Bangalore Crime: ಬೆಂಗಳೂರಲ್ಲಿ ನಿರ್ಮಾಣ ಹಂತದ ಅಪಾರ್ಟ್‌ಮೆಂಟ್ ಮಣ್ಣು ಕುಸಿದು ಕಾರ್ಮಿಕ ಸಾವು
ಕನ್ನಡ ಸುದ್ದಿ  /  ಕರ್ನಾಟಕ  /  Bangalore Crime: ಬೆಂಗಳೂರಲ್ಲಿ ನಿರ್ಮಾಣ ಹಂತದ ಅಪಾರ್ಟ್‌ಮೆಂಟ್ ಮಣ್ಣು ಕುಸಿದು ಕಾರ್ಮಿಕ ಸಾವು

Bangalore Crime: ಬೆಂಗಳೂರಲ್ಲಿ ನಿರ್ಮಾಣ ಹಂತದ ಅಪಾರ್ಟ್‌ಮೆಂಟ್ ಮಣ್ಣು ಕುಸಿದು ಕಾರ್ಮಿಕ ಸಾವು

Bengaluru Crime Updates ಬೆಂಗಳೂರಿನಲ್ಲಿ ಭಾನುವಾರ ನಾನಾ ಕಡೆದ ದುರ್ಘಟನೆಯಲ್ಲಿ ಮೂವರು ಮೃತಪಟ್ಟಿದ್ದರೆ, ಫಿಟ್‌ನೆಸ್‌ ಟ್ರೇನರ್‌ ಒಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಕುರಿತ ವರದಿ ಇಲ್ಲಿದೆ.

ಬೆಂಗಳೂರಿನಲ್ಲಿ ನಿರ್ಮಾಣ ಹಂತದ ಅಪಾರ್ಟ್‌ ಮೆಂಟ್‌ ನಲ್ಲಿ ಮಣ್ಣು ಕುಸಿದು ಕಾರ್ಮಿಕನೊಬ್ಬ ಮೃತಪಟ್ಟಿದ್ದಾನೆ.
ಬೆಂಗಳೂರಿನಲ್ಲಿ ನಿರ್ಮಾಣ ಹಂತದ ಅಪಾರ್ಟ್‌ ಮೆಂಟ್‌ ನಲ್ಲಿ ಮಣ್ಣು ಕುಸಿದು ಕಾರ್ಮಿಕನೊಬ್ಬ ಮೃತಪಟ್ಟಿದ್ದಾನೆ.

ಬೆಂಗಳೂರು:ಅಪಾರ್ಟ್‌ಮೆಂಟ್ ನಿರ್ಮಾಣಕ್ಕಾಗಿ ತೊಡಲಾಗುತ್ತಿದ್ದ ಪಾಯದ ಮಣ್ಣು ಕುಸಿದು ಕಾರ್ಮಿಕನೊಬ್ಬ ಮೃತಪಟ್ಟಿರುವ ದಾರುಣ ಘಟನೆ ಬೆಂಗಳೂರಿನ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ಕಾರ್ಮಿಕನನ್ನು ರಂಜನ್‌ಕುಮಾರ್ ಎಂದು ಗುರುತಿಸಲಾಗಿದೆ.

