ಥಿಯೇಟರ್ ಫ್ಲಾಪ್, ಒಟಿಟಿ ರಿಜೆಕ್ಟ್; ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸ್ತಿದೆ ಅರ್ಜುನ್ ಕಪೂರ್, ಭೂಮಿ ಪೆಡ್ನೇಕರ್ ದಿ ಲೇಡಿ ಕಿಲ್ಲರ್ ಸಿನಿಮಾ
The Lady Killer: ಅರ್ಜುನ್ ಕಪೂರ್ , ಭೂಮಿ ಪೆಡ್ನೇಕರ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ದಿ ಲೇಡಿ ಕಿಲ್ಲರ್ ಸಿನಿಮಾ ಚಿತ್ರಮಂದಿರಗಳಲ್ಲಿ ಫ್ಲಾಪ್ ಆದ ನಂತರ ಒಟಿಟಿಯಲ್ಲೂ ರಿಜೆಕ್ಟ್ ಆಗಿತ್ತು. ಇದೀಗ ಈ ಸಿನಿಮಾ ಯೂಟ್ಯೂಬ್‌ನಲ್ಲಿ ಲಭ್ಯವಿದ್ದು ಒಂದು ತಿಂಗಳಲ್ಲಿ 2.4 ಮಿಲಿಯನ್ ವೀಕ್ಷಣೆ ಗಳಿಸಿದೆ. ಅರ್ಜುನ್ ಕಪೂರ್ ನಟನೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
The Lady Killer: ಥಿಯೇಟರ್‌ನಲ್ಲಿ ರಿಲೀಸ್ ಆಗಿ ಸೋಲುಂಡ ಎಷ್ಟೋ ಸಿನಿಮಾಗಳು ಒಟಿಟಿಯಲ್ಲಿ ಸಕ್ಸಸ್ ಕಂಡಿವೆ. ಹಾಗೇ ಒಟಿಟಿಯಲ್ಲಿ ರಿಜೆಕ್ಟ್ ಆಗಿ ಯೂಟ್ಯೂಬ್‌ನಲ್ಲಿ ಯಶಸ್ಸು ಕಂಡ ಸಿನಿಮಾಗಳು ಕೂಡಾ ಇವೆ. ಅವುಗಳಲ್ಲಿ ಅರ್ಜುನ್ ಕಪೂರ್, ಭೂಮಿ ಪೆಡ್ನೇಕರ್ ಅಭಿನಯದ 'ದಿ ಲೇಡಿ ಕಿಲ್ಲರ್' ಸಿನಿಮಾ ಕೂಡಾ ಒಂದು.
45 ಕೋಟಿ ರೂ. ಬಜೆಟ್‌ನಲ್ಲಿ ತಯಾರಾದ ಸಿನಿಮಾ
'ದಿ ಲೇಡಿ ಕಿಲ್ಲರ್' ಸಿನಿಮಾವನ್ನು 45 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಿಸಲಾಯ್ತು. ಆದರೆ ಇದು ಭಾರತೀಯ ಚಿತ್ರರಂಗದ ಅತಿದೊಡ್ಡ ಫ್ಲಾಪ್ ಸಿನಿಮಾ ಎಂಬ ಹಣೆಪಟ್ಟಿ ಹೊತ್ತಿಕೊಂಡಿದೆ. ಏಕೆಂದರೆ ಅಷ್ಟು ಖರ್ಚು ಮಾಡಿ ತಯಾರಾದ ಸಿನಿಮಾ ಕೊನೆಗೆ ಬಾಕ್ಸ್ ಆಫೀಸ್‌ನಲ್ಲಿ 60 ರಕ್ಷ ರೂ. ಗಳಿಸಿದ್ದೇ ದೊಡ್ಡ ವಿಚಾರ. ಸಿನಿಮಾ 2023 ನವೆಂಬರ್‌ನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆದಾಗ ದೇಶಾದ್ಯಂತ 293 ಟಿಕೆಟ್‌ಗಳು ಮಾರಾಟವಾದವು. ಅಷ್ಟೇ ಅಲ್ಲ ಥಿಯೇಟರ್‌ನಲ್ಲಿ ಬಿಡುಗಡೆ ಆಗಿ ಬಾಕ್ಸ್ ಆಫೀಸಿನಲ್ಲಿ ಸೋಲು ಕಂಡ ನಂತರ ಒಟಿಟಿ ಪ್ಲಾಟ್‌ಫಾರ್ಮ್‌ಗಳಿಂದಲೂ ರಿಜೆಕ್ಟ್ ಆಯ್ತು. ಸಿನಿಮಾ ರಿಲೀಸ್‌ಗೂ ಮುನ್ನ ಈ ಚಿತ್ರವನ್ನು ನೆಟ್‌ಫ್ಲಿಕ್ಸ್ ಖರೀದಿಸಿದೆ ಎಂದು ಹೇಳಲಾದರೂ ನಂತರ ಸಿನಿಮಾ ಫ್ಲಾಪ್ ಆದ ನಂತರ ನೆಟ್‌ಫ್ಲಿಕ್ಸ್ ಸಿನಿಮಾ ಖರೀದಿಸುವಿಕೆಯಿಂದ ಹಿಂದೆ ಸರಿಯಿತು.
