Bengaluru Crime: ಬಿಐಎಸ್‌ ಅಧಿಕಾರಿಗಳ ಸೋಗಿನಲ್ಲಿ 1 ಕೆಜಿ ಚಿನ್ನಾಭರಣ ದರೋಡೆ, ಪೂಜೆ ನೆಪದಲ್ಲಿ ಮಹಿಳೆಗೆ ವಂಚನೆ-bengaluru news bengaluru crime 1kg gold in robbery in jewelry shop kr puram men cheated women in the of worship mrt ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Bengaluru Crime: ಬಿಐಎಸ್‌ ಅಧಿಕಾರಿಗಳ ಸೋಗಿನಲ್ಲಿ 1 ಕೆಜಿ ಚಿನ್ನಾಭರಣ ದರೋಡೆ, ಪೂಜೆ ನೆಪದಲ್ಲಿ ಮಹಿಳೆಗೆ ವಂಚನೆ

Bengaluru Crime: ಬಿಐಎಸ್‌ ಅಧಿಕಾರಿಗಳ ಸೋಗಿನಲ್ಲಿ 1 ಕೆಜಿ ಚಿನ್ನಾಭರಣ ದರೋಡೆ, ಪೂಜೆ ನೆಪದಲ್ಲಿ ಮಹಿಳೆಗೆ ವಂಚನೆ

ಬಿಐಎಸ್ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ಮಳಿಗೆಯೊಂದರಲ್ಲಿ 1 ಕೆಜಿ ಚಿನ್ನಾಭರಣ ದರೋಡೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆಗಳನ್ನು ಬೆಂಗಳೂರಿನ ಕೆಆರ್‌ ಪುರ ಪೊಲೀಸರು ಬಂಧಿಸಿದ್ದಾರೆ. ಗಂಡನಿಗೆ ಆಪತ್ತಿದೆ ಎಂದು ನಂಬಿಸಿ, ಮಹಿಳೆಗೆ ವಂಚನೆ ಮಾಡಿದ ಪ್ರಕರಣ ಕೊತ್ತನೂರು ಬಳಿ ನಡೆದಿದೆ. (ವರದಿ: ಎಚ್‌. ಮಾರುತಿ)

ಬೆಂಗಳೂರು ಕ್ರೈಮ್‌
ಬೆಂಗಳೂರು ಕ್ರೈಮ್‌

ಬೆಂಗಳೂರು: ಭಾರತೀಯ ಮಾನಕ ಬ್ಯೂರೊ (ಬಿಐಎಸ್) ಅಧಿಕಾರಿಗಳು ಎಂದು ಹೇಳಿಕೊಂಡು ಬೆಂಗಳೂರಿನ ಚಿನ್ನಾಭರಣ ಮಳಿಗೆಗೆ ನುಗ್ಗಿ ದರೋಡೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಕೆ.ಆರ್.ಪುರ ಠಾಣೆ ಪೊಲೀಸರು ಬಂಧಿಸಿ ಪರಪ್ಪನ ಅಗ್ರಹಾರಕ್ಕೆ ಅಟ್ಟಿದ್ದಾರೆ.

ಕೇರಳದ ಎರ್ನಾಕುಲಂ ಜಿಲ್ಲೆಯ 55 ವರ್ಷದ ಸಂಬತ್ ಕುಮಾರ್ ಅಲಿಯಾಸ್ ಸಂಪತ್, 54 ವರ್ಷದ ತ್ರಿಶೂಲ್ ಜಿಲ್ಲೆಯ ಜೋಶಿ ಆರ್. ಥಾಮಸ್, ಉತ್ತರ ಪ್ರದೇಶ ಗಾಜಿಯಾಬಾದ್‌ ಜಿಲ್ಲೆಯ 48 ವರ್ಷದ ಸಂದೀಪ್ ಶರ್ಮಾ ಮತ್ತು 27 ವರ್ಷದ ಅವಿನಾಶ್ ಕುಮಾರ್ (27) ಬಂಧಿತ ಆರೋಪಿಗಳು.

