Yuva kannada movie: ಯುವರಾಜನಿಗೆ ಜೋಡಿಯಾದ ಸಪ್ತಮಿ; ʼಯುವʼ ಚಿತ್ರಕ್ಕೆ ನಾಯಕಿಯಾಗಿ ಕಾಂತಾರದ ಲೀಲಾ ಆಯ್ಕೆ!
ಕಾಂತಾರದ ಲೀಲಾ ಅಲಿಯಾಸ್ ಸಪ್ತಮಿ ಗೌಡ ಯುವ ರಾಜ್‌ಕುಮಾರ್ ನಟನೆಯ ʼಯುವʼ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ʼಯುವರಾಜನ ಅರಸಿಗೆ ಆದರದ ಸ್ವಾಗತʼ ಎಂದು ಚಿತ್ರ ಶೀರ್ಷಿಕೆ ನೀಡುವ ಮೂಲಕ ಸಪ್ತಮಿಯನ್ನು ಸ್ವಾಗತಿಸಿದೆ ಹೊಂಬಾಳೆ ಸಂಸ್ಥೆ.
ಈ ವರ್ಷದ ಬ್ಲಾಕ್ ಬಸ್ಟರ್ ಸಿನಿಮಾ ́ಕಾಂತಾರʼದ ಲೀಲಾ ಅಲಿಯಾಸ್ ಸಪ್ತಮಿ ಗೌಡ ಯುವ ರಾಜಕುಮಾರನ ಕೈ ಹಿಡಿಯಲು ಸಜ್ಜಾಗಿದ್ದಾರೆ. ಏನಪ್ಪಾ ಇದು ಸಪ್ತಮಿ ಗೌಡ ಮದುವೆಯಾಗಲಿದ್ದಾರಾ? ಎಂದುಕೊಳ್ಳಬೇಡಿ. ಈ ಬೆಡಗಿ ಡಾ. ರಾಜ್ ಕುಟುಂಬದ ಕುಡಿ, ರಾಘವೇಂದ್ರ ರಾಜ್‌ಕುಮಾರ್ ಅವರ ಎರಡನೇ ಮಗ ಯುವ ರಾಜ್‌ಕುಮಾರ್ ನಾಯಕನಾಗಿ ನಟಿಸುತ್ತಿರುವ ʼಯುವʼ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಇತ್ತೀಚೆಗಷ್ಟೇ ಈ ಸಿನಿಮಾದ ಟೈಟಲ್ ಬಿಡುಗಡೆಯಾಗಿದ್ದು, ಇದು ಯುವ ರಾಜ್‌ಕುಮಾರ್ ಅವರ ಚೊಚ್ಚಲ ಚಿತ್ರ. ಹೊಂಬಾಳೆ ಸಂಸ್ಥೆ ಚಿತ್ರ ನಿರ್ಮಾಣದ ಹೊಣೆ ಹೊತ್ತಿದ್ದು, ಸಂತೋಷ್ ಆನಂದ್ ರಾಮ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.
ʼಯುವʼ ಚಿತ್ರದ ಟೈಟಲ್ ಬಿಡುಗಡೆಯಾದ ದಿನದಿಂದಲೂ ನಾಯಕಿ ಯಾರು ಎಂಬ ಕುತೂಹಲ ಎಲ್ಲರಲ್ಲೂ ಕಾಡುತ್ತಿತ್ತು, ಅಲ್ಲದೆ ಹಿಂದಿ, ತಮಿಳು, ತೆಲುಗು ಸಿನಿರಂಗದ ನಾಯಕಿಯರ ಹೆಸರು ಕೇಳಿಬರುತ್ತಿತ್ತು. ಆದರೆ ಈ ಎಲ್ಲಾ ಗಾಸಿಪ್‌ಗಳನ್ನು ಸುಳ್ಳು ಮಾಡಿದೆ ಹೊಂಬಾಳೆ ಫಿಲ್ಮ್ಸ್.
