೆಲಿಗ್ರಾಂನಲ್ಲಿ ಕಾಟೇರ ಸಿನಿಮಾದ ಥಿಯೇಟರ್‌ ಶೂಟಿಂಗ್‌ ವಿಡಿಯೋಗಳನ್ನು ಹಂಚುವ ಕುರಿತು ವದಂತಿಗಳು ಕೇಳಿಬಂದಿದ್ದು, ಇದಕ್ಕೆ ಪೂರಕವಾಗಿ ರಾಯಚೂರಿನಲ್ಲಿ ಆರೋಪಿಯೊಬ್ಬನ ಬಂಧನವೂ ಆಗಿದೆ. ಟಿವಿನೈನ್‌ ವರದಿ ಪ್ರಕಾರ ರಾಯಚೂರಿನಲ್ಲಿ ಕಾಟೇರ ಸಿನಿಮಾ ವೀಕ್ಷಣೆಗೆ ಲಿಂಕ್‌ಗಳನ್ನು ಮಾರಾಟ ಮಾಡುತ್ತಿದ್ದ ಮೌನೇಶ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕಾಟೇರ ಪೈರಸಿಯ ಕಿಂಗ್‌ಪಿನ್‌ ಆಗಿರುವ ಉಪೇಂದ್ರ ಹೆಸರಿನ ವ್ಯಕ್ತಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.

ಕರ್ನಾಟಕದ ವಿವಿಧ ಕಡೆಗಳಲ್ಲಿ ಥಿಯೇಟರ್‌ನಲ್ಲಿ ಸಿನಿಮಾ ನೋಡದೆ ಇರುವವರು ಆನ್‌ಲೈನ್‌ನಲ್ಲಿ ಕಾಟೇರ ಡೌನ್‌ಲೋಡ್‌ ದೊರಕುತ್ತಿದೆಯೇ ಎಂದು ಹುಡುಕುತ್ತಿದ್ದಾರೆ. ಟೊರಾಂಟೊ ಸೈಟ್‌ಗಳಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ಹೆಚ್ಚಾಗಿ ಇನ್‌ಸ್ಟಾಗ್ರಾಂನಲ್ಲಿ ಪೈರಸಿ ಸಿನಿಮಾಗಳು ದೊರಕುವುದರಿಂದ ಇಲ್ಲೂ ಹುಡುಕಾಟ ನಡೆಸುತ್ತಿದ್ದಾರೆ. ಈ ರೀತಿ ಪೈರಸಿ ಮಾಡುವವರು ಹಣ ನೀಡಿ ಸಿನಿಮಾ ನೋಡುವ ಲಿಂಕ್‌ ನೀಡುತ್ತಿದ್ದಾರೆ. ಇದೇ ಪ್ರಕರಣದಲ್ಲಿ ದೇವದುರ್ಗ ತಾಲೂಕಿನ ಗಂಗಾನಾಯಕ್‌ ತಾಂಡದ ಮೌನೇಶ್‌ ಎಂಬ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಈತನ ವಿರುದ್ಧ ಕಾಪಿ ರೈಟ್‌ ಕಾನೂನು ಮತ್ತು ಐಪಿಸಿ ಸೆಕ್ಷನ್‌ 420ಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ರಾಯಚೂರಿನ ಸದರ್‌ ಬಜಾರ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ವರದಿ ತಿಳಿಸಿದೆ.

ಕಾಟೇರ ಸಿನಿಮಾವನ್ನು ಪೈರಸಿ ಮಾಡಬೇಡಿ ಮತ್ತು ಪೈರಸಿ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ದರ್ಶನ್‌ ಈ ಹಿಂದೆಯೇ ಎಚ್ಚರಿಕೆ ನೀಡಿದ್ದರು. ಹಿಂದೂಸ್ತಾನ್‌ ಟೈಮ್ಸ್‌ ಕನ್ನಡವೂ ಪೈರಸಿ ಕಾಯಿದೆ, ದಂಡದ ಕುರಿತು ಹೆಚ್ಚಿನ ವಿವರ ಪ್ರಕಟಿಸಿತ್ತು.