ಇವರಿಂದ 80 ಲಕ್ಷ ರೂಪಾಯಿ ಮೌಲ್ಯದ 1.248 ಕೆಜಿ ತೂಕದ ಚಿನ್ನಾಭರಣ, ಸಿಸಿ ಟಿವಿ ಕ್ಯಾಮೆರಾ ಡಿವಿಆರ್ ಹಾಗೂ ಒಂದು ಕಾರನ್ನು ಜಪ್ತಿ ಮಾಡಲಾಗಿದೆ ಎಂದು ವೈಟ್‌ಪೀಲ್ಡ್ ವಿಭಾಗದ ಡಿಸಿಪಿ ಶಿವಕುಮಾರ್ ತಿಳಿಸಿದ್ದಾರೆ.

ಭಟ್ಟರಹಳ್ಳಿ ಆರ್‌.ಎಂ.ಎಸ್ ಕಾಲೊನಿ ಸಮೀಪ ಇರುವ ಮಹಾಲಕ್ಷ್ಮಿ ಆಭರಣ ಮಳಿಗೆಯಲ್ಲಿ ಜ. 27ರಂದು ಈ ದರೋಡೆ ನಡೆದಿತ್ತು. ಈ ಸಂಬಂಧ ಮಳಿಗೆ ಮಾಲೀಕರು ದೂರು ದಾಖಲಿಸಿದ್ದರು. ಈ ದೂರು ಆಧರಿಸಿ ತನಿಖೆ ಕೈಗೊಂಡು ಪ್ರಕರಣ ನಡೆದ ಎರಡು ಗಂಟೆಯಲ್ಲಿ ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ ಎಂದು ಅವರು ಹೇಳಿದ್ದಾರೆ. ಈ ಆರೋಪಿಗಳು ಕಾರಿನಲ್ಲಿ ವೇಗವಾಗಿ ತೆರಳುತ್ತಿದ್ದಾಗ ಟಿಸಿ ಪಾಳ್ಯದಲ್ಲಿ ಬಂಧಿಸಲಾಗಿದೆ.

ಸಿನೀಮಯ ಸ್ಟೈಲ್‌ನಲ್ಲಿ ನಡೆದ ದರೋಡೆ

ಬಿಐಎಸ್ ಅಧಿಕಾರಿಗಳ ಸೋಗಿನಲ್ಲಿ ಮಳಿಗೆಗೆ ನುಗ್ಗಿದ್ದ ಆರೋಪಿಗಳು, ಚಿನ್ನಾಭರಣಗಳ ಹಾಲ್‌ಮಾರ್ಕ್‌ ಹಾಗೂ ಜಿಎಸ್‌ಟಿ ದಾಖಲೆಗಳನ್ನು ಪರಿಶೀಲಿಸಬೇಕೆಂದು ಹೇಳಿದ್ದರು. ಅವರ ಮಾತು ನಂಬಿದ್ದ ಮಳಿಗೆಯ ಕೆಲಸಗಾರರು, ಚಿನ್ನಾಭರಣ ಹಾಗೂ ದಾಖಲೆಗಳನ್ನು ಆರೋಪಿಗಳ ವಶಕ್ಕೆ ಒಪ್ಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸುಮಾರು 40 ನಿಮಿಷ ಮಳಿಗೆಯಲ್ಲಿದ್ದ ಆರೋಪಿಗಳು, ಚಿನ್ನಾಭರಣ ಮತ್ತು ದಾಖಲೆಗಳನ್ನು ಜಪ್ತಿ ಮಾಡಿದ್ದರು. ನಂತರ ಕೆಲಸಗಾರರಿಗೆ ನೋಟಿಸ್ ನೀಡಿ, ಮಾಲೀಕರನ್ನು ತಮಿಳುನಾಡಿನ ಕಚೇರಿಗೆ ಕಳುಹಿಸುವಂತೆ ಹೇಳಿ ಅಂಗಡಿಯಿಂದ ಹೊರಟಿದ್ದರು. ಯಾವುದೇ ದಾಖಲೆ ಲಭ್ಯವಾಗಬಾರದು ಎಂದು ಆರೋಪಿಗಳು ಸಿಸಿಟಿವಿ ಕ್ಯಾಮೆರಾ ಮತ್ತು ಡಿವಿಆರ್‌ ಅನ್ನು ಸಹ ಕೊಂಡೊಯ್ದಿದ್ದರು.

ಈ ಆರೋಪಿಗಳು ಭಾರಿ ಚಾಣಾಕ್ಷ ಬುದ್ಧಿ ಉಪಯೋಗಿಸಿದ್ದಾರೆ. ಯಾವುದೇ ಹಂತದಲ್ಲಿ ಸಣ್ಣ ಸುಳಿವು ಸಿಗಬಾರದು ಎಂದು ಎಚ್ಚರ ವಹಿಸಿರುವುದು ಕಂಡು ಬಂದಿದೆ.