ಬಿಹಾರ ಮೂಲದ ರಂಜನ್‌ಕುಮಾರ್ ಕೆಲಸ ಹುಡುಕಿಕೊಂಡು ಕೆಲವು ತಿಂಗಳ ಹಿಂದೆಯಷ್ಟೇ ಬೆಂಗಳೂರಿಗೆ ಬಂದಿದ್ದರು. ಇವರು ಸ್ನೇಹಿತರ ಜೊತೆ ವಾಸವಾಗಿದ್ದರು. ಮಣ್ಣಿನ ಅಡಿಯಡಿ ಸಿಲುಕಿದ್ದ ಮತ್ತೊಬ್ಬ ಕಾರ್ಮಿಕನನ್ನು ರಕ್ಷಿಸಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜೆಸಿಬಿ ಯಂತ್ರದಿಂದ ಪಾಯ ಅಗೆಯಲಾಗುತ್ತಿತ್ತು. ರಂಜನ್ ಹಾಗೂ ಇತರೆ ಕಾರ್ಮಿಕರು, ಪಾಯವನ್ನು ಸಮತಟ್ಟಾಗಿ ಮಾಡಿ ಮಣ್ಣನ್ನು ಹೊರ ತೆಗೆಯುತ್ತಿದ್ದರು. ಸೋಮವಾರ ಮಧ್ಯಾಹ್ನ 2.30ರ ಸುಮಾರಿಗೆ ಕೆಲಸದ ಸಂದರ್ಭದಲ್ಲಿ ಪಕ್ಕದ ಕಟ್ಟಡಕ್ಕೆ ಜೆಸಿಬಿ ಯಂತ್ರದ ಬಕೆಟ್ ತಗುಲಿತ್ತು. ಇದರಿಂದಾಗಿ ಜೆಸಿಬಿ ಯಂತ್ರ ಅಲುಗಾಡಿತ್ತು. ಅದರ ಒತ್ತಡಕ್ಕೆ ಪಾಯದ ಅಕ್ಕ ಪಕ್ಕದಲ್ಲಿದ್ದ ಮಣ್ಣು ಕುಸಿದು ಬಿದ್ದಿದ್ದು ಅದರ ಅಡಿಯಲ್ಲಿ ಇಬ್ಬರು ಕಾರ್ಮಿಕರು ಸಿಲುಕಿ ಕೊಂಡಿದ್ದರು.

ಇತರೆ ಕಾರ್ಮಿಕರು ಹಾಗೂ ಸ್ಥಳೀಯರು ರಕ್ಷಣೆಗೆ ಧಾವಿಸಿದ್ದು, ಪಾಯದ ಮಣ್ಣು ತೆಗೆದು ಒಬ್ಬ ಕಾರ್ಮಿಕನನ್ನು ರಕ್ಷಿಸಿದ್ದರು. ಆದರೆ ರಂಜನ್‌ಕುಮಾರ್ ಮಾತ್ರ ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.

ಕೆಲಸ ನಡೆಯುತ್ತಿರುವ ಸ್ಥಳದಲ್ಲಿ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರಲಿಲ್ಲ. ಹಾಗಾಗಿ ನಿವೇಶನ ಮಾಲೀಕ, ಕಟ್ಟಡ ನಿರ್ಮಾಣ ಗುತ್ತಿಗೆದಾರ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆ ಪೊಲೀಸರು ಹೇಳಿದ್ದಾರೆ.

ಜಿಮ್‌ ತರಬೇತುದಾರ ಆತ್ಮಹತ್ಯೆ

ಬೆಂಗಳೂರಿನ ಹರಳೂರು- ಸರ್ಜಾಪುರ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್ ವೊಂದರ ನಾಲ್ಕನೇ ಮಹಡಿಯಿಂದ ಬಿದ್ದು ಜಿಮ್‌ ತರಬೇತುದಾರರೊಬ್ಬರು ಅಸು ನೀಗಿದ್ದಾರೆ.

32 ವರ್ಷದ ಗಣೇಶ್ ಪಾಂಡು ಎಂಬುವರು ಮೃತ ದುರ್ದೈವಿ. ಇವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಅನುಮಾನ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಒಡಿಶಾ ಮೂಲದ ಗಣೇಶ್ ಮೂರು ವರ್ಷಗಳ ಹಿಂದೆ ಬೆಂಗಳೂರಿಗೆ ಕೆಲಸಕ್ಕಾಗಿ ಆಗಮಿಸಿದ್ದರು.

ಅಪಾರ್ಟ್‌ಮೆಂಟ್ ನಲ್ಲಿ ಸಹೋದರಿಯ ಮನೆಯಲ್ಲಿ ವಾಸವಾಗಿದ್ದರು. ಇವರು ಜಿಮ್‌ ತರಬೇತುದಾರರಾಗಿ ಕೆಲಸ ಮಾಡುತ್ತಿದ್ದರು ಎಂದು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಹೇಳಿದ್ದಾರೆ.

