ಗೃಹಲಕ್ಷ್ಮಿ ಯೋಜನೆ ಹಣದಲ್ಲಿ ಬೋರ್ವೆಲ್ ಕೊರೆಯಿಸಿದ ಗಜೇಂದ್ರಗಡದ ಅತ್ತೆ ಸೊಸೆ, ಸಿಎಂ ಸಿದ್ದರಾಮಯ್ಯ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಶಂಸೆ
Gruhalakshmi Scheme: ಕರ್ನಾಟಕ ಸರ್ಕಾರದ ಗೃಹಲಕ್ಷ್ಮಿ ಯೋಜನೆ ಕರ್ನಾಟಕದ ಬಹುತೇಕ ಮಹಿಳೆಯರ ಆತ್ಮವಿಶ್ವಾಸ ಹೆಚ್ಚಿಸಿದ್ದು, ಒಂದೊಂದೇ ಯಶೋಗಾಥೆ ಬಹಿರಂಗವಾಗುತ್ತಿದೆ. ಗೃಹಲಕ್ಷ್ಮಿ ಯೋಜನೆ ಹಣದಲ್ಲಿ ಬೋರ್ವೆಲ್ ಕೊರೆಯಿಸಿದ ಗಜೇಂದ್ರಗಡದ ಅತ್ತೆ ಸೊಸೆ ಬಗ್ಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸಚಿವೆ ಲಕ್ಷ್ಮೀಹೆಬ್ಬಾಳ್ಕರ್ ಪ್ರಶಂಸೆ ವ್ಯಕ್ತಪಡಿಸಿದರು.
Gruhalakshmi Scheme: ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಐದು ಗ್ಯಾರೆಂಟಿ ಯೋಜನೆಗಳ ಪೈಕಿ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮೀ ಯೋಜನೆಯ ಒಂದೊಂದೇ ಯಶೋಗಾಥೆಗಳು ಬೆಳಕಿಗೆ ಬರುತ್ತಿವೆ. ಈ ಪೈಕಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗದಗ ಜಿಲ್ಲೆ ಗಜೇಂದ್ರಗಡದ ಅತ್ತೆ ಸೊಸೆಯರ ಯಶೋಗಾಥೆಯನ್ನು ಹಂಚಿಕೊಂಡಿದ್ದಾರೆ. ಕೆಲವು ಮಹಿಳೆಯರು ತಾವು ಕೂಡಿಟ್ಟ ಹಣದಲ್ಲಿ ತಮ್ಮ ಮಕ್ಕಳಿಗೆ ವಾಹನ ತೆಗೆಸಿಕೊಟ್ಟಿದ್ದಾರೆ. ಇನ್ನು ಕೆಲವರು ಮನೆಗೆ ಫ್ರಿಜ್, ವಾಷಿಂಗ್ಮಷಿನ್ ತೆಗೆದುಕೊಂಡಿದ್ದಾರೆ. ಈ ಅತ್ತೆ ಸೊಸೆ ಅದೇ ಹಣದಲ್ಲಿ ಜಮೀನಿನಲ್ಲಿ ಬೋರ್ವೆಲ್ ಕೊರೆಯಿಸಿ ಗಮನಸೆಳೆದಿದ್ದಾರೆ.
