Dakshin Kannada News: ಫೆಬ್ರವರಿ 1 ರಿಂದ 8 ತಿಂಗಳು ಕುಮಾರ ಪರ್ವತ ಚಾರಣಕ್ಕೆ ಬರಬೇಡಿ, ಚಾರಣ ನಿಷೇಧಕ್ಕೆ ಕಾರಣ ಇಲ್ಲಿದೆ
ಕನ್ನಡ ಸುದ್ದಿ  /  ಕರ್ನಾಟಕ  /  Dakshin Kannada News: ಫೆಬ್ರವರಿ 1 ರಿಂದ 8 ತಿಂಗಳು ಕುಮಾರ ಪರ್ವತ ಚಾರಣಕ್ಕೆ ಬರಬೇಡಿ, ಚಾರಣ ನಿಷೇಧಕ್ಕೆ ಕಾರಣ ಇಲ್ಲಿದೆ

Dakshin Kannada News: ಫೆಬ್ರವರಿ 1 ರಿಂದ 8 ತಿಂಗಳು ಕುಮಾರ ಪರ್ವತ ಚಾರಣಕ್ಕೆ ಬರಬೇಡಿ, ಚಾರಣ ನಿಷೇಧಕ್ಕೆ ಕಾರಣ ಇಲ್ಲಿದೆ

Trekking ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯಕ್ಕೆ ಹೊಂದಿಕೊಂಡ ಕುಮಾರಪರ್ವತದಲ್ಲಿ ಮುಂದಿನ ಎಂಟು ತಿಂಗಳು ಚಾರಣಕ್ಕೆ ಅವಕಾಶವಿಲ್ಲ ಎಂದು ಕರ್ನಾಟಕ ಅರಣ್ಯ ಇಲಾಖೆ ತಿಳಿಸಿದೆ.ವರದಿ: ಹರೀಶ್‌ ಮಾಂಬಾಡಿ ಮಂಗಳೂರು

ದಕ್ಷಿಣ ಕನ್ನಡ ಜಿಲ್ಲೆಯ ಕುಮಾರಪರ್ವತದಲ್ಲಿ ಸದ್ಯ ಚಾರಣ ನಿಷೇಧಿಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕುಮಾರಪರ್ವತದಲ್ಲಿ ಸದ್ಯ ಚಾರಣ ನಿಷೇಧಿಲಾಗಿದೆ. ( WDRLUST)

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಮೀಪವೇ ಇರುವ ಕುಮಾರ ಪರ್ವತದ ಚಾರಣಕ್ಕೆ ಫೆಬ್ರವರಿ 1ರಿಂದ ನಿಷೇಧ ಹೇರಲಾಗಿದೆ. ಜಿಲ್ಲೆಯಾದ್ಯಂತ ಬಿಸಿಲಿನ ವಾತಾವರಣ ಇರುವುದು ಹಾಗೂ ಪರ್ವತದಲ್ಲಿ ನೀರಿನ ಸಮಸ್ಯೆ ಎದುರಾಗುವ ಹಿನ್ನೆಲೆಯಲ್ಲಿ ಮುಂಜಾಗರೂಕತೆ ಕ್ರಮವಾಗಿ ಹಾಗೂ ಚಾರಣಿಗರ ಹಿತದೃಷ್ಟಿಯಿಂದ ಫೆ.1ರಿಂದ ಅಕ್ಟೋಬರ್ ವರೆಗೆ ಅಥವಾ ಮುಂದಿನ ಆದೇಶದವರೆಗೆ ಕುಮಾರಪರ್ವತ ಚಾರಣಕ್ಕೆ ನಿಷೇಧ ವಿಧಿಸಲಾಗಿದೆ ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದೆ.

ಈ ವರ್ಷದ ಕುಮಾರ ಪರ್ವತದ ಚಾರಣ ಅವಧಿ ಮುಗಿದಿದ್ದು, ಪರ್ವತದ ಹುಲ್ಲುಗಾವಲೂ ಸಂಪೂರ್ಣ ಒಣಗಿದೆ. ಬಿಸಿಲಿನ ಬೇಗೆಗೆ ಬೆಂಕಿಗೆ ತುತ್ತಾಗದಂತೆ ಮುಂಜಾಗರೂಕತಾ ಕ್ರಮವನ್ನು ಕೈಗೊಳ್ಳಬೇಕಾದ ಸ್ಥಿತಿಯೂ ಇದೆ. ಜನವರಿ 26ರಂದು ನೂರಾರು ಮಂದಿ ಊಟಕ್ಕೆ ಸಾಲಿನಲ್ಲಿ ನಿಂತಂತೆ ಕುಮಾರ ಪರ್ವತವನ್ನೇರಲು ಆಸಕ್ತಿಯಿಂದ ನಿಂತಿದ್ದರು. ಇದರ ತರುವಾಯ ಅರಣ್ಯ ಇಲಾಖೆಯೂ ಎಚ್ಚೆತ್ತಿದೆ.

ಎಲ್ಲಿದೆ ಕುಮಾರ ಪರ್ವತ?

ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದ ಹತ್ತಿರವಿರುವ ಕುಮಾರ ಪರ್ವತ, ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳ ಗಡಿಭಾಗವೂ ಹೌದು. ಸಮುದ್ರ ಮಟ್ಟದಿಂದ ಸುಮಾರು 1712 ಮೀಟರ್ ಎತ್ತರದ ಈ ಬೆಟ್ಟವೇರುವ ಸಾಹಸವನ್ನು ಹಲವರು ಮಾಡುತ್ತಾರೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಿಂದ ಸುಮಾರು 13 ಕಿ.ಮೀ ದೂರದಲ್ಲಿ ಬೆಟ್ಟವೇರುವ ಜಾಗ ಸಿಗುತ್ತದೆ.

ಕುಕ್ಕೆ ಸುಬ್ರಮಣ್ಯ ಬೆಂಗಳೂರಿನಿಂದ 280 ಕಿ.ಮೀ ಮತ್ತು ಮಂಗಳೂರಿನಿಂದ 105 ಕಿ.ಮೀ ದೂರದಲ್ಲಿದೆ (ಹತ್ತಿರದ ವಿಮಾನ ನಿಲ್ದಾಣ). ಸುಬ್ರಮಣ್ಯ ರಸ್ತೆ ರೈಲು ನಿಲ್ದಾಣವು ಕುಕ್ಕೆ ಸುಬ್ರಮಣ್ಯದಿಂದ 12 ಕಿ.ಮೀ ದೂರದಲ್ಲಿದೆ. ಮಂಗಳೂರು ಅಥವಾ ಬೆಂಗಳೂರಿನಿಂದ ಕುಕ್ಕೆ ಸುಬ್ರಮಣ್ಯವನ್ನು ತಲುಪಲು ಸೀಮಿತ ಬಸ್ ಸೇವೆ ಲಭ್ಯವಿದೆ

