DKD: ಕ್ಷಮೆ ಯಾಚಿಸಿದರೂ ಸಮಾಧಾನವಾಗದ ಯಕ್ಷಗಾನ ಪ್ರೇಮಿಗಳು...ನಿರೂಪಕಿ ಅನುಶ್ರೀ ಬಗ್ಗೆ ಕೂಡಾ ಬೇಸರ
ಈ ಪೋಸ್ಟ್ಗೆ ಅನೇಕರು ವಿಭಿನ್ನ ಕಮೆಂಟ್ ಮಾಡುತ್ತಿದ್ದಾರೆ. ಈ ರೀತಿ ಕ್ಷಮೆ ಯಾಚಿಸಿದ ಮಾತ್ರಕ್ಕೆ ನಾವು ಸುಮ್ಮನಿರುವುದಿಲ್ಲ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆ ಮೇಲೆ ಕಾರ್ಯಕ್ರಮಕ್ಕೆ ಸಂಬಂಧಿಸಿದವರು ಕ್ಷಮೆ ಯಾಚಿಸಬೇಕು ಎಂದು ಕೆಲವರು ಒತ್ತಾಯಿಸಿದ್ದಾರೆ. ಇನ್ನೂ ಕೆಲವರು ನಿರೂಪಕಿ ಅನುಶ್ರೀ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರತಿ ಶನಿವಾರ ಹಾಗೂ ಭಾನುವಾರ ಬಂತೆಂದರೆ ಸಾಕು ಡ್ಯಾನ್ಸ್ ಪ್ರಿಯರು ಜೀ ಕನ್ನಡದಲ್ಲಿ ಪ್ರಸಾರವಾಗುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮ ನೋಡಲು ಕಾಯುತ್ತಾರೆ. ಈ ಕಾರ್ಯಕ್ರಮಕ್ಕೆ ಸಾಕಷ್ಟು ಅಭಿಮಾನ ಬಳಗವಿದೆ. ಆದರೆ ಇತ್ತೀಚೆಗೆ ಕಾರ್ಯಕ್ರಮದಲ್ಲಿ ಆದ ಒಂದು ತಪ್ಪಿನಿಂದಾಗಿ ವಾಹಿನಿಯು ಬಹಿರಂಗವಾಗಿ ಕ್ಷಮೆ ಯಾಚಿಸಿದೆ.
ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಕರ್ನಾಟಕದ ಸಾಂಪ್ರದಾಯಿಕ ಕಲೆ ಯಕ್ಷಗಾನಕ್ಕೆ ಅವಮಾನ ಮಾಡಿದ್ದಾರೆ ಎಂಬ ಕಾರಣಕ್ಕೆ ಯಕ್ಷಗಾನಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದರು. ಇತ್ತೀಚಿನ ಎಪಿಸೋಡ್ನಲ್ಲಿ ಕಾರ್ಯಕ್ರಮದ ಸ್ಪರ್ಧಿಗಳು ತಮ್ಮ ಮೆಂಟರ್ ಜೊತೆ ಡ್ಯಾನ್ಸ್ ಮಾಡಬೇಕಿತ್ತು. ಅದರಂತೆ ಮಂಜು ಮಾಸ್ಟರ್, ತಮ್ಮ ತಂಡದೊಂದಿಗೆ ಯಕ್ಷಗಾನ ವೇಷ ತೊಟ್ಟು ಪರ್ಫಾಮ್ ಮಾಡಿದ್ದರು. ಆದರೆ ಇದಕ್ಕೆ ಸಿನಿಮಾ ಹಾಡನ್ನು ಬಳಸಿಕೊಳ್ಳಲಾಗಿತ್ತು. ಜೊತೆಗೆ ಕಾಮಿಡಿಯಾಗಿ ತೋರಿಸಲಾಗಿತ್ತು. ಇದು ಹಲವರ ಬೇಸರಕ್ಕೆ ಕಾರಣವಾಗಿತ್ತು. ಕೂಡಲೇ ಜೀ ಕನ್ನಡ ಕ್ಷಮೆ ಯಾಚಿಸಬೇಕು ಎಂದು ಪಟ್ಟು ಹಿಡಿಯಲಾಗಿತ್ತು.
