Darshan in Bellary Jail: ಪತಿ ನೋಡಲು ಬಳ್ಳಾರಿ ಜೈಲಿಗೆ ಬಂದ ವಿಜಯಲಕ್ಷ್ಮಿ; ದರ್ಶನ್ ಪತ್ನಿ, ಸಹೋದರಿ ಏನೇನು ತಂದು ಕೊಟ್ಟರು
Darshan News ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ನೋಡಲು ಪತ್ನಿ ವಿಜಯಲಕ್ಷ್ಮಿ, ಸಹೋದರಿ ದಿವ್ಯ ಆಗಮಿಸಿದ್ದರು.ವರದಿ: ಎಚ್.ಮಾರುತಿ.ಬೆಂಗಳೂರು
ಬೆಂಗಳೂರು: ಮೂರು ದಿನದ ಹಿಂದೆಯೇ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಗೊಂಡಿರುವ ನಟ ದರ್ಶನ್ ಅವರ ಭೇಟಿಗೆ ಹಲವರು ಆಗಮಿಸಿದರೂ ಯಾರಿಗೂ ಅವಕಾಶ ದೊರೆತಿಲ್ಲ. ಆದರೆ ಶನಿವಾರ ದರ್ಶನ್ ಭೇಟಿಗೆ ಅವರ ಪತ್ನಿ ವಿಜಯಲಕ್ಷ್ಮಿ, ಸಹೋದರಿ ದಿವ್ಯಾ ಮತ್ತು ಅವರ ಪತಿ ಆಗಮಿಸಿದ್ದರು. ದರ್ಶನ್ ಗೆ ಅವರು ತಂದಿದ್ದ ಬಟ್ಟೆ, ಸಾಬೂನು, ಶಾಂಪೂ ಮತ್ತು ಒಣ ಹಣ್ಣುಗಳನ್ನು ನೀಡಲು ಮಾತ್ರ ಅನುಮತಿ ನೀಡಲಾಗಿದ್ದು, ಬೇರೆ ಯಾವುದೇ ವಸ್ತುಗಳನ್ನು ನೀಡಲು ಅನುಮತಿ ನೀಡಿಲ್ಲ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಬಳ್ಳಾರಿ ಜೈಲಿಗೆ ಭಾರಿ ಬಿಗಿ ಭದ್ರತೆ ಒದಗಿಸಲಾಗಿದೆ. ಇತರೆ ಖೈದಿಗಳನ್ನು ನೋಡಲು ಬರುವ ಬಂಧು ಬಳಗದವರನ್ನೂ ತಪಾಸಣೆ ನಡೆಸಿಯೇ ಒಳಗೆ ಬಿಡಲಾಗುತ್ತದೆ. ಅವರು ತಂದಿದ್ದ ಆಹಾರ ಪದಾರ್ಥಗಳನ್ನು ತಮ್ಮವರಿಗೆ ನೀಡಲು ಜೈಲಿನ ಅಧಿಕಾರಿಗಳು ಒಪ್ಪುತ್ತಿಲ್ಲ ಎಂದು ಸಾರ್ವಜನಿಕರು ಅಲವತ್ತುಕೊಂಡಿದ್ದಾರೆ. ಸಧ್ಯಕ್ಕೆ ಈ ಜೈಲಿನಲ್ಲಿ ಸಿಸಿಟಿವಿ ವ್ಯವಸ್ಥೆ ಮಾತ್ರ ಇದ್ದು, ಮೊಬೈಲ್ ಜಾಮರ್ ವ್ಯವಸ್ಥೆ ಇಲ್ಲ. ಶೀಘ್ರದಲ್ಲೇ ಈ ವ್ಯವಸ್ಥೆಯನ್ನೂ ಮಾಡುವುದಾಗಿ ಅಧೀಕ್ಷಕರು ಹೇಳಿದ್ದಾರೆ.
ಬಳ್ಳಾರಿಯಲ್ಲೂ ಅಭಿಮಾನಿಗಳಗೆ ಕೊರತೆಯೇನಿಲ್ಲ. ಇಲ್ಲಿನ ಪ್ರಖ್ಯಾತ ಕನಕದುರ್ಗ ದೇವಾಲಯದಲ್ಲಿ 501 ತೆಂಗಿನ ಕಾಯಿ ಒಡೆದು ದರ್ಶನ್ ಬಿಡುಗಡೆಗೆ ಪ್ರಾರ್ಥಿಸಿದ್ದಾರೆ.
