ಅಯೋಗ್ಯ 2: ಮತ್ತೆ ಜೊತೆಯಾದ ‘ಅಯೋಗ್ಯ’ ತಂಡ; ನೀನಾಸಂ ಸತೀಶ್‌, ರಚಿತಾ ರಾಮ್‌ ಸಿನಿಮಾ ಆಗಸ್ಟ್‌ 15ರಂದು ಬಿಡುಗಡೆ
ಕನ್ನಡ ಸುದ್ದಿ  /  ಮನರಂಜನೆ  /  ಅಯೋಗ್ಯ 2: ಮತ್ತೆ ಜೊತೆಯಾದ ‘ಅಯೋಗ್ಯ’ ತಂಡ; ನೀನಾಸಂ ಸತೀಶ್‌, ರಚಿತಾ ರಾಮ್‌ ಸಿನಿಮಾ ಆಗಸ್ಟ್‌ 15ರಂದು ಬಿಡುಗಡೆ

ಅಯೋಗ್ಯ 2: ಮತ್ತೆ ಜೊತೆಯಾದ ‘ಅಯೋಗ್ಯ’ ತಂಡ; ನೀನಾಸಂ ಸತೀಶ್‌, ರಚಿತಾ ರಾಮ್‌ ಸಿನಿಮಾ ಆಗಸ್ಟ್‌ 15ರಂದು ಬಿಡುಗಡೆ

Ayogya 2 Movie: ಸತೀಶ್‍ ನೀನಾಸಂ, ರಚಿತಾ ರಾಮ್, ರವಿಶಂಕರ್‍ ತಾರಾಗಣದ ಸೂಪರ್‌ಹಿಟ್‌ ಕನ್ನಡ ಸಿನಿಮಾ ಅಯೋಗ್ಯದ ಮುಂದುವರೆದ ಭಾಗ ಘೋಷಣೆಯಾಗಿದೆ. ಅಯೋಗ್ಯ 2 ಸಿನಿಮಾ 2025ರ ಆಗಸ್ಟ್ 15ರಂದು ಚಿತ್ರ ಬಿಡುಗಡೆಯಾಗಲಿದೆಯಂತೆ. ಈ ಕುರಿತು ಹೆಚ್ಚಿನ ವಿವರ ಇಲ್ಲಿದೆ.

ಅಯೋಗ್ಯ 2: ಮತ್ತೆ ಜೊತೆಯಾದ ‘ಅಯೋಗ್ಯ’ ತಂಡ; ನೀನಾಸಂ ಸತೀಶ್‌, ರಚಿತಾ ರಾಮ್‌ ಸಿನಿಮಾ
ಅಯೋಗ್ಯ 2: ಮತ್ತೆ ಜೊತೆಯಾದ ‘ಅಯೋಗ್ಯ’ ತಂಡ; ನೀನಾಸಂ ಸತೀಶ್‌, ರಚಿತಾ ರಾಮ್‌ ಸಿನಿಮಾ

ಬೆಂಗಳೂರು: ‘ಅಯೋಗ್ಯ’ ಚಿತ್ರದ ಯಶಸ್ಸಿನ ನಂತರ, ಅದರ ಮುಂದುವರೆದ ಭಾಗ ಬರುತ್ತದೆ ಎಂಬ ಸುದ್ದಿ ಇದ್ದೇ ಇತ್ತು. ಈಗ ಅದು ಕೊನೆಗೂ ನಿಜವಾಗಿದೆ. ‘ಆಯೋಗ್ಯ’ ಚಿತ್ರದ ಮುಂದುವರದ ಭಾಗಕ್ಕೆ ಸದ್ಯದಲ್ಲೇ ಚಾಲನೆ ಸಿಕ್ಕಿದ್ದು, ಇಂದು ಅಧಿಕೃತ ಘೋಷಣೆ ಸಹ ಆಗಿದೆ.

2018ರಲ್ಲಿ ‘ಅಯೋಗ್ಯ’ ಚಿತ್ರ ಬಿಡುಗಡೆಯಾಗಿತ್ತು. ಸತೀಶ್‍ ನೀನಾಸಂ, ರಚಿತಾ ರಾಮ್, ರವಿಶಂಕರ್‍, ಶಿವರಾಜ್‍ ಕೆ.ಆರ್. ಪೇಟೆ, ಸುಂದರ್‍ ರಾಜ್‍ ಮುಂತಾದವರು ನಟಿಸಿದ್ದ ಈ ಚಿತ್ರಕ್ಕೆ ಮಹೇಶ್‍ ಕುಮಾರ್‍ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದರು. ಚಿತ್ರ ಹಿಟ್‍ ಆಗಿದ್ದಷ್ಟೇ ಅಲ್ಲ, 40 ಕೇಂದ್ರಗಳಲ್ಲಿ 100 ದಿನ ಪ್ರದರ್ಶನ ಕಂಡಿತ್ತು.

ಈಗ ಸಿದ್ದೇಗೌಡ ಅಲಿಯಾಸ್‍ ಅಯೋಗ್ಯನ ಕಥೆ ಮುಂದುವರೆಯಲಿದೆ. ಸಿದ್ದೇಗೌಡ ಗ್ರಾಮಪಂಚಾಯ್ತಿ ಸದಸ್ಯನಾಗುವುದರ ಜೊತೆಗೆ ನಂದಿನಿಯನ್ನು ಮದುವೆಯಾಗುವಲ್ಲಿಗೆ ಚಿತ್ರ ಮುಗಿದಿತ್ತು. ಗ್ರಾಮ ಪಂಚಾಯ್ತಿ ಸದಸ್ಯನಾದ ಮೇಲೆ ಆತ ಏನೆಲ್ಲಾ ಸವಾಲುಗಳನ್ನು ಎದುರಿಸುತ್ತಾನೆ, ತಾನು ಕಂಡ ಕನಸು ನನಸಾಗುತ್ತದಾ ಎಂಬುದನ್ನು ಈ ಚಿತ್ರದ ಮೂಲಕ ಹೇಳಲಾಗುತ್ತದಂತೆ.

‘ಅಯೋಗ್ಯ’ ಚಿತ್ರದ ಬಹುತೇಕ ತಂಡ ಇಲ್ಲೂ ಮುಂದುವರೆಯಲಿದೆ ’ಏನಮ್ಮಿ ಏನಮ್ಮಿ’ ಎಂಬ ಸೂಪರ್‍ ಹಿಟ್ ಹಾಡನ್ನು ನೀಡಿದ್ದ ಅರ್ಜುನ್‍ ಜನ್ಯ ಈ ಚಿತ್ರಕ್ಕೂ ಸಂಗೀತ ಸಂಯೋಜಿಸುತ್ತಿದ್ದಾರೆ. ‘ಶಾಖಾಹಾರಿ’ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದ ವಿಶ್ವಜಿತ್ ರಾವ್, ಈ ಚಿತ್ರಕ್ಕೂ ಛಾಯಾಗ್ರಹಣ ಮಾಡುತ್ತಿದ್ದಾರೆ. ‘ಭುವನಂ ಗಗನಂ’ ಚಿತ್ರವನ್ನು ನಿರ್ಮಿಸುತ್ತಿರುವ ಎಂ. ಮುನೇಗೌಡ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಟೀಸರ್ ಮೂಲಕ ‘ಅಯೋಗ್ಯ 2’ ಚಿತ್ರದ ಅಧಿಕೃತ ಘೋಷಣೆಯಾಗಿದೆ. ಡಿಸೆಂಬರ್‍ 11ರಂದು ಚಿತ್ರದ ಮುಹೂರ್ತ ನಡೆಯಲಿದ್ದು, ಅಂದಿನಿಂದಲೇ ಚಿತ್ರೀಕರಣ ಪ್ರಾರಂಭವಾಗಲಿದೆ. ಮಂಡ್ಯ, ಮದ್ದೂರು ಮುಂತಾದ ಕಡೆ ಎರಡು ಹಂತಗಳಲ್ಲಿ ಚಿತ್ರೀಕರಣ ನಡೆಯಲಿದ್ದು, 2025ರ ಆಗಸ್ಟ್ 15ರಂದು ಚಿತ್ರ ಬಿಡುಗಡೆಯಾಗಲಿದೆಯಂತೆ. ‘ಅಯೋಗ್ಯ’ ಚಿತ್ರವು 2018 ಆಗಸ್ಟ್ 17ರಂದು ಬಿಡುಗಡೆಯಾಗಿತ್ತು. ಅದಾಗಿ ಏಳು ವರ್ಷಗಳ ನಂತರ ‘ಅಯೋಗ್ಯ 2’ ಚಿತ್ರ ಬಿಡುಗಡೆಯಾಗುತ್ತಿದೆ.

ವಿಶೇಷವೆಂದರೆ, ‘ಅಯೋಗ್ಯ’ ಚಿತ್ರವು ಕನ್ನಡದಲ್ಲಿ ಮೊದಲು ಬಿಡುಗಡೆಯಾಗಿ ಬೇರೆ ಭಾಷೆಗಳಿಗೆ ಡಬ್‍ ಆಗಿತ್ತು. ಆದರೆ, ‘ಅಯೋಗ್ಯ 2’ ಚಿತ್ರವು ಕನ್ನಡದಲ್ಲಿ ನಿರ್ಮಾಣವಾಗಿ ತೆಲುಗು, ತಮಿಳಿಗೆ ಡಬ್‍ ಆಗಿ ಮೂರು ಭಾಷೆಗಳಲ್ಲೂ ಒಟ್ಟಿಗೆ ಬಿಡುಗಡೆಯಾಗಲಿದೆಯಂತೆ. ಚಿತ್ರಕ್ಕೆ ಸುರೇಶ್‍ ಆರ್ಮುಗಂ ಸಂಕಲನ, ಮಾಸ್ತಿ ಉಪ್ಪಾರಳಿ ಸಂಭಾಷಣೆ ಮತ್ತು ‘ಭರ್ಜರಿ’ ಚೇತನ್‍ ಗುಮಾರ್‍ ಸಾಹಿತ್ಯವಿದೆ.

ವರದಿ: ಚೇತನ್‌ ನಾಡಿಗೇರ್‌

Whats_app_banner