ಅರ್ಜುನ್ ಕಪೂರ್, ಭೂಮಿ ಪೆಡ್ನೇಕರ್ ಸಿನಿಮಾ ಖರೀದಿಸಲು ಸಣ್ಣ ಪುಟ್ಟ ಒಟಿಟಿ ವೇದಿಕೆಗಳು ಕೂಡಾ ಸಿನಿಮಾ ಖರೀದಿಸಲು ಹಿಂದೇಟು ಹಾಕಿದವು. ಆದರೆ ಅಂತಿಮವಾಗಿ ಈ ಚಿತ್ರವನ್ನು ಇದೇ ಸೆಪ್ಟೆಂಬರ್‌ನಲ್ಲಿ ಯೂಟ್ಯೂಬ್‌ನಲ್ಲಿ ಉಚಿತವಾಗಿ ಬಿಡುಗಡೆ ಮಾಡಲಾಯ್ತು. ಯೂಟ್ಯೂಬ್‌ನಲ್ಲಿ ರಿಲೀಸ್ ಆದ ನಂತರ ಈ ಸಿನಿಮಾ ಮ್ಯಾಜಿಕ್ ಮಾಡಿದೆ. ಸಿನಿಮಾ ಸುಮಾರು ಒಂದು ತಿಂಗಳಲ್ಲಿ 2.4 ಮಿಲಿಯನ್ ವೀಕ್ಷಣೆ ಗಳಿಸಿದೆ. ಸಿನಿಪ್ರಿಯರು ಈ ಚಿತ್ರವನ್ನು ಬಹಳ ಮೆಚ್ಚಿದ್ದಾರೆ. ಇಷ್ಟು ಒಳ್ಳೆ ಸಿನಿಮಾ ಏಕೆ ಸೋಲುಂಡಿತು? ಯಾವ ಒಟಿಟಿ ವೇದಿಕೆಯಲ್ಲೂ ಸಿನಿಮಾವನ್ನು ಏಕೆ ಖರೀದಿಸಲಿಲ್ಲ? ಎಂದು ಜನರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ಅರ್ಜುನ್ ಕಪೂರ್ ಹಾಗೂ ಭೂಮಿ ಪೆಡ್ನೇಕರ್ ನಟನೆಯನ್ನು ಹೊಗಳಿದ್ದಾರೆ.
ಅರ್ಜುನ್ ಕಪೂರ್-ಭೂಮಿ ಪೆಡ್ನೇಕರ್ ನಟನೆಗೆ ಮೆಚ್ಚುಗೆ
ಅರ್ಜುನ್ ಕಪೂರ್ ಉತ್ತಮ ನಟನಾದರೂ ಅವರ ಬಹುತೇಕ ಸಿನಿಮಾಗಳು ಫ್ಲಾಪ್ ಆಗಿವೆ. ಆದರೆ ಈ ಸಿನಿಮಾ ಹಿಟ್ ಆಗುವ ಎಲ್ಲಾ ಅಂಶಗಳೂ ಇವೆ. ಎಲ್ಲರೂ ಸಿನಿಮಾ ನೋಡಿ. ಅರ್ಜುನ್ ಕಪೂರ್ ಹಾಗೂ ಭೂಮಿ ಉತ್ತಮವಾಗಿ ನಟಿಸಿದ್ದಾರೆ. ಸಿನಿಮಾ ಕಥೆ ಕೂಡಾ ಚೆನ್ನಾಗಿದೆ ಎಂದು ಒಬ್ಬರು ಕಾಮೆಂಟ್ ಮಾಡಿದರೆ. ಈ ಸಿನಿಮಾ ನನಗೆ ಮಾತ್ರ ಇಷ್ಟವಾಯ್ತಾ? ಬೇರೆ ಯಾರಿಗೂ ಇಷ್ಟವಾಗಲಿಲ್ಲವೇ? ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ. ನೆಗೆಟಿವ್ ಕಾಮೆಂಟ್ ಮಾಡಿರುವ ಜನರ ವಿರುದ್ಧ ಇತರರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ದಯವಿಟ್ಟು ಸಿನಿಮಾ ನೋಡಿ ನಂತರ ಪ್ರತಿಕ್ರಿಯಿಸಿ ಎನ್ನುತ್ತಿದ್ದಾರೆ.
ದಿ ಲೇಡಿ ಕಿಲ್ಲರ್ ಸಿನಿಮಾವನ್ನು ಕರ್ಮ ಮೀಡಿಯಾ ಎಂಟರ್‌ಟೈನ್ಮೆಂಟ್, ಪೋಲರಾಯ್ಡ್ ಮೀಡಿಯಾ, ಸಾಹಿಲ್ ಮಿರ್ಚಾಂದಿನಿ ಜೊತೆ ಸೇರಿ ನಿರ್ಮಿಸಿದ್ದು ಅಜರ್ ಬೆಹ್ಲ್ ನಿರ್ದೇಶನ ಮಾಡಿದ್ದಾರೆ. ಕೇತನ್ ಸೋಧಾ ಸಂಗೀತ ನೀಡಿದ್ದಾರೆ. ಅರ್ಜುನ್ ಕಪೂರ್, ಭೂಮಿ ಪೆಡ್ನೇಕರ್, ಪ್ರಿಯಾಂಕಾ ಬೋಸ್, ಎಸ್‌ಎಮ್ ಜಹೀರ್ ಹಾಗೂ ಇನ್ನಿತರರು ಸಿನಿಮಾದಲ್ಲಿ ನಟಿಸಿದ್ದಾರೆ.
ವಿಭಾಗ