Amruthadhaare: ಕೆಲಸ ಕಳೆದುಕೊಂಡ ಜೀವನ್‌ ಫುಡ್‌ ಡೆಲಿವರಿ‌ ವರ್ಕ್‌ ಮಾಡ್ತಾರ? ಜಾತಕ ಷಡ್ಯಂತ್ರಕ್ಕೆ ಅಂತ್ಯ ಹಾಡಿದ ಭೂಮಿಕಾ
ಕನ್ನಡ ಸುದ್ದಿ  /  ಮನರಂಜನೆ  /  Amruthadhaare: ಕೆಲಸ ಕಳೆದುಕೊಂಡ ಜೀವನ್‌ ಫುಡ್‌ ಡೆಲಿವರಿ‌ ವರ್ಕ್‌ ಮಾಡ್ತಾರ? ಜಾತಕ ಷಡ್ಯಂತ್ರಕ್ಕೆ ಅಂತ್ಯ ಹಾಡಿದ ಭೂಮಿಕಾ

Amruthadhaare: ಕೆಲಸ ಕಳೆದುಕೊಂಡ ಜೀವನ್‌ ಫುಡ್‌ ಡೆಲಿವರಿ‌ ವರ್ಕ್‌ ಮಾಡ್ತಾರ? ಜಾತಕ ಷಡ್ಯಂತ್ರಕ್ಕೆ ಅಂತ್ಯ ಹಾಡಿದ ಭೂಮಿಕಾ

Amruthadhaare Serial: ಅಮೃತಧಾರೆ ಸೀರಿಯಲ್‌ನ ಭಾನುವಾರದ ಸಂಚಿಕೆಯಲ್ಲಿ ಜಾತಕ ಷಡ್ಯಂತ್ರಕ್ಕೆ ಅಂತ್ಯ ಹಾಡುವಲ್ಲಿ ಭೂಮಿಕಾ ಯಶಸ್ವಿಯಾಗಿದ್ದಾರೆ. ಆತಂಕದಲ್ಲಿದ್ದ ಗೌತಮ್‌ ಮನದಲ್ಲಿ ನೆಮ್ಮದಿ ಮೂಡಿದೆ. ಇನ್ನೊಂದೆಡೆ ಕೆಲಸ ಕಳೆದುಕೊಂಡ ಜೀವನ್‌ಗೆ "ಕೆಲಸ ಸಿಗುವ ತನಕ ಸಿಕ್ಕ ಸಿಕ್ಕ ಕೆಲಸ ಮಾಡು" ಎಂದು ಗೆಳೆಯ ಸಲಹೆ ನೀಡುತ್ತಾನೆ.

