ಬ್ರಾಹ್ಮಣ ಎಂಬ ಕಾರಣಕ್ಕೆ ಅಮರನ್ ಸಿನಿಮಾದಲ್ಲಿ ಮೇಜರ್ ಮುಕುಂದ್ ವರದರಾಜನ್ ಜಾತಿ ಉಲ್ಲೇಖಿಸಿಲ್ಲವೇ? ಸ್ಪಷ್ಟನೆ ನೀಡಿದ ನಿರ್ದೇಶಕ
ಶಿವಕಾರ್ತಿಕೇಯನ್ ನಟನೆಯ ಅಮರನ್ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅತ್ಯುತ್ತಮವಾಗಿ ಗಳಿಕೆ ಮಾಡುತ್ತಿದೆ. ಈ ಸಿನಿಮಾಕ್ಕೆ ರಾಜ್‌ಕುಮಾರ್ ಪೆರಿಯಾಸಾಮಿ ನಿರ್ದೇಶನವಿದೆ. ಈ ಸಿನಿಮಾದಲ್ಲಿ ಮೇಜರ್ ಮುಕುಂದ್ ವರದರಾಜನ್ ಜಾತಿ ಉಲ್ಲೇಖಿಸದೆ ಇರುವುದಕ್ಕೆ ನಿರ್ದೇಶಕರು ಕಾರಣ ತಿಳಿಸಿದ್ದಾರೆ.
ಶಿವಕಾರ್ತಿಕೇಯನ್ ನಟನೆಯ ಅಮರನ್ ಸಿನಿಮಾವು ಮೇಜರ್ ಮುಕುಂದ್ ವರದರಾಜನ್ ಎಂಬ ಹುತಾತ್ಮ ಯೋಧನ ಜೀವನ ಕಥೆಯಾಗಿದೆ. ಈ ಸಿನಿಮಾ ಚಿತ್ರಮಂದಿರಗಳಲ್ಲಿ ಅಕ್ಟೋಬರ್ 31ರಂದು ಬಿಡುಗಡೆಯಾಗಿತ್ತು. ಈ ಚಿತ್ರದಲ್ಲಿ ಮುಕುಂದ್ ಅವರ ಜಾತಿ ಕುರಿತು ಯಾವುದೇ ಮಾಹಿತಿ ಇಲ್ಲ ಎಂದು ಒಂದಿಷ್ಟು ಜನರು ಟೀಕಿಸಿದ್ದರು.ಮೇಜರ್ ಮುಕುಂದ್ ಬ್ರಾಹ್ಮಣನಾಗಿರುವ ಕಾರಣ ಅವರ ಜಾತಿ ಉಲ್ಲೇಖಿಸಿಲ್ಲ ಎಂದು ಟೀಕಿಸಲಾಗಿತ್ತು. ಬ್ರಾಹ್ಮಣರು ಸೇನೆ ಸೇರುವುದಿಲ್ಲ ಎಂದು ಇನ್ನೊಂದು ವರ್ಗ ಟೀಕಿಸುವ ಸಮಯದಲ್ಲಿ ಈ ಸಿನಿಮಾದಲ್ಲಿ ಮುಕುಂದ್ ಜಾತಿ ಮರೆಮಾಚಲಾಗಿದೆ ಎಂಬ ಚರ್ಚೆ ಕಾವೇರಿತ್ತು. ಇತ್ತೀಚೆಗೆ ಅಮರನ್ ಸಿನಿಮಾದ ಸಕ್ಸಸ್ ಮೀಟ್‌ನಲ್ಲಿ ನಿರ್ದೇಶಕ ರಾಜ್‌ಕುಮಾರ್ ಪೆರಿಯಾಸಾಮಿ ಅವರು ಈ ವಿವಾದದ ಕುರಿತು ಸ್ಪಷ್ಟನೆ ನೀಡಿದ್ದಾರೆ. ದಿವಂಗತ ಮುಕುಂದ್ ಅವರ ಹೆತ್ತವರು ಮತ್ತು ಪತ್ನಿ ಇಂದು ರೆಬೆಕಾ ವರ್ಗೀಸ್ ಅವರ ವಿನಂತಿ ಮೇರೆಗೆ ಸಿನಿಮಾದಲ್ಲಿ ಮೇಜರ್ ಮುಕುಂದ್ ವರದರಾಜನ್ ಜಾತಿ ನಮೂದಿಸಿಲ್ಲ ಎಂದು ನಿರ್ದೇಶಕರು ಸ್ಪಷ್ಟನೆ ನೀಡಿದ್ದಾರೆ.