"ಕಾಟೇರ ಸಿನಿಮಾವನ್ನು ಪೈರಸಿ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ರೀಲ್ಸ್‌ ಮೂಲಕ, ಮೊಬೈಲ್‌ ಮೂಲಕ ಕಾಟೇರ ಪೈರಸಿ ಕಾಪಿ ಹಂಚಬೇಡಿ. ಈ ರೀತಿ ಪೈರಸಿ ಮಾಡಿ ಅಪ್ಪಿತಪ್ಪಿ ಸಿಕ್ಕಿ ಹಾಕಿಕೊಂಡರೆ... ಟಾಟಾ ಬಾಯ್‌ಬಾಯ್‌" ಎಂದು ಎಚ್ಚರಿಕೆ ನೀಡಿದ್ದರು.

"ದಯವಿಟ್ಟು ಕಾಟೇರ ಸಿನಿಮಾ ಪೈರಸಿ ಮಾಡಿ ಸಿಕ್ಕಾಕ್ಕಿಕೊಂಡು ಕಷ್ಟಕ್ಕೆ ಸಿಲುಕಬೇಡಿ. ತುಂಬಾ ಕಷ್ಟಪಟ್ಟು ಈ ಸಿನಿಮಾ ಮಾಡಿದ್ದೇವೆ. ಇಲ್ಲಿನ ಪ್ರತಿಯೊಬ್ಬರ ಶ್ರಮವೂ ಇದೆ. ಥಿಯೇಟರ್‌ನಲ್ಲಿ ನೋಡಿದಾಗ ಎಷ್ಟು ಚೆನ್ನಾಗಿ ಸಿನಿಮಾ ಕಾಣಿಸುತ್ತದೆ. ಮೊಬೈಲ್‌ನಲ್ಲಿ ಏನು ನೋಡುವಿರಿ. ಇದು ಕನ್ನಡದ ಸಿನಿಮಾ, ಬೇರೆ ಭಾಷೆಯ ಸಿನಿಮಾ ಮಾಡಿಲ್ಲ ಸ್ವಾಮಿ, ನಮ್ಮ ಭಾಷೆಯ ನಮ್ಮ ನೆಲದ ಸಿನಿಮಾ, ಇದನ್ನು ಪೈರಸಿ ಮಾಡಬೇಡಿ" ಎಂದು ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಮನವಿ ಮಾಡಿದ್ದರು. ಇದೀಗ ದರ್ಶನ್‌ ಮನವಿಗೂ ಬೆಲೆ ಕೊಡದ ಮೌನೇಶ್‌ ಪೊಲೀಸರ ಅತಿಥಿಯಾಗಿದ್ದಾನೆ.

1957ರ ಕಾಪಿರೈಟ್‌ ಕಾಯಿದೆಯಲ್ಲಿ ಪ್ರೈವೆಸಿ ವಿರುದ್ಧ ಕಾನೂನು ಬಿಗಿಗೊಳಿಸಲಾಗಿತ್ತು. ಯಾವುದೇ ಚಿತ್ರಮಂದಿರಗಳಲ್ಲಿ ಅಧಿಕೃತ ಪರವಾನಿಗೆ ಇಲ್ಲದೆ ಸಿನಿಮಾವನ್ನು ರೆಕಾರ್ಡ್‌ ಮಾಡುವುದು ಶಿಕ್ಷಾರ್ಹ ಅಪರಾಧ. ಈ ರೀತಿ ಮಾಡಿದವರಿಗೆ 3 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲು ಮತ್ತು 10 ಲಕ್ಷ ರೂಪಾಯಿವರೆಗೆ ದಂಡ ವಿಧಿಸಲು ಅವಕಾಶವಿದೆ. ಸಿನಿಮಾ ಪೈರಸಿ ಮಾಡುವುದಲ್ಲದೆ, ಪೈರಸಿ ಸಿನಿಮಾ ನೋಡುವುದು ಕೂಡ ತಪ್ಪು. ಯಾರೋ ಲಿಂಕ್‌ ಕಳುಹಿಸಿದರು ಎಂದು ಪೈರಸಿ ಸಿನಿಮಾ ನೋಡಿ ನೀವು ಸಿಕ್ಕಾಕ್ಕಿಕೊಂಡರೂ ನಿಮಗೂ ಮೂರು ವರ್ಷದವರೆಗೆ ಶಿಕ್ಷೆ ಮತ್ತು ಎರಡು ಲಕ್ಷ ರೂಪಾಯಿವರೆಗೆ ದಂಡ ವಿಧಿಸಲು ಅವಕಾಶವಿದೆ.

Whats_app_banner