Big Boss Santhosh: ಹುಲಿ ಪೆಂಡೆಂಟ್‌ ಧರಿಸಿದ್ದ ಬಿಗ್‌ಬಾಸ್‌ ಸ್ಪರ್ಧಿ ವರ್ತೂರು ಸಂತೋಷ್‌ಗೆ ಎಷ್ಟು ವರ್ಷ ಶಿಕ್ಷೆಯಾಗಬಹುದು
ಕನ್ನಡ ಸುದ್ದಿ  /  ಮನರಂಜನೆ  /  Big Boss Santhosh: ಹುಲಿ ಪೆಂಡೆಂಟ್‌ ಧರಿಸಿದ್ದ ಬಿಗ್‌ಬಾಸ್‌ ಸ್ಪರ್ಧಿ ವರ್ತೂರು ಸಂತೋಷ್‌ಗೆ ಎಷ್ಟು ವರ್ಷ ಶಿಕ್ಷೆಯಾಗಬಹುದು

Big Boss Santhosh: ಹುಲಿ ಪೆಂಡೆಂಟ್‌ ಧರಿಸಿದ್ದ ಬಿಗ್‌ಬಾಸ್‌ ಸ್ಪರ್ಧಿ ವರ್ತೂರು ಸಂತೋಷ್‌ಗೆ ಎಷ್ಟು ವರ್ಷ ಶಿಕ್ಷೆಯಾಗಬಹುದು

Wildlife act ವನ್ಯಜೀವಿಗಳಿಗೆ ಸಂಬಂಧಿಸಿದ ಯಾವುದೇ ವಸ್ತು ಸಂಗ್ರಹ, ಮಾರಾಟ ಶಿಕ್ಷಾರ್ಹ ಅಪರಾಧ. ವನ್ಯಜೀವಿ ಸಂರಕ್ಷಣಾ ಕಾಯಿದೆ 1972ರ(Wildlife protection act1972) ಅಡಿ ಏಳು ವರ್ಷದವರೆಗೂ ಶಿಕ್ಷೆಯಾಗಬಹುದು. ಬಿಗ್‌ ಬಾಸ್‌ ಸ್ಪರ್ಧಿ ಸಂತೋಷ್‌( Big Boss Santhosh) ವಿಚಾರದಲ್ಲೂ ಈ ಕುರಿತಾದ ಚರ್ಚೆಗಳು ನಡೆದಿವೆ.

ಹುಲಿ ದೇಹದ ವಸ್ತು ಇಟ್ಟುಕೊಂಡಿದ್ದ ಬಿಗ್‌ಬಾಸ್‌ ಸ್ಪರ್ಧಿ ಸಂತೋಷ್‌ಗೆ ಎಷ್ಟ ವರ್ಷ ಶಿಕ್ಷೆಯಾಗಬಹುದು ಎನ್ನುವ ಚರ್ಚೆ ನಡೆದಿದೆ.
ಹುಲಿ ದೇಹದ ವಸ್ತು ಇಟ್ಟುಕೊಂಡಿದ್ದ ಬಿಗ್‌ಬಾಸ್‌ ಸ್ಪರ್ಧಿ ಸಂತೋಷ್‌ಗೆ ಎಷ್ಟ ವರ್ಷ ಶಿಕ್ಷೆಯಾಗಬಹುದು ಎನ್ನುವ ಚರ್ಚೆ ನಡೆದಿದೆ.

ಬೆಂಗಳೂರು: ಹುಲಿ ಪೆಂಡೆಂಟ್‌ ಧರಿಸಿ ಸಾರ್ವಜನಿಕವಾಗಿ ತೋರ್ಪಡಿಸಿ ಬಂಧನಕ್ಕೆ ಒಳಗಾಗಿರುವ ಬಿಗ್‌ ಬಾಸ್‌ ಸ್ಪರ್ಧಿ ವರ್ತೂರ್‌ ಸಂತೋಷ್‌ಗೆ ವನ್ಯಜೀವಿ ಕಾಯಿದೆ ಅಡಿ ಎಷ್ಟು ವರ್ಷ ಶಿಕ್ಷೆಯಾಗಬಹುದು?

