Yuva Rajkumar: ಸ್ಯಾಂಡಲ್‌ವುಡ್‌ ಅಖಾಡ ಎಂಟ್ರಿಗೆ ಯುವ ರಾಜ್‌ಕುಮಾರ್‌ ರೆಡಿ.. ಶುಕ್ರವಾರ ಚೊಚ್ಚಲ ಚಿತ್ರದ ಮುಹೂರ್ತ
ಕನ್ನಡ ಸುದ್ದಿ  /  ಮನರಂಜನೆ  /  Yuva Rajkumar: ಸ್ಯಾಂಡಲ್‌ವುಡ್‌ ಅಖಾಡ ಎಂಟ್ರಿಗೆ ಯುವ ರಾಜ್‌ಕುಮಾರ್‌ ರೆಡಿ.. ಶುಕ್ರವಾರ ಚೊಚ್ಚಲ ಚಿತ್ರದ ಮುಹೂರ್ತ

Yuva Rajkumar: ಸ್ಯಾಂಡಲ್‌ವುಡ್‌ ಅಖಾಡ ಎಂಟ್ರಿಗೆ ಯುವ ರಾಜ್‌ಕುಮಾರ್‌ ರೆಡಿ.. ಶುಕ್ರವಾರ ಚೊಚ್ಚಲ ಚಿತ್ರದ ಮುಹೂರ್ತ

ನಾಳೆ ಬೆಳಗ್ಗೆ ದೇವಸ್ಥಾನದಲ್ಲಿ ಮುಹೂರ್ತ ನಡೆದ ನಂತರ ಸಂಜೆ ಅಶೋಕ ಹೋಟೆಲ್‌ನಲ್ಲಿ ಟೀಸರ್‌ ಬಿಡುಗಡೆ ಕಾರ್ಯಕ್ರಮ ನಡೆಯುತ್ತದೆ ಎನ್ನಲಾಗಿದೆ. ಟೀಸರ್‌ ಚಿತ್ರೀಕರಣಕ್ಕಾಗಿ ಸಂತೋಷ್‌ ಆನಂದ್‌ ರಾಮ್‌ ಇತ್ತೀಚೆಗೆ ಮಿನರ್ವ ಮಿಲ್‌ನಲ್ಲಿ ಅದ್ಧೂರಿ ಸೆಟ್‌ ಹಾಕಿದ್ದರಂತೆ.

ಮಾರ್ಚ್‌ 3, ಯುವ ರಾಜ್‌ಕುಮಾರ್‌ ಮೊದಲ ಸಿನಿಮಾಗೆ ಮುಹೂರ್ತ
ಮಾರ್ಚ್‌ 3, ಯುವ ರಾಜ್‌ಕುಮಾರ್‌ ಮೊದಲ ಸಿನಿಮಾಗೆ ಮುಹೂರ್ತ (PC: Yuva Rajkumar Facebook)

ವಿನಯ್‌ ರಾಜ್‌ಕುಮಾರ್‌, ಧನ್ಯಾ ರಾಮ್‌ಕುಮಾರ್‌, ಧೀರೆನ್‌ ರಾಮ್‌ಕುಮಾರ್‌ ಸೇರಿದಂತೆ ಅಣ್ಣಾವ್ರ ಕುಟುಂಬದ ಪ್ರತಿಭೆಗಳು ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಈಗ ಯವ ರಾಜ್‌ಕುಮಾರ್‌ ಅವರ ಸ್ಯಾಂಡಲ್‌ವುಡ್‌ ಎಂಟ್ರಿಗೆ ಎಲ್ಲಾ ಸಿದ್ಧತೆ ಪೂರ್ಣಗೊಂಡಿದೆ. ಮಾರ್ಚ್‌ 3 ರಂದು ಯುವ ರಾಜ್‌ಕುಮಾರ್‌ ಚೊಚ್ಚಲ ಸಿನಿಮಾ ಮುಹೂರ್ತಕ್ಕೆ ದಿನಾಂಕ ನಿಗದಿ ಆಗಿದೆ.

