ಬಿಗ್‌ಬಾಸ್ ಕನ್ನಡ ಸ್ಪರ್ಧಿ ವರ್ತೂರು ಸಂತೋಷ್ ಈಗ ಕೈದಿ ನಂಬರ್ 10935; ಹಳ್ಳಿಕಾರ್ ಗೋವಿನ ತಳಿ ರಕ್ಷಕನಿಗೆ ಸಂಕಷ್ಟ ತಂದ ಹುಲಿ ಉಗುರು
BBK 10 Varthur santosh Tiger Claw Case: ಬಿಬಿಕೆ 10 ಸ್ಪರ್ಧಿ ವರ್ತೂರು ಸಂತೋಷ್ ಹುಲಿ ಉಗುರು ಪೆಂಡೆಂಟ್ ಧರಿಸಿದ ಕಾರಣದಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇವರಿಗೆ ವಿಚಾರಣಾಧೀನ ಕೈದಿ ಸಂಖ್ಯೆ 10935 ನೀಡಲಾಗಿದೆ. ಗೋವಿನ ತಳಿ ಸಂರಕ್ಷಣೆಗೆ ಪಣ ತೊಟ್ಟಿದ್ದ ಸಂತೋಷ್ ವನ್ಯಜೀವಿ ಕಾಯಿದೆಯಿಂದ ಜೈಲು ಸೇರಿರುವುದು ವಿಪರ್ಯಾಸ.
ಬೆಂಗಳೂರು: ಕನ್ನಡ ಬಿಗ್‌ಬಾಸ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಪೊಲೀಸರಿಂದ ಬಂಧನಕ್ಕೆ ಈಡಾದ ಬಿಬಿಕೆ ಸೀಸನ್ 10 ಸ್ಪರ್ಧಿ ವರ್ತೂರು ಸಂತೋಷ್ ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇವರು ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದ ಕಾರಣಕ್ಕೆ ನ್ಯಾಯಾಲಯವು ಇವರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿತ್ತು. ಇದೀಗ ಅವರಿಗೆ ವಿಚಾರಣಾಧೀನ ಕೈದಿ ಸಂಖ್ಯೆ 10935 ನೀಡಲಾಗಿದೆ. ಹಳ್ಳಿಕಾರ್ ಗೋವಿನ ತಳಿ ರಕ್ಷಣೆ ಮಾಡಿ, ಅದರಲ್ಲಿಯೇ ಜನರ ಗಮನ ಸೆಳೆದಿದ್ದ ಸಂತೋಷ್ ಇದೀಗ ಹುಲಿ ಉಗುರಿನ ಕಾರಣದಿಂದ ಜೈಲು ಸೇರುವಂತಾಗಿರುವುದು ವಿಪರ್ಯಾಸ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.
14 ದಿನ ನ್ಯಾಯಾಂಗ ಬಂಧನ
ವರ್ತೂರು ಸಂತೋಷ್ ಅವರು ಧರಿಸಿದ್ದ ಉಗುರನ್ನು ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಇದು ಹುಲಿಯ ಉಗುರು ಎಂದು ಸ್ವತಃ ಸಂತೋಷ್ ಒಪ್ಪಿಕೊಂಡಿದ್ದರು ಎನ್ನಲಾಗಿದೆ. ಇವರನ್ನು ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯವು ಇವರಿಗೆ ಹದಿನಾಲ್ಕು ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿತ್ತು. ಹದಿನಾಲ್ಕು ದಿನಗಳ ಕಾಲ ಇವರು ವಿಚಾರಣಾಧೀನ ಕೈದಿಯಾಗಿ ಇರಬೇಕು. ಇವರಿಗೆ ಪರಪ್ಪನ ಅಗ್ರಹಾರದಲ್ಲಿ ವಿಚಾರಣಾಧೀನ ಕೈದಿ ಸಂಖ್ಯೆ 10935ಯನ್ನು ಜೈಲು ಅಧಿಕಾರಿಗಳು ನೀಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಬಿಗ್‌ಬಾಸ್‌ನೊಳಗೆ ಸಾವಧಾನದ ಆಟ
ಬಿಗ್‌ಬಾಸ್ ಕನ್ನಡದ ಮನೆಯೊಳಗೆ ಜನಸಾಮಾನ್ಯ/ರೈತನಾಗಿ ಪ್ರವೇಶ ಪಡೆಯುವುದು ಇವರಿಗೆ ಸುಲಭವಾಗಿರಲಿಲ್ಲ. ಆರಂಭದಲ್ಲಿ ಇವರಿಗೆ ಪ್ರೇಕ್ಷಕರಿಂದ ಕಡಿಮೆ ಮತ ಬಿದ್ದಿತ್ತು. ಹೀಗಾಗಿ, ಇವರು ಅನರ್ಹರ ಗುಂಪಿನಲ್ಲಿ ಬಿಗ್‌ಬಾಸ್ ಮನೆ ಪ್ರವೇಶಿಸಿದ್ದರು. ಎರಡು ವಾರಗಳ ಕಾಲ ಬಿಗ್‌ಬಾಸ್ ಮನೆಯೊಳಗೆ ಸಾವಧಾನದ ಆಟವನ್ನು ಆಡಿದ್ದರು. ಯಾರಿಗೂ ನೋವಾಗುವಂತೆ ಅಥವಾ ಜಗಳ ಮಾಡುತ್ತ ಇವರು ಇರಲಿಲ್ಲ. ಹೀಗೆ ಇದ್ದರೆ ಇನ್ನು ಒಂದೆರಡು ವಾರದಲ್ಲಿ ಇವರು ಮನೆಯಿಂದ ಹೊರಕ್ಕೆ ಹೋಗುವ ಸಾಧ್ಯತೆ ಇದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದರು. ಆದರೆ, ವಿಧಿಯಾಟ ಬೇರೆಯದ್ದೇ ಆಗಿತ್ತು. ಬಿಗ್‌ಬಾಸ್ ವೀಕ್ಷಕರು ನಿರೀಕ್ಷೆಯೇ ಮಾಡದಂತೆ ಇವರನ್ನು ಅರಣ್ಯಾಧಿಕಾರಿಗಳು ಬಿಗ್‌ಬಾಸ್ ಸೆಟ್‌ನೊಳಗಿಂದಲೇ ಪೊಲೀಸ್ ಠಾಣೆಗೆ ಕರೆದೊಯ್ದಿದ್ದರು.
ಹಳ್ಳಿಕಾರ್ ತಳಿ ಸಂರಕ್ಷಣಾ ಸಮಿತಿಯ ಅಧ್ಯಕ್ಷ
ವರ್ತೂರು ಸಂತೋಷ್ ಅವರು ಹಳ್ಳಿಕಾರ್ ತಳಿಯ ಜಾನುವಾರು ರಕ್ಷಣೆಯಿಂದ ಖ್ಯಾತಿ ಪಡೆದಿದ್ದಾರೆ. ಇವರು ಹಳ್ಳಿಕಾರ್ ಕ್ಯಾಟಲ್ ಬ್ರೀಡ್ ಅಥವಾ ಅಖಿಲ ಭಾರತ ಹಳ್ಳಿಕಾರ್ ತಳಿ ಸಂರಕ್ಷಣಾ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಇವರು ಹಳ್ಳಿಕಾರ್ ಒಡೆಯ ಎಂದೇ ಜನಪ್ರಿಯತೆ ಪಡೆದಿದ್ದಾರೆ. ಬಿಗ್‌ಬಾಸ್ ಮನೆಯೊಳಗೆ ಪ್ರವೇಶಿಸುವಾಗಲೇ ಇವರು ಮೈತುಂಬಾ ಚಿನ್ನ ಧರಿಸಿದ್ದರು. ಕಿಚ್ಚ ಸುದೀಪ್ ಅವರ ವಾರದ ಪಂಚಾಯಿತಿಯಲ್ಲೂ ಇವರು ಚಿನ್ನದ ಒಡವೆಗಳನ್ನು ಧರಿಸಿದ್ದರು. ಒಂದು ವರದಿ ಪ್ರಕಾರ ಇವರು ಬಿಗ್‌ಬಾಸ್ ಮನೆಯೊಳಗೆ ಹೋಗುವಾಗ 400 ಗ್ರಾಂ ಚಿನ್ನ ಧರಿಸಿದ್ದರು. ಗೋವು ತಳಿಯೊಂದರ ಸಂರಕ್ಷಣೆಗಾಗಿ ಕೆಲಸ ಮಾಡುತ್ತಿದ್ದ ಸಂತೋಷ್ ಅವರು ವನ್ಯಜೀವಿಗೆ ಸಂಬಂಧಪಟ್ಟ ಕಾನೂನಿನ ಮೂಲಕ ವಿಚಾರಣೆ ಎದುರಿಸಬೇಕಾಗಿ ಬಂದಿರುವುದು ವಿಪರ್ಯಾಸ ಎಂದು ಜನರು ಹೇಳುತ್ತಿದ್ದಾರೆ.
ವನ್ಯಜೀವಿ ಸಂಬಂಧಪಟ್ಟ ಕಾನೂನಿನ ಅರಿವಿನ ಕೊರತೆ
ವರ್ತೂರು ಸಂತೋಷ್‌ಗೆ ವನ್ಯಜೀವಿ ಕಾಯಿದೆ ಕುರಿತು ಅರಿವಿನ ಕೊರತೆ ಇತ್ತು. ಹೀಗಾಗಿ, ಇಂತಹ ಪೆಂಡೆಂಟ್ ಧರಿಸಿ ಬಿಗ್‌ಬಾಸ್ ಮನೆಗೆ ಪ್ರವೇಶಿಸಿರಬಹುದು ಎಂದು ಹೇಳಲಾಗುತ್ತಿದೆ. ಆದರೆ, ವನ್ಯಜೀವಿ ಸಂರಕ್ಷಣೆ ಕುರಿತಾದ ಕಾನೂನು ಬಿಗಿಯಾಗಿದ್ದು, ಶಿಕ್ಷೆ ಮತ್ತು ದಂಡ ಖಾತ್ರಿಯಾಗಿದೆ. ವನ್ಯಜೀವಿ ಕಾಯಿದೆ ಪ್ರಕಾರ ವನ್ಯಜೀವಿಗೆ ಸಂಬಂಧಿಸಿದ ವಸ್ತುಗಳನ್ನು ಇಟ್ಟುಕೊಳ್ಳಲು ಅವಕಾಶವಿಲ್ಲ. ಹಾಗೆ ಸಂಗ್ರಹಿಸಿದ್ದರೆ ಅಥವಾ ಬಳಕೆ ಮಾಡುತ್ತಿದ್ದರೆ ದಾಳಿ ಮಾಡಿ ವಶಕ್ಕೆ ಪಡೆಯಲಾಗುತ್ತದೆ. ಆನಂತರ ಆರೋಪಿ ಬಂಧಿಸಲಾಗುತ್ತದೆ. ಶಿಕ್ಷೆಯೂ ಏಳು ವರ್ಷಕ್ಕೂ ಅಧಿಕ ಇರಲಿದೆ. ವನ್ಯಜೀವಿ ಕಾಯಿದೆ ಪ್ರಕಾರ ಸಂತೋಷ್‌ಗೆ ಎಷ್ಟು ವರ್ಷ ಶಿಕ್ಷೆಯಾಗಬಹುದು ಎನ್ನುವ ವಿಚಾರದ ಕುರಿತು ಹಿಂದೂಸ್ತಾನ್ ಟೈಮ್ಸ್ ಕನ್ನಡ ಈಗಾಗಲೇ ವಿಶೇಷ ವರದಿ ಪ್ರಕಟಿಸಿದೆ. ಆ ವರದಿ ಓದಲು ಇಲ್ಲಿ ಕ್ಲಿಕ್ ಮಾಡಬಹುದು.
ವಿಭಾಗ