ಈ ಕುರಿತು ಕರ್ನಾಟಕ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಮಟ್ಟದಲ್ಲಿ ಮಾತ್ರವಲ್ಲ. ಜನ ಸಾಮಾನ್ಯರ ವಲಯದಲ್ಲೂ ಚರ್ಚೆಗಳು ಜೋರಾಗಿವೆ. ವನ್ಯಜೀವಿ ಕಾಯಿದೆ ಪ್ರಕಾರ ವನ್ಯಜೀವಿಗೆ ಸಂಬಂಧಿಸಿದ ವಸ್ತುಗಳನ್ನು ಇಟ್ಟುಕೊಳ್ಳಲು ಅವಕಾಶವಿಲ್ಲ. ಹಾಗೆ ಸಂಗ್ರಹಿಸಿದ್ದರೆ ಅಥವಾ ಬಳಕೆ ಮಾಡುತ್ತಿದ್ದರೆ ದಾಳಿ ಮಾಡಿ ವಶಕ್ಕೆ ಪಡೆಯಲಾಗುತ್ತದೆ. ಆನಂತರ ಆರೋಪಿ ಬಂಧಿಸಲಾಗುತ್ತದೆ. ಶಿಕ್ಷೆಯೂ ಏಳು ವರ್ಷಕ್ಕೂ ಅಧಿಕ ಇರಲಿದೆ.

ಕಾಯಿದೆ ಏನು ಹೇಳುತ್ತದೆ?

ವನ್ಯಜೀವಿ ರಕ್ಷಣಾ ಕಾಯಿದೆ1972 ( Wildlife protection act 1972 ) ಪ್ರಕಾರ ವನ್ಯಜೀವಿಗಳನ್ನು ಇಟ್ಟುಕೊಳ್ಳಲು ಅನುಮತಿ ಇಲ್ಲ. ವನ್ಯಜೀವಿಗಳಿಗೆ ಸಂಬಂಧಿಸಿದ ದೇಹದ ಭಾಗಗಳು, ವಸ್ತುಗಳನ್ನು ಇಟ್ಟುಕೊಳ್ಳುವಂತಿಲ್ಲ. ಅದರಲ್ಲು ಹುಲಿ ಚರ್ಮ, ಹುಲಿ ದೇಹದ ಭಾಗದಿಂದ ಮಾಡಿದ ಪೆಂಡೆಂಟ್‌ ಸೇರಿ ಇತರೆ ವಸ್ತುಗಳು, ಆನೆಗಳ ಕೂದಲು.. ಹೀಗೆ ಕೆಲವೊಂದು ಧಾರ್ಮಿಕ ಹಾಗೂ ಅಲಂಕಾರಿಕ ಮಹತ್ವ ಇರುವ ವನ್ಯಜೀವಿಗಳಿಗೆ ಸೇರಿದ ಯಾವುದೇ ವಸ್ತುಗಳನ್ನು ಇಟ್ಟುಕೊಳ್ಳುವಂತಿಲ್ಲ. ಇದು ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧ. ಅಲ್ಲದೇ ಇಂತಹ ವಸ್ತುಗಳ ಸಾಗಣೆ, ಮಾರಾಟಕ್ಕೆ ಅವಕಾಶವೇ ಇಲ್ಲ. ಇದನ್ನು ಮಾಡಿದರೆ ಅದು ಅಕ್ರಮ ಎಂದು ಪರಿಗಣಿಸಿ ವನ್ಯಜೀವಿ ಕಾಯಿದೆ ಅಡಿ ಮೊಕದ್ದಮೆ ದಾಖಲಿಸಲಾಗುತ್ತದೆ.

ಹೀಗೆ ಕಾಯಿದೆ ಅಡಿ ಮೊಕದ್ದಮೆ ದಾಖಲಿಸಿದರೆ ಅವರಿಗೆ ಒಂದು ವರ್ಷದಿಂದ ಏಳು ವರ್ಷದವರೆಗೂ ಜೈಲು ವಾಸ ಆಗಲಿದೆ. ಅಲ್ಲದೇ ಜಾಮೀನು ಕೂಡ ಸಿಗುವುದಿಲ್ಲ. ಗಂಭೀರ ಪ್ರಕರಣವಾಗಿದ್ದರೆ ಕನಿಷ್ಠ 7 ವರ್ಷ ಜೈಲು ಶಿಕ್ಷೆಯಾಗಬಹುದು. ಬಳಕೆಯಲ್ಲದೇ ಮಾರಾಟಕ್ಕೆ ಮುಂದಾಗಿದ್ದರೆ ಈ ಶಿಕ್ಷೆ ಪ್ರಮಾಣ 10ವರ್ಷವನ್ನೂ ದಾಟಬಹುದು. ದಂಡವನ್ನೂ ವಿಧಿಸಬಹುದು. ಅದು 50 ಸಾವಿರದಿಂದ 1 ಲಕ್ಷ ರೂ.ವರೆಗೂ ದಂಡ ವಿಧಿಸಬಹುದು. ಈ ಪ್ರಮಾಣ ಇನ್ನೂ ಅಧಿಕವಾಗಬಹುದು.

ಹುಲಿ ಸೇರಿದಂತೆ ವನ್ಯಜೀವಿಗಳ ಯಾವುದೇ ಭಾಗ ಅಥವಾ ವಸ್ತುಗಳನ್ನು ಬಳಸಲು ಅನುಮತಿಯೇ ಇಲ್ಲ. ಹಾಗೇನಾದರೂ ಬಳಕೆಯಾಗುತಿದ್ದುದು ಗೊತ್ತಾದರೆ ಅಂತಹವರ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುತ್ತದೆ. ಜೈಲು ಶಿಕ್ಷೆಯೂ ಆಗಲಿದೆ ಎನ್ನುವುದು ಕರ್ನಾಟಕ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ( ಎಪಿಸಿಸಿಎಫ್‌) ಕುಮಾರಪುಷ್ಕರ್‌ ಅಭಿಪ್ರಾಯ.

ಕರ್ನಾಟಕದಲ್ಲಿಯೇ ಹುಲಿ, ಆನೆ, ಚಿರತೆ, ಕರಡಿ, ಕಾಡೆಮ್ಮೆ ಸೇರಿದಂತೆ ಹಲವು ವನ್ಯಜೀವಿಗಳು, ಪಕ್ಷಿಗಳ ಸಂಗ್ರಹವೂ ಒಳಗೊಂಡಂತೆ ಹಲವಾರು ಪ್ರಕರಣಗಳು ದಾಖಲಾಗಿವೆ. ಅಂತಹವರ ವಿರುದ್ದ ಮೊಕದ್ದಮೆಯೂ ದಾಖಲಾಗಿದ್ದು, ಶಿಕ್ಷೆಯೂ ಆಗಿದೆ ಎನ್ನುವುದು ಪುಷ್ಕರ್‌ ವಿವರಣೆ.

ನಿರಂತರ ಮಾಹಿತಿ ಸಂಗ್ರಹ

ಅರಣ್ಯ ಇಲಾಖೆ ಕೂಡ ಬಿಗ್‌ ಬಾಸ್‌ ಸಂತೋಷ್‌ ಹುಲಿಗೆ ಸಂಬಂಧಿಸಿದ ವಸ್ತುವಿನಿಂದ ತಯಾರಿಸಿದ ಪೆಂಡೆಂಟ್‌ ಬಳಸುತ್ತಿರುವ ಕುರಿತು ಮಾಹಿತಿ ಸಂಗ್ರಹಿಸುತ್ತಿತ್ತು. ಇಲಾಖೆಗೆ ಕೆಲವು ಸ್ವಯಂ ಸೇವಾ ಸಂಘಟನೆಗಳ ಪ್ರಮುಖರು ದೂರು ನೀಡಿದ್ದರಿಂದ ಇಲಾಖೆ ಗಂಭೀರವಾಗಿ ಪರಿಗಣಿಸಿತ್ತು.

ಈ ಹಿನ್ನೆಲೆಯಲ್ಲಿ ಭಾನುವಾರ ಸಂಜೆಯೇ ಬೆಂಗಳೂರು ನಗರ ಡಿಸಿಎಫ್‌ ರವೀಂದ್ರ ಹಾಗೂ ಇಲಾಖೆಯ ತಂಡ ಬಿಗ್‌ಬಾಸ್‌ ಮನೆಗೆ ತೆರಳಿ ಸಂತೋಷ್‌ ಅವರನ್ನು ವಿಚಾರಣೆಗೆ ಒಳಪಡಿಸಿತ್ತು. ಅವರು ಹುಲಿ ಪೆಂಡೆಂಟ್‌ ಎಲ್ಲಿಂದ ತಂದರು., ಎಷ್ಟು ವರ್ಷದಿಂದ ಬಳಸುತ್ತಿದ್ದರು, ಕೊಟ್ಟವರು ಯಾರು ಎನ್ನುವ ಮಾಹಿತಿ ಕಲೆ ಹಾಕಿದೆ. ಇದಕ್ಕೆ ಅನುಮತಿ ಪಡೆದಿರುವುದಾಗಿ ಸಂತೋಷ್‌ ಹೇಳಿದರೂ ಅದಕ್ಕೆ ಇಲಾಖೆಯಲ್ಲಿ ಅವಕಾಶವೇ ಇಲ್ಲ ಎಂದು ಅಧಿಕಾರಿಗಳ ತಂಡ ಹೇಳಿದೆ.

