ಮುಕ್ತ ಖ್ಯಾತಿಯ ಟಿಎನ್‌ ಸೀತಾರಾಂ IR 8 ಎಂಬ ಭತ್ತ ಬೆಳೆದ ಆ ಕ್ಷಣ: 4 ದಶಕದ ಹಿಂದಿನ ಅವರದ್ದೇ ಹಸಿರು ನೆನಪು
ಕನ್ನಡ ಸುದ್ದಿ  /  ಕರ್ನಾಟಕ  /  ಮುಕ್ತ ಖ್ಯಾತಿಯ ಟಿಎನ್‌ ಸೀತಾರಾಂ Ir 8 ಎಂಬ ಭತ್ತ ಬೆಳೆದ ಆ ಕ್ಷಣ: 4 ದಶಕದ ಹಿಂದಿನ ಅವರದ್ದೇ ಹಸಿರು ನೆನಪು

ಮುಕ್ತ ಖ್ಯಾತಿಯ ಟಿಎನ್‌ ಸೀತಾರಾಂ IR 8 ಎಂಬ ಭತ್ತ ಬೆಳೆದ ಆ ಕ್ಷಣ: 4 ದಶಕದ ಹಿಂದಿನ ಅವರದ್ದೇ ಹಸಿರು ನೆನಪು

ನಿರ್ದೇಶಕ, ಕಲಾವಿದ ಟಿ.ಎನ್‌.ಸೀತಾರಾಂ ಅವರು ಕೆಲ ದಿನ ಕೃಷಿಕರಾಗಿ ಭತ್ತವನ್ನೂ ಬೆಳೆದಿದ್ದರು. ಅವರ ಆ ದಿನಗಳ ಕೃಷಿ ನೆನಪನ್ನು ಅವರೇ ಮತ್ತೆ ಮೆಲುಕು ಹಾಕಿದ್ದಾರೆ.

ಹಿರಿಯ ನಿರ್ದೇಶಕ ಟಿ.ಎನ್‌.ಸೀತಾರಾಂ ಭತ್ತ ಬೆಳೆದ ಕ್ಷಣದ ನೆನಪು ಹೀಗಿದೆ.
ಹಿರಿಯ ನಿರ್ದೇಶಕ ಟಿ.ಎನ್‌.ಸೀತಾರಾಂ ಭತ್ತ ಬೆಳೆದ ಕ್ಷಣದ ನೆನಪು ಹೀಗಿದೆ.

ನನ್ನ ತಂದೆ ಹೋದ ತಕ್ಷಣ ವ್ಯವಸಾಯದ ಜವಾಬ್ದಾರಿ ನನ್ನ ಮೇಲೆ ಬಿತ್ತು. ನಮ್ಮ ಗೌರಿಬಿದನೂರಿನ ಜಮೀನಿನ ಬಾವಿಯಲ್ಲಿ ಯಥೇಚ್ಛ ನೀರಿತ್ತು.

ಅದುವರೆಗೆ ಸಾಂಪ್ರದಾಯಿಕ ಭತ್ತದ ತಳಿ ಗಳಾದ ಕಲ್ಲೂಡಿ, ರತ್ನಚೂಡಿ, ಕೊಯಮತ್ತೂರು ಸಣ್ಣ ಭತ್ತವನ್ನು ಬೆಳೆಯುತ್ತಿದ್ದ ನಮ್ಮ ಜಮೀನಿನಲ್ಲಿ ಒಂದುಕಡೆ ಒಂದು ಐದುಗುಂಟೆಯಷ್ಟು ಖಾಲಿ ಜಮೀನಿರುವುದು ಕಂಡಿತು..

ಮಾರನೆಯ ದಿನ ಬೆಂಗಳೂರಿಗೆ ಬಂದು ಗಾಂಧಿನಗರದಲ್ಲಿ ಹೋಗುತ್ತಿದ್ದಾಗ ನ್ಯಾಷನಲ್ ಸೀಡ್ಸ್ ಕಾರ್ಪೋರೇಶನ್ ನ ಬೋರ್ಡ್ ಕಾಣಿಸಿತು.ಅದು ಕೇಂದ್ರ ಸರ್ಕಾರದ ನಿಗಮ ಎಂದಿತ್ತು.

ನಾನು ಒಳಗೆ ಹೋದಾಗ ನೂರಾರು ಬಗೆಯ ಕೃಷಿ ಕೈಪಿಡಿಗಳು.ಬೇಳೆಯ ಬಿತ್ತನೆ ಬೀಜಗಳು

ಅದರಲ್ಲಿ IR 8 ಎಂಬ ಭತ್ತದ ತಳಿಯ ಬೀಜದ ಪ್ಯಾಕೆಟ್ಗಳು ಕಾಣಿಸಿದವು. ಕುತೂಹಲದಿಂದ ಒಂದು 2 ಕೇಜಿಯ ಪ್ಯಾಕೆಟ್ ಕೊಂಡು ತಂದೆ ಊರಿಗೆ ಬಂದವನೇ ಆ ಐದು ಗುಂಟೆಗೆ ಈ ಭತ್ತ ಬೆಳೆಯಬೇಕೆಂದು ಏರ್ಪಾಡು ಮಾಡತೊಡಗಿದೆ. ಎರಡು 'ಗದ್ದೆ ನೇಗಿಲು' (ಆ ಕಡೆ ಅದನ್ನು ಮಡಿ ಮಡಕಲು ಎಂದು ಕರೆಯುತ್ತಿದ್ದರು) ಕಟ್ಟಿಸಿ ಉಳುಮೆ ಮಾಡಿಸಿ ಈ ಭತ್ತ ಸಸಿ ಮಾಡಿಸಿಡಿಸಿದೆ.ಅದನ್ನು ನೋಡಿ ಅಲ್ಲಿದ್ದ ನಮ್ಮ ಬಾಲಯ್ಯ, ಗುರಪ್ಪ, ರಾಮಯ್ಯ ಅವರೆಲ್ಲ ನನಗೆ ಈ ಭತ್ತ ಬೇಡವೆಂದು ಬುದ್ಧಿ ಹೇಳಿದರು.ಜಮೀನಿನಲ್ಲಿ ಮಿಕ್ಕ ಕಡೆ ರತ್ನಚೂಡಿ ಭತ್ತ ನಾಟಿ ಮಾಡಿ ಆಗಿತ್ತು.ಇಲ್ಲಿಯೂ ಬೇಕಿದ್ದರೆ ರತ್ನಚೂಡಿಯನ್ನೇ ಹಾಕೋಣವೆಂದು ಹೇಳಿದರು.ಅದೇಕೋ ನಾನು ಮೊಂಡು ಹಟ ಮಾಡಿ ಸಸಿ ಬಂದ ನಂತರ ಇದನ್ನೇ ಐದು ಗುಂಟೆಯಲ್ಲಿ ನಾಟಿ ಮಾಡಿಸಿಬಿಟ್ಟೆ.

ಇದಕ್ಕೆ ಗೊಬ್ಬರ, ರಸ ಗೊಬ್ಬರ ಏನೂ ಕೊಡಲಿಲ್ಲ.ಔಷಧಿಗಳೂ ಹೊಡೆಸಲಿಲ್ಲ..

ನಾಲ್ಕನೆಯ ತಿಂಗಳಿಗೆ ಮೂರು ಎಕರೆಯ ರತ್ನಚೂಡಿ ನಾಲ್ಕು ಅಡಿ ಬೆಳೆದು ಕಟಾವು ಆಗಿ ನಲವತ್ತು ಪಲ್ಲ ಭತ್ತ ಬಂತು. ಈ ಹೊಸ ತಳಿ ಭತ್ತದ ಪೈರು ನೆಲದಲ್ಲೇ ಕೂತಿತ್ತು.ಒಂದೂವರೆ ಅಡಿ ಎತ್ತರ ಅಷ್ಟೇ. ಆಗತಾನೇ ಅಲ್ಲಲ್ಲಿ ತೆನೆ ಕಟ್ಟಲು ಶುರುವಾಗಿತ್ತು.

ಬುದ್ಧಿ ಹೇಳಿದರೂ ಕೇಳದ ನನಗೆ ತಕ್ಕ ಶಾಸ್ತಿ ಆಯಿತೆಂದು ಬಾಲಯ್ಯ ಮುಂತಾದವರು ಒಳಗೊಳಗೆ ನಕ್ಕರು.ನೀರು ಕಟ್ಟಿದ ಕರೆಂಟ್ ಚಾರ್ಜ್ ಕೂಡಾ ಹುಟ್ಟುವುದಿಲ್ಲವೆಂದು ನನ್ನನ್ನು ಸೂಕ್ಷ್ಮವಾಗಿ ಹಂಗಿಸಿದರು.

ನಾಲ್ಕೂವರೆ ತಿಂಗಳು ಕಳೆಯುವ ವೇಳೆಗೆ

ಅದು ಕೂಡಾ ಕಟಾವಿಗೆ ಬಂತು. ಕುಳ್ಳಗೆ ಬೆಳೆದಿದ್ದ ಆ ಪೈರಿನಲ್ಲಿ ಐದು ಗುಂಟೆಯಿಂದ ಮೂವತ್ತರಿಂದ ಐವತ್ತು ಸೇರು ಭತ್ತ ಆದರೆ ಹೆಚ್ಚು ಎಂದು ಅಂದಾಜು ಮಾಡಿದರು.ನನಗೂ ಹಾಗೇ ಅನ್ನಿಸತೊಡಗಿತು..ವ್ಯವಸಾಯಗಾರನಾಗಿ ಮೊದಲವರ್ಷವೇ ನಾನು ಫೇಲ್ಯೂರ್ ಅನ್ನಿಸತೊಡಗಿತು.

ಕಟಾವಿನ ದಿನ ಅಲ್ಲಿದ್ದರೆ ಮಖಭಂಗ ಏನ್ನಿಸ ತೊಡಗಿತು.ಅದಕ್ಕೆ ಸರಿಯಾಗಿ ಬೆಂಗಳೂರಿನಲ್ಲಿ ಕಂಬಾರರ ಚಾಳೇಶ ನಾಟಕದ ಪ್ರಥಮ ಪ್ರಯೋಗ. ನಾನು, ಸಿಂಹ, ಚಿತ್ರ ನಟ ಲೋಕೇಶ್( ಆಗಿನ್ನೂ ಚಿತ್ರ ನಟ ಆಗಿರಲಿಲ್ಲ) ಪ್ರಮುಖ ಪಾತ್ರ ಗಳಿಲ್ಲಿದ್ದೆವು. ಅದಕ್ಕಾಗಿ ನಾಲ್ಕು ದಿನ ಬೆಂಗಳೂರಿನಲ್ಲಿ ಇರಲು ನಿರ್ಧರಿಸಿ ನನ್ನ ಮೋಟರ್ ಸೈಕಲ್ ಹತ್ತಿ ಬೆಂಗಳೂರಿಗೆ ಹೊರಟು ಬಿಟ್ಟೆ. ನಾಲ್ಕು ದಿನದ ಬದಲು ಆರು ತಿಂಗಳು ಬೆಂಗಳೂರಿನಲ್ಲಿದ್ದು ಸುಖವಾಗಿ ನಾಟಕ, ಹರಟೆ, ಅಪಾರ ಮಿತ್ರರ ಸಂಗ, ವಿದ್ಯಾರ್ಥಿ ಭವನ, ಹೀಗೆ ಕಾಲ ಕಳೆದು ಬಿಟ್ಟೆ. ಹೊಸ ಭತ್ತದ ತಳಿಯ ವೈಫಲ್ಯದ ಅವಮಾನ ಎದುರಿಸದೆ ಇರುವುದು ನನ್ನ ಉದ್ದೇಶವಾಗಿತ್ತು.

ಏಳನೆಯ ದಿನ ನಾಟಕದ ಸಂಭ್ರಮವೆಲ್ಲ ಮುಗಿದ ಮೇಲೆ ಒಂದು ಬೆಳಿಗ್ಗೆ ಮೋಟರ್ ಸೈಕಲ್ ನಲ್ಲಿ ಬೆಂಗಳೂರಿನಿಂದ ಗೌರಿಬಿದನೂರಿಗೆ ಬಂದೆ. ಆ ವೇಳೆಗೆ ನಮ್ಮ ತಾಯಿ ಗದ್ದೆ ಕೊಯಿಸಿ ರಾಶಿ ಮಾಡಿಸಿದ್ದರು.

50 ಸೇರಿಗಿಂತ ಸ್ವಲ್ಪ ಹೆಚ್ಚೇ ಇರುವ ಹಾಗೆ ಕಾಣಿಸಿತು.ಅಳತೆ ಮಾಡಿದಾಗ 9 ಪಲ್ಲ ಅಂದರೆ 900 ಸೇರು ಭತ್ತ ಆಗಿತ್ತು. ಯಥೇಚ್ಛ ಇಳುವರಿ.

IR 8 ಎಂಬ ಹೊಸತಳಿಯ ಮಹಾತ್ಮೆ. ಎಲ್ಲರಿಗೂ ಆಶ್ಚರ್ಯ..ನಮ್ಮ ತಾಯಿಗೆ ಸಂತೋಷ, ನನಗೆ ಒಳಗೊಳಗೇ ಸಂತೋಷದ ಜತೆಗೆ ಅಟ್ಟಹಾಸ.

ವೆಂಕಟಯ್ಯ ಶೆಟ್ಟರು ಪಲ್ಲಕ್ಕೆ ಎಂಭತ್ತು ರೂಪಾಯಿಯಂತೆ ಕೊಂಡುಕೊಂಡು ಕೊಟ್ಟ 720 ರೂಪಾಯಿಯಲ್ಲಿ ಅಮ್ಮನ ಕೈಗೆ ಐನೂರು ಕೊಟ್ಟು ಮಿಕ್ಕ ಹಣ ಜೇಬಿನಲ್ಲಿ ಹಾಕಿಕೊಂಡು ಮತ್ತೆ ಮೋಟರ್ ಸೈಕಲ್ ಮೇಲೆ ಬೆಂಗಳೂರಿನ ಕಡೆ ಹೊರಟೆ.

ಮುಂದಿನ ಸಾರಿ ನಾಲ್ಕು ಎಕರೆಗ ಹೊಸಾ ತಳಿ ಜಯಾ ಎಂಬ ಭತ್ತ ಹಾಕಿಸಿದೆ. 160 ಪಲ್ಲ ಭತ್ತ ಆಗಿತ್ತು.ಅದಕ್ಕೆ ರಸ ಗೊಬ್ಬರ ಹಾಕಿಸಿದ್ದೆ.

ನಂತರದ ದಿನಗಳಲ್ಲಿ ಹೊಸತಳಿಗಳು ಸಾಲು ಸಾಲು..ಅಸೀರಿಯಾ ಮುಟೆಂಡಾ ಎಂಬ ಕಳ್ಳೆಕಾಯಿ, ಇಂಡಾಫ್ ಎಂಬ ರಾಗಿ, ಐಸಿ 90 ಎಂಬ ಕಬ್ಬು ಹೀಗೆ.

ಎಲ್ಲವೂ ಅಧಿಕ ಇಳುವರಿಯವು.ಎಲ್ಲವನ್ನೂ ನಾನು ಹಾಕಿಸಿದೆ.ಇಡಿಯ ಭಾರತದಲ್ಲಿ ಕೃಷಿ ಕ್ರಾಂತಿ ಶುರುವಾಗಿತ್ತು.ಕೃಷಿಯ ಸಂಭ್ರಮ.

ರೈತನ ಜೇಬಿಗೆ ಸಂಭ್ರಮಕ್ಕೆ ತಕ್ಕ ಹಣ ಸಿಕ್ಕದಿದ್ದರೂ ಎಲ್ಲೆಡೆ ಕಣಜಗಳು ತುಂಬುತ್ತಿತ್ತು.

(ರಸಗೊಬ್ಬರದಿಂದ ಉಂಟಾದ ಹಾನಿ ಬಗ್ಗೆ ನನಗೆ ಆಗ ಸರಿಯಾಗಿ ತಿಳಿಯದು)

ವ್ಯವಸಾಯ ದುಃಖ, ಕಷ್ಟ ತರುವುದು ಸತ್ಯವಾದರೂ ಅಷ್ಟೇ ನೆಮ್ಮದಿ ಕೊಡುತ್ತಿತ್ತು..ಸುಖದ ದಿನಗಳು ಅವು..ನದಿಯ ಪಕ್ಕ ಜಮೀನು..ಜಮೀನಿನಲ್ಲಿ ಒಂಟಿ ಮನೆ..ಬೆಂಗಳೂರಿಗೆ ಬರಲು ಮೋಟರ್ ಸೈಕಲ್, ಸ್ವಲ್ಪ ಹಣ..... ಅಂಥಾ ಸುಖದ ಎಂಟು ವರ್ಷಗಳು ನನ್ನ ಬದುಕಿನಲ್ಲಿ ಮತ್ತೆ ಬರಲಿಲ್ಲ

ಎಷ್ಟೋ ಜನದ ಸಂತಸಕ್ಕೆ ಕಾರಣವಾಗಿದ್ದ ಕೃಷಿಕ್ರಾಂತಿಯ ರೂವಾರಿ ಸ್ವಾಮಿನಾಥನ್ ನಿಧನರಾಗಿದ್ದಾರೆ ಎಂಬ ಸುದ್ದಿ ನೋಡಿ ಇದೆಲ್ಲಾ ನೆನಪಾಯಿತು...

ಈಗ ನಮ್ಮ ಜಮೀನಿನಲ್ಲಿ ಭತ್ತದ ಬೆಳೆಯೂ ಇಲ್ಲ, ಬಾವಿಯಲ್ಲಿ ನೀರೂ ಇಲ್ಲ..ಬದುಕು ಹೀಗೇ..ಸುಖ ಮುಗಿಯುತ್ತದೆ.ನೆನಪಿನ ಕಷ್ಟ ಮಾತ್ರ ಉಳಿಯುತ್ತದೆ.

-ಟಿ.ಎನ್‌.ಸೀತಾರಾಂ

Whats_app_banner