Bangalore News: ವಾಹನ ಸಂಖ್ಯೆಯಲ್ಲಿ ದೆಹಲಿಯನ್ನೂ ಹಿಂದಿಕ್ಕಿದ ಬೆಂಗಳೂರು, ಪ್ರತಿದಿನ ನೋಂದಣಿಯಾಗುತ್ತಿವೆ 2000 ವಾಹನಗಳು !
ಕನ್ನಡ ಸುದ್ದಿ  /  ಕರ್ನಾಟಕ  /  Bangalore News: ವಾಹನ ಸಂಖ್ಯೆಯಲ್ಲಿ ದೆಹಲಿಯನ್ನೂ ಹಿಂದಿಕ್ಕಿದ ಬೆಂಗಳೂರು, ಪ್ರತಿದಿನ ನೋಂದಣಿಯಾಗುತ್ತಿವೆ 2000 ವಾಹನಗಳು !

Bangalore News: ವಾಹನ ಸಂಖ್ಯೆಯಲ್ಲಿ ದೆಹಲಿಯನ್ನೂ ಹಿಂದಿಕ್ಕಿದ ಬೆಂಗಳೂರು, ಪ್ರತಿದಿನ ನೋಂದಣಿಯಾಗುತ್ತಿವೆ 2000 ವಾಹನಗಳು !

ಬೆಂಗಳೂರು ನಗರದಲ್ಲೆಡೆ ಸಂಚಾರ ದಟ್ಟಣೆಯದ್ದೇ ಸಮಸ್ಯೆ. ಇದಕ್ಕೆ ಕಾರಣ ವಾಹನಗಳ ಸಂಖ್ಯೆಯಲ್ಲಿ ಹೆಚ್ಚಳ. ದೆಹಲಿ ನಗರವನ್ನೂ ಬೆಂಗಳೂರು ನಗರ ವಾಹನಗಳ ಸಂಖ್ಯೆಯಲ್ಲಿ ಹಿಂದಿಕ್ಕಿದೆವರದಿ: ಎಚ್‌.ಮಾರುತಿ. ಬೆಂಗಳೂರು

ಬೆಂಗಳೂರಿನಲ್ಲಿ ವಾಹನದ ಸಾಂಧ್ರತೆ ದೆಹಲಿಯನ್ನೂ ಹಿಂದಿಕ್ಕಿದೆ.
ಬೆಂಗಳೂರಿನಲ್ಲಿ ವಾಹನದ ಸಾಂಧ್ರತೆ ದೆಹಲಿಯನ್ನೂ ಹಿಂದಿಕ್ಕಿದೆ.

ಬೆಂಗಳೂರು: ಇದು ಬೆಂಗಳೂರಿನ ಹಿರಿಮೆ ಎಂದು ಕರೆಯಬೇಕೇ ಗೊತ್ತಿಲ್ಲ. ದೆಹಲಿ ಮತ್ತು ಬೇರೆ ಯಾವುದೇ ರಾಜಧಾನಿ ನಗರಕ್ಕಿಂತ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅತಿ ಹೆಚ್ಚು ವಾಹನಗಳಿವೆ. ಮಾಹಿತಿ ತಂತ್ರಜ್ಞಾನ ನಗರಿಯಲ್ಲಿ ಪ್ರತಿ 1000 ಜನಸಂಖ್ಯೆಗೆ 827 ವಾಹನಗಳಿವೆ.ಮುಂಬೈನಲ್ಲಿ 220, ದೆಹಲಿಯಲ್ಲಿ 320 ವಾಹನಗಳಿವೆ. ಭಾರತವನ್ನು ಬಿಟ್ಟುಬಿಡಿ. ನ್ಯೂಯಾರ್ಕ್ ನಗರದಲ್ಲಿ ಪ್ರತಿ ಸಾವಿರ ಜನಸಂಖ್ಯೆಗೆ ಕೇವಲ 539 ವಾಹನಗಳಿವೆ.

ವಾಹನಗಳು ಅತಿಯಾದ ಕಾರಣಕ್ಕೆ ಗಂಟೆಗೆ ಸರಾಸರಿ 18 ಕಿಮೀ ವೇಗದಲ್ಲಿ ಚಲಿಸುತ್ತವೆ. ಒಂದು ಕಡೆ ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದು, ಮತ್ತೊಂದು ಕಡೆ ವಾಹನಗಳ ವೇಗ ಕಡಿಮೆಯಾಗುತ್ತಿದೆ. ಇತ್ತೀಚಿನ ದಶಕಗಳಲ್ಲಿ ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ ವೇಗವಾಗಿ ಬೆಳೆಯುತ್ತಿದೆ.

ವಾಹನಗಳ ಸಂಖ್ಯೆ ಏರಿಕೆ ಹಾದಿ

1976ರಲ್ಲಿ ಪ್ರತಿ 1000 ಜನಸಂಖ್ಯೆಗೆ ಕೇವಲ 40 ವಾಹನಗಳಿದ್ದರೆ 2022ರಲ್ಲಿ 821 ವಾಹನಗಳಿವೆ. 14 ಸಾವಿರ ಕಿಮೀ ರಸ್ತೆಯಿದ್ದು, 1.2 ಕೋಟಿ ನೊಂದಾಯಿತ ವಾಹನಗಳಿವೆ. ಇಡೀ ದೇಶದಲ್ಲಿ ಬೆಂಗಳೂರಿನಲ್ಲಿ ಅತಿ ಹೆಚ್ಚು ಖಾಸಗಿ ವಾಹನಗಳಿವೆ ಎನ್ನುವುದು ಮತ್ತೊಂದು ವಿಶೇಷವಾಗಿದೆ.

ದೆಹಲಿಯಲ್ಲಿ 20.7 ಲಕ್ಷ ಖಾಸಗಿ ಕಾರುಗಳಿದ್ದರೆ ಬೆಂಗಳೂರಿನಲ್ಲಿ 23 ಲಕ್ಷ ಕಾರುಗಳು ಸೇರಿ 38 ಲಕ್ಷ ಖಾಸಗಿ ವಾಹನಗಳಿವೆ. ಬೆಂಗಳೂರಿನಲ್ಲಿ ಪ್ರತಿ ದಿನ ಅಂದಾಜು 2000 ವಾಹನಗಳ ನೋಂದಣಿಯಾಗುತ್ತಿದೆ. ಬೆಂಗಳೂರಿನಲ್ಲಿ ಖಾಸಗಿ ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದು ರಸ್ತೆಗಳ ಮೇಲಿನ ಒತ್ತಡ ಹೆಚ್ಚಳವಾಗುತ್ತಿದೆ ಎಂದು ಸಂಚಾರಿ ತಜ್ಞರು ಅಭಿಪ್ರಾಯಪಡುತ್ತಾರೆ.

2012-13ರಲ್ಲಿ 55 ಲಕ್ಷ ವಾಹನಗಳಿದ್ದು, ಈಗ ದ್ವಿಗುಣಗೊಂಡಿದೆ. ಜನಸಂಖ್ಯೆಯು ಸಂಯುಕ್ತ ವಾರ್ಷಿಕ ಬೆಳವಣಿಗೆ ಆಧಾರದಲ್ಲಿ ಜನಸಂಖ್ಯೆಯು ಶೇ.3.745 ರಷ್ಟು ಬೆಳೆದಿದ್ದರೆ ವಾಹನಗಳ ಸಂಖ್ಯೆಯು ಶೇ.10ರಷ್ಟು ಬೆಳೆದಿದೆ. 14 ಸಾವಿರ ಕಿಮೀ ರಸ್ತೆಯಲ್ಲಿ ಬೆಂಗಳೂರಿನಲ್ಲಿ 400 ಸಿಗ್ನಲ್ ಆಧಾರಿತ ಮತ್ತು600 ಮಾನವ ಆಧಾರಿತ ಸೇರಿ 14 ಸಾವಿರ ಇಂಟರ್ ಸೆಕ್ಷನ್ ಗಳಿವೆ.ʼ

ಬೆಂಗಳೂರಿನ ರಸ್ತೆಗಳಲ್ಲಿ ಅತಿ ಹೆಚ್ಚುಸಂಚರಿಸುವುದು ಶೇ.70ರಷ್ಟಿರುವ ದ್ವಿಚಕ್ರ ವಾಹನಗಳು ಮತ್ತು 6,400 ಬಿಎಂಟಿಸಿ ಬಸ್ ಗಳು. ಬೆಂಗಳೂರಿನ ಒಟ್ಟು ವಾಹನಗಳಲ್ಲಿ ಶೇ.34ರಷ್ಟು ಖಾಸಗಿ ವಾಹನಗಳು, ಶೇ.32ರಷ್ಟು ಸರ್ಕಾರಿ ವಾಹನಗಳು ಮತ್ತು ಶೇ.7ರಷ್ಟು ಆಟೋಗಳಿವೆ. ವಾಹನ ಮತ್ತು ಜನಸಂಖ್ಯೆಯ ಸರಾಸರಿ 1:12ರಷ್ಟಿದ್ದರೆ ದೆಹಲಿಯಲ್ಲಿ1:20ರಷ್ಟಿದೆ.