ಜಾತಕ ಷಡ್ಯಂತ್ರಕ್ಕೆ ಅಂತ್ಯ ಹಾಡಿದ ಭೂಮಿಕಾ
ಜಾತಕ ಷಡ್ಯಂತ್ರಕ್ಕೆ ಅಂತ್ಯ ಹಾಡಿದ ಭೂಮಿಕಾ

ಅಮೃತಧಾರೆಯಲ್ಲಿ ದಿವಾನ್‌ ಮನೆಗೆ ಬಂದ ಗುರುಗಳು ಯುಗಾದಿ ಪೂಜೆ ಮಾಡುತ್ತಾರೆ. ಪಂಚಾಂಗ ಶ್ರವಣ ಕಾರ್ಯಕ್ರಮ ನಡೆಯುತ್ತದೆ. ಮೊದಲಿಗೆ ಪಂಚಾಂಗ ಶ್ರವಣದ ಮಹತ್ವವನ್ನು ಗುರುಗಳು ಹೇಳುತ್ತಾರೆ. ಯುಗಾದಿ ಹಬ್ಬದ ದಿನ ಪಂಚಾಂಗ ಶ್ರವಣ ಮಾಡುವುದರಿಂದ ಸಾಕಷ್ಟು ಲಾಭವಿದೆ. ನಮ್ಮ ದೈನಂದಿನ ಬದುಕಿನಲ್ಲಿ ಸುಖ ಯಶಸ್ಸು ಪ್ರಾಪ್ತಿಯಾಗುತ್ತದೆ. ಪಂಚಾಂಗ ಶ್ರವಣದ ಮೂಲಕ ಆಯಾಯ ವರ್ಷ ಏನೆಲ್ಲ ನಡೆಯಬಹುದು ಎಂದು ಮುಂಚಿತವಾಗಿ ತಿಳಿದುಕೊಳ್ಳಬಹುದು. ಮಳೆ ಬೆಳೆ ಬರ ಇತ್ಯಾದಿಗಳ ಮಾಹಿತಿ ಪಡೆಯಬಹುದು ಎಂದು ವಿವರಿಸಿದ ಗುರುಗಳು ಬಳಿಕ ಪಂಚಾಂಗ ಶ್ರವಣ ಆರಂಭಿಸುತ್ತಾರೆ.

ಇನ್ನೊಂದೆಡೆ ಜೈದೇವ್‌ ಹಳ್ಳಿಯಲ್ಲಿದ್ದಾನೆ. ಮಲ್ಲಿ ಮನೆಯಲ್ಲಿ ಈಗಾಗಲೇ ಯುಗಾದಿ ಹಬ್ಬದ ಎಣ್ಣೆ ಅಭ್ಯಂಜನ ಮಾಡಿದ್ದಾನೆ. ಊರಿನವರೆಲ್ಲರೂ ಇವರನ್ನು ನೋಡಿ ಜೋಡಿ ಚೆನ್ನಾಗಿದೆ ಎನ್ನುತ್ತಾರೆ. ಹಳ್ಳಿಯಲ್ಲಿ ರಾಗಿ ಗಿಡಗಳನ್ನು ನೋಡಿ ಆಶ್ಚರ್ಯ ಪಡುತ್ತಾನೆ. ಊರಿನ ದೇವಸ್ಥಾನಕ್ಕೆ ಕರೆದುಕೊಂಡು ಬರುತ್ತಾರೆ. ದೊಡ್ಡ ದೇವಸ್ಥಾನವೆಂದು ಬಂದ ಜೈದೇವ್‌ಗೆಪುಟ್ಟ ಕಲ್ಲು ಇಟ್ಟು ಪೂಜೆ ಮಾಡುವುದನ್ನು ನೋಡಿ ಆಶ್ವರ್ಯ ಪಡುತ್ತಾನೆ. ಹೀಗೆ ಜೈದೇವ್‌ಗೆ ಊರಲ್ಲಿ ಹೊಸ ಅನುಭವವಾಗುತ್ತದೆ.

ದಿವಾನ್‌ ಮನೆಯಲ್ಲಿ ಪೂಜೆ ನಡೆದಿದೆ. ಇದಾದ ಬಳಿಕ ಭೂಮಿಕಾ "ನಮ್ಮ ಮನೆಯ ಎಲ್ಲರ ಜಾತಕ ನೋಡಿ ಹೇಳಬಹುದಾ?" ಎಂದು ಕೇಳುತ್ತಾಳೆ. ಶಕುಂತಲಾ-ಅಶ್ವಿನಿ ಕಸಿವಿಸಿಗೊಳ್ಳುತ್ತಾರೆ. ಮೊನ್ನೆ ತೋರಿಸಿ ಆಯ್ತಲ್ವ? ಎಂದು ಶಕುಂತಲಾ ಹೇಳುತ್ತಾರೆ. ಅದಕ್ಕೆ ಭೂಮಿಕಾ "ಇವರು ಎಲ್ಲರ ತರಹ ಅಲ್ಲ. ಸಾತ್ವಿಕರು. ನಮ್ಮ ಜೀವನದಲ್ಲಿ ನಡೆಯುವ ಘಟನೆಗಳನ್ನ ಹಾಗೆ ಕಣ್ಣಿಗೆ ಕಟ್ಟಿದ ಹಾಗೆ ಹೇಳ್ತಾರೆ" ಎಂದು ಹೇಳುತ್ತಾಳೆ ಭೂಮಿಕಾ. "ನನ್ನ ತಂದೆಗೆ ಈ ಗುರುಗಳೆಂದರೆ ತುಂಬಾ ನಂಬಿಕೆ" ಎಂದು ಭೂಮಿಕಾ ಹೇಳಿದಾಗ ಶಕುಂತಲಾದೇವಿಗೆ ಆಶ್ಚರ್ಯವಾಗುತ್ತದೆ. "ಹಾ, ಇದು ನಮ್ಮ ಗುರುಗಳು ಕಲಿಸಿದವರಲ್ವ? ಈಕೆಯ ತಂದೆ ಕಳುಹಿಸಿದ ಶಾಸ್ತ್ರಿಗಳ?" ಎಂದು ಅಚ್ಚರಿ ಪಡುತ್ತಾಳೆ.