ಮಧ್ಯಮ ಹಂತದ ಚಾರಣವಾದ ಕಾರಣ ಜನ ಜಾಸ್ತಿ

ಕಡಿದಾದ ಬೆಟ್ಟ ಇಲ್ಲಿಲ್ಲದ ಕಾರಣ ಈ ಬೆಟ್ಟವೇರುವುದು ಅಷ್ಟೊಂದು ಕಷ್ಟವಲ್ಲ. ತೀರಾ ಕಷ್ಟವೂ ಅಲ್ಲದ, ತೀರಾ ಸುಲಭವೂ ಅಲ್ಲದ ಮಧ್ಯಮ ಹಂತದ ಚಾರಣ ಎನ್ನಬಹುದು. ಹೀಗಾಗಿ ಇಲ್ಲಿಗೆ ಜನ ಜಾಸ್ತಿ. ಪುಷ್ಪಗಿರಿ ಚಾರಣ ಎಂದೂ ಕರೆಯಲ್ಪಡುವ ಕುಮಾರ ಪರ್ವತ ಚಾರಣದಲ್ಲಿ ತಳಹಂತದಿಂದ ಶಿಖರದ ವರೆಗೆ ಒಟ್ಟು 25-28 ಕಿ.ಮೀ ನಡೆಯಬೇಕು. ಮತ್ತು ಸಾಮಾನ್ಯವಾಗಿ ಎರಡು ದಿನಗಳ ಅವಧಿಯಲ್ಲಿ ಪೂರ್ಣಗೊಳ್ಳುತ್ತದೆ. ಮೇಲೆ ತಲುಪಿದ ನಂತರ ಕಾಣಸಿಗುವ ವಿಹಂಗಮ ನೋಟ, ದೈತ್ಯ ಬಂಡೆಗಳು ಮತ್ತು ತಂಪಾದ ಗಾಳಿ , ಮಂಜು ನೋಡಲು ಆಕರ್ಷಣೀಯ.

ಅಲ್ಲದೆ, ಇಲ್ಲಿ ಭಟ್ಟರ ಮನೆ, ಗಿರಿಗಡ್ಡೆ ವ್ಯೂ ಪಾಯಿಂಟ್, ಕುಮಾರ ಪರ್ವತ ವ್ಯೂ ಪಾಯಿಂಟ್‌ಗಳು, ನಿತ್ಯಾನಂದ ಶ್ರೀ ಕೈಲಾಸ ದೇವಸ್ಥಾನ, ಪುಷ್ಪಗಿರಿ ಶಿಖರ ನೋಡಲೇಬೇಕಾದ ಜಾಗಗಳು.

ಅರಣ್ಯ ಇಲಾಖೆ ಅನುಮತಿ ಬೇಕು

ಕುಮಾರ ಪರ್ವತ ಶಿಖರದಲ್ಲಿ ಕ್ಯಾಂಪಿಂಗ್ ಮಾಡಲು ಅನುಮತಿ ಇಲ್ಲ ಆದರೆ ಅರಣ್ಯ ಇಲಾಖೆಯ ಅನುಮತಿಯೊಂದಿಗೆ ದಾರಿಯಲ್ಲಿ ಗೊತ್ತುಪಡಿಸಿದ ಸ್ಥಳಗಳಲ್ಲಿ ತಂಗಬಹುದು. ಸುರಕ್ಷತಾ ಕಾರಣಗಳಿಗಾಗಿ, ಅನುಭವಿ ಮಾರ್ಗದರ್ಶಿ ಮತ್ತು ಸೂಕ್ತ ಅನುಮತಿ ಇಲ್ಲದೇ ಕುಮಾರ ಪರ್ವತ ಚಾರಣವನ್ನು ಕೈಗೊಳ್ಳುವುದು ಸೂಕ್ತವಲ್ಲ ಎನ್ನುವುದು ಅರಣ್ಯ ಇಲಾಖೆ ನೀಡುವ ಮಾಹಿತಿ.

ಪ್ರತಿ ವರ್ಷ ಬೇಸಿಗೆಗೂ ಮುನ್ನ ಕುಮಾರಪರ್ವತದಲ್ಲಿ ಚಾರಣ ನಿಲುಗಡೆ ಮಾಡುತ್ತೇವೆ. ಆನಂತರ ಮಳೆಗಾಲದಲ್ಲೂ ಇದಕ್ಕೆ ಅವಕಾಶ ಕಡಿಮೆ. ಈ ಬಾರಿ ಏಳೆಂಟು ತಿಂಗಳು ಇನ್ನು ಚಾರಣ ಇಲ್ಲಿ ಇರದು. ಅನುಮತಿ ಪಡೆಯದೇ ಚಾರಣ ಮಾಡಿ ತೊಂದರೆಗೆ ಸಿಲುಕಬೇಡಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

( ವರದಿ: ಹರೀಶ್‌ ಮಾಂಬಾಡಿ, ಮಂಗಳೂರು)

Whats_app_banner