ಸಂಚಾರ ದಟ್ಟಣೆ

ಪೀಕ್ ಅವರ್ ವಾಹನ ದಟ್ಟಣೆಯನ್ನು ಲೆಕ್ಕ ಹಾಕುವುದಾದರೆ ವಾರದ ದಿನಗಳಲ್ಲಿ ಬೆಳಗ್ಗೆ 7.30 ರಿಂದ 10.30ರವರೆಗೆ ಮತ್ತು ಶನಿವಾರದಂದು ಮಧ್ಯಾಹ್ನ 1 ಗಂಟೆಯವರೆಗೆ ವಾಹನ ದಟ್ಟಣೆ ಇರುವುದು ಕಂಡು ಬಂದಿದೆ.

ಬೆಂಗಳೂರು ನಗರದಲ್ಲಿ ಸರಾಸರಿ ವೇಗ ಪ್ರತಿ ಗಂಟೆಗೆ 18 ಕಿಮೀನಷ್ಟಿದ್ದು ವಾಹನ ಸವಾರರು ಪರ್ಯಾಯ ಮಾರ್ಗಗಳನ್ನು ಹುಡುಕಿಕೊಳ್ಳುತ್ತಿದ್ದಾರೆ. ಈ ಮಧ್ಯೆ ರಸ್ತೆ ಅಗೆತ, ಗುಂಡಿಗಳು ವಾಹನಗಳ ವೇಗ ನಿಧಾನವಾಗಲು ಕಾರಣವಾಗಿವೆ.

ವಾಹನಗಳು ಮಂದಗತಿಯಿಂದ ಸಾಗುವುದರಿಂದ ಕೇವಲ ವಾಹನ ಸವಾರರ ಸಮಯ ಮಾತ್ರ ಹಾಳಾಗುವುದಿಲ್ಲ. ಇಂಧನ ವ್ಯಯವಾಗುತ್ತದೆ ಮತ್ತು ಪರಿಸರದ ಮೇಲೆ ಪ್ರತಿಕೂಲ ಪರಿಣಾಮವುಂಟಾಗುತ್ತಿದೆ. ಆಮೆವೇಗದಲ್ಲಿ ವಾಹನಗಳು ಚಲಿಸುತ್ತಿದ್ದು, ಮಾಲಿನ್ಯ ಹೆಚ್ಚಳವಾಗುತ್ತಿರುವುದು ಅಷ್ಟಾಗಿ ಗಮನಕ್ಕೆ ಬರುವುದಿಲ್ಲ. ವಾಹನಗಳ ತೆವಳುವಿಕೆಯಿಂದ ಬೆಂಗಳೂರಿನ ಗಾಳಿಯ ಗುಣಮಟ್ಟ ಕುಸಿಯುತ್ತಿದೆ ಎಂದು ವಿಜ್ಞಾನಿಗಳು ಮತ್ತು ಪರಿಸರವಾದಿಗಳು ಕಾಲದಿಂದ ಕಾಲಕ್ಕೆ ಎಚ್ಚರಿಸುತ್ತಲೇ ಬಂದಿದ್ದಾರೆ. ಪ್ರತಿ ಬಾರಿಯೂ.ವಾಹನವನ್ನು ನಿಲ್ಲಿಸಿ ಮತ್ತೆ ಚಲಾಯಿಸುವುದರಿಂದ ಇಂಧನ ಖರ್ಚಾಗುವುದರ ಜೊತೆಗೆ ಇಂಗಾಲ ಹೆಚ್ಚಾಗುತ್ತಿದೆ.

ಬಿಎಂಟಿಸಿ ಬಸ್ ಗಳಲ್ಲಿ ಪ್ರತಿದಿನ 43 ಲಕ್ಷ ಪ್ರಯಾಣಿಕರು, ನಮ್ಮ ಮೆಟ್ರೋದಲ್ಲಿ ಪ್ರತಿದಿನ 7 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಾರೆ. ಆದರೂ ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ ಹೆಚ್ಚುತ್ತಿರುವುದರ ಗುಟ್ಟು ಮಾತ್ರ ಅರ್ಥವಾಗುತ್ತಿಲ್ಲ. ಜನ ಸ್ವಂತ ವಾಹನ ಖರೀದಿ ಪ್ರಮಾಣ ಹೆಚ್ಚಿಸಿರುವುದರಿಂದ ವಾಹನ ಸಂಖ್ಯೆ ಹೆಚ್ಚುತ್ತಿದೆ ಎನ್ನುವ ತಜ್ಞರ ಮಾತಿನಲ್ಲಿ ಸತ್ಯಾಂಶವೂ ಇದೆ.

(ವರದಿ: ಎಚ್.ಮಾರುತಿ, ಬೆಂಗಳೂರು)

Whats_app_banner