ಕಾರ್ಯಕ್ರಮದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಜೀ ಕನ್ನಡ, ವೀಕ್ಷಕರಿಗೆ ಕ್ಷಮೆ ಕೇಳಿತ್ತು. ಜೀ ಕನ್ನಡ ವಾಹಿನಿಯು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆ ಮೂಲಕ ಅನೇಕ ಕಲಾ ಪ್ರಕಾರಗಳನ್ನು ಗೌರವಿಸುತ್ತಾ ನಾಡಿನ ಜನತೆಗೆ ಪರಿಚಯಿಸುತ್ತಾ ಬಂದಿದೆ. ನಮ್ಮ ವೇದಿಕೆಯಲ್ಲಿ ಯಕ್ಷಗಾನಕ್ಕೆ ಕೂಡಾ ಪ್ರಾಮುಖ್ಯತೆ ನೀಡಿದ್ದು, ನೃತ್ಯಾಭಿಮಾನಿಗಳ ಪ್ರಶಂಸೆ ಪಡೆದಿದ್ದೇವೆ. ಆದರೆ ಕಳೆದ ವಾರ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಪ್ರಸಾರವಾದ ಯಕ್ಷಗಾನ ಕೆಲವರ ಭಾವನೆಗಳಿಗೆ ಧಕ್ಕೆಯಾಗಿದ್ದು ನಮ್ಮ ಗಮನಕ್ಕೆ ಬಂದಿದೆ. ಇದು ಉದ್ದೇಶಪೂರ್ವಕವಾಗಿ ಆಗಿದ್ದಲ್ಲವೆಂದು ವಾಹಿನಿ ಸ್ಪಷ್ಟೀಕರಿಸಲು ಬಯಸುತ್ತದೆ. ಮತ್ತು ಈ ಮೂಲಕ ಕ್ಷಮೆ ಯಾಚಿಸುತ್ತೇವೆ. ನಮ್ಮ ಅತ್ಯುತ್ತಮ ಕೆಲಸಗಳಿಗೆ ನೀವು ಕೊಟ್ಟ ಗೌರವ ಹಾಗೂ ನಾವು ಎಡವಿದಾಗ ನೀವು ಕೊಡುವ ಸಲಹೆಯನ್ನು ಕೂಡಾ ನಾವು ಸ್ವಾಗತಿಸುತ್ತೇವೆ. ಇಲ್ಲಿವರೆಗೂ ನೀವು ಕೊಟ್ಟ ಪ್ರೋತ್ಸಾಹ, ಬೆಂಬಲ ಹಾಗೇ ಮುಂದುವರೆಯಲಿ ಎಂದು ಜೀ ಕನ್ನಡ ವಾಹಿನಿ ಆಶಿಸುತ್ತದೆ ಎಂದು ವಾಹಿನಿ ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಕ್ಷಮೆ ಯಾಚಿಸಿತ್ತು.
ಈ ಪೋಸ್ಟ್ಗೆ ಅನೇಕರು ವಿಭಿನ್ನ ಕಮೆಂಟ್ ಮಾಡುತ್ತಿದ್ದಾರೆ. ಈ ರೀತಿ ಕ್ಷಮೆ ಯಾಚಿಸಿದ ಮಾತ್ರಕ್ಕೆ ನಾವು ಸುಮ್ಮನಿರುವುದಿಲ್ಲ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆ ಮೇಲೆ ಕಾರ್ಯಕ್ರಮಕ್ಕೆ ಸಂಬಂಧಿಸಿದವರು ಕ್ಷಮೆ ಯಾಚಿಸಬೇಕು ಎಂದು ಕೆಲವರು ಒತ್ತಾಯಿಸಿದ್ದಾರೆ. ಇನ್ನೂ ಕೆಲವರು ನಿರೂಪಕಿ ಅನುಶ್ರೀ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಅನುಶ್ರೀ ಕೂಡಾ ಮಂಗಳೂರಿನವರಾಗಿದ್ದು ಆಕೆ ಇದಕ್ಕೆಲ್ಲಾ ಅವಕಾಶ ಮಾಡಿಕೊಡಬಾರದಿತ್ತು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ #BoycottZeekannada ಹ್ಯಾಷ್ ಟ್ಯಾಗ್ ಅಭಿಯಾನ ಆರಂಭಿಸಲಾಗಿದೆ.
ಸದ್ಯಕ್ಕೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 6 ಪ್ರಸಾರವಾಗುತ್ತಿದೆ. ಕಾರ್ಯಕ್ರಮವನ್ನು ಅನುಶ್ರೀ ನಿರೂಪಣೆ ಮಾಡುತ್ತಿದ್ದಾರೆ. ಚಿನ್ನಿ ಮಾಸ್ಟರ್, ಅರ್ಜುನ್ ಜನ್ಯಾ, ರಕ್ಷಿತಾ ಪ್ರೇಮ್ ತೀರ್ಪುಗಾರರಾಗಿದ್ದರೆ, ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ವಿಶೇಷ ಜಡ್ಜ್ ಆಗಿದ್ದಾರೆ.