"ನನ್ನಲ್ಲಿ ಇಂದು ರೆಬೆಕಾ ವರ್ಗೀಸ್ ಅವರು ಒಂದೇ ಒಂದು ವಿನಂತಿ ಮಾಡಿದ್ರು. ಒಳ್ಳೆಯ ತಮಿಳು ನಟರೊಬ್ಬರು ಮುಕುಂದ್ ಪಾತ್ರ ಮಾಡಬೇಕೆಂದು ಅವರು ಬಯಸಿದರು. ಮುಕುಂದ್ ಅವರು ತಮಿಳಿಯನ್. ಹೀಗಾಗಿ, ಇದನ್ನು ಅವರು ಬಯಸಿದ್ದರು. ಶಿವಕಾರ್ತಿಕೇಯನ್ ಮೂಲ ತಮಿಳು ನಟ. ಇದೇ ಕಾರಣಕ್ಕೆ ಇವನರ್ನು ಆಯ್ಕೆ ಮಾಡಿಕೊಂಡೆ. ಅಚ್ಚಮಿಲೈ ಹಾಡನ್ನು ಇತರೆ ಭಾಷೆಗಳಲ್ಲಿಯೂ ಮೂಲಧಾಟಿಯಲ್ಲೇ ಹಾಡಲಾಗಿದೆ. ಸಿನಿಮಾದಲ್ಲಿ ಶಿವಕಾರ್ತಿಕೇಯನ್ ತನ್ನ ಮಗಳ ಜತೆ ಈ ಹಾಡು ಹಾಡುವ ದೃಶ್ಯವಿದೆ. ಶಿವಕಾರ್ತಿಕೇಯನ್ ಅವರ ಅದ್ಭುತ ನಟನೆ ಈ ಸಿನಿಮಾದ ಯಶಸ್ಸಿಗೆ ಕಾರಣವಾಗಿದೆ" ಎಂದು ನಿರ್ದೇಶಕ ರಾಜ್ ಕುಮಾರ್ ಪೆರಿಯಾಸಾಮಿ ಹೇಳಿದ್ದಾರೆ.
"ಇಂದು ರೆಬೆಕಾ ವರ್ಗೀಸ್ ಅವರು ಈ ಸಿನಿಮಾ ತಮಿಳು ಐಡೆಂಟೆಟಿ ಹೊಂದಿರಬೇಕೆಂದು ಬಯಸಿದ್ದರು. ಇದೇ ರೀತಿ ಮುಕುಂದ್ ಹೆತ್ತವರೂ ವಿನಂತಿ ಮಾಡಿದ್ದರು. ಮುಕುಂದ್ ತನ್ನ ತಂದೆಯನ್ನು ನೈನಾ ಎಂದು ತಾಯಿ ಗೀತಾರನ್ನು ಸ್ವೀಟಿ ಎಂದು ಕರೆಯುತ್ತಿದ್ದರು. ಇದೇ ರೀತಿ ಸಿನಿಮಾದಲ್ಲೂ ಬಳಸಲಾಗಿದೆ. ಇದೇ ರೀತಿ ಮುಕುಂದ್ ತಾನೊಬ್ಬ ಭಾರತೀಯ ಎಂದು ಹೆಮ್ಮೆಯಿಂದ ಹೇಳುತ್ತಿದ್ದರು. ಭಾರತೀಯ ಮತ್ತು ತಮಿಳಿಯನ್ ಹೊರತುಪಡಿಸಿ ಬೇರೆ ರೀತಿಯಲ್ಲಿ ಗುರುತಿಸಲು ಮುಕುಂದ್ ಬಯಸಿರಲಿಲ್ಲ. ಅವರ ಸರ್ಟಿಫಿಕೇಟ್‌ಗಳಲ್ಲಿಯೂ ಅದೇ ರೀತಿ ನಮೂದಿಸಲಾಗಿತ್ತು. ಈ ಎರಡು ಐಡೆಂಟೆಟಿಗಳಲ್ಲಿ ಮಾತ್ರ ಸಿನಿಮಾದಲ್ಲಿ ತಮ್ಮ ಮಗನನ್ನು ಗುರುತಿಸಿ ಎಂದು ಮುಕುಂದ್ ಹೆತ್ತವರು ಹೇಳಿದ್ದರು. ಇದೇ ಕಾರಣಕ್ಕೆ ಸಿನಿಮಾದಲ್ಲಿ ಜಾತಿ ಬಂದಿಲ್ಲ" ಎಂದು ರಾಜ್‌ಕುಮಾರ್ ಪೆರಿಯಾಸಾಮಿ ಸ್ಪಷ್ಟನೆ ನೀಡಿದ್ದಾರೆ.
