Bangalore Crime: ಡ್ರೈವಿಂಗ್‌ಗೆ ಬಂದ ಯುವತಿಯೊಂದಿಗೆ ಅಸಭ್ಯ ವರ್ತನೆ, ತರಬೇತುದಾರ ಬಂಧನ; ಕೋರ್ಟ್ ಆವರಣದಲ್ಲಿ ಹಿಟಾಚಿ ಕಳವು ಮಾಡಿದವನ ಸೆರೆ
Bangalore News ಕಲಿಕಾರ್ಥಿಚಾಲಕಿಯೊಬ್ಬಳೊಂದಿಗೆ ಅಸಭ್ಯವಾಗಿ ವರ್ತಿಸಿದ ಚಾಲಕನೊಬ್ಬನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.ವರದಿ: ಎಚ್. ಮಾರುತಿ ಬೆಂಗಳೂರು
ಬೆಂಗಳೂರು: ವಾಹನ ಚಾಲನೆ ಕಲಿಯಲು ಆಗಮಿಸಿದ್ದ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆಪಾದನೆ ಮೇರೆಗೆ ಡೈವಿಂಗ್ ಶಲಾ ತರಬೇತಿದಾರನೊಬ್ಬನನ್ನು ಬಸವೇಶ್ವರ ನಗರ ಪೊಲೀಸರು ಬಂಧಿಸಿದ್ದಾರೆ. ಯುವತಿಯ ಪೋಷಕರು ನೀಡಿದ ದೂರಿನ ಅನ್ವಯ ಪೊಲೀಸರು ಅಣ್ಣಪ್ಪ ಎಂಬಾತನನ್ನು ಬಂಧಿಸಿ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.ಪಿಯುಸಿ ಪಾಸಾದ ಯುವತಿಯೊಬ್ಬರು ವಾಹನ ಚಾಲನೆ ಕಲಿಯಲು ಡ್ರೈವಿಂಗ್ ಶಾಲೆಗೆ ಸೇರಿಕೊಂಡಿದ್ದರು. ಅಲ್ಲಿ ತರಬೇತಿಯನ್ನೂ ಮುಗಿಸಿದ್ದರು. ನಂತರ ಯುವತಿಗೆ ಅವರದ್ದೇ ಕಾರಿನಲ್ಲಿ ಡ್ರೈವಿಂಗ್ ಹೇಳಿಕೊಡಲು ಆರೋಪಿ ಅಣ್ಣಪ್ಪ 15 ದಿನಗಳ ತರಬೇತಿ ನೀಡಲು ಒಪ್ಪಿಕೊಂಡಿದ್ದ. ಇದಕ್ಕಾಗಿ ಆತನಿಗೆ ದಿನವೊಂದಕ್ಕೆ 750 ರೂ. ಶುಲ್ಕ ನೀಡುತ್ತಿದ್ದರು. ಯುವತಿಯ ತಂದೆಯ ಕಾರಿನಲ್ಲಿ ಪ್ರತಿ ದಿನ ತರಬೇತಿ ನೀಡುತ್ತಿದ್ದ. ಡ್ರೈವಿಂಗ್ ಸೀಟ್ ನಲ್ಲಿ ಯುವತಿ ಕುಳಿತಿದ್ದಾಗ ಅಣ್ಣಪ್ಪ ಪಕ್ಕದಲ್ಲಿ ಕುಳಿತುಕೊಂಡು ವಾಹನ ಚಾಲನೆ ಹೇಳಿ ಕೊಡುತ್ತಿದ್ದ. ಈ ಸಂದರ್ಭದಲ್ಲಿ