Garlic: ಬೆಳ್ಳುಳ್ಳಿ ದರ ಕೆಜಿಗೆ 400 ರೂ., ಕರ್ನಾಟಕದಲ್ಲಿ ಫೆಬ್ರವರಿ 3ನೇ ವಾರ ಬೆಲೆ ಇಳಿಕೆ ನಿರೀಕ್ಷೆ
ಕನ್ನಡ ಸುದ್ದಿ  /  ಕರ್ನಾಟಕ  /  Garlic: ಬೆಳ್ಳುಳ್ಳಿ ದರ ಕೆಜಿಗೆ 400 ರೂ., ಕರ್ನಾಟಕದಲ್ಲಿ ಫೆಬ್ರವರಿ 3ನೇ ವಾರ ಬೆಲೆ ಇಳಿಕೆ ನಿರೀಕ್ಷೆ

Garlic: ಬೆಳ್ಳುಳ್ಳಿ ದರ ಕೆಜಿಗೆ 400 ರೂ., ಕರ್ನಾಟಕದಲ್ಲಿ ಫೆಬ್ರವರಿ 3ನೇ ವಾರ ಬೆಲೆ ಇಳಿಕೆ ನಿರೀಕ್ಷೆ

ಕರ್ನಾಟಕದಲ್ಲಿ ಬೆಳ್ಳುಳ್ಳಿ ಆವಕ ಕಡಿಮೆಯಾಗಿ ಬೆಲೆ ಏರಿಕೆಯಾಗಿದೆ. ಫೆಬ್ರವರಿ ಮೂರನೇ ವಾರದಲ್ಲಿ ಬೆಲೆ ತಗ್ಗುವ ನಿರೀಕ್ಷೆಯಿದೆ.

ಕರ್ನಾಟಕದಲ್ಲಿ ಬೆಳ್ಳುಳ್ಳಿ ದರದಲ್ಲಿ ಮತ್ತೆ ಏರಿಕೆ ಕಂಡು ಬಂದಿದೆ.
ಕರ್ನಾಟಕದಲ್ಲಿ ಬೆಳ್ಳುಳ್ಳಿ ದರದಲ್ಲಿ ಮತ್ತೆ ಏರಿಕೆ ಕಂಡು ಬಂದಿದೆ.

ಬೆಂಗಳೂರು: ಕರ್ನಾಟಕದಲ್ಲಿ ಒಂದು ತಿಂಗಳಿನಿಂದ ಏರುತ್ತಲೇ ಇರುವ ಬೆಳ್ಳುಳ್ಳಿ ದರ ಇಳಿಕೆಯಾಗುತ್ತಲೇ ಇಲ್ಲ. ಕೆಲ ದಿನಗಳಿಂದ ಕೆಜಿಗೆ 300 ರೂ.ವರೆಗೆ ಇದ್ದ ಬೆಳ್ಳುಳ್ಳಿ ದರ ಈ ವಾರ ಮತ್ತೆ ಏರಿಕ ಕಂಡಿದೆ. ಸದ್ಯ ಬೆಂಗಳೂರು ಸಹಿತ ಬಹುತೇಕ ಕಡೆ ಕೆಜಿಗೆ 400 ರೂ. ದಾಟಿದೆ. ಉತ್ತಮ ಗುಣಮಟ್ಟದ ನಾಟಿ ಬೆಳ್ಳುಳ್ಳಿ ದರವಂತೂ 450 ರೂ.ದಿಂದ 500 ರೂ.ವರೆಗೂ ಮಾರಾಟವಾಗುತ್ತಿದೆ. ಅದರಲ್ಲೂ ಮಾರುಕಟ್ಟೆಗೆ ಬರುವ ಬೆಳ್ಳುಳ್ಳಿ ಪ್ರಮಾಣ ಕಡಿಮೆಯಾಗಿರುವುದು ದರ ಏರಿಕೆಯಾಗಲು ಕಾರಣ ಎನ್ನುವ ಮಾತುಗಳೂ ಕೇಳಿ ಬರುತ್ತಿವೆ. ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಬೆಳ್ಳುಳ್ಳಿ ಇಳುವರಿ ಫೆಬ್ರವರಿಯಲ್ಲಿ ಬರುವ ನಿರೀಕ್ಷೆಯಿದ್ದು, ಆನಂತರ ದರ ಇಳಿಕೆಯಾಗಬಹುದು ಎನ್ನಲಾಗುತ್ತಿದೆ.

ಕರ್ನಾಟಕದಲ್ಲಿ ಹೆಚ್ಚಿನ ಬಳಕೆ

ಭಾರತದಲ್ಲಿ ಈರುಳ್ಳಿಯಂತೆಯೇ ಬೆಳ್ಳುಳ್ಳಿಯೂ ಇಲ್ಲದ ಊಟವೇ ಇಲ್ಲ. ಕರ್ನಾಟಕದಲ್ಲೂ ಬೆಳ್ಳುಳ್ಳಿ ಬಳಕೆ ಅಧಿಕವಾಗಿದೆ. ಪ್ರತಿನಿತ್ಯ ಇದನ್ನು ಬಳಸುವವರು ಇದ್ದಾರೆ. ಈರುಳ್ಳಿಯಷ್ಟು ಬಳಕೆ ಪ್ರಮಾಣ ಇಲ್ಲದೇ ಇದ್ದರೂ ಬೆಳ್ಳುಳ್ಳಿಯೂ ಅಡುಗೆಯಲ್ಲಿ ತನ್ನದೇ ಆದ ಮಹತ್ವ ಹೊಂದಿದೆ. ಬಳಕೆ ಪ್ರಮಾಣವೂ ಅಧಿಕವಾಗಿರುವುದರಿಂದ ಬೆಲೆ ಕೂಡ ಕೆಲ ದಿನಗಳಿಂದ ಕರ್ನಾಟಕದಲ್ಲಿ ಏರಿಕೆಯಾಗುತ್ತಲೇ ಇದೆ. ಇದರೊಟ್ಟಿಗೆ ಮಾರುಕಟ್ಟೆ ಬರುವ ಪ್ರಮಾಣದಲ್ಲಿಯೂ ಇಳಿಕೆಯಾಗಿರುವುದು ದರ ಏರಿಕೆಗೆ ಮತ್ತೊಂದು ಪ್ರಮುಖ ಕಾರಣ.

ಈ ಕಾರಣದಿಂದ 200 ರೂ. ಇದ್ದ ಕೆಜಿ ಬೆಳ್ಳುಳ್ಳಿ ಬೆಲೆಯು ಈಗ ದುಪ್ಪಟ್ಟುಗೊಂಡಿದೆ. ಅದೂ ಒಂದು ತಿಂಗಳಿನಿಂದ 300ರಿಂದ 350 ರೂ.ಗೆ ಮಾರಾಟವಾಗುತ್ತಿದೆ. ಇದರಿಂದ ಕೆಳಕ್ಕೆ ಬೆಲೆ ಇಳಿದೇ ಇಲ್ಲ.

ಹಲವು ಮಾರುಕಟ್ಟೆಗಳಲ್ಲಿ ಹೆಚ್ಚಳ

ಬೆಂಗಳೂರು, ಚಿಂತಾಮಣಿ, ತುಮಕೂರು ಸೇರಿದಂತೆ ಬಹುತೇಕ ಮಾರುಕಟ್ಟೆಗಳಲ್ಲಿ ಉತ್ತಮ ದರ್ಜೆಯ ಬೆಳ್ಳುಳ್ಳಿ ದರ ಅಧಿಕವಾಗಿಯೇ ಇದೆ. ಅದು 400 ರೂ.ವರೆಗೂ ಇದೆ. ಉತ್ತರ ಕರ್ನಾಟಕದಲ್ಲಿ ಹುಬ್ಬಳ್ಳಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ ಸಹಿತ ಹಲವು ಕಡೆಗಳಲ್ಲೂ ದರ ಇಳಿಕೆಯಾಗದೇ ಕೆಜಿಗೆ 400 ರೂವರೆಗೆ ಮಾರಾಟ ಮಾಡಲಾಗುತ್ತಿದೆ.

ಮಧ್ಯಪ್ರದೇಶದಲ್ಲಿ ಅಧಿಕ

ಬೆಳ್ಳುಳ್ಳಿಯನ್ನು ಉತ್ತರ ಭಾರತದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಕಡಿಮೆ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಮಧ್ಯಪ್ರದೇಶವೇ ಅತಿ ಹೆಚ್ಚು ಬೆಳ್ಳುಳ್ಳಿ ಬೆಳೆಯುವ ರಾಜ್ಯದ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಆನಂತರದ ಸ್ಥಾನದಲ್ಲಿ ರಾಜಸ್ಥಾನ, ಗುಜರಾತ್‌ ರಾಜ್ಯಗಳಿವೆ. ಮಧ್ಯಪ್ರದೇಶ ಒಂದರಲ್ಲೇ ಇಡೀ ದೇಶಕ್ಕೆ ಸರಬರಾಜು ಆಗುವ ಶೇ70 ರಷ್ಟು ಬೆಳ್ಳುಳ್ಳಿ ಬೆಳೆಯಲಾಗುತ್ತಿದೆ. ಮೂರು ರಾಜ್ಯಗಳಿಂದಲೂ ಹೆಚ್ಚಿನ ಪ್ರಮಾಣದಲ್ಲಿ ಬೆಳ್ಳುಳ್ಳಿ ಕರ್ನಾಟಕಕ್ಕೆ ಬರುತ್ತಿದೆ. ಅಲ್ಲಿಯೂ ಫೆಬ್ರವರಿಯಲ್ಲಿ ಇಳುವರಿ ಬರುವುದರಿಂದ ಮುಂದಿನ ತಿಂಗಳ ಮಾರುಕಟ್ಟೆಗೆ ಬೆಳ್ಳುಳ್ಳಿ ಆವಕ ಹೆಚ್ಚಿ ದರ ಕಡಿಮೆಯಾಗಬಹುದು. ಅದೂ ಕೆಜಿಗೆ 200ರೂ. ಗೂ ಇಳಿಕೆಯಾಗಬಹುದು ಎನ್ನುವುದು ವ್ಯಾಪಾರಸ್ಥರ ನುಡಿ.