ಕೃಷಿ ಭೂಮಿಗೆ ಬೋರ್ವೆಲ್ ಕೊರೆಯಿಸಿದ ಗೃಹಲಕ್ಷ್ಮಿಯರು
ನಮ್ಮ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಮೂಲಕ ಪಡೆದ ಹಣದಲ್ಲಿ ಬೋರ್ವೆಲ್ ಕೊರೆಸಿ ಬದುಕು ಕಟ್ಟಿಕೊಂಡ ಅತ್ತೆ - ಸೊಸೆಯ ಮಾತುಗಳು ಕೇಳಿ ಖುಷಿಯಾಯಿತು. ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಮಾಲದಾರ ಓಣಿಯ ಅತ್ತೆ ಮಾಬುಬೀ ಹಾಗೂ ಸೊಸೆ ರೋಷನ್ ಬೇಗಂ ಪ್ರತಿ ತಿಂಗಳು ತಮಗೆ ಬಂದ ಗೃಹಲಕ್ಷ್ಮಿ ಹಣ ಕೂಡಿಟ್ಟು ಕೃಷಿ ಭೂಮಿಗೆ ಬೋರ್ವೆಲ್ ಕೊರೆಸಿ, ಸಮೃದ್ಧ ನೀರು ಪಡೆದಿದ್ದಾರೆ. ನಾಡಿನ ಬಡಕುಟುಂಬಗಳಿಗೆ ಆರ್ಥಿಕ ಶಕ್ತಿ ತುಂಬಿ, ಅವರನ್ನು ಸ್ವಾವಲಂಬಿಗಳನ್ನಾಗಿಸುವ ಈ ಯೋಜನೆಯ ಉದ್ದೇಶ ಯಶಸ್ವಿಯಾಗಿ ಈಡೇರುತ್ತಿರುವುದು ಯೋಜನೆಯನ್ನು ಜಾರಿಗೆ ಕೊಟ್ಟ ನನ್ನಲ್ಲಿ ಸಂತೃಪ್ತಭಾವ ಮೂಡಿಸಿದೆ. ಗೃಹಲಕ್ಷ್ಮಿ ಯೋಜನೆಯ ಹಣಕ್ಕಾಗಿ ಅತ್ತೆ - ಸೊಸೆಯ ನಡುವೆ ಜಗಳ ಆರಂಭವಾಗುತ್ತದೆ, ಸಂಸಾರಗಳು ಒಡೆಯುತ್ತವೆ ಎಂದು ಟೀಕಿಸಿದ ಜನರಿಗೆ ಬಾರಿಸಿದ ತಪರಾಕಿ ಇದು. ಬೆಳಕಿಗೆ ಬಾರದ ಇಂತಹ ಇನ್ನೂ ಸಾವಿರಾರು ಯಶೋಗಾಥೆಗಳಿವೆ, ಗೃಹಲಕ್ಷ್ಮಿ ನಾಡಿನ ತಾಯಂದಿರ ಬಾಳಿಗೆ ಅಕ್ಷರಶಃ ಭಾಗ್ಯಲಕ್ಷ್ಮಿಯಾಗಿದೆ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಗೃಹಲಕ್ಷ್ಮಿ ಸಿದ್ದರಾಮಯ್ಯ ರೊಕ್ಕ ಎಂದ ಅತ್ತೆ, ಸೊಸೆ
ಗೃಹಲಕ್ಷ್ಮಿ ಯೋಜನೆಯ ಹಣ ಸಿದ್ದರಾಮಯ್ಯ ರೊಕ್ಕ ಎಂದು ಅತ್ತೆ ಮಾಬುಬೀ ಮಾಲಧಾರ್ ಹೇಳಿದ್ದಾರೆ. ವಿಡಿಯೋದಲ್ಲಿ ಅವರಾಡಿದ ಮಾತುಗಳನ್ನು ಆಲಿಸಿದರೆ, "44 ಸಾವಿರ ರೂಪಾಯಿ ಇಬ್ಬರಿಗೂ ಬಂದ ಗೃಹಲಕ್ಷ್ಮಿ ಹಣ. ಇನ್ನೊಂದು 16 ಸಾವಿರ ರೂಪಾಯಿಯನ್ನು ಮಗ ಹಾಕಿದ್ದಾನೆ. ಕೃಷಿ ಜಮೀನಿಗೆ ಬೋರ್ವೆಲ್ ಕೊರೆಯಿಸಲು ಈ ರೊಕ್ಕ ಬಳಸಿದ್ದೇವೆ ಎಂದು ಹೇಳಿರುವುದು ಗಮನಸೆಳೆಯುತ್ತದೆ. ಸೊಸೆ ಹೆಸರು ರೋಷನ್ ಬೇಗಂ ಮಾಲಧಾರ್.