ಬಳ್ಳಾರಿ ಜೈಲಿನಲ್ಲಿ ನಟ ದರ್ಶನ್ ಯಾವುದೇ ಸೌಲಭ್ಯಗಳಿಲ್ಲದೆ ಬೇಸರದಿಂದಲೇ ಎರಡು ದಿನಗಳನ್ನು ಕಳೆದಿದ್ದಾರೆ ಎಂದು ತಿಳಿದು ಬಂದಿದೆ. ಇಲ್ಲಿ ದರ್ಶನ್ 10*6 ಅಡಿ
ಕೊಠಡಿಯಲ್ಲಿ ಕಾಲ ಕಳೆಯುತ್ತಿದ್ದಾರೆ. ಅವರಿಗೆ ಯಾವುದೇ ಸವಲತ್ತುಗಳನ್ನು ನೀಡುತ್ತಿಲ್ಲ. ಜೈಲಿನ ನಿಯಮಾವಳಿಗಳ ಪ್ರಕಾರವೇ ಅವರನ್ನು ನಡೆಸಿಕೊಳ್ಳಲಾಗುತ್ತಿದೆ.
ಶನಿವಾರ ಅವರಿಗೆ ಬೆಳಗ್ಗೆ ಉಪ್ಪಿಟ್ಟು, ಮಧ್ಯಾಹ್ನ ಅನ್ನ ಸಾರು ಮತ್ತು ಮಜ್ಜಿಗೆ, ಹಾಗೂ ರಾತ್ರಿ ಮಾಂಸಾಹಾರ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಸರ್ಜಿಕಲ್ ಚೇರ್ ಗೆ ಬೇಡಿಕೆ ಇಟ್ಟ ದರ್ಶನ್:
ತಮಗೆ ಬೆನ್ನು ನೋವು ಇರುವ ಕಾರಣ ಸರ್ಜಿಕಲ್ ಚೇರ್ ಒದಗಿಸಬೇಕೆಂದು ದರ್ಶನ್ ಬೇಡಿಕೆ ಇಟ್ಟಿದ್ದಾರೆ. ಈ ಜೈಲಿನಲ್ಲಿ ಇಂಡಿಯನ್ ಪದ್ದತಿಯ ಶೌಚಾಲಯವಿದ್ದು, ತಮಗೆ
ಕಷ್ಟವಾಗುತ್ತಿದೆ. ಆದ್ದರಿಂದ ತಮಗೆ ವೆಸ್ಟರ್ನ್ ಕಮೋಡ್ ಅಥವಾ ಸರ್ಜಿಕಲ್ ಚೇರ್ ಒದಗಿಸಿ ಎಂದು ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಪರಿಶೀಲಿಸಿ ನಿರ್ಧಾರ ಕೈಗೊಳ್ಳುವುದಾಗಿ ಜೈಲಿನ ಅಧೀಕ್ಷಕರು ತಿಳಿಸಿದ್ದಾರೆ.
ಪವಿತ್ರಾ ಜಾಮೀನು ಅರ್ಜಿ ವಜಾ
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ-1 ಆರೋಪಿ, ನಟ ದರ್ಶನ್ ಆಪ್ತ ಸ್ನೇಹಿತೆ ಪವಿತ್ರಾಗೌಡ ಮತ್ತು ಅನುಕುಮಾರ್ ಅವರ ಜಾಮೀನು ಅರ್ಜಿಯನ್ನು 57ನೇ ಸಿಸಿಎಚ್ ನ್ಯಾಯಾಲಯ ಶನಿವಾರ ವಜಾಗೊಳಿಸಿದೆ. ಪ್ರಕರಣದ ಮೊದಲ ಆರೋಪಿ ಪವಿತ್ರಾಗೌಡ ಜಾಮೀನು ಅರ್ಜಿ ಸಲ್ಲಿಸಿದ್ದ ಬೆನ್ನಲ್ಲೇ ಇತರ ಆರೋಪಿಗಳಾದ ಅನು ಕುಮಾರ್, ವಿನಯ್ ಮತ್ತು ಕೇಶವಮೂರ್ತಿ ಅವರೂ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಪವಿತ್ರಾ ಗೌಡ ಮತ್ತು ಅನು ಕುಮಾರ್ ಅವರ ಜಾಮೀನು ಅರ್ಜಿಯ ಆದೇಶವನ್ನು ಆಗಸ್ಟ್ 31ಕ್ಕೆ ಕಾಯ್ದಿರಿಸಿತ್ತು. ವಿನಯ್ ಮತ್ತು ಕೇಶವಮೂರ್ತಿ ಜಾಮೀನು ಆದೇಶವನ್ನು ಸೆಪ್ಟಂಬರ್2 ಕ್ಕೆ ಕಾಯ್ದಿರಿಸಲಾಗಿದೆ.
(ವರದಿ: ಎಚ್.ಮಾರುತಿ, ಬೆಂಗಳೂರು)