ಚೀನಾದಲ್ಲೂ ಇಳಿದ ಇಳುವರಿ

ಇನ್ನು ಜಾಗತಿಕ ಮಟ್ಟದಲ್ಲಿ ಭಾರತಕ್ಕಿಂತ ಚೀನಾ ಬೆಳ್ಳುಳ್ಳಿ ಬೆಳೆಯುವುದರಲ್ಲಿ ಮುಂಚೂಣಿಯಲ್ಲಿದೆ. ಹಲವು ದೇಶಗಳಿಗೆ ಚೀನಾದಿಂದಲೇ ಹೆಚ್ಚಿನ ಪ್ರ,ಮಾಣದಲ್ಲಿ ಬೆಳ್ಳುಳ್ಳಿ ಸರಬರಾಜು ಆಗುತ್ತದೆ. ಆದರೆ ಚೀನಾದಲ್ಲೂ ಈ ಬಾರಿ ನಿರೀಕ್ಷೆಯಷ್ಟು ಬೆಳೆ ಬಂದಿಲ್ಲ. ಅಲ್ಲಿಯೇ ಕೊರತೆ ಇರುವಾಗ ರಫ್ತು ಪ್ರಮಾಣ ತಗ್ಗಿದೆ. ಅದರಲ್ಲೂ ಮಲೆಷಿಯಾ, ಶ್ರೀಲಂಕಾ, ಬಾಂಗ್ಲಾದೇಶ, ವಿಯೆಟ್ನಾಂನಂತಹ ದೇಶಗಳಿಗೆ ಭಾರತದಿಂದಲೇ ಈಗ ಬೆಳ್ಳುಳ್ಳಿ ಸರಬರಾಜು ಆಗುತ್ತಿದೆ. ಅದರಲ್ಲೂ ಮಧ್ಯಪ್ರದೇಶ ಭಾಗದ ಬೆಳ್ಳುಳ್ಳಿ ರಫ್ತು ಮಾಡಲಾಗುತ್ತಿದೆ. ಇದರಿಂದಲೂ ನಮ್ಮ ಭಾಗದಲ್ಲಿ ಆವಲ ಕಡಿಮೆಯಾಗಿದೆ ದರ ಹೆಚ್ಚಲು ಮತ್ತೊಂದು ಕಾರಣವಾಗಿದೆ ಎನ್ನಲಾಗುತ್ತಿದೆ.

ಬೆಂಗಳೂರಿಗೆ ಬೆಳ್ಳುಳ್ಳಿ

ಮಧ್ಯಪ್ರದೇಶ ಭಾಗದಿಂದಲೇ ಬೆಂಗಳೂರಿನ ಯಶವಂತಪುರ ಎಪಿಎಂಸಿಗೆ ಸದ್ಯ ಮೂರು ಸಾವಿರ ಚೀಲ ಬೆಳ್ಳುಳ್ಳಿ ಬರುತ್ತಿದೆ. ಆ ಭಾಗದಲ್ಲಿ ಕೊಯ್ಲು ಆರಂಭಗೊಂಡಿದ್ದು ಆವಕ ಪ್ರಮಾಣ ದುಪ್ಪಟ್ಟುಗೊಳ್ಳಲಿದೆ. ದರವೂ ಇಳಿಕೆಯಾಗಲಿದೆ ಎನ್ನುವುದು ವರ್ತಕರ ಅಭಿಪ್ರಾಯ.

ಒಂದು ತಿಂಗಳಿನಿಂದಲೂ ಹೆಚ್ಚು ದರ ಕೊಟ್ಟು ಬೆಳ್ಳುಳ್ಳಿ ಬಳಕೆ ಮಾಡುತ್ತಿರುವವರು ಇನ್ನು ಎರಡು ವಾರ ಕಾದರೆ ಬೆಲೆ ಇಳಿಕೆಯಾಗಬಹುದು.

Whats_app_banner