ಸಪ್ತಮಿ ಗೌಡ ʼಯುವʼ ಚಿತ್ರದ ನಾಯಕಿ ಎಂಬುದನ್ನು ಹೊಂಬಾಳೆ ಸಂಸ್ಥೆ ತನ್ನ ಟ್ವಿಟ್ಟರ್ ಖಾತೆಯಲ್ಲಿ ಅಧಿಕೃತವಾಗಿ ಘೋಷಿಸಿದೆ. ʼಯುವʼ ರಾಜನ ಅರಸಿಗೆ ಆದರದ ಸ್ವಾಗತ ಎಂದು ಚಿತ್ರ ಶೀರ್ಷಿಕೆ ನೀಡುವ ಮೂಲಕ ಸಪ್ತಮಿಯನ್ನು ಸ್ವಾಗತಿಸಿದೆ ಈ ತಂಡ. ಆ ಮೂಲಕ ಸಪ್ತಮಿ ಹೊಂಬಾಳೆಯೊಂದಿಗೆ ಎರಡನೇ ಬಾರಿಗೆ ಕೈ ಜೋಡಿಸುತ್ತಿದ್ದಾರೆ. ತಮ್ಮನ್ನು ನಾಯಕಿಯಾಗಿ ಆಯ್ಕೆ ಮಾಡಿದ್ದಕ್ಕೆ ಹೊಂಬಾಳೆ ಸಂಸ್ಥೆಗೆ ಧನ್ಯವಾದ ಅರ್ಪಿಸಿದ್ದಾರೆ ಈ ಬೆಡಗಿ.
ಕಾಂತಾರ ಸಿನಿಮಾದ ನಟನೆಯಿಂದ ಸಾಕಷ್ಟು ಭರವಸೆ ಮೂಡಿಸಿದ್ದ ಸಪ್ತಮಿಗೆ ಸಾಲು ಸಾಲು ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಅಲ್ಲದೇ ಕಾಂತಾರದ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹೆಸರು ಗಳಿಸಿದ್ದಾರೆ ಮೈಸೂರಿನ ಈ ಹುಡುಗಿ.
ಹೆಚ್ಚಿದ ನಿರೀಕ್ಷೆ
ರಿಷಬ್ ಹಾಗೂ ಸಪ್ತಮಿ ಗೌಡ ಕೆಮಿಸ್ಟ್ರಿ ತೆರೆ ಮೇಲೆ ಸಖತ್ ಆಗಿ ವರ್ಕ್ ಆಗಿದ್ದು, ಯುವರಾಜ್ ಕುಮಾರ್ ಹಾಗೂ ಸಪ್ತಮಿ ಕೆಮಿಸ್ಟ್ರಿ ಹೇಗಿರಲಿದೆ ಎಂಬ ಬಗ್ಗೆ ಅಭಿಮಾನಿಗಳಲ್ಲಿ ಈಗಲೇ ಕುತೂಹಲ ಮೂಡುತ್ತಿದೆ. ಯುವ ಸಿನಿಮಾದ ಪೋಸ್ಟರ್ ಹಾಗೂ ಟೀಸರ್ ಈಗಾಗಲೇ ಬಿಡುಗಡೆ ಆಗಿದ್ದು, ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ.
ಸೈಮಾ ಪ್ರಶಸ್ತಿ
ಇವರು ಮೊದಲ ಬಾರಿ ನಟಿಸಿದ್ದು, ಡಾಲಿ ಧನಂಜಯ್ ಅಭಿಯನದ ʼಪಾಪ್ ಕಾರ್ನ್ ಮಂಕಿ ಟೈಗರ್ʼ ಸಿನಿಮಾದಲ್ಲಿ. ಪಾಪ್‌ಕಾರ್ನ್ ಮಂಕಿ ಟೈಗರ್ ಚಿತ್ರದಲ್ಲಿನ ಗಮನಾರ್ಹ ಪಾತ್ರಕ್ಕಾಗಿ ಸೈಮಾ ಅತ್ಯುತ್ತಮ ಚೊಚ್ಚಲ ನಟಿಗಾಗಿ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರು, ಈ ಚಿತ್ರ 2019ರಲ್ಲಿ ಬಿಡುಗಡೆಯಾಗಿತ್ತು.
ಹಿಂದಿಯಲ್ಲೂ ನಟನೆ
ಈ ನಡುವೆ ಅಭಿಷೇಕ್ ಅಂಬರೀಶ್ ನಟನೆಯ ಮುಂದಿನ ಚಿತ್ರ ʼಕಾಳಿʼಯಲ್ಲೂ ನಾಯಕಿಯ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ ಈ ಬೆಡಗಿ. ಬಾಲಿವುಡ್‌ನಿಂದಲೂ ಈಕೆಗೆ ಅವಕಾಶಗಳು ಬಂದಿದ್ದು, ದಿ ಕಾಶ್ಮೀರ್ ಫೈಲ್ ಖ್ಯಾತಿ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ʼದಿ ವ್ಯಾಕ್ಸಿನ್ ವಾರ್ʼ ಚಿತ್ರದಲ್ಲೂ ಈಕೆ ಬಣ್ಣ ಹಚ್ಚಲಿದ್ದಾರೆ. ದಿ ವ್ಯಾಕ್ಸಿನ್ ವಾರ್‌ನಲ್ಲಿ ಅನುಪಮ್ ಖೇರ್ ಹಾಗೂ ನಾನಾ ಪಾಟೇಕರ್ ಮುಖ್ಯ ಭೂಮಿಕೆಯಲ್ಲಿ ನಟಿಸಲಿದ್ದಾರೆ.
ಇನ್ನಷ್ಟು ಮನರಂಜನೆಯ ಸುದ್ದಿಗಳು ಇಲ್ಲಿವೆ:
ಹುಟ್ಟುಹಬ್ಬದಂದು ಟಾಲಿವುಡ್ ಚೊಚ್ಚಲ ಚಿತ್ರದ ಪೋಸ್ಟರ್ ಹಂಚಿಕೊಂಡ ಬಾಲಿವುಡ್ ಬೆಡಗಿ ಜಾಹ್ನವಿ ಕಪೂರ್. ಪೋಸ್ಟರ್‌ನಲ್ಲೇನಿತ್ತು?
ಇಂದು ಬಾಲಿವುಡ್ ಬೆಡಗಿ ಜಾಹ್ನವಿ ಕಪೂರ್ 26ನೇ ವರ್ಷದ ಹುಟ್ಟುಹಬ್ಬ. ಈ ಸಂದರ್ಭ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಟಾಲಿವುಡ್ ಚೊಚ್ಚಲ ಚಿತ್ರ ʼಎನ್‌ಟಿಆರ್30ʼ ಪೋಸ್ಟರ್ ಹಂಚಿಕೊಂಡಿದ್ದಾರೆ. ಈ ಪೋಸ್ಟರ್‌ನಲ್ಲಿನ ಜಾಹ್ನವಿ ಪೋಸ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
CFCA Awards 2023: 4ನೇ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ಸ್.. ಯಾವ ಸಿನಿಮಾಗೆ ಯಾವ ಪ್ರಶಸ್ತಿ, ಇಲ್ಲಿದೆ ಡೀಟೆಲ್ಸ್!
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ರಮ್ಯಾ, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ರಾಜೇಂದ್ರ ಸಿಂಗ್ ಬಾಬು, ಫಿಲ್ಮ್ ಚೇಂಬರ್ ಅಧ್ಯಕ್ಷ ಭಾ.ಮಾ.ಹರೀಶ್, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಹಾಗೂ ಇನ್ನಿತರರು ಹಾಜರಿದ್ದರು.