ಎರಡು ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ನಂತರ ಸಂತೋಷ್‌ ಅವರನ್ನು ರಾತ್ರಿ ಬಂಧಿಸಿದ್ದಾರೆ. ಸೋಮವಾರ ಬೆಳಿಗ್ಗೆ ಬೆಂಗಳೂರಿನ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.

ಮಾರಾಟ ಮಾಡಿದವರ ಮೇಲೂ ಕೇಸ್‌

ಸಂತೋಷ್‌ ಅವರು ಹುಲಿ ಪೆಂಡೆಂಟ್‌ ಬಳಕೆಗೆ ಸಂಬಂಧಿಸಿ ಮಾಹಿತಿ ಕಲೆ ಹಾಕಲಾಗಿದೆ. ಈ ಪ್ರಕರಣದಲ್ಲಿ ಹುಲಿ ಪೆಂಡೆಂಟ್‌ ಮಾರಾಟ ಮಾಡಿದವರ ಮೇಲೂ ಮೊಕದ್ದಮೆ ದಾಖಲಿಸಲು ಅರಣ್ಯ ಇಲಾಖೆ ಸಿದ್ದತೆ ಮಾಡಿಕೊಂಡಿದೆ.

ಸಂತೋಷ್‌ ನಮ್ಮ ತಂದೆಯವರ ಕಾಲದಿಂದ ಇದನ್ನು ಬಳಸಲಾಗುತ್ತಿದೆ. ನಮ್ಮ ತಾತ ಇದನ್ನು ಕೊಟ್ಟಿದ್ದಾರೆ ಎನ್ನುವ ಮಾಹಿತಿ ನೀಡಿದ್ದಾರೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ. ಆದರೂ ಇದನ್ನು ಇತ್ತೀಚಿಗೆ ಖರೀದಿಸಿರುವ ಅನುಮಾನವಿದ್ದು. ಆ ಕುರಿತ ಎಲ್ಲಾ ಮಾಹಿತಿ ಕಲೆ ಹಾಕಲಾಗುತ್ತಿದೆ. ಮಾರಾಟ ಮಾಡಿದವರ ವಿರುದ್ದವೂ ಕ್ರಮ ಆಗಲಿದೆ ಎಂದು ಅರಣ್ಯ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದರ್ಶನ್‌ ಫಾರಂ ಹೌಸ್‌ ಮೇಲೂ ದಾಳಿ

ಮೈಸೂರು ಹೊರವಲಯದಲ್ಲಿರುವ ಚಲನಚಿತ್ರ ನಟ ದರ್ಶನ್‌ ಅವರ ಫಾರಂ ಹೌಸ್‌ ಮೇಲೂ ಈ ವರ್ಷದ ಆರಂಭದಲ್ಲಿ ಅರಣ್ಯ ಇಲಾಖೆ ವಿಚಕ್ಷಣಾ ದಳ ದಾಳಿ ಮಾಡಿತ್ತು. ಇಲ್ಲಿಯೂ ಅಳಿವಂಚಿನಲ್ಲಿರುವ ಹಲವಾರು ಪಕ್ಷಿಗಳನ್ನು ವಶಪಡಿಸಿಕೊಂಡು ಮೊಕದ್ದಮೆ ದಾಖಲಿಸಲಾಗಿತ್ತು. ಈ ಕುರಿತು ನ್ಯಾಯಾಲಯದಲ್ಲಿ ವಿಚಾರಣೆಯೂ ನಡೆದಿದೆ.

ಇದನ್ನೂ ಓದಿರಿ

Whats_app_banner