"ಗೌತಮ್‌ ಅವರೇ ನಿಮಗೆ ಏನಾದರೂ ಕೇಳಬೇಕೆಂದಾರೆ ಇವರಲ್ಲಿ ಕೇಳಿ, ಇವರಲ್ಲಿ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಇರುತ್ತದೆ. ಇನ್‌ಫ್ಯಾಕ್ಟ್‌ ನೀವು ಬಾಯಿಬಿಟ್ಟು ಕೇಳಲೇಬೇಕೆಂದಿಲ್ಲ. ಗುರುಗಳು ನಿಮ್ಮ ಮುಖ ನೋಡಿಯೇ ಎಲ್ಲಾ ಹೇಳುತ್ತಾರೆ" ಎಂದು ಭೂಮಿಕಾ ಹೇಳುತ್ತಾಳೆ.

ಗುರುಗಳು ಗೌತಮ್‌ ಮುಖ ನೋಡಿ ಹೀಗೆ ಭವಿಷ್ಯ ಹೇಳುತ್ತಾರೆ. "ನಿಮ್ಮಲ್ಲಿ ಚಿಂತೆ ಮನೆ ಮಾಡಿದೆ. ಅದು ಸಾಮಾನ್ಯ ಚಿಂತೆಯಲ್ಲ. ಚಿತೆಯಂತಹ ಚಿಂತೆ" ಎಂದು ಗುರುಗಳು ಹೇಳುತ್ತಾರೆ. "ಅದು ನಿಮ್ಮ ಮನಶಾಂತಿಯನ್ನ, ನೆಮ್ಮದಿಯನ್ನ ಸುಟ್ಟು ಬೂದಿ ಮಾಡುತ್ತ ಇದೆ. ಪ್ರೀತಿನ ಎಲ್ಲಿ ಕಳೆದುಕೊಂಡು ಬಿಡ್ತಿನೋ ಎಂಬ ಭಯ ನಿಮಗಿದೆ" ಎಂದು ಗುರುಗಳು ಇರೋ ವಿಚಾರನ್ನ ಕಣ್ಣಿಗೆ ಕಟ್ಟಿದಂತೆ ಹೇಳುತ್ತಾರೆ. "ನಾವು ತಿಳಿದುಕೊಂಡಿರುವುದು ಸೂಜಿ ಮೊನೆಯಷ್ಟು. ತಿಳಿದುಕೊಳ್ಳಬೇಕಾಗಿರುವುದು ಬ್ರಹ್ಮಾಂಡದಷ್ಟು. ಇಲ್ಲಿ ಎಷ್ಟೋ ಸುಳ್ಳುಗಳು ಸತ್ಯದ ಮುಖವಾಡ ಹಾಕಿಕೊಂಡಿವೆ" ಎಂದು ಗುರುಗಳು ಹೇಳಿದಾಗ ಗೌತಮ್‌ಗೆ ಎಲ್ಲವೂ ಹೌದೆನಿಸುತ್ತದೆ. "ಕಣ್ಣಲ್ಲಿ ಕಂಡದ್ದನ್ನ, ಕಿವಿಯಲ್ಲಿ ಕೇಳಿದ್ದನ್ನ, ಬುದ್ಧಿಯೆಂಬ ಜರಡಿಯಲ್ಲಿ ಹಿಡಿದು ನೋಡು" ಎಂದು ಹೇಳುತ್ತಾರೆ ಗುರುಗಳು. "ಕುರುಪ ಎಂಬ ಸತ್ಯದ ಹಿಂದೆ ಹೋದರೆ ಬದುಕು ಸುಂದರವಾಗುತ್ತದೆ. ಸುಂದರ ಎಂಬ ಸುಳ್ಳಿನ ಹಿಂದೆ ಹೋದರೆ ಬದುಕು ಕುರುಪವಾಗಿರುತ್ತದೆ" ಎಂದೆಲ್ಲ ಹೇಳುತ್ತಾರೆ.

