Bangalore News: 3 ವರ್ಷಗಳಲ್ಲಿ ಪಾದಚಾರಿಗಳ ಸಾವಿನ ಸಂಖ್ಯೆಯಲ್ಲಿ ಹೆಚ್ಚಳ, ಬೆಂಗಳೂರು ಪಾದಚಾರಿಗಳಿಗೆ ಸುರಕ್ಷಿತ ಅಲ್ಲವೇ?
ಕನ್ನಡ ಸುದ್ದಿ  /  ಕರ್ನಾಟಕ  /  Bangalore News: 3 ವರ್ಷಗಳಲ್ಲಿ ಪಾದಚಾರಿಗಳ ಸಾವಿನ ಸಂಖ್ಯೆಯಲ್ಲಿ ಹೆಚ್ಚಳ, ಬೆಂಗಳೂರು ಪಾದಚಾರಿಗಳಿಗೆ ಸುರಕ್ಷಿತ ಅಲ್ಲವೇ?

Bangalore News: 3 ವರ್ಷಗಳಲ್ಲಿ ಪಾದಚಾರಿಗಳ ಸಾವಿನ ಸಂಖ್ಯೆಯಲ್ಲಿ ಹೆಚ್ಚಳ, ಬೆಂಗಳೂರು ಪಾದಚಾರಿಗಳಿಗೆ ಸುರಕ್ಷಿತ ಅಲ್ಲವೇ?

Roads of Bangalore ಬೆಂಗಳೂರು ಜನಸಂದಣಿ ನಡುವೆ ಫುಟ್‌ಪಾತ್‌ಗಳೇ ಸರಿಯಾಗಿ ಇಲ್ಲ. ಇದರಿಂದ ಅಪಘಾತಗಳು ಹೆಚ್ಚಾಗಿವೆ.ವರದಿ: ಎಚ್‌.ಮಾರುತಿ, ಬೆಂಗಳೂರು

ಬೆಂಗಳೂರಿನ ಹಲವು ಕಡೆ ಫುಟ್‌ಪಾತ್‌ ಸಮಸ್ಯೆ ಈಗಲೂ ಇದೆ.
ಬೆಂಗಳೂರಿನ ಹಲವು ಕಡೆ ಫುಟ್‌ಪಾತ್‌ ಸಮಸ್ಯೆ ಈಗಲೂ ಇದೆ.

ಬೆಂಗಳೂರು: ಬೆಂಗಳೂರು ಪಾದಚಾರಿಗಳಿಗೆ ಸುರಕ್ಷಿತ ಅಲ್ಲವೇ? ಪ್ರತಿದಿನ ಪತ್ರಿಕೆಗಳತ್ತ ಕಣ್ಣಾಡಿಸಿದರೆ ಒಂದಾದರೂ ಪಾದಚಾರಿಗೆ ಗುದ್ದಿದ ವಾಹನ ಎಂಬ ಸುದ್ದಿ ಇದ್ದೇ ಇರುತ್ತದೆ. ಕಳೆದ ಮೂರು ವರ್ಷಗಳ ಅಂಕಿಅಂಶಗಳನ್ನು ನೋಡಿದರೆ ಆತಂಕ ಉಂಟಾಗುತ್ತದೆ. 2051ರಿಂದ2023ರವರೆಗೆ ಪಾದಚಾರಿಗಳ ಸಾವಿನ ಸಂಖ್ಯೆಯಲ್ಲಿ ಶೇ.77ರಷ್ಟು ಹೆಚ್ಚಳವಾಗಿದೆ. ಈ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿರುವುದು ಬೆಂಗಳೂರು ಸಂಚಾರಿ ಪೊಲೀಸ್ ವಿಭಾಗ. ಬೆಂಗಳೂರಿನಲ್ಲಿ ಪ್ರತಿದಿನ ಸುಮಾರು 1 ಸಾವಿರ ವಾಹನಗಳ ನೋಂದಣಿಯಾಗುತ್ತವೆ. ಆದರೆ ಮೂಲಭೂತ ಸೌಕರ್ಯಗಳ ಸುಧಾರಣೆ ಮಾತ್ರ ಅಗುತ್ತಿಲ್ಲ. ಬೆಂಗಳೂರು ಸಂಚಾರಿ ಪೊಲೀಸ್ ಇಲಾಖೆ 2021 ರಲ್ಲಿ 161 ಪಾದಚಾರಿಗಳು ಮೃತಪಟ್ಟಿದ್ದರೆ 2023ರಲ್ಲಿ 286 ಕ್ಕೆ ಏರಿಕೆಯಾಗಿದೆ. 2023ರಲ್ಲಿ ಬೆಂಗಳೂರಿನಲ್ಲಿ ಅಪಘಾತಗಳಿಂದ ಮೃತಪಟ್ಟವರಲ್ಲಿ ಶೇ.40 ರಷ್ಟು ಪಾದಚಾರಿಗಳು ಎನ್ನುವುದು ಗಮನಾರ್ಹ ಸಂಗತಿಯಾಗಿದೆ. ರಾಷ್ಟ್ರೀಯ ಅಂಕಿಅಂಶಗಳ ಬ್ಯೂರೋ ಪ್ರಕಾರ 2022ರಲ್ಲಿ ಬೃಹತ್ ಬೆಂಗಳೂರು ಮಹಾನರ ಪಾಲಿಕೆಯ ನಿರ್ಲಕ್ಷ್ಯದಿಂದ ಅತಿ ಹೆಚ್ಚು ಸಾವುಗಳು ಸಂಭವಿಸಿವೆ.

ಪಾದಚಾರಿಗಳ ಸಾವು ಹೇಗೆ ಸಂಭವಿಸುತ್ತದೆ?

ಬಹುತೇಕ ಪಾದಚಾರಿಗಳು ರಸ್ತೆಯನ್ನು ದಾಟುವಾಗ ಅಪಘಾತಕ್ಕೀಡಾಗುತ್ತಾರೆ. ಎಲ್ಲ ಸಂದರ್ಭಗಳಲ್ಲೂ ವಾಹನ ಸವಾರರದ್ದೇ ತಪ್ಪು ಎಂದು ಹೇಳುವಂತಿಲ್ಲ. ವಾಹನ ದಟ್ಟಣೆ ಇರುವ ರಸ್ತೆಗಳಲ್ಲೂ ಪಾದಚಾರಿಗಳು ರಸ್ತೆಯಲ್ಲಿ ನಾವೊಬ್ಬರೇ ಓಡಾಡಬೇಕು ಎಂಬಂತೆ ರಸ್ತೆ ದಾಟಲು ಪ್ರಯತ್ನಿಸುತ್ತಾರೆ. ಸಿಗ್ನಲ್ ಗಳಲ್ಲಿ ಹಸಿರು ದೀಪ ಹತ್ತಿಕೊಂಡಾಗ ವಾಹನಗಳು ಮುನ್ನುಗ್ಗುತ್ತವೆ. ಆಗಲೂ ಪಾದಚಾರಿಗಳು ರಸ್ತೆ ದಾಟಲು ಮುಂದಾಗುವುದನ್ನು ಪ್ರತಿದಿನ ಕಾಣಬಹುದು.

ಸ್ಕೈ ವಾಕ್ ಮತ್ತು ಸಬ್ ವೇಗಳ ಕೊರತೆಯಿಂದಾಗಿ ಪಾದಚಾರಿಗಳು ರಸ್ತೆಗಳಲ್ಲೇ ದಾಟಲು ಮುಂದಾಗುತ್ತಾರೆ. ಇನ್ನು ಸಿಗ್ನಲ್ ಗಳಲ್ಲಿ ಪಾದಚಾರಿಗಳು ಜೀಬ್ರಾ ಕ್ರಾಸಿಂಗ್ ಮೇಲೆ ಮಾತ್ರ ರಸ್ತೆ ದಾಟಬೇಕು. ಆದರೆ ಹಾಗೆ ಮಾಡುವುದೇ ಇಲ್ಲ. ಎಲ್ಲೆಂದರಲ್ಲಿ ರಸ್ತೆ ದಾಟುತ್ತಾರೆ. ಅದಕ್ಕಾಗಿ ವಾಹನ ದಟ್ಟಣೆ ಇರುವ ರಸ್ತೆಗಳಲ್ಲಿ ರಸ್ತೆ ವಿಭಜಕಗಳ ಎತ್ತರವನ್ನು ಹೆಚ್ಚಿಸುವಂತೆ ಬಿಬಿಎಂಪಿಯ ಸಂಚಾರಿ ವಿಭಾಗದ ಜೊತೆ ಕೆಲಸ ಮಾಡುತ್ತಿದ್ದೇವೆ. ಇದರಿಂದ ಪಾದಚಾರಿಗಳು ನಿಗಧಿತ ಸ್ಥಳದಲ್ಲೇ ರಸ್ತೆ ದಾಟುತ್ತಿದ್ದು, ಅಪಘಾತಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಬೆಂಗಳೂರು ಸಂಚಾರ ವಿಭಾಗದ ಜಂಟಿ ಆಯುಕ್ತ ಎಂ.ಎನ್. ಅನುಚೇತ್ ಹೇಳುತ್ತಾರೆ.

ಬಿಬಿಎಂಪಿ ಅಸಹಾಯಕತೆ

ಎಲ್ಲ ಸಿಗ್ನಲ್ ಗಳು ಮತ್ತು ರಸ್ತೆಗಳು ಪಾದಚಾರಿಗಳಿಗೆ ಪೂರಕವಾಗಿಲ್ಲ. ಬಹುತೇಕ ರಸ್ತೆಗಳಲ್ಲಿ ಪಾದಚಾರಿಗಳು ರಸ್ತೆ ದಾಟಲು ಸೂಕ್ತ ಸೌಲಭ್ಯಗಳಿಲ್ಲ. 185 ಜಂಕ್ಷನ್ ಗಳಲ್ಲಿ ಪಾದಚಾರಿಗಳು ರಸ್ತೆ ದಾಟಲು ವ್ಯವಸ್ಥೆಗಳನ್ನೇ ಮಾಡಿಲ್ಲ. ಆದರೆ ಬಿಬಿಎಂಪಿ ಅಧಿಕಾರಿಗಳು ಹಂತ ಹಂತವಾಗಿ ನಗರದ ರಸ್ತೆಗಳನ್ನು ಪಾದಚಾರಿ ಸ್ನೇಹಿ ಮಾಡಲಾಗುತ್ತಿದೆ ಎಂಬ ವಾದವನ್ನು ಮುಂದಿಡುತ್ತಾರೆ.

ಬೆಂಗಳೂರು ಸಂಚಾರಿ ಪೊಲೀಸರ ಜೊತೆ ನಿಕಟ ಸಂಪರ್ಕದಲ್ಲಿದ್ದು, ಪಾದಚಾರಿಗಳ ಅಗತ್ಯಗಳನ್ನು ಪೂರೈಸಲು ಯೋಜೆನಗಳನ್ನು ರೂಪಿಸಲಾಗುತ್ತಿದೆ. ಪ್ರತಿ ವಾರ್ಡ್ ಗೂಪಾದಚಾರಿ ರಸ್ತೆಗಳ ರಿಪೇರಿಗೆ ತಲಾ 25 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಬಿಬಿಎಂಪಿ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.

ಆದರೆ ಪಾದಚಾರಿ ರಸ್ತೆಗಳ ಒತ್ತುವರಿಯನ್ನು ತೆರವುಗೊಳಿಸುವುದ ದೊಡ್ಡ ಸವಾಲಾಗಿ ಪರಿಣಮಿಸಿದೆ. ಪ್ರತಿ ಬಾರಿ ತೆರವುಗೊಳಿಸಿದಾಗಲೂ ವ್ಯಾಪಾರಿಗಳು ಮತ್ತೆ ಅತಿಕ್ರಮಿಸಿಕೊಳ್ಳುತ್ತಾರೆ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ತಜ್ಞರು ಹೇಳೋದೇನು

2023ರಲ್ಲಿ ಸಂಭವಿಸಿದ 286 ಪಾದಚಾರಿಗಳ ಸಾವಿನ ಪ್ರಕರಣಗಳ ಪೈಕಿ 66 ಮಂದಿ ರಸ್ತೆ ದಾಟುವಾಗ ಮೃತಪಟ್ಟಿದ್ದಾರೆ ಎಂದು ಸಂಚಾರಿ ಪೊಲೀಸರ ಅಂಕಿ ಅಂಶಗಳು ಹೇಳುತ್ತವೆ.

ಬೆಂಗಳೂರಿನ ನಾಗರೀಕರ ವೇದಿಕೆಗಳು ನಡೆಸಿರುವ ಹತ್ತಾರು ಸಮೀಕ್ಷೆಗಳ ಪ್ರಕಾರ ಬೆಂಗಳೂರಿನ ಬಹುತೇಕ ಪಾದಾಚಾರಿ ರಸ್ತೆಗಳು ಒತ್ತುವರಿಯಾಗಿವೆ. ಅನೇಕ ರಸ್ತೆಗಳು ನಡೆಯಲು ಯೋಗ್ಯವಾಗಿರುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಪಾದಚಾರಿಗಳು ಅನಿವಾರ್ಯವಾಗಿ ನಡೆದಾಡಲು ಮತ್ತು ರಸ್ತೆ ದಾಟಲು ಮುಖ್ಯ ರಸ್ತೆಗಳನ್ನೇ ಆಶ್ರಯಿಸಬೇಕಾಗುತ್ತದೆ.

ಮತ್ತೊಂದು ಕಡೆ ರಸ್ತೆಗಳನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಪಾದಚಾರಿಗಳು ದಾಟಲು ಅನುಕೂಲವಾಗುವಂತೆ ಎತ್ತರದ ರಸ್ತೆ ಕ್ರಾಸಿಂಗ್ ಗಳನ್ನು ನಿರ್ಮಿಸಬೇಕು. ಇಂತಹ ಆಧುನಿಕ ವ್ಯವಸ್ಥೆಗಳನ್ನು ಕಲ್ಪಿಸಿದರೆ ಪಾದಚಾರಿಗಳ ಅಮೂಲ್ಯ ಜೀವಗಳನ್ನು ಉಳಿಸಬಹುದಾಗಿದೆ ಎಂದು ತಜ್ಞರು ಹೇಳುತ್ತಾರೆ.

(ವರದಿ: ಎಚ್.ಮಾರುತಿ, ಬೆಂಗಳೂರು)

Whats_app_banner