Raghu Thatha OTT: ಹೊಂಬಾಳೆ ಫಿಲಂಸ್‌ನ ತಮಿಳು ಸಿನಿಮಾ ಇದೀಗ ಕನ್ನಡದಲ್ಲಿ; ಯಾವಾಗ, ಯಾವ ಒಟಿಟಿಯಲ್ಲಿ ಬರ್ತಿದೆ ರಘುತಾತ
Raghu Thatha OTT Release Date: ರಘುತಾತ ತಮಿಳು ಚಿತ್ರವು ಕನ್ನಡದಲ್ಲಿಯೂ ಒಟಿಟಿಗೆ ಬರುತ್ತಿದೆ. ಕೀರ್ತಿ ಸುರೇಶ್ ಅಭಿನಯದ ಕಾಮಿಡಿ ಚಿತ್ರದ ಒಟಿಟಿ ಸ್ಟ್ರೀಮಿಂಗ್ ದಿನಾಂಕ ಅಂತಿಮವಾಗಿದೆ. ಚಿತ್ರವು ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ತಿಂಗಳೊಳಗೆ ಒಟಿಟಿ ವೇದಿಕೆಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.
ಸಾಕಷ್ಟು ಕುತೂಹಲ ಮೂಡಿಸಿರುವ ರಘುತಾತ ಚಿತ್ರದಲ್ಲಿ ಸ್ಟಾರ್ ನಟಿ ಕೀರ್ತಿ ಸುರೇಶ್ ನಾಯಕಿಯಾಗಿ ನಟಿಸಿದ್ದಾರೆ. ಕ್ರೈಮ್ ಕಾಮಿಡಿ ಚಿತ್ರದ ಟ್ರೈಲರ್ ಆಕರ್ಷಕವಾಗಿ ಮೂಡಿ ಬಂದಿದೆ. ಈಗಾಗಲೇ ಪ್ರಚಾರ ಕಾರ್ಯವನ್ನು ಕೂಡಾ ಚಿತ್ರತಂಡ ಚೆನ್ನಾಗಿ ಮಾಡಿದೆ. ತಮಿಳಿನಲ್ಲಿ ಆಗಸ್ಟ್ 15ರಂದು ವಿವಿಧ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರುವ ಚಿತ್ರವು, ಮಿಶ್ರ ಪ್ರತಿಕ್ರಿಯೆಯಿಂದಾಗಿ ನಿರೀಕ್ಷಿತ ಮಟ್ಟದ ಕಲೆಕ್ಷನ್ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಬೇಗನೆ ಒಟಿಟಿ ವೇದಿಕೆಗೆ ಲಗ್ಗೆ ಇಡಲು ಸಜ್ಜಾಗಿದೆ. ಇಂದು (ಸೆಪ್ಟೆಂಬರ್ 9 ಸೋಮವಾರ) ಒಟಿಟಿ ಸ್ಟ್ರೀಮಿಂಗ್ ದಿನಾಂಕ ಅಂತಿಮವಾಗಿದೆ.
ಸದ್ಯ ರಘುತಾತ ಚಿತ್ರ ಒಟಿಟಿಗೆ ಯಾವಾಗ ಬರುತ್ತದೆ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ಅಭಿಮಾನಿಗಳ ನಿರೀಕ್ಷೆಯಂತೆಯೇ ರಘುತಾತ ಚಿತ್ರದ ಒಟಿಟಿ ಸ್ಟ್ರೀಮಿಂಗ್ ವೇದಿಕೆ ಅಂತಿಮಗೊಂಡಿದೆ. ತಮಿಳಿನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರವು ಇದೀಗ ಮೂರು ಭಾಷೆಗಳಲ್ಲಿ ಒಟಿಟಿಗೆ ಲಗ್ಗೆ ಇಡುತ್ತಿದೆ.
ರಘುತಾತ ಚಿತ್ರವು ಸೆಪ್ಟೆಂಬರ್ 13ರಂದು ಜೀ5 ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಮೊದಲ ಬಾರಿಗೆ ಸ್ಟ್ರೀಮ್ ಆಗಲಿದೆ. ಈ ಕುರಿತು ಜೀ5 ಒಟಿಟಿ ಸೆಪ್ಟೆಂಬರ್ 9ರಂದು ಅಧಿಕೃತವಾಗಿ ತಿಳಿಸಿದೆ.