"ಗುಂಡೂ ಗುರುಗಳು ಸರಿ ಹೇಳ್ತಾ ಇದ್ದಾರೆ. ಒಂದು ಮರಕ್ಕಿಂತ ಇನ್ನೊಂದು ಮರ ದೊಡ್ಡದಿರುತ್ತದೆ. ಅವರಿಗೆ ಜಾತಕ ತೋರಿಸುವುದರಲ್ಲಿ ತಪ್ಪೇನು" ಎಂದು ಅಜ್ಜಿ ಹೇಳುತ್ತಾರೆ. ಭೂಮಿಕಾ ಜಾತಕ ತರಲು ಹೋಗುತ್ತಾರೆ. ನಮಗೆ ಅಪಾಯವಿದೆ ಎಂದು ಭೂಮಿಕಾಳಿಗೆ ಗೊತ್ತಾಗಬಾರದು ಎಂದು ಗೌತಮ್‌ ಮನಸ್ಸಿನಲ್ಲಿ ಅಂದುಕೊಳ್ಳುತ್ತಾನೆ. ಶಕುಂತಲಾದೇವಿ ಕೂಡ ಟೆನ್ಷನ್‌ನಲ್ಲಿದ್ದು "ಏನೂ ಮಾಡಬೇಕೆಂದು ಗೊತ್ತಾಗದ" ಸ್ಥಿತಿಯಲ್ಲಿದ್ದಾರೆ.

ಇನ್ನೊಂದೆ ಜೀವನ್‌ ಕೆಲಸದ ಹುಡುಕಾಟದಲ್ಲಿದ್ದಾನೆ. ಸ್ನೇಹಿತನ ಪ್ರಕಾರ ಮಾರ್ಕೆಟ್‌ ಚೆನ್ನಾಗಿಲ್ಲ, ಉದ್ಯೋಗ ಕಡಿತ ಹೆಚ್ಚಾಗಿದೆ. ಸ್ವಲ್ಪ ದಿನ ಕಾಯಬೇಕಷ್ಟೇ ಎಂದು ಗೆಳೆಯ ಹೇಳುತ್ತಾನೆ. ಪ್ರಮೋಷನ್‌ ಸಿಗುತ್ತದೆ ಎಂದು ಲೋನ್‌ ತೆಗೆದುಕೊಂಡೆ. ಮನೆಯಲ್ಲಿ ಹೇಳುವುದು ಕಷ್ಟವಾಗುತ್ತದೆ ಎಂದು ಜೀವನ್‌ ಹೇಳುತ್ತಾನೆ. ಈ ವಿಷಯ ಮನೆಯಲ್ಲಿ ಹೇಗೆ ಹೇಳುವುದು ಎಂದುಕೊಳ್ಳುತ್ತಾನೆ. "ನಿನ್ನ ಬಾವ ದೊಡ್ಡ ಬಿಸ್ನೆಸ್‌ಮ್ಯಾನ್‌. ನಿನಗೆ ಅಂತ ದೊಡ್ಡ ಕಂಪನಿಯೇ ಓಪನ್‌ ಮಾಡಿಕೊಡುತ್ತಾನೆ" ಎಂದು ಗೆಳೆಯ ಹೇಳುತ್ತಾನೆ. "ನನ್ನ ಬಾವ ಎಷ್ಟೇ ದೊಡ್ಡವರಾದರೂ ನನಗೆ ಕೇಳಲು ಸರಿಯಾಗುತ್ತಿಲ್ಲ" ಎಂದು ಹೇಳುತ್ತಾನೆ. "ಪ್ರಾಪರ್‌ ಕೆಲಸ ಸಿಗುವ ತನಕ ಸಿಕ್ಕಸಿಕ್ಕ ಕೆಲಸ ಮಾಡು" ಎಂದು ಗೆಳೆಯ ಹೇಳುತ್ತಾನೆ. "ಫುಡ್‌ ಡೆಲಿವರಿ ಮಾಡು, ಎಷ್ಟೇ ಜನರು ಇದರಿಂದ ಸಾಕಷ್ಟು ಹಣ ಸಂಪಾದನೆ ಮಾಡುತ್ತಾರೆ" ಎಂದು ಗೆಳೆಯ ಹೇಳುತ್ತಾನೆ. ಕಂಪನಿ ಕೆಲಸ ಸಿಗುವ ತನಕ ಎರಡು ತಿಂಗಳು ಈ ಕೆಲಸ ಮಾಡು ಎಂದು ಸಲಹೆ ನೀಡುತ್ತಾನೆ.

