UI ಸಿನಿಮಾದಲ್ಲಿ ಡಬಲ್ ಕ್ಲೈಮ್ಯಾಕ್ಸ್ ಬಗ್ಗೆ ಉಪೇಂದ್ರ ಪ್ರತಿಕ್ರಿಯೆ, ಯುಐ ಎರಡೆರಡು ಬಾರಿ ನೋಡುವಂತೆ ಇದೆ ಎಂದ ರಿಯಲ್ ಸ್ಟಾರ್
ರಿಯಲ್ ಸ್ಟಾರ್ ಉಪೇಂದ್ರ ನಟಿಸಿ ನಿರ್ದೇಶಿಸಿರುವ ಯುಐ ಸಿನಿಮಾ ಡಿಸೆಂಬರ್ 20ರಂದು ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ಡಬಲ್ ಕ್ಲೈಮ್ಯಾಕ್ಸ್ ಇರುವುದೇ ಎಂಬ ಪ್ರಶ್ನೆಗೆ ಉಪೇಂದ್ರ ಉತ್ತರಿಸಿದ್ದಾರೆ. ಇದು ಒಳ್ಳೆಯ ಕಂಟೆಂಟ್ ಸಿನಿಮಾ, ಎರಡೆರಡು ಬಾರಿ ನೋಡಬೇಕೆನಿಸಬಹುದು ಎಂದು ಅವರು ಹೇಳಿದ್ದಾರೆ.
ಡಿಸೆಂಬರ್ 20ರಂದು ಬಿಡುಗಡೆಯಾಗುವ ಯುಐ ಸಿನಿಮಾದ ಕುರಿತು ಅಭಿಮಾನಿಗಳು ಕುತೂಹಲಗೊಂಡಿದ್ದಾರೆ. ಇದೇ ಸಮಯದಲ್ಲಿ ಸಿನಿಮಾಕ್ಕೆ ಸಂಬಂದಪಟ್ಟ ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿವೆ. ಇದೀಗ ಸಿನಿಮಾದ ಕ್ಲೈಮ್ಯಾಕ್ಸ್‌ಗೆ ಸಂಬಂಧಪಟ್ಟ ವದಂತಿಗೆ ಸ್ವತಃ ಉಪೇಂದ್ರ ಪ್ರತಿಕ್ರಿಯಿಸಿದ್ದಾರೆ. ಇದೇ ಸಮಯದಲ್ಲಿ ಈ ಸಿನಿಮಾದ ಮೊದಲ ಸೀನ್ ನೋಡಿ ಅಭಿಮಾನಿಗಳು ಶಾಕ್ ಆಗುವುದು ಗ್ಯಾರಂಟಿ ಎಂದು ಅವರು ಹೇಳಿದ್ದಾರೆ.
ಉಪೇಂದ್ರ ಅವರು ತಮ್ಮ ‘ಯುಐ’ ಸಿನಿಮಾದ ಪ್ರಚಾರಕ್ಕಾಗಿ ಇತ್ತೀಚೆಗೆ ಹೈದರಾಬಾದ್‌ಗೆ ತೆರಳಿದ್ದರು. ಈ ಸಂದರ್ಭದಲ್ಲಿ ಸಿನಿಮಾದ ಕುರಿತು ಕೆಲವು ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ಯುಐ ಸಿನಿಮಾದ ಕುರಿತು ಹರಡಿರುವ ವದಂತಿ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದರು. ಯುಐ ಸಿನಿಮಾದ ಮೊದಲ ಸೀನ್ ಶಾಕ್: ನನ್ನ ಸಿನಿಮಾದ ಕಥೆ ತುಂಬಾ ವಿಶೇಷವಾಗಿದೆ. ಸಿನಿಮಾದ ಕಥೆಯೇನು ಎಂದು ವೀಕ್ಷಕರು ಡಿಕೋಡ್ ಮಾಡಬಹುದು. "ಈ ಸಿನಿಮಾದ ಮೊತ್ತಮೊದಲ ಸೀನ್ ಖಂಡಿತಾವಾಗಿಯೂ ಅಭಿಮಾನಿಗಳಿಗೆ ಶಾಕಿಂಗ್ ಆಗಿರಲಿದೆ" ಎಂದು ನಟ ಉಪೇಂದ್ರ ಹೇಳಿದ್ದಾರೆ.
ಮೊದಲ ಸೀನ್‌ನಲ್ಲಿ ಇರುವ ಅಚ್ಚರಿಯ ವಿಷಯ ಏನೆಂದು ಉಪೇಂದ್ರ ತಿಳಿಸಿಲ್ಲ. ಹೀಗಾಗಿ ಯುಐ ಸಿನಿಮಾ ಆರಂಭವಾಗುವ ಮೊದಲೇ ಹೋಗಿ ಥಿಯೇಟರ್‌ನಲ್ಲಿ ಕುಳಿತುಕೊಳ್ಳುವುದು ಉತ್ತಮ. ಸಿನಿಮಾ ಆರಂಭವಾದ ಕೆಲವು ನಿಮಿಷಗಳ ಬಳಿಕ ಥಿಯೇಟರ್‌ಗೆ ನುಗ್ಗಿ ಇತರರರಿಗೆ ಡಿಸ್ಟರ್ಬ್ ಮಾಡುವವರು ನೀವಾಗಿದ್ದರೆ ಯುಐ ಸಿನಿಮಾದಲ್ಲಿ ಮೊದಲ ಶಾಕಿಂಗ್ ಸೀನ್ ಮಿಸ್ ಮಾಡಿಕೊಳ್ಳುವಿರಿ ಎಂದು ಹೇಳಬಹುದು. ಇದೇ ಸಂದರ್ಭದಲ್ಲಿ ಯುಐ ಸಿನಿಮಾದಲ್ಲಿ ಎರಡು ಕ್ಲೈಮ್ಯಾಕ್ಸ್ ಇರುತ್ತದೆ ಎನ್ನುವ ಕುರಿತು ಉಪೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. "ಇಲ್ಲ, ಡಬಲ್ ಕ್ಲೈಮ್ಯಾಕ್ಸ್ ಇರುವುದಿಲ್ಲ. ಅದು ಕೇವಲ ವದಂತಿ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.
"ಯುಐ ಸಿನಿಮಾದಲ್ಲಿ ಡಬಲ್ ಕ್ಲೈಮ್ಯಾಕ್ಸ್ ಇದೆ ಎನ್ನುವುದು ಸುಳ್ಳು. ಈ ಸಿನಿಮಾ ಕೇವಲ ಒಂದೇ ಒಂದು ಕ್ಲೈಮ್ಯಾಕ್ಸ್ ಹೊಂದಿರಲಿದೆ. ಆದರೆ, ಈ ಸಿನಿಮಾದ ಕಂಟೆಂಟ್ ತುಂಬಾ ಸ್ಟ್ರಾಂಗ್ ಇದೆ. ಹೀಗಾಗಿ, ನಿಮಗೆ ಈ ಸಿನಿಮಾ ಎರಡೆರಡು ಬಾರಿ ನೋಡಬೇಕು ಎಂದು ಎನಿಸಬಹುದು" ಎಂದು ನಟ ಉಪೇಂದ್ರ ಹೇಳಿದ್ದಾರೆ.
ಏನಿದು ಡಬಲ್ ಕ್ಲೈಮ್ಯಾಕ್ಸ್ ವದಂತಿ?
ಈ ವದಂತಿ ಕುರಿತು ಈ ಹಿಂದೆಯೇ ಹಿಂದೂಸ್ತಾನ್ ಟೈಮ್ಸ್ ಕನ್ನಡ ವರದಿ ಮಾಡಿತ್ತು. "ಯುಐ ಸಿನಿಮಾದಲ್ಲಿ ಕೆಲವು ಚಿತ್ರಮಂದಿರಗಳಲ್ಲಿ ಒಂದು ರೀತಿಯ ಕ್ಲೈಮ್ಯಾಕ್ಸ್, ಇನ್ನು ಕೆಲವು ಚಿತ್ರಮಂದಿರಗಳಲ್ಲಿ ಇನ್ನೊಂದು ರೀತಿಯ ಕ್ಲೈಮ್ಯಾಕ್ಸ್ ಇರಲಿದೆ. ಈ ರೀತಿ ಎರಡು ಬಗೆಯ ಕ್ಲೈಮ್ಯಾಕ್ಸ್ ಅನ್ನು ಬೇರೆಬೇರೆ ಚಿತ್ರಮಂದಿರಗಳಲ್ಲಿ ತೋರಿಸಲಾಗುತ್ತದೆ. ಒಂದು ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಿದ ಅಭಿಮಾನಿಗಳು, ಇನ್ನೊಂದು ಕ್ಲೈಮ್ಯಾಕ್ಸ್ ಇರುವ ಇನ್ನೊಂದು ಚಿತ್ರಮಂದಿರಕ್ಕೆ ಹೋಗಿ ಚಿತ್ರ ನೋಡುವಂತೆ ಇದು ಮಾಡಲಿದೆ" ಎಂದು ವದಂತಿಗಳಿದ್ದವು. ಆದರೆ, ಇದೀಗ ಈ ರೀತಿ ಎರಡು ರೀತಿಯ ಕ್ಲೈಮ್ಯಾಕ್ಸ್ ಇಲ್ಲ ಎಂದು ಸ್ವತಃ ಉಪೇಂದ್ರ ಸ್ಪಷ್ಟಪಡಿಸಿದ್ದಾರೆ.
ಇಂಗ್ಲಿಷ್‌ನ ಹಲವು ಸಿನಿಮಾಗಳು ಈಗಾಗಲೇ ಇಂತಹ ಆಲ್ಟರ್‌ನೇಟ್ ಕಟ್ ಅಥವಾ ಡಬಲ್ ಎಂಡಿಂಗ್ ತಂತ್ರವನ್ನು ಬಳಸಿವೆ. 28 ಡೇಸ್ ಲೇಟರ್ ಎಂಬ ಸಿನಿಮಾದ ಅಂತ್ಯವು ಥಿಯೇಟರ್‌ನಲ್ಲಿ ಬಿಡುಗಡೆಯಾದಗ ಒಂದು ರೀತಿ ಇತ್ತು, ಡಿವಿಡಿಯಲ್ಲಿ ಬಿಡುಗಡೆಯಾದಗ ಬೇರೆ ರೀತಿ ಇತ್ತು. ಮಲಯಾಳಂನಲ್ಲಿ ಇಂತಹ ಪ್ರಯೋಗ ಇತ್ತು. ಕೇರಳದ ಕೆಲವು ಕಡೆಯ ಪ್ರೇಕ್ಷಕರಿಗೆ ಜೂಹ್ಲಿ ಚಾವ್ಲಾ ಮಮ್ಮುಟ್ಟಿಗೆ ಸಿಗುವ ರೀತಿ, ಕೇರಳದ ಇನ್ನು ಕೆಲವು ಪ್ರದೇಶಗಳ ಪ್ರೇಕ್ಷಕರಿಗೆ (ಥಿಯೇಟರ್‌ಗಳಲ್ಲಿ) ಜೂಹ್ಲಿ ಚಾವ್ಲಾ ಮೋಹನ್ ಲಾಲ್‌ಗೆ ಸಿಗುವಂತೆ ಎಂಡಿಂಗ್ ನೀಡಲಾಗಿತ್ತು. ಇದೇ ರೀತಿ ಯುಐ ಕೂಡ ಡಬಲ್ ಎಂಡಿಂಗ್ ಸಿನಿಮಾ ಎಂಬ ವದಂತಿ ಹಬ್ಬಿತ್ತು. ಜಾಗತಿಕವಾಗಿ ದೊಡ್ಡಮಟ್ಟದಲ್ಲಿ ಬಿಡುಗಡೆಯಾಗುವ ಈ ಸಿನಿಮಾದಲ್ಲಿ ಈ ರಿಸ್ಕ್ ತೆಗೆದುಕೊಂಡಿಲ್ಲ.