“ಗೃಹಲಕ್ಷ್ಮಿ ಹಣದಿಂದ ಬೊರವೆಲ್”: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆ ಅನುಷ್ಠಾನಗೊಂಡಾಗಿನಿಂದ ರಾಜ್ಯದಲ್ಲಿ ತನ್ನದೇ ಆದ ಸದ್ದನ್ನು ಮಾಡುತ್ತಿದ್ದು, ಲಕ್ಷಾಂತರ ಕೆಲಸ ಕಾರ್ಯಗಳಿಗೆ ಗೃಹಲಕ್ಷ್ಮಿಯ ಹಣ ವರದಾನವಾಗಿದೆ. ಯೋಜನೆಯಡಿ ಪ್ರತಿ ತಿಂಗಳು ನೀಡುತ್ತಿರುವ 2,000/- ರೂ, ಹಣ ಕೂಡಿಟ್ಟು ಗದಗ ಜಿಲ್ಲೆಯ ಗಜೇಂದ್ರಗಡ್ ಪಟ್ಟಣದ ಮಾಲದಾರ ಓಣಿಯ ಅತ್ತೆ ಹಾಗೂ ಸೊಸೆ ಬೊರವೆಲ್ ಹಾಕಿಸಿದ್ದು, ಬೊರವೆಲ್ ನಿಂದ ಒಳ್ಳೆಯ ನೀರನ್ನು ಪಡೆದಿದ್ದಾರೆ. ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಅತ್ತೆ ಮಾಬುಬೀ ಹಾಗೂ ಸೊಸೆ ರೋಷನ್ ಬೇಗಂ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಬೊರವೆಲ್ ಹಾಕಿಸಲು ಒಟ್ಟು 60 ಸಾವಿರ ರೂ,ಗಳು ಖರ್ಚಾಗಿದ್ದು, ಗೃಹಲಕ್ಷ್ಮಿ ಯೋಜನೆಯ 44 ಸಾವಿರ ಬಳಕೆ ಮಾಡಲಾಗಿದೆ, ಇನ್ನುಳಿದ ಹಣ ಮಗ ನೀಡಿರುವುದಾಗಿ ತಿಳಿದು ಬಂದಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಟ್ವೀಟ್ ಮಾಡಿದ್ದಾರೆ.
ಟೀಕೆಗಳು ಸಾಯ್ತವೆ, ಕೆಲಸಗಳು ಉಳಿತವೆ; ಡಿಕೆ ಶಿವಕುಮಾರ್
ವಿರೋಧ ಪಕ್ಷಗಳು ನಮ್ಮ ಗೃಹಲಕ್ಷ್ಮಿ ಯೋಜನೆಯಿಂದ ಅತ್ತೆ, ಸೊಸೆ ನಡುವೆ ಜಗಳ ಉಂಟಾಗುತ್ತದೆ ಎಂದು ಟೀಕೆ ಮಾಡಿದ್ದರು. ಆದರೆ ವಾಸ್ತವವೇ ಬೇರೆ. ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದ ಮಾಲಧಾರ ಓಣಿಯ ಅತ್ತೆ ಹಾಗೂ ಸೊಸೆ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ನೀಡುತ್ತಿರುವ 2000 ರೂ. ಹಣವನ್ನು ಕೂಡಿಟ್ಟು ಕೊಳವೆ ಬಾವಿ ಕೊರೆಸಿದ್ದಾರೆ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎನ್ನುವುದಕ್ಕೆ ಇದೊಂದು ನಿದರ್ಶನವಾಗಿದೆ. ನಮ್ಮ ದೃಢಸಂಕಲ್ಪ ಜನಪರವಾಗಿದ್ದು, ಗ್ಯಾರಂಟಿಗಳಿಂದ ಜನರಿಗೆ ಹೆಚ್ಚು ಅನುಕೂಲವಾಗಿದೆ ಎನ್ನುವ ಸಾರ್ಥಕತೆ ಇದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.