SI Murder: ದೊಡ್ಡಬಳ್ಳಾಪುರ ಎಸ್‌ಐ ಕೊಲೆ ಪ್ರಕರಣ, ಇಬ್ಬರಿಗೆ ಶಿಕ್ಷೆ, ಮೂವರ ಖುಲಾಸೆ, ಮೇಲ್ಮನವಿಗೆ ಪೋಷಕರ ನಿರ್ಧಾರ
ಕನ್ನಡ ಸುದ್ದಿ  /  ಕರ್ನಾಟಕ  /  Si Murder: ದೊಡ್ಡಬಳ್ಳಾಪುರ ಎಸ್‌ಐ ಕೊಲೆ ಪ್ರಕರಣ, ಇಬ್ಬರಿಗೆ ಶಿಕ್ಷೆ, ಮೂವರ ಖುಲಾಸೆ, ಮೇಲ್ಮನವಿಗೆ ಪೋಷಕರ ನಿರ್ಧಾರ

SI Murder: ದೊಡ್ಡಬಳ್ಳಾಪುರ ಎಸ್‌ಐ ಕೊಲೆ ಪ್ರಕರಣ, ಇಬ್ಬರಿಗೆ ಶಿಕ್ಷೆ, ಮೂವರ ಖುಲಾಸೆ, ಮೇಲ್ಮನವಿಗೆ ಪೋಷಕರ ನಿರ್ಧಾರ

Crime News ಪೊಲೀಸ್‌ ಎಸ್‌ಐ ಜಗದೀಶ್‌ ಹತ್ಯೆ ಪ್ರಕರಣದ ತೀರ್ಪನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ನ್ಯಾಯಾಲಯ ಪ್ರಕಟಿಸಿದೆ.ವರದಿ: ಎಚ್.‌ಮಾರುತಿ, ಬೆಂಗಳೂರು

ದೊಡ್ಡಬಳ್ಳಾಪುರ ಎಸ್‌ಐ ಹತ್ಯೆ ಪ್ರಕರಣದ ತೀರ್ಪು ಹೊರ ಬಿದ್ದಿದೆ.
ದೊಡ್ಡಬಳ್ಳಾಪುರ ಎಸ್‌ಐ ಹತ್ಯೆ ಪ್ರಕರಣದ ತೀರ್ಪು ಹೊರ ಬಿದ್ದಿದೆ.

ಬೆಂಗಳೂರು: 9 ವರ್ಷದ ಹಿಂದೆ ನಡೆದ ದೊಡ್ಡಬಳ್ಳಾಪುರ ಪೊಲೀಸ್ ಠಾಣೆ ಸಬ್‌ ಇನ್‌ಸ್ಪೆಕ್ಟರ್‌ ಜಗದೀಶ್ ಅವರನ್ನು ನೆಲಮಂಗಲ ಟೌನ್ ನಲ್ಲಿ ಭೀಕರವಾಗಿ ಹತ್ಯೆ ಮಾಡಿದ್ದು ಇಡೀ ರಾಜ್ಯದಲ್ಲಿ ದೊಡ್ಡ ಸುದ್ದಿಯಾಗಿತ್ತು. ಇದೀಗ ಸಬ್‌ ಇನ್‌ಸ್ಪೆಕ್ಟರ್‌ ಹತ್ಯೆ ಪ್ರಕರಣದ ಐವರು ಆರೋಪಿಗಳ ಪೈಕಿ ಇಬ್ಬರಿಗೆ ಶಿಕ್ಷೆ ಪ್ರಕಟಿಸಿದ್ದು, ಮೂವರನ್ನು ಖುಲಾಸೆಗೊಳಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಈ ತೀರ್ಪು ನೀಡಿದೆ. ಮಧು ಎಂಬಾತನಿಗೆ 7 ವರ್ಷ ಶಿಕ್ಷೆ ಹಾಗೂ 1 ಲಕ್ಷ ರೂಪಾಯಿ ದಂಡ ಹಾಗೂ ಹರೀಶ್‌ ಬಾಬು ಎಂಬುವವನಿಗೆ ಜೀವಾವಧಿ ಶಿಕ್ಷೆ ಹಾಗೂ ರೂಪಾಯಿ 3 ಲಕ್ಷ ದಂಡ ವಿಧಿಸಲಾಗಿದೆ. ರಘು, ತಿಮ್ಮಕ್ಕ, ಯಲಾಲ ಹನುಮಂತರಾವ್ ಅವರನ್ನು ಖುಲಾಸೆಗೊಳಿಸಿದೆ.

2015 ಅಕ್ಟೋಬರ್ 16ರಂದು ಪೊಲೀಸ್ ಠಾಣೆ ಸಬ್‌ ಇನ್‌ಸ್ಪಕ್ಟರ್‌ ಜಗದೀಶ್‌ ಅವರು ತಮ್ಮ ಸಿಬ್ಬಂದಿ ಜೊತೆ ಕಳ್ಳರನ್ನು ಬಂಧಿಸಲು ನೆಲಮಂಗಲ ಟೌನ್ ನಲ್ಲಿರುವ ಟರ್ಬೋ ಹೊಂಡಾ ಶೋರೂಂ ಹತ್ತಿರ ಹೋಗಿರುತ್ತಾರೆ.

ಕೃಷ್ಣಪ್ಪ ಮತ್ತು ಮಧು ಅಪ್ಪ ಮಗನ ಜೋಡಿ ಕಳ್ಳತನಕ್ಕೆ ಪ್ರಯತ್ನ ನಡೆಸಿದ್ದರು. ಇವರನ್ನು ಬೆನ್ನು ಹತ್ತಿದಾಗ ಸಬ್‌ ಇನ್‌ಸ್ಪಕ್ಟರ್‌ ಜಗದೀಶ್ ಅವರನ್ನು ರಸ್ತೆ ಪಕ್ಕದ ಚರಂಡಿಗೆ ಮಧು ನೂಕಿ ಅವರನ್ನು ಚಾಕುವಿನಿಂದ ಹಲವು ಬಾರಿ ಇರಿದಿದ್ದು, ಜಗದೀಶ್‌ ಮೃತಪಟ್ಟಿದ್ದರು.

ಪೊಲೀಸ್ ಪೇದೆ ವೆಂಕಟೇಶ್‌ಕುಮಾರ್ ಅವರಿಗೂ ಚಾಕುವಿನಿಂದ ಇರಿದು, ಜಗದೀಶ್ ಅವರ ಸರ್ವಿಸ್‌ ಪಿಸ್ತೂಲ್‌ ಕದ್ದುಕೊಂಡು ಪರಾರಿಯಾಗಿದ್ದರು. ನಂತರ ಇವರು ಆಂಧ್ರಪ್ರದೇಶಕ್ಕೆ ಪರಾರಿಯಾಗಿದ್ದರು. ಅಲ್ಲಿಯೇ ಇವರನ್ನು ಬಂಧಿಸಲಾಗಿತ್ತು.

ಈ ಪ್ರಕರಣ ಕುರಿತು ನೆಲಮಂಗಲ ಉಪವಿಭಾಗದ ಡಿವೈಎಸ್‌ಪಿ ರಾಜೇಂದ್ರಕುಮಾರ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿದ್ದರು. ಮೀನಾಕುಮಾರಿ, ಎಸ್‌.ವಿ.ಭಟ್‌ ಸರ್ಕಾರಿ ಅಭಿಯೋಜಕರಾಗಿ ವಾದಿಸಿದ್ದರು.

ಹತ್ಯೆಗೀಡಾದ ಜಗದೀಶ್‌ ಅವರ ಪತ್ನಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ಉದ್ಯೋಗ ನೀಡಲಾಗಿದೆ. ಆರೋಪಿಗಳಿಗೆ ಸಣ್ಣ ಪ್ರಮಾಣದ ಶಿಕ್ಷೆ ವಿಧಿಸಿರುವುದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಮೇಲ್ಮನವಿ ಸಲ್ಲಿಸಲಾಗುವುದು ಎಂದು ಜಗದೀಶ್‌ ತಂದೆ ಶ್ರೀನಿವಾಸ್‌ ಹೇಳಿದ್ದಾರೆ.