ಇನ್ನೊಂದೆಡೆ ಭೂಮಿಕಾ ಮತ್ತು ಗೌತಮ್‌ರ ಜಾತಕವನ್ನು ಗುರುಗಳು ನೋಡುತ್ತಾರೆ. ಎಲ್ಲರ ಮುಖದಲ್ಲಿ ಆತಂಕ ಇದೆ. ಶಕುಂತಲಾ ಟೆನ್ಷನ್‌ನಲ್ಲಿದ್ದಾಳೆ. "ಇದು ತುಂಬಾ ಅಮೋಘವಾದ ಜಾತಕ" ಎಂದು ಗುರುಗಳು ಹೇಳುತ್ತಾರೆ. "ಇದು ತುಂಬಾ ಅಮೋಘವಾದ ಜಾತಕ. 36ರಲ್ಲಿ 35 ಋಣ ಕೂಡಿ ಬರುತ್ತದೆ. ಭೂಮಿಕಾರಿಗೆ ಇರುವ ಆತ್ಮಶಕ್ತಿ ಅಪಾರವಾದದ್ದು. ಇವತ್ತಿನವರಿಗೂ ನಿಮ್ಮನ್ನೇ ಕಾದಿರುವುದು. ನಿಮ್ಮಿಬ್ಬರಿಗೆ ಯಾವುದೇ ತೊಂದರೆ ಇಲ್ಲ. ಎಲ್ಲವೂ ಒಳ್ಳೆಯದಾಗುತ್ತದೆ" ಎಂದು ಗುರುಗಳು ಹೇಳುತ್ತಾರೆ. "ಇನ್ನೊಮ್ಮೆ ನೋಡಿ," ಎಂದು ಗೌತಮ್‌ ಹೇಳಿದಾಗ "ಮೊದಲು ನಿಮ್ಮ ಭಯವನ್ನು ತೆಗೆದು ಹಾಕಿ. ನಿಮ್ಮಿಬ್ಬರ ನಡುವೆ ಯಾವುದೇ ತೊಂದರೆ ಇಲ್ಲ" ಎಂದು ಗುರುಗಳು ಹೇಳಿದಾಗ ಶಕುಂತಲಾದೇವಿ, ಆನಂದ್‌ ಹೊರತುಪಡಿಸಿ ಮನೆಯೆಲ್ಲ ಆನಂದ ಮೂಡುತ್ತದೆ.

Whats_app_banner