ರಾತ್ರಿ ಚಾವಣಿ ಮೇಲೆ ಹೋಗಿದ್ದ ಗಣೇಶ್, ಅಲ್ಲಿಯೇ ಮದ್ಯ ಸೇವಿಸಿದ್ದ ಎನ್ನುವುದು ಗೊತ್ತಾಗಿದೆ. ನಂತರ ನಾಲ್ಕನೇ ಮಹಡಿಯಿಂದ ಜಿಗಿದು ತೀವ್ರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇದೊಂದು ಆತ್ಮಹತ್ಯೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಪಾದಚಾರಿ ಸಾವು

ಬೆಂಗಳೂರಿನ ಉಪ್ಪಾರಪೇಟೆ ಹಾಗೂ ಹಲಸೂರು ಸಂಚಾರ ಠಾಣೆ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಪಾದಚಾರಿ ಸೇರಿ ಇಬ್ಬರು ಮೃತಪಟ್ಟಿದ್ದಾರೆ.

ಮೆಜೆಸ್ಟಿಕ್ ಬಸ್‌ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಕೆಎಸ್‌ಆರ್‌ಟಿಸಿ ರಾಜಹಂಸ ಬಸ್ ಡಿಕ್ಕಿ ಹೊಡೆದು 50 ವರ್ಷದ ಪಾದಚಾರಿಯೊಬ್ಬರು ಮೃತಪಟ್ಟಿದ್ದಾರೆ. ಇವರ ಹೆಸರು ತಿಳಿದು ಬಂದಿಲ್ಲ ಎಂದು ಉಪ್ಪಾರಪೇಟೆ ಸಂಚಾರ ಪೊಲೀಸರು ಹೇಳಿದರು.

ಪಾದಚಾರಿ ಜೇಬಿನಲ್ಲಿ ತಿರುಪತಿಯಿಂದ ಬೆಂಗಳೂರಿಗೆ ಬಂದಿದ್ದ ಬಸ್‌ ಟಿಕೆಟ್ ಸಿಕ್ಕಿದೆ. ಸೋಮವಾರ ಮುಂಜಾನೆ 3.20 ಗಂಟೆ ಸುಮಾರಿಗೆ ಈ ಪಾದಚಾರಿಯು, ನಿಲ್ದಾಣದ ಪ್ರವೇಶ ದ್ವಾರದ ಬಳಿ ಹೊರಟಿದ್ದರು. ದಾವಣಗೆರೆಯಿಂದ ಬೆಂಗಳೂರಿಗೆ ಬಂದಿದ್ದ ರಾಜಹಂಸ ಬಸ್, ನಿಲ್ದಾಣದೊಳಗೆ ಪ್ರವೇಶಿಸುತ್ತಿದ್ದಾಗ ಪಾದಚಾರಿಗೆ ಡಿಕ್ಕಿ ಹೊಡೆದಿತ್ತು. ತೀವ್ರ ಗಾಯಗೊಂಡು ಪಾದಚಾರಿ ಸ್ಥಳದಲ್ಲೇ ಮೃತಪಟ್ಟಿದ್ದರು ಎಂದು ಪೊಲೀಸರು ತಿಳಿಸಿದರು.

ಆಟೊ ಚಾಲಕ ಸಾವು

ಕೇಂಬ್ರಿಡ್ಜ್‌ ಜಂಕ್ಷನ್‌ನಿಂದ ಎಸಿಎಸ್ ಕೇಂದ್ರ ಜಂಕ್ಷನ್‌ ಕಡೆಗೆ ಹೊರಟಿದ್ದ ಆಟೊವೊಂದು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಉರುಳಿ ಬಿದ್ದಿದ್ದು, ತೀವ್ರ ಗಾಯಗೊಂಡು ಚಾಲಕ ಚಂದ್ರಪ್ರಕಾಶ್ ಮೃತಪಟ್ಟಿದ್ದಾರೆ.

ಮಾಗಡಿ ರಸ್ತೆಯ ದೊಡ್ಡ ಗೊಲ್ಲರಹಟ್ಟಿಯ ರತ್ನನಗರದ 50 ವರ್ಷದ ಚಂದ್ರಪ್ರಕಾಶ ತಡರಾತ್ರಿ ಆಟೊ ಚಲಾಯಿಸಿಕೊಂಡು ಹೊರಟಿದ್ದಾಗ ಈ ಅವಘಡ ಸಂಭವಿಸಿದೆ ಎಂದು ಹಲಸೂರು ಸಂಚಾರ ಪೊಲೀಸರು ಹೇಳಿದ್ದಾರೆ.

Whats_app_banner