ಲೋಕಾಯುಕ್ತ ಬಲೆಗೆ ಬೆಸ್ಕಾಂ ಎಂಜಿನಿಯರ್‌

ನಿರ್ಮಾಣಗೊಂಡಿದ್ದ ಕಟ್ಟಡವೊಂದಕ್ಕೆ ವಿದ್ಯುತ್‌ ಸಂಪರ್ಕ ಕಲ್ಪಿಸಲು ರೂಪಾಯಿ 3.80 ಲಕ್ಷ ಲಂಚಕ್ಕೇ ಬೇಡಿಕೆ ಇಟ್ಟಿದ್ದ ಬೆಸ್ಕಾಂನ ಕಗ್ಗಲಿಪುರ ಉಪ ವಿಭಾಗದ ಅಗರ ಕಾರ್ಯಾಚರಣೆ ಮತ್ತು ನಿರ್ವಹಣಾ ವಿಭಾಗದ ಸಹಾಯಕ ಎಂಜಿನಿಯರ್‌ ಯತೀಶ್‌ ಪಾಳೇಗಾರ್‌ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಎಸ್‌. ಚಂದನ್‌ ಕುಮಾರ್‌ ಎಂಬುವವರು ತಮ್ಮ ಕಟ್ಟಡವೊಂದಕ್ಕೆ ವಿದ್ಯುತ್‌ ಸಂಪರ್ಕ ಕಲ್ಪಿಸಲು ಕೋರಿ ಅರ್ಜಿ ಸಲ್ಲಿಸಿದ್ದರು. ವಿದ್ಯುತ್‌ ಸಂಪರ್ಕ ಕಲ್ಪಿಸಲು 5 ಲಕ್ಷ ರೂಪಾಯಿ ಲಂಚ ಕೊಡುವಂತೆ ಸಹಾಯಕ ಎಂಜಿನಿಯರ್‌ ಯತೀಶ್‌ ಒತ್ತಾಯಿಸಿದ್ದರು. ಮಾತುಕತೆ ನಡೆದು ಅಂತಿಮವಾಗಿ ರೂ. 3.80 ಲಕ್ಷ ಲಂಚಕ್ಕೆ ವಿದ್ಯುತ್‌ ಸಂಪರ್ಕ ನೀಡುವುದಾಗಿ ಇಂಜಿನಿಯರ್ ಹೇಳಿದ್ದರು.

ಲಂಚಕ್ಕೆ ಬೇಡಿಕೆ ಇಟ್ಟಿರುವುದಾಗಿ ಕಟ್ಟಡದ ಮಾಲೀಕ ಚಂದನ್‌ ಕುಮಾರ್‌, ಲೋಕಾಯುಕ್ತ ಪೊಲೀಸ್‌ ವಿಭಾಗದ ಬೆಂಗಳೂರು ನಗರದ ಒಂದನೇ ಘಟಕಕ್ಕೆ ದೂರು ಸಲ್ಲಿಸಿದ್ದರು. ಆರೋಪಿಯ ಸೂಚನೆಯಂತೆ ಚಂದನ್‌ ಕುಮಾರ್‌ ಅವರು ಸಹಾಯಕ ಎಂಜಿನಿಯರ್‌ ಯತೀಶ್‌ ಪಾಳೇಗಾರ್‌ ಅವರನ್ನು ಭೇಟಿಮಾಡಿ ರೂ. 3.80 ಲಕ್ಷ ಲಂಚದ ಹಣವನ್ನು ನೀಡಿದರು. ಕೂಡಲೇ ದಾಳಿಮಾಡಿದ ಲೋಕಾಯುಕ್ತ ಪೊಲೀಸ್‌ ವಿಭಾಗದ ಡಿವೈಎಸ್‌ಪಿ ಗಿರೀಶ್‌ ರೋಡ್ಕರ್‌ ಮತ್ತು ತಂಡ ಆರೋಪಿಯನ್ನು ಬಂಧಿಸಿದೆ ಎಂದು ಲೋಕಾಯುಕ್ತ ಪೊಲೀಸ್‌ ತಿಳಿಸಿದೆ.

ಲೋಕಾಯುಕ್ತದ ಪೊಲೀಸ್‌ ವಿಭಾಗದ ಬೆಂಗಳೂರು ನಗರ ಘಟಕದ ಎಸ್‌.ಪಿ. ಶ್ರೀನಾಥ್‌ ಜೋಶಿ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಲೋಕಾಯುಕ್ತ ಇಲಾಖೆ ತಿಳಿಸಿದೆ.

(ವರದಿ: ಎಚ್‌.ಮಾರುತಿ. ಬೆಂಗಳೂರು)

Whats_app_banner