ಆರೋಪಿಗಳು ದುಷ್ಕೃತ್ಯಕ್ಕೆ ಬಳಸಿದ್ದ ಕಾರಿಗೆ ನಕಲಿ ನೋಂದಣಿ ಸಂಖ್ಯೆ ಫಲಕ ಅಳವಡಿಸಿದ್ದರು. ಕಾರು ಸ್ಥಳದಿಂದ ಹೊರಡುವ ಸಂದರ್ಭದಲ್ಲಿ ಅನುಮಾನಗೊಂಡಿದ್ದ ಹೇಮರಾಜ್ ಎಂಬ ಕೆಲಸಗಾರ ಕಾರಿಗೆ ಅಡ್ಡವಾಗಿ ನಿಂತಿದ್ದರು. ಅವರ ಮೇಲೆ ಕಾರು ಹತ್ತಿಸಿದ್ದ ಆರೋಪಿಗಳು ಕೊಲೆಗೂ ಯತ್ನಿಸಿ ಸ್ಥಳದಿಂದ ಪರಾರಿಯಾಗಿದ್ದರು ಎಂದು ಪೊಲಿಸರು ತಿಳಿಸಿದ್ದಾರೆ.

ದರೋಡೆ ಹಾಗೂ ಕೊಲೆ ಯತ್ನ ಆರೋಪದಡಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿತ್ತು. ಕೃತ್ಯ ನಡೆದ ಎರಡು ಗಂಟೆಯೊಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಸಫಲರಾಗಿದ್ದಾರೆ.

ಇವರಲ್ಲಿ ಒಬ್ಬ ಆರೋಪಿಯಾದ ಆರೋಪಿ ಸಂಪತ್, ಮಂಡ್ಯ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣದಲ್ಲಿ ಸಿಕ್ಕಿಬಿದ್ದು ಕೆಲವು ತಿಂಗಳು ಜೈಲಿನಲ್ಲಿದ್ದ. ಜಾಮೀನಿನ ಮೇಲೆ ಇತ್ತೀಚೆಗೆ ಬಿಡುಗಡೆಗೊಂಡಿದ್ದ. ತಮಿಳುನಾಡು ಮೂಲದ ಆರೋಪಿ ಜೊತೆ ಸೇರಿ ಸಂಚು ರೂಪಿಸಿದ್ದ. ನಂತರ ಇತರೆ ಆರೋಪಿಗಳ ಜೊತೆ ಸೇರಿ ದರೋಡೆಗೆ ಮುಂದಾಗಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಾಹನ ದಟ್ಟಣೆಯಿಂದ ರಸ್ತೆಗೆ ಬಂದ ಎಂಜಿನಿಯರ್ ಹೇಗೆ ಏಕೆ?

ಬೆಂಗಳೂರು ನಗರದಲ್ಲಿ ಪ್ರತಿ ಶುಕ್ರವಾರ ಸಂಜೆ ಮತ್ತು ಸೋಮವಾರ ಬೆಳಗ್ಗೆ ವಿಪರೀತ ವಾಹನ ದಟ್ಟಣೆ ಕಂಡುಬರುವುದು ಸರ್ವೇ ಸಾಮಾನ್ಯ. ಅದರಲ್ಲೂ ವೀಕೆಂಡ್ ದಿನಗಳ ಹಿಂದೆ ರಜಾ ದಿನಗಳು ಬಂದರೆ ಟ್ರಾಫಿಕ್ ಮೂರು ಪಟ್ಟು ಹೆಚ್ಚುತ್ತದೆ. ಜ.29 ರಂದು ಇದೇ ಅನುಭವವಾಗಿದೆ.