ಇದಕ್ಕೂ ಮುನ್ನ 'ಯುವ ರಣಧೀರ ಕಂಠೀರವ' ಚಿತ್ರದ ಮೂಲಕ ಯುವ ರಾಜ್‌ಕುಮಾರ್‌ ಅವರನ್ನು ಲಾಂಚ್‌ ಮಾಡಲು ಪ್ಲ್ಯಾನ್‌ ಮಾಡಲಾಗಿತ್ತು. ಆದರೆ ಕಾರಣಾಂತರಗಳಿಂದ ಈ ಸಿನಿಮಾ ಮುಂದುವರೆಯಲಿಲ್ಲ. ಇದಾದ ನಂತರ ಯುವ ಚಿಕ್ಕಪ್ಪ ಪುನೀತ್‌ ರಾಜ್‌ಕುಮಾರ್‌, ಯುವ ಅವರನ್ನು ತಮ್ಮ ಪಿಆರ್‌ಕೆ ಬ್ಯಾನರ್‌ ಮೂಲಕ ಲಾಂಚ್‌ ಮಾಡಬೇಕು ಎಂದುಕೊಂಡಿದ್ದರು. ಆದರೆ ಅಷ್ಟರಲ್ಲಿ ಅಪ್ಪು ನಮ್ಮನ್ನೆಲ್ಲಾ ಅಗಲಿದರು. ಅವರ ಕನಸು ಕನಸಾಗಿಯೇ ಉಳಿಯುತ್ತದೆ ಎಂದುಕೊಳ್ಳುವಷ್ಟರಲ್ಲಿ ಹೊಂಬಾಳೆ ಫಿಲ್ಮ್‌ ಸಂಸ್ಥೆ ಹಾಗೂ ಸಂತೋಷ್‌ ಆನಂದ್‌ ರಾಮ್‌ ಜೊತೆ ಸೇರಿ ಪುನೀತ್‌ ಅವರ ಆಸೆಯನ್ನು ನನಸು ಮಾಡಲು ಹೊರಟಿದ್ದಾರೆ. ಯುವ ಮೊದಲ ಚಿತ್ರಕ್ಕೆ ಸಂತೋಷ್‌ ಆನಂದ್‌ ರಾಮ್‌ ನಿರ್ದೇಶನ ಮಾಡುತ್ತಿದ್ದು ಹೊಂಬಾಳೆ ಫಿಲ್ಮ್ಸ್‌ನ ವಿಜಯ್‌ ಕಿರಗಂದೂರು ನಿರ್ಮಾಣ ಮಾಡುತ್ತಿದ್ದಾರೆ.

ಟೀಸರ್‌ಗಾಗಿ ಮಿನರ್ವ ಮಿಲ್‌ನಲ್ಲಿ ಅದ್ಧೂರಿ ಸೆಟ್‌ ಹಾಕಿದ್ದ ಚಿತ್ರತಂಡ

ನಾಳೆ (ಮಾರ್ಚ್‌ 3) ಮುಹೂರ್ತ ನಡೆಯಲಿದ್ದು ಈ ಚಿತ್ರದ ಟೀಸರನ್ನು ಮಾರ್ಚ್‌ 17 ಪುನೀತ್‌ ರಾಜ್‌ಕುಮಾರ್‌ ಹುಟ್ಟುಹಬ್ಬದಂದು ರಿಲೀಸ್‌ ಮಾಡಲಾಗುವುದು ಎನ್ನಲಾಗುತ್ತಿದೆ. ಆದರೆ ಮತ್ತೊಂದು ಮೂಲಗಳ ಪ್ರಕಾರ ನಾಳೆ ಬೆಳಗ್ಗೆ ದೇವಸ್ಥಾನದಲ್ಲಿ ಮುಹೂರ್ತ ನಡೆದ ನಂತರ ಸಂಜೆ ಅಶೋಕ ಹೋಟೆಲ್‌ನಲ್ಲಿ ಟೀಸರ್‌ ಬಿಡುಗಡೆ ಕಾರ್ಯಕ್ರಮ ನಡೆಯುತ್ತದೆ ಎನ್ನಲಾಗಿದೆ. ಟೀಸರ್‌ ಚಿತ್ರೀಕರಣಕ್ಕಾಗಿ ಸಂತೋಷ್‌ ಆನಂದ್‌ ರಾಮ್‌ ಇತ್ತೀಚೆಗೆ ಮಿನರ್ವ ಮಿಲ್‌ನಲ್ಲಿ ಅದ್ಧೂರಿ ಸೆಟ್‌ ಹಾಕಿದ್ದರಂತೆ.