ಕನ್ನಡದಲ್ಲೂ ಸ್ಟ್ರೀಮಿಂಗ್
ರಘುತಾತ ಚಿತ್ರವು ಜೀ5 ಒಟಿಟಿಯಲ್ಲಿ ತಮಿಳು ಮಾತ್ರವಲ್ಲದೆ ಕನ್ನಡ ಮತ್ತು ತೆಲುಗು ಭಾಷೆಯಲ್ಲಿಯೂ ಸ್ಟ್ರೀಮ್ ಆಗಲಿದೆ. ಚಿತ್ರಮಂದಿರಗಳಲ್ಲಿ ಚಿತ್ರ ನಿರೀಕ್ಷಿತ ಯಶಸ್ಸು ಕಾಣದಿದ್ದರೂ, ಒಟಿಟಿಯಲ್ಲಿ ಉತ್ತಮ ವೀಕ್ಷಣೆ ಪಡೆಯುವ ನಿರೀಕ್ಷೆಯಲ್ಲಿದೆ.
ಚಿತ್ರ ನಿರ್ಮಾಪಕರು ಈ ಮೊದಲು ಚಿತ್ರವನ್ನು ಸೆಪ್ಟೆಂಬರ್ 20ರಂದು ಬಿಡುಗಡೆ ಮಾಡಲು ಯೋಜಿಸಿದ್ದರು. ಆದಾಗ್ಯೂ, ಜೀ5 ಒಟಿಟಿ ಸೆಪ್ಟೆಂಬರ್ 13ರಂದು ಚಲನಚಿತ್ರವನ್ನು ಅಭಿಮಾನಿಗಳ ಮುಂದೆ ಇಡುತ್ತಿದೆ. ಅಂದರೆ, ಯೋಜಿತ ದಿನಕ್ಕಿಂತಲೂ ಒಂದು ವಾರ ಮುಂಚಿತವಾಗಿ ಅಭಿಮಾನಿಗಳು ಕ್ರೈಮ್ ಕಾಮಿಡಿ ಚಿತ್ರ ಎಂಜಾಯ್ ಮಾಡಬಹುದು.
ರಘುತಾತ ಚಿತ್ರವು ಮುಖ್ಯವಾಗಿ 1960ರ ದಶಕದ ಹಿನ್ನೆಲೆಯುಳ್ಳ ಹಿಂದಿ ವಿರೋಧಿ ಚಳವಳಿಯ ರಾಜಕೀಯ ವಿಷಯವನ್ನು ಆಧರಿಸಿದ ಹಾಸ್ಯ ಚಿತ್ರವಾಗಿದೆ. ಇದರಲ್ಲಿ ಲವ್ ಸ್ಟೋರಿಯೂ ಇದೆ. ಈ ಚಿತ್ರವನ್ನು ಸುಮನ್ ಕುಮಾರ್ ನಿರ್ದೇಶಿಸಿದ್ದಾರೆ. ನಟಿ ಕೀರ್ತಿ ಸುರೇಶ್ ಜೊತೆಗೆ ಎಂಎಸ್ ಭಾಸ್ಕರ, ದೇವದರ್ಶಿನಿ, ರವೀಂದ್ರ ವಿಜಯ್, ಆನಂದ್ ಸಾಮಿ ಮತ್ತು ರಾಜೀವ್ ರವೀಂದ್ರನಾಥನ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.
ಹೊಂಬಾಳೆ ಫಿಲಂಸ್ ಮೊದಲ ತಮಿಳು ಚಿತ್ರ
ಕೆಜಿಎಫ್, ಕಾಂತಾರದಂಥಾ ಬ್ಲಾಕ್‌ಬಸ್ಟರ್ ಚಿತ್ರಗಳನ್ನು ನಿರ್ಮಿಸಿದ ಹೊಂಬಾಳೆ ಫಿಲಂಸ್ ಬ್ಯಾನರ್, ರಘುತಾತ ಚಿತ್ರದ ಮೂಲಕ ತಮಿಳು ಇಂಡಸ್ಟ್ರಿಗೆ ಪ್ರವೇಶಿಸಿತು. ಹೊಂಬಾಳೆಗೆ ಇದು ಮೊದಲ ತಮಿಳು ಚಿತ್ರ. ಮಿಶ್ರ ಪ್ರತಿಕ್ರಿಯೆ ಹಿನ್ನೆಲೆಯಲ್ಲಿ ಚಿತ್ರ ಹೆಚ್ಚು ಲಾಭ ಗಳಿಸಲಿಲ್ಲ. ಆದರೆ, ಕೀರ್ತಿ ಸುರೇಶ್ ಅಭಿನಯಕ್ಕೆ ಮತ್ತೊಮ್ಮೆ ಮೆಚ್ಚುಗೆ ವ್ಯಕ್ತವಾಗಿದೆ. ಚಿತ್ರಕ್ಕೆ ಸೀನ್ ರೊನಾಲ್ಡ್ ಸಂಗೀತ ನೀಡಿದ್ದು, ಯಾಮಿನಿ ಯಜ್ಞಮೂರ್ತಿ ಕ್ಯಾಮೆರಾ ಹಿಡಿದಿದ್ದಾರೆ.