ಹೊರವರ್ತುಲ ರಸ್ತೆ ಹಾಗೂ ನಗರದ ಹೃದಯ ಭಾಗದ ವಾಣಿಜ್ಯ ಪ್ರದೇಶದ ರಸ್ತೆಗಳಲ್ಲಿ ವಾಹನಗಳು ಆಮೆ ವೇಗದಲ್ಲಿ ಸಾಗಿದ್ದು ಕಂಡು ಬಂತು. ಕೆಲವು ರಸ್ತೆಗಳಲ್ಲಿ 15 ನಿಮಿಷ ವಾಹನಗಳು ನಿಂತಲೇ ನಿಲ್ಲುವ ಸ್ಥಿತಿ ನಿರ್ಮಾಣವಾಗಿತ್ತು. ಹೊರವರ್ತುಲ ರಸ್ತೆಯಲ್ಲಿ ವಿಪರೀತ ದಟ್ಟಣೆ ಇತ್ತು. ಸಾಫ್ಟ್‌ವೇರ್ ಎಂಜಿನಿಯರೊಬ್ಬರು ಇದೇ ಮಾರ್ಗದಲ್ಲಿ ಕಚೇರಿಗೆ ಹೊರಟಿದ್ದರು. ಮೇಲ್ಸೇತುವೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ, ಬೈಕ್‌ ಮುಂದಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಅರ್ಧ ಗಂಟೆ ಬೈಕ್‌ ನಿಂತಲೇ ನಿಂತಿತ್ತು.

ಈ ದಟ್ಟಣೆಯಿಂದ ಬೇಸತ್ತ ಟೆಕ್ಕಿ, ಬೈಕ್ ಅನ್ನು ನಿಲ್ಲಿಸಿ ಮೇಲ್ಸೇತುವೆ ಗೋಡೆಗೆ ಒರಗಿಕೊಂಡು ಕುಳಿತು, ಮೊಬೈಲ್ ನೋಡುವುದರಲ್ಲಿ ತಲ್ಲೀನರಾಗಿದ್ದರು. ಇತರ ವಾಹನ ಸವಾರರು ಇವರ ಫೋಟೊ ಸೆರೆ ಹಿಡಿದು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ವಾಹನ ದಟ್ಟಣೆಯಿಂದ ರಸ್ತೆಗೆ ಬಂದ ಎಂಜಿನಿಯರ್ ಎಂದು ಅಡಿ ಬರಹ ನೀಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿ ಕೊಂಡಿದ್ದಾರೆ. ಈ ಫೋಟೊ ವೈರಲ್ ಆಗಿದ್ದು, ಬೆಂಗಳೂರಿನ ವಾಹನ ದಟ್ಟಣೆಗೆ ಮುಕ್ತಿ ಯಾವಾಗ ಎಂದು ಪ್ರಶ್ನಿಸಿದ್ದಾರೆ. ಆದರೆ ಈ ಪ್ರಶ್ನೆಗೆ ಉತ್ತರ ಕೊಡುವವರು ಯಾರು?

ಗಂಡನಿಗೆ ಗಂಡಾಂತರ; ಪೂಜೆ ನೆಪದಲ್ಲಿ ಚಿನ್ನಾಭರಣ ದೋಚಿದ ಆರೋಪಿ

ಮೋಸ ಹೋಗುವವರು ಎಲ್ಲಿಯವರೆಗೆ ಇರುತ್ತಾರೋ ಅಲ್ಲಿಯವರೆಗೆ ಮೋಸ ಮಾಡುವವರು ಇದ್ದೇ ಇರುತ್ತಾರೆ ಎನ್ನುವುದಕ್ಕೆ ಮತ್ತೊಂದು ತಾಜಾ ಉದಾಹರಣೆ ಇಲ್ಲಿದೆ. ಮಾಹಿತಿ ತಂತ್ರಜ್ಞಾನ ರಾಜಧಾನಿ ಎಂದು ಖ್ಯಾತಿ ಪಡೆದಿರುವ ಬೆಂಗಳೂರಿನಲ್ಲಿ ಈ ರೀತಿ ಮೋಸ ಹೋಗುವವರು ಇದ್ದಾರೆ ಎನ್ನುವುದು ಕಳವಳ ಮೂಡಿಸುತ್ತದೆ.

ಗಂಡನಿಗೆ ಗಂಡಾಂತರ ಇದೆ, ಅಪಾಯ ತಪ್ಪಿದ್ದಲ್ಲ ಎಂದು ಹೇಳಿ ಮಹಿಳೆಯೊಬ್ಬರನ್ನು ಬೆದರಿಸಿ, ನಂಬಿಸಿ ಪೂಜೆ ನೆಪದಲ್ಲಿ ಚಿನ್ನಾಭರಣ ದೋಚಿರುವ ಪ್ರಕರಣ ಬೆಂಗಳೂರಿನ ಕೊತ್ತನೂರು ಬಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಈ ಸಂಬಂಧ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇಲ್ಲಿನ ಜನತಾ ಕಾಲೊನಿ ನಿವಾಸಿಯಾಗಿರುವ 25 ವರ್ಷದ ಮಹಿಳೆಯೊಬ್ಬರು ಕೃತ್ಯದ ಬಗ್ಗೆ ದೂರು ನೀಡಿದ್ದಾರೆ. ಅಪರಿಚಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಜ.28ರಂದು ಬೆಳಿಗ್ಗೆ ಮನೆಯ ಬಳಿ ಆಗಮಿಸಿದ್ದ ಆರೋಪಿ, ಮಹಿಳೆಯನ್ನು ನಯವಾಗಿ ಮಾತನಾಡಿಸಿದ್ದ. ಆಕೆಯನ್ನು ಮರುಳು ಮಾಡಿ ನಿಮ್ಮ ಗಂಡನಿಗೆ ಗಂಡಾಂತರವಿದೆ. ಇದನ್ನು ತಪ್ಪಿಸಲು ವಿಶೇಷ ಪೂಜೆ ಮಾಡಬೇಕು. ಇಲ್ಲದಿದ್ದರೆ, ಗಂಡ ತೀರಿಕೊಳ್ಳುತ್ತಾರೆ ಎಂದು ಹೇಳಿ ಬೆದರಿಸಿದ್ದ. ತನ್ನ ಮಾತಿನ ಮೇಲೆ ನಂಬಿಕೆ ಬರುವಂತೆ ನಂಬಿಸಿದ್ದ. ಆತನ ಮಾತು ನಂಬಿದ್ದ ಮಹಿಳೆ, ಪೂಜೆ ಮಾಡಿಸಲು ಒಪ್ಪಿದ್ದರು. ನಂತರ ಪೂಜೆ ಮಾಡಲು ಮುಂದಾಗಿದ್ದ ಆರೋಪಿ, ಮಡಿಕೆ ಮತ್ತಿತರ ಪೂಜಾ ಸಾಮಗ್ರಿ ತರಿಸಿದ್ದ. ಅದರೊಳಗೆ ಅರಿಶಿನ‌, ಕುಂಕುಮ, ಅಕ್ಕಿ ಹಾಕಿದ್ದ. ಅದೇ ಮಡಿಕೆಯೊಳಗೆ ಮೈ ಮೇಲಿದ್ದ ಚಿನ್ನಾಭರಣಗಳನ್ನೂ ಬಿಚ್ಚಿ ಹಾಕುವಂತೆ ಮಹಿಳೆಗೆ ಹೇಳಿದ್ದ. ಆತನ ಮಾತನ್ನು ನಂಬಿದ್ದ ಮಹಿಳೆ ಚಿನ್ನದ ಕಿವಿಯೊಲೆಗಳನ್ನು ಬಿಚ್ಚಿ ಮಡಿಕೆಯೊಳಗೆ ಹಾಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮಡಿಕೆ ಸುತ್ತಲೂ ದಾರ ಕಟ್ಟಿದ್ದ ಆರೋಪಿ, ಪೂಜೆ ಮುಕ್ತಾಯವಾಗಿದೆ. ನಿಮ್ಮ ಗಂಡ ಮನೆಗೆ ಬಂದ ನಂತರ ಮಡಿಕೆ ತೆರೆದು ಇಬ್ಬರೂ ನೋಡಿ. ನಿಮ್ಮ ಗಂಡನಿಗೆ ತಗುಲಿದ್ದ ಗಂಡಾಂತರ ನಿವಾರಣೆಯಾಗುತ್ತದೆ ಎಂದು ಮನೆಯಿಂದ ಹೊರಟು ಹೋಗಿದ್ದ. ಸಂಜೆ ಪತಿಯು ಮನೆಗೆ ಬಂದಾಗ ಮಹಿಳೆ ಮಡಿಕೆಯನ್ನು ತೆರೆದಿದ್ದರು. ಆದರೆ ಅದರಲ್ಲಿ ಕಿವಿಯೋಲೆಗಳು ಇರಲಿಲ್ಲ. ಆಗ ಕಳ್ಳತನ ನಡೆದಿರುವುದು ಅರಿವಿಗೆ ಬಂದಿದೆ. ನಂತರ ಈ ದಂಪತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

(This copy first appeared in Hindustan Times Kannada website. To read more like this please logon to kannada.hindustantimes.com )

mysore-dasara_Entry_Point