ಮಂಡ್ಯದಲ್ಲಿ ಬಿಜೆಪಿ ಜೆಡಿಎಸ್‌ ದುರುದ್ದೇಶದ ರಾಜಕೀಯ, ಬಂದ್‌ ತೀರ್ಮಾನ ಜನ ಮಾಡ್ತಾರೆ: ಸಿಎಂ ಸಿದ್ದರಾಮಯ್ಯ
ಕನ್ನಡ ಸುದ್ದಿ  /  ಕರ್ನಾಟಕ  /  ಮಂಡ್ಯದಲ್ಲಿ ಬಿಜೆಪಿ ಜೆಡಿಎಸ್‌ ದುರುದ್ದೇಶದ ರಾಜಕೀಯ, ಬಂದ್‌ ತೀರ್ಮಾನ ಜನ ಮಾಡ್ತಾರೆ: ಸಿಎಂ ಸಿದ್ದರಾಮಯ್ಯ

ಮಂಡ್ಯದಲ್ಲಿ ಬಿಜೆಪಿ ಜೆಡಿಎಸ್‌ ದುರುದ್ದೇಶದ ರಾಜಕೀಯ, ಬಂದ್‌ ತೀರ್ಮಾನ ಜನ ಮಾಡ್ತಾರೆ: ಸಿಎಂ ಸಿದ್ದರಾಮಯ್ಯ

ಮಂಡ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ರಾಜಕೀಯ ದುರುದ್ದೇಶದಿಂದ ನಡೆಯುತ್ತಿದ್ದು, ಬಿಜೆಪಿ ಜೆಡಿಎಸ್‌ ಕೆ ನೀಡಿರುವ ಬಂದ್‌ಗೆ ಜನರೇ ತೀರ್ಮಾನ ಕೈಗೊಳ್ಳುವರು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿ ನಮಸ್ಕರಿಸಿದರು.
ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿ ನಮಸ್ಕರಿಸಿದರು.

ಬೆಂಗಳೂರು: ಮಂಡ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ರಾಜಕೀಯ ದುರುದ್ದೇಶದಿಂದ ಬಂದ್‌ಗೆ ಕರೆ ನೀಡಲಾಗಿದೆ. ಇದಕ್ಕೆ ನಾವು ಹೆಚ್ಚು ಮಾತನಾಡುವ ಅಗತ್ಯವಿಲ್ಲ. ಬಂದ್ ಮಾಡುವ ಅಥವಾ ಮಾಡದಿರುವ ಬಗ್ಗೆ ಜನ ತೀರ್ಮಾನ ಮಾಡುತ್ತಾರೆ. ಇವರೇ ಮುಚ್ಚಳಿಕೆ ಪತ್ರ ನೀಡಿ, ನಂತರ ಕಾರ್ಯಕ್ರಮದಲ್ಲಿ ಕೇಸರಿ ಧ್ವಜವನ್ನು ಹಾರಿಸಿ, ತಮ್ಮ ಮುಚ್ಚಳಿಕೆಯನ್ನು ತಾವೇ ಉಲ್ಲಂಘನೆ ಮಾಡಿರುವುದು ತಪ್ಪು ಎಂದು ಸಿಎಂ ಸಿದ್ದರಾಮಯ್ಯ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರಿನಲ್ಲಿ ಮಹಾತ್ಮಾಗಾಂಧೀಜಿಯವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದ ನಂತರ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾಡಳಿತದ ವೈಫಲ್ಯದಿಂದ ಮಂಡ್ಯ ಘಟನೆ ನಡೆದಿದೆ ಎಂದು ಸಂಸದೆ ಸುಮಲತಾ ದೂಷಿಸಿದ್ದಾರೆ. ರಾಷ್ಟ್ರಧ್ವಜ ಅಥವಾ ಕನ್ನಡ ಧ್ವಜ ಹಾರಿಸಲು ಅನುಮತಿ ನೀಡಲಾಗಿತ್ತೇ ಹೊರತು ಯಾವುದೇ ಧರ್ಮ ಜಾತಿ, ಪಕ್ಷದ ಧ್ವಜವನ್ನು ಹಾರಿಸುವುದಿಲ್ಲ ಎಂದು ಮುಚ್ಚಳಿಕೆ ಪತ್ರ ನೀಡಿದ ನಂತರ ಅದರ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಇದರಿಂದ ರಾಜಕೀಯ ಲಾಭ ಪಡೆಯುವ ದುರುದ್ದೇಶ ಇದ್ದು, ಸಮಾಜದಲ್ಲಿ ಅಶಾಂತಿಯನ್ನು ಉಂಟು ಮಾಡುವ ಪ್ರಯತ್ನ ಮಾಡಲಾಗಿದೆ ಎಂದು ತಿಳಿಸಿದರು.

ಗಾಂಧಿ ಹತ್ಯೆ

ಮಹಾತ್ಮಾ ಗಾಂಧೀಜಿಯವರು1948ರ ಜನವರಿ 30 ರಂದು ಗೋಡ್ಸೆ ಯವರ ಗುಂಡಿಗೆ ಬಲಿಯಾಗಿ ಹುತಾತ್ಮರಾದ ದಿನ. ಗಾಂಧೀಜಿಯವರು ವಲ್ಲಭಾ ಬಾಯಿ ಪಟೇಲರೊಂದಿಗೆ ಸಂವಾದಿಸಿದ ನಂತರ ಭಜನೆಗೆ ತೆರಳಲು ಸ್ವಲ್ಪ ವಿಳಂಬವಾಗಿದ್ದ ಸಂದರ್ಭದಲ್ಲಿ ಹಂತಕ ಗೋಡ್ಸೆ, ಗಾಂಧೀಜಿಯವರ ಕಾಲಿಗೆ ನಮಸ್ಕರಿಸುವ ನೆಪದಲ್ಲಿ ಅವರನ್ನು ಹತ್ಯೆಗೈದರು. ಈ ದೇಶಕ್ಕೆ ಅವರ ನಾಯಕತ್ವದಲ್ಲಿ ಸ್ವಾತಂತ್ರ್ಯ ಲಭಿಸಿತು. ಕಾಂಗ್ರೆಸ್ ನ ಬಹಳಷ್ಟು ನಾಯಕರು ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನಗಳನ್ನು ಮಾಡಿದ್ದಾರೆ. ಎಲ್ಲ ಜಾತಿಧರ್ಮದವರು ಸೌಹಾರ್ದತೆಯಿಂದ ಬಾಳಬೇಕೆಂಬ ಕನಸನ್ನು ಕಂಡಿದ್ದ ಮಹಾತ್ಮಾ ಗಾಂಧೀಜಿಯವರು ಎಲ್ಲರನ್ನೂ ಸಮಾನವಾಗಿ ಕಾಣುವ, ಎಲ್ಲರಿಗೂ ನ್ಯಾಯವನ್ನು ಒದಗಿಸುವುದೇ ಅವರ ರಾಮರಾಜ್ಯದ ಪರಿಕಲ್ಪನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಶ್ರೀರಾಮನ ಮೇಲೆ ಗಾಂಧಿಯವರಿಗೆ ಅಪಾರ ಭಕ್ತಿ

ಅವರು ತಮ್ಮ ಕೊನೆಯುಸಿರೆಳೆದಾಗಲೂ ‘ಹೇ ರಾಮ್’ ಎಂದು ಉಚ್ಛರಿಸಿದ್ದರು. ಶ್ರೀ ರಾಮನ ಬಗ್ಗೆ ಅಪಾರ ಭಕ್ತಿ, ನಂಬಿಕೆಯನ್ನು ಹೊಂದಿದ್ದರು. ಆದ್ದರಿಂದಲೇ ‘ರಘುಪತಿ ರಾಘವ ರಾಜಾರಾಮ್ ’ ಎಂಬುದು ಅವರ ನೆಚ್ಚಿನ ಭಜನೆಯಾಗಿತ್ತು. ಶ್ರೀರಾಮ ಪಿತೃವಾಕ್ಯ ಪರಿಪಾಲಕನಾಗಿದ್ದು, ಹದಿನಾಲ್ಕು ವರ್ಷಗಳ ಕಾಲ ವನವಾಸಕ್ಕೆ ತೆರಳಿದ್ದರು. ಆದರ್ಶಮಯ ಆಡಳಿತವನ್ನು ನೀಡಿದ ಶ್ರೀರಾಮಚಂದ್ರನನ್ನು ಪೂಜಿಸುವ ಮಹಾತ್ಮಾ ಗಾಂಧಿಯವರನ್ನು ಮತಾಂಧನಾಗಿದ್ದ ಗೋಡ್ಸೆ ಹತ್ಯೆಗೈಯುತ್ತಾರೆ. ಅವರ ಆದರ್ಶದಲ್ಲಿ ನಡೆದು ನಾವೆಲ್ಲರೂ ಎಲ್ಲ ಧರ್ಮದವರನ್ನೂ ಸಮಾನವಾಗಿ ಕಾಣಬೇಕು. ಸತ್ಯ ಅಹಿಂಸೆಯ ಹಾದಿಯನ್ನು ತೋರಿದ ಗಾಂಧೀಜಿಯವರನ್ನು ರಾಷ್ಟ್ರಪಿತ ಎಂದು ಕರೆಯಲಾಗುತ್ತದೆ. ಅಂತಹ ಮಹಾನ್ ವ್ಯಕ್ತಿಯ ಹತ್ಯೆಗೈದ ಗೋಡ್ಸೆಯನ್ನು ಪೂಜಿಸುವವರು ನಮ್ಮ ನಡುವೆ ಇದ್ದಾರೆ. ರಾಜ್ಯದ ಜನತೆ ಹಾಗೂ ಸರ್ಕಾರದ ಪರವಾಗಿ ಮಹಾತ್ಮಾ ಗಾಂಧೀಜಿಯವರಿಗೆ ನಮ್ಮ ನಮನಗಳನ್ನು ಸಲ್ಲಿಸುತ್ತೇನೆ ಎಂದರು.

ಸಮಾಜದಲ್ಲಿ ಶಾಂತಿ ನೆಲೆಸಲಿ

ಗಾಂಧೀಜಿಯವರು ಶಾಂತಿ ಸಂದೇಶವನ್ನು ಸಾರಿದರು. ಆದರೆ ಇತ್ತೀಚೆಗೆ ಸಮಾಜದಲ್ಲಿ ಶಾಂತಿಯನ್ನು ಕದಡುವ ಪ್ರಸಂಗಗಳು ನಡೆಯುತ್ತಿವೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಗೋಡ್ಸೆಯ ಅನುಯಾಯಿಗಳು ಸಮಾಜದಲ್ಲಿ ಶಾಂತಿಯನ್ನು ಕದಡುತ್ತಿದ್ದಾರೆ. ಪರಸ್ಪರ ಪ್ರೀತಿ ವಿಶ್ವಾಸ ಹಾಗೂ ಶಾಂತಿ ಸಮಾಜದಲ್ಲಿ ನೆಲೆಸಬೇಕು. ಮನುಷ್ಯ ಮನುಷ್ಯರ ನಡುವೆ ವೈಷಮ್ಯ ಹೆಚ್ಚಿಸುವ ಕೆಲಸವಾಗಬಾರದು ಎಂದರು.

Whats_app_banner