ಯುವರಾಜ್‌ಕುಮಾರ್‌ಗೆ ಸ್ವಾಗತ ಕೋರುತ್ತಿರುವ ಡಾ. ರಾಜ್‌ ಕುಟುಂಬದ ಅಭಿಮಾನಿಗಳು

ಪುನೀತ್‌ ರಾಜ್‌ಕುಮಾರ್‌ ನಿಧನರಾದಾಗ, ಯುವ ರಾಜ್‌ಕುಮಾರ್‌ ಅವರಲ್ಲಿ ಅಪ್ಪುವನ್ನು ನೋಡಲು ಬಯಸುತ್ತೇವೆ ಎಂದು ಅಭಿಮಾನಿಗಳು ಹೇಳಿಕೊಂಡು ಭಾವುಕರಾಗಿದ್ದರು. ಯುವ ಅವರೇ ಅಪ್ಪುವಿನ ಉತ್ತರಾಧಿಕಾರಿ ಎಂದಿದ್ದರು. ಪುನೀತ್‌ ಅವರಿಗಾಗಿ ಸಿದ್ಧಪಡಿಸಿರುವ ಕಥೆಗೆ ಯುವ ಅವರನ್ನೇ ನಾಯಕನನ್ನಾಗಿ ಆಯ್ಕೆ ಮಾಡಿಕೊಳ್ಳಿ ಎಂದು ಮನವಿ ಮಾಡಿದ್ದರು. ಇದೀಗ ಯುವ, ಮೊದಲ ಸಿನಿಮಾ ಲಾಂಚ್‌ ಆಗುತ್ತಿರುವುದಕ್ಕೆ ಅಭಿಮಾನಿಗಳು ಸಂತೋಷ ವ್ಯಕ್ತಪಡಿಸುತ್ತಿದ್ಧಾರೆ. ಸೋಷಿಯಲ್‌ ಮೀಡಿಯಾದಲ್ಲಿ ಮೆಚ್ಚಿನ ನಟನಿಗೆ ವೆಲ್‌ಕಮ್‌ ಹೇಳುತ್ತಿದ್ದಾರೆ.

ಯುವಗೆ ಜೋಡಿಯಾಗ್ತಿದ್ದಾರೆ ಮಲಯಾಳಿ ಚೆಲುವೆ

ಸಂತೋಷ್‌ ಆನಂದ್‌ ರಾಮ್‌ ಮತ್ತು ಯುವ ರಾಜ್‌ಕುಮಾರ್‌ ಕಾಂಬಿನೇಷನ್‌ನಲ್ಲಿ ಘೋಷಣೆ ಆಗಿರುವ ಈ ಸಿನಿಮಾಗೆ ನಾಯಕಿಯ ಆಯ್ಕೆ ಪ್ರಕ್ರಿಯೆ ಕೂಡಾ ಮುಗಿದಿದೆಯಂತೆ. ಶೀಘ್ರದಲ್ಲಿ ಈ ವಿಚಾರವನ್ನು ಚಿತ್ರ ನಿರ್ಮಾಣ ಸಂಸ್ಥೆ ಅಧಿಕೃತಗೊಳಿಸಲಿದೆಯಂತೆ. ಈಗಾಗಲೇ ಮಲಯಾಳಂ, ತೆಲುಗು ಮತ್ತು ತಮಿಳು ಸಿನಿಮಾ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡಿರುವ ಕಲ್ಯಾಣಿ ಪ್ರಿಯದರ್ಶನ್‌, ಕನ್ನಡಕ್ಕೆ ಬರಲು ರೆಡಿಯಾಗಿದ್ದಾರಂತೆ. ಮಾಲಿವುಡ್‌ ನಿರ್ದೇಶಕ ಪ್ರಿಯದರ್ಶನ್‌ ಮತ್ತು ಲಿಸ್ಸಿ ದಂಪತಿಯ ಪುತ್ರಿಯೇ ಈ ಕಲ್ಯಾಣಿ. ಕನ್ನಡ ಹೊರತುಪಡಿಸಿ ಇನ್ನುಳಿದ ಸೌತ್‌ ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮ ಅಭಿನಯದ ಮೂಲಕವೇ ಎಲ್ಲರ ಗಮನ ಸೆಳೆದಿದ್ದಾರೆ.

ಇದೀಗ ಡಾ. ರಾಜ್‌ಕುಮಾರ್‌ ಮೊಮ್ಮಗ, ರಾಘವೇಂದ್ರ ರಾಜ್‌ಕುಮಾರ್‌ ಕಿರಿಯ ಪುತ್ರ ಯುವ ರಾಜ್‌ಕುಮಾರ್‌ಗೆ ಕಲ್ಯಾಣಿ ಜೋಡಿಯಾಗಲಿದ್ದಾರೆ ಎಂಬ ಸುದ್ದಿ ಸ್ಯಾಂಡಲ್‌ವುಡ್‌ ಅಂಗಳದಲ್ಲಿ ಹರಿದಾಡುತ್ತಿದೆ. ಆದರೆ ಚಿತ್ರತಂಡ ಇದನ್ನು ಅಧಿಕೃತವಾಗಿ ಘೋಷಣೆ ಮಾಡಬೇಕಿದೆ.

Whats_app_banner