DCM DK Shivakumar: ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ನುಡಿದಂತೆ ನಡೆದಿದ್ದಾರೆ; ಕೇಂದ್ರದಿಂದ ಅಕ್ಕಿ ತಡೆಗೆ ಡಿಸಿಎಂ ಡಿಕೆ ಶಿವಕುಮಾರ್ ವ್ಯಂಗ್ಯ
ಎಫ್‌ಸಿಐ ಕರ್ನಾಟಕಕ್ಕೆ ಹೆಚ್ಚುವರಿ ಅಕ್ಕಿ ನೀಡುವುದಕ್ಕೆ ತಡೆ ನೀಡಿರುವ ಕೇಂದ್ರ ಸರ್ಕಾರದ ವಿರುದ್ಧ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದು, ಜೆಪಿ ನಡ್ಡಾ ಅವರು ನುಡಿದಂತೆ ನಡೆದಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಬೆಂಗಳೂರು: ಭಾರತೀಯ ಆಹಾರ ನಿಗಮವು (Food Corporation of India) ಕರ್ನಾಟಕಕ್ಕೆ (Karnataka) ಹೆಚ್ಚುವರಿ ಅಕ್ಕಿ (Rice) ಮಾರಾಟ ಮಾಡುವುದಕ್ಕೆ ತಡೆ ನೀಡಿರುವ ಕೇಂದ್ರ ಸರ್ಕಾರದ (Union Govt) ವಿರುದ್ಧ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DCM DK Shivakumar) ತೀವ್ರವಾಗಿ ಖಂಡಿಸಿದ್ದಾರೆ.
ಬೆಂಗಳೂರಿನ (Bengaluru) ಕೆಪಿಸಿಸಿ ಕಚೇರಿಯಲ್ಲಿಂದು (ಜೂನ್ 16, ಶುಕ್ರವಾರ) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಬಿಜೆಪಿ ಸೋತರೆ ಕೇಂದ್ರ ಸರ್ಕಾರದ ಯೋಜನೆಗಳನ್ನು ಸ್ಥಗಿತಗೊಳಿಸುತ್ತೇವೆ ಅಂತ ಹೇಳಿದ್ದರು. ಅವರು ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ. ನಡ್ಡಾ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ. ಅವರು ನುಡಿದಂತೆ ನಡೆದಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಜನ ನಮಗೆ ಅಧಿಕಾರ ಮಾಡಲು ಅವಕಾಶ ಕೊಟ್ಟಿದ್ದಾರೆ. ಚುನಾವಣೆಗೂ ಮುನ್ನ ನಾವು ಘೋಷಣೆ ಮಾಡಿದ್ದ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡೇ ಮಾಡುತ್ತೇವೆ. ವಿಪಕ್ಷಗಳಾದ ಬಿಜೆಪಿ, ಜೆಡಿಎಸ್‌ನ ಚರ್ಚೆ, ಟೀಕೆಗಳಿಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ ಎಂದಿದ್ದಾರೆ.
ಒಕ್ಕೂಟದ ವ್ಯವಸ್ಥೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಪಕ್ಷ ಸೋತ ರಾಜ್ಯಗಳಲ್ಲೂ ಅಭಿವೃದ್ಧಿ ಕೆಲಸಗಳನ್ನು ಮಾಡುವ ಭರವಸೆ ನೀಡಿದ್ದರು. ಆದರೆ ಇದೀಗ ರಾಜ್ಯಕ್ಕೆ ಹೆಚ್ಚುವರಿ ಅಕ್ಕಿ ನೀಡುವುದಕ್ಕೆ ಕೇಂದ್ರ ಸರ್ಕಾರ ತಡೆ ನೀಡಿದೆ ಎಂದು ತಿಳಿಸಿದ್ದಾರೆ.
ಯಾರು ಕೂಡ ಹಸಿವಿನಿಂದ ಇರಬಾರದು ಎಂಬ ಕಾರಣಕ್ಕೆ ರಾಜ್ಯದ ಪ್ರತಿಷ್ಠಿತ ಅನ್ನಭಾಗ್ಯ ಯೋಜನೆಯನ್ನು ಜಾರಿ ಮಾಡಬೇಕಿದೆ. ಯೋಜನೆಯಡಿ ಮೊದಲು 5 ಕೆಜಿಯಿಂದ ಆರಂಭವಾಗಿ 7 ಕೆಜಿಗೆ ತರಲಾಗಿತ್ತು. ಇದನ್ನು ಬಿಜೆಪಿ ಸರ್ಕಾರ ಮತ್ತೆ ಐದು ಕೆಜಿಗೆ ಇಳಿಸಿತ್ತು.
ನಾವು ಸರ್ಕಾರದ ರಚನೆ ಮಾಡಿದ ಮೊದಲ ದಿನವೇ ಸಚಿವ ಸಂಪುಟದಲ್ಲಿ ಚರ್ಚಿಸಿ ಯೋಜನೆ ಜಾರಿಗೆ ತರಲು ಬದ್ದತೆಯನ್ನು ತೋರಿಸುತ್ತಿದ್ದೇವೆ. ಎರಡನೇ ಸಚಿವ ಸಂಪುಟದಲ್ಲಿ ಯಾವ ಗ್ಯಾರಂಟಿಯನ್ನು ಯಾವಾಗ ಆರಂಭ ಮಾಡಬೇಕೆಂದು ಚರ್ಚಿಸುತ್ತಿದ್ದೇವೆ. ಈ ಬಗ್ಗೆ ಹಲವರ ಸಲಹೆಗಳನ್ನು ಪಡೆದಿದ್ದೇವೆ. ಇದರ ಸಾಧಕ ಬಾಧಕಗಳನ್ನು ನೋಡಿಕೊಂಡು ಉಳಿದ ಯೋಜನೆಗಳನ್ನು ಮುಂದಿನ ದಿನಗಳಲ್ಲಿ ಜಾರಿ ಮಾಡುವುದಾಗಿ ಡಿಕೆ ಶಿವಕುಮಾರ್ ಭರವಸೆ ನೀಡಿದ್ದಾರೆ.
ಅನ್ನಭಾಗ್ಯ ಯೋಜನೆಯಡಿಯಲ್ಲಿ ಹೆಚ್ಚುವರಿ ಅಕ್ಕಿ ವಿತರಣೆಗೆ ಪೂರಕವಾಗಿ 15 ದಿನಗಳೊಳಗೆ 2.28 ಲಕ್ಷ ಟನ್ ಹೆಚ್ಚುವರಿ ಅಕ್ಕಿಯನ್ನು ಕರ್ನಾಟಕಕ್ಕೆ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಯೋಜನೆಯಡಿ ಮಾರಾಟ ಮಾಡಲು ಆಹಾರ ನಿಗಮ ಒಪ್ಪಿಗೆ ನೀಡಿತ್ತು. ಆದ್ರೆ ಇದೀಗ ಉಲ್ಟಾ ಹೊಡೆದಿದೆ. ಒಪ್ಪಿಗೆ ನೀಡಿದ್ದ ಮರುದಿನವೇ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದು, ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಅಕ್ಕಿ ನೀಡುವುದಿಲ್ಲ ಎಂದು ಹೇಳಿದೆ.
7 ಲಕ್ಷ ಟನ್ ಅಕ್ಕಿ ಲಭ್ಯವಿದೆ ಎಂದು ರಾಜ್ಯ ಸರ್ಕಾರಕ್ಕೆ ತಿಳಿಸಿದ್ದ ಭಾರತೀಯ ಆಹಾರ ನಿಗಮವು ಕೆಜಿಗೆ 36.60 ರೂಪಾಯಿಯಂತೆ 2.28 ಲಕ್ಷ ಟನ್ ಅಕ್ಕಿ ಮಾರುವುದಾಗಿ ಜೂನ್ 12 ರಂದು ಪತ್ರ ಬರೆದಿತ್ತು. ಇದಾದ ಮರುದಿನವೇ ಮತ್ತೊಂದು ಪತ್ರ ಬರೆದ ನಿಗಮವು, ಕರ್ನಾಟಕಕ್ಕೆ ಅಕ್ಕಿ ಸ್ಥಗಿತಗೊಳಿಸಲಾಗಿದೆ ಎಂಬ ಮಾಹಿತಿ ನೀಡಿದೆ. ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಸಿಎಂ ಸಿದ್ದರಾಮಯ್ಯ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.