ಕನ್ನಡ ಸುದ್ದಿ  /  ಕರ್ನಾಟಕ  /  Mlc Elections 2024: ವಿಧಾನಪರಿಷತ್‌ ಚುನಾವಣೆ, ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಮರಿತಿಬ್ಬೇಗೌಡ ಕಾಂಗ್ರೆಸ್‌ ಅಭ್ಯರ್ಥಿ

MLC Elections 2024: ವಿಧಾನಪರಿಷತ್‌ ಚುನಾವಣೆ, ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಮರಿತಿಬ್ಬೇಗೌಡ ಕಾಂಗ್ರೆಸ್‌ ಅಭ್ಯರ್ಥಿ

ಮೈಸೂರು ಕೇಂದ್ರಿತ ದಕ್ಷಿನ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಮರಿತಿಬ್ಬೇಗೌಡ ಹೆಸರು ಅಂತಿಮಗೊಂಡಿದೆ.

ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಮರಿತಿಬ್ಬೇಗೌಡ ಕಾಂಗ್ರೆಸ್‌ ಅಭ್ಯರ್ಥಿ
ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಮರಿತಿಬ್ಬೇಗೌಡ ಕಾಂಗ್ರೆಸ್‌ ಅಭ್ಯರ್ಥಿ

ಬೆಂಗಳೂರು: ಕರ್ನಾಟಕ ವಿಧಾನಪರಿಷತ್‌ಗೆ ನಡೆಯಲಿರುವ ಆರು ಸ್ಥಾನಗಳ ಪದವೀಧರರು ಹಾಗೂ ಶಿಕ್ಷಕರ ಕ್ಷೇತ್ರ ಚುನಾವಣೆಗೆ ಕಾಂಗ್ರೆಸ್‌ ಈಗಾಗಲೇ ಐದು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದ್ದು, ಮೈಸೂರು ಕೇಂದ್ರಿತ ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಹಾಲಿ ಸದಸ್ಯ ಮರಿತಿಬ್ಬೇಗೌಡ ಅವರನ್ನು ಅಧಿಕೃತ ಅಭ್ಯರ್ಥಿಯಾಗಿ ಘೋಷಣೆ ಮಾಡಿದೆ. ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಅವರು ಪಕ್ಷದ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಿದ್ದಾರೆ. ಈ ಕ್ಷೇತ್ರದಿಂದ ಈಗಾಗಲೇ ನಾಲ್ಕು ಬಾರಿ ವಿಧಾನಪರಿಷತ್‌ ಸದಸ್ಯರಾಗಿರುವ ಮರಿತಿಬ್ಬೇಗೌಡ ಎರಡು ತಿಂಗಳ ಹಿಂದೆಯೇ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್‌ ಸೇರಿದ್ದರು. ಅವರನ್ನೇ ಈಗ ಪಕ್ಷ ಅಭ್ಯರ್ಥಿಯಾಗಿಸಿದೆ.

ಟ್ರೆಂಡಿಂಗ್​ ಸುದ್ದಿ

ಮರಿತಿಬ್ಬೇಗೌಡ ಅವರು ಮೊದಲ ಬಾರಿಗೆ ವಿಧಾನಪರಿಷತ್‌ ಪ್ರವೇಶಿಸಿದ್ದು ಕಾಂಗ್ರೆಸ್‌ ಪಕ್ಷದಿಂದಲೇ. ಇದಾದ ನಂತರ ಅವರು ಪಕ್ಷೇತರರಾಗಿ ಕಣಕ್ಕಿಳಿದು ಗೆದ್ದು ಜೆಡಿಎಸ್‌ ಬೆಂಬಲಿಸಿದ್ದರು. ಆನಂತರ ಎರಡು ಬಾರಿ ಜೆಡಿಎಸ್‌ ನಿಂದಲೇ ಪರಿಷತ್‌ ಸದಸ್ಯರಾಗಿದ್ದರು. ವಿಧಾನಪರಿಷತ್‌ ಉಪಸಭಾಪತಿಯೂ ಆಗಿದ್ದರು.

ಎರಡು ಬಾರಿ ದಕ್ಷಿಣ ಪದವೀಧರರ ಕ್ಷೇತ್ರದಿಂದ ವಿಧಾನ ಪರಿಷತ್‌ ಸದಸ್ಯರಾಗಿದ್ದ ಕೆ.ಟಿ.ಶ್ರೀಕಂಠೇಗೌಡ ಅವರು ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದರು. ಎರಡು ವರ್ಷದ ಹಿಂದೆ ನಡೆದಿದ್ದ ಪದವೀಧರರ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ.

ಈ ಕಾರಣದಿಂದಲೇ ಜೆಡಿಎಸ್‌ ವರಿಷ್ಠರೊಂದಿಗೆ ಮುನಿಸಿಕೊಂಡು ಮರಿತಿಬ್ಬೇಗೌಡ ಪಕ್ಷದಿಂದ ದೂರವೇ ಉಳಿದಿದ್ದರು. ಕಾಂಗ್ರೆಸ್‌ ಜತೆಗೆ ಗುರುತಿಸಿಕೊಂಡಿದ್ದರು. ದಕ್ಷಿಣ ಪದವೀಧರರ ಚುನಾವಣೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪರವೇ ಪ್ರಚಾರ ಕೈಗೊಂಡಿದ್ದರು. ಆನಂತರ ಕಾಂಗ್ರೆಸ್ ಪಕ್ಷವನ್ನು ಸೇರಿದ್ದರು.‌ ಅವರೇ ಅಭ್ಯರ್ಥಿ ಎನ್ನುವ ಘೋಷಣೆಯಾಗಿದ್ದರೂ ಪ್ರಕಟಣೆ ಹೊರಡಿಸಿರಲಿಲ್ಲ.

ಮರಿತಿಬ್ಬೇಗೌಡ ಅವರು ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಐದನೇ ಬಾರಿಗೆ ಕಣಕ್ಕಿಳಿಯುತ್ತಿದ್ದು ಮೇ 14ರ ಮಂಗಳವಾರ ನಾಮಪತ್ರವನ್ನು ಸಲ್ಲಿಸಲಿದ್ದಾರೆ ಎನ್ನಲಾಗಿದೆ.

ಈಗಾಗಲೇ ಪಕ್ಷವು ಈಶಾನ್ಯ ಪದವೀಧರರ ಕ್ಷೇತ್ರಕ್ಕೆ ಚಂದ್ರಶೇಖರ ಪಾಟೀಲ್‌, ಬೆಂಗಳೂರು ಪದವೀಧರರ ಕ್ಷೇತ್ರಕ್ಕೆ ರಾಮೋಜಿಗೌಡ,ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಡಿ.ಟಿ.ಶ್ರೀನಿವಾಸ್‌, ನೈರುತ್ಯ ಪದವೀಧರರ ಕ್ಷೇತ್ರಕ್ಕೆ ಆಯನೂರು ಮಂಜುನಾಥ್‌ ಅವರನ್ನು ಅಭ್ಯರ್ಥಿಯಾಗಿಸಿದೆ.

ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಬಂಡಾಯ ‌ ಎದುರಿಸುವ ಸಾಧ್ಯತೆಯಿದೆ. ಈ ಹಿಂದೆ ಪಕ್ಷೇತರರಾಗಿ ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಗೆದ್ದಿದ್ದ ಕೆಆರ್‌ ನಗರದ ಕೆ.ಸಿ.ಪುಟ್ಟಸಿದ್ದಶೆಟ್ಟಿ ಅವರು ಕಾಂಗ್ರೆಸ್‌ ಟಿಕೆಟ್‌ ಸಿಗದೇ ಬಂಡಾಯವಾಗಿ ಈಗಾಗಲೇ ಕಣಕ್ಕೆ ಇಳಿದಿದ್ದಾರೆ. ಅವರನ್ನು ವರಿಷ್ಠರು ಮನ ಒಲಿಸಿ ಹಿಂದೆ ಸರಿಸುತ್ತಾರೋ ಅಥವಾ ಪುಟ್ಟಸಿದ್ದಶೆಟ್ಟಿ ಅವರು ಕಣದಲ್ಲಿ ಉಳಿಯುತ್ತಾರೋ ಎನ್ನುವ ಕುತೂಹಲವಿದೆ.

IPL_Entry_Point