ಸುದೀಪ್ ಚಿತ್ರಕ್ಕೆ ಸಾಥ್ ನೀಡಿದ ಬಾಹುಬಲಿ ಕಥೆಗಾರ ವಿಜಯೇಂದ್ರ ಪ್ರಸಾದ್; ಆರ್ ಚಂದ್ರು ನಿರ್ದೇಶನದ ಚಿತ್ರದಲ್ಲಿ ಕಿಚ್ಚ
ಸುದೀಪ್ ಬರ್ತ್‌ಡೇ ಪ್ರಯುಕ್ತ ನಿರ್ದೇಶಕ ಆರ್. ಚಂದ್ರು ಸಿನಿಮಾ ಘೋಷಣೆ ಮಾಡಲಿದ್ದಾರೆ. ವಿಶೇಷ ಏನೆಂದರೆ ಈ ಚಿತ್ರಕ್ಕೆ ರಾಜಮೌಳಿ ತಂದೆ, ಕಥೆಗಾರ ವಿಜಯೇಂದ್ರ ಪ್ರಸಾದ್ ಸಾಥ್ ನೀಡಲಿದ್ದಾರೆ.
Kichcha Sudeep Birthday: ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ಬರ್ತ್‌ಡೇಗೆ ಕ್ಷಣಗಣನೆ ಆರಂಭವಾಗಿದೆ. ಸೆ. 2ರಂದು ಬರ್ತ್‌ಡೇಯಿದ್ದರೂ ಇಂದಿನಿಂದಲೇ ಅಭಿಮಾನಿಗಳು ಹಬ್ಬದಾಚರಣೆ ಮಾಡುತ್ತಿದ್ದಾರೆ. ಇತ್ತ ಬೆಂಗಳೂರಿನ ನಂದಿ ಲಿಂಕ್ಸ್ ಮೈದಾನದಲ್ಲಿಯೂ ತಯಾರಿ ಶುರುವಾಗಿದೆ. ಸಿನಿಮಾ ತಂಡಗಳಿಂದ ಹೊಸ ಹೊಸ ಸಿನಿಮಾಗಳೂ ಘೋಷಣೆ ಆಗಲಿವೆ. ಇದೀಗ ಬರ್ತ್‌ಡೇಗೆ ಒಂದು ದಿನ ಮುಂಚಿತವಾಗಿಯೇ ನಿರ್ದೇಶಕ ಆರ್.ಚಂದ್ರು ಬ್ರೇಕಿಂಗ್ ಸುದ್ದಿಯೊಂದನ್ನು ನೀಡಿದ್ದಾರೆ.
ಕಬ್ಜ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡ ನಿರ್ದೇಶಕ ಆರ್. ಚಂದ್ರು, ಇದೀಗ ಕಿಚ್ಚ ಸುದೀಪ್ ಸಿನಿಮಾಕ್ಕೆ ಆಕ್ಷನ್ ಕಟ್ ಕೇಳಲಿದ್ದಾರೆ. ಕಬ್ಜದಲ್ಲಿ ಉಪೇಂದ್ರ ಜತೆಗೆ ಸುದೀಪ್ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಇದೀಗ ಅವರಿಗಾಗಿ ಹೊಸದೊಂದು ಕಥೆ ಮಾಡಿ ತಂದಿದ್ದಾರೆ ಚಂದ್ರು. ವಿಶೇಷ ಏನೆಂದರೆ, ಮಗಧೀರ, ಬಾಹುಬಲಿ, RRR ರೀತಿಯ ಹಿಟ್ ಚಿತ್ರಗಳ ಕಥೆಗಾರ ವಿ. ವಿಜಯೇಂದ್ರ ಪ್ರಸಾದ್ ಸುದೀಪ್ ಅವರ ಸಿನಿಮಾಕ್ಕೆ ಸಾಥ್ ನೀಡಿಲಿದ್ದಾರೆ. ಈ ವಿಚಾರವೀಗ ಅಧಿಕೃತವಾಗಿದೆ.
ಆರ್ ಚಂದ್ರು ಅವರ ಆರ್.ಸಿ. ಸ್ಟುಡಿಯೋಸ್ ಸಂಸ್ಥೆಯ ಚೊಚ್ಚಲ ಚಿತ್ರಕ್ಕೆ ಸ್ಕ್ರಿಪ್ಟ್ ಸೂಪರ್ ವೈಸ್ ಮಾಡಿದ್ದಾರೆ ವಿಜಯೇಂದ್ರ ಪ್ರಸಾದ್. ಇನ್ನೇನು ಸೆಪ್ಟೆಂಬರ್ 2ರಂದು ಈ ಸಿನಿಮಾದ ಅಧಿಕೃತ ಘೋಷಣೆ ಆಗುದಷ್ಟೇ ಅಲ್ಲದೇ, ಸಿನಿಮಾದ ಶೀರ್ಷಿಕೆ ಸಹ ರಿವೀಲ್ ಮಾಡಲಿದ್ದಾರೆ ನಿರ್ದೇಶಕರು. ಕೇವಲ ಪ್ಯಾನ್ ಇಂಡಿಯಾ ಮಾತ್ರವಲ್ಲದೆ, ಗ್ಲೋಬಲ್ ಲೆವೆಲ್‌ಗೆ ಈ ಸಿನಿಮಾ ನಿರ್ಮಿಸಲು ಆರ್.ಚಂದ್ರು ಯೋಜನೆ ಹಾಕಿದ್ದಾರೆ. ಇನ್ನುಳಿದಂತೆ ಸಿನಿಮಾದಲ್ಲಿ ಯಾರೆಲ್ಲ ಇರಲಿದ್ದಾರೆ, ತಂತ್ರಜ್ಞರ ಬಗ್ಗೆಯೂ ಮುಂದಿನ ದಿನಗಳಲ್ಲಿ ಮಾಹಿತಿ ನೀಡಲಿದ್ದಾರೆ ನಿರ್ದೇಶಕರು.
ರಾಜಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್ ಈ ವರೆಗೂ 25ಕ್ಕೂ ಹೆಚ್ಚು ಚಿತ್ರಗಳಿಗೆ ಕಥೆ ಬರೆದಿದ್ದು, ಎಲ್ಲಾ ಚಿತ್ರಗಳು ಕೂಡ ಕಮರ್ಷಿಯಲ್ ಸಕ್ಸಸ್ ಕಂಡಿವೆ. ಆಂಧ್ರದ ಪ್ರತಿಷ್ಠಿತ ನಂದಿ ಮತ್ತು ಫಿಲಂ ಫೇರ್ ಪ್ರಶಸ್ತಿಗೂ ಇವರು ಭಾಜನರಾಗಿದ್ದಾರೆ. ಈಗಳು ಹಲವು ಸಿನಿಮಾಗಳಿಗೆ ಕಥೆ ಬರೆಯುತ್ತಿದ್ದಾರೆ. ಇದೀಗ ಇದೇ ಖ್ಯಾತ ಬರಹಗಾರ ಕನ್ನಡದ ನಟ ಮತ್ತು ನಿರ್ದೇಶಕರ ಜತೆ ಕೈ ಜೋಡಿಸಿದ್ದಾರೆ.
ಮನರಂಜನೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