"ನಾನು ಮೊದಲ ಬಾರಿಗೆ ಮೇಜರ್ ಮುಕುಂದ್ ವರದರಾಜನ್ ಅವರ ಹೆತ್ತವರನ್ನು ಭೇಟಿಯಾದ ಸಂದರ್ಭದಲ್ಲಿಯೇ ಅವರು ಈ ವಿನಂತಿ ಮಾಡಿದ್ದರು. ಈ ಸಿನಿಮಾ ಪ್ರಯಾಣದಲ್ಲಿ ನಾನೊಬ್ಬ ನಿರ್ದೇಶಕನಾಗಿ ನನಗೆ ಜಾತಿ ನಮೂದಿಸಬೇಕು ಎಂದು ಅನಿಸಲಿಲ್ಲ. ನಾನು ದಿವಂಗತ ಮುಕುಂದ್ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮನೆಯವರು ನನ್ನಲ್ಲಿ ನನ್ನ ಜಾತಿ ಯಾವುದೆಂದು ಕೇಳಲಿಲ್ಲ. ನಾವು ಕೂಡ ಜಾತಿ ಕೇಳಿಲ್ಲ. ಮೇಜರ್ ಮುಕುಂದ್ ಅವರು ಅಶೋಕ ಚಕ್ರ ಪ್ರಶಸ್ತಿ ವಿಜೇತರು. ಅವರಿಗೆ ಅಮರನ್ ಸಿನಿಮಾದ ಮೂಲಕ ಗೌರವ ನೀಡಲಾಗಿದೆ" ಎಂದು ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ.
ದಿವಂಗತ ಮೇಜರ್ ಮುಕುಂದ್ ವರದರಾಜನ್ ಅವರು ಐಯ್ಯಂಗಾರ್ ಸಮುದಾಯದಲ್ಲಿ ಜನಿಸಿದ್ದರು. ಆದರೆ, ಅಮರನ್ ಸಿನಿಮಾದಲ್ಲಿ ಇವರನ್ನು ಹಿಂದೂ ಎಂದು ಮಾತ್ರ ತೋರಿಸಲಾಗಿತ್ತು. ಜಾತಿಯನ್ನು ನಮೂದಿಸಲಾಗಿರಲಿಲ್ಲ. ಇದೇ ರೀತಿ, ಮುಕುಂದ್ ಪತ್ನಿಯನ್ನು ಕ್ರಿಶ್ಚಿಯನ್ ಎಂದು ತೋರಿಸಲಾಗಿತ್ತು. ಅಮರನ್ ಸಿನಿಮಾ ಬಿಡುಗಡೆಯಾಗಿ ಆರು ದಿನಗಳು ಕಳೆದಿವೆ. ಈ ಆರು ದಿನಗಳಲ್ಲಿ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ 150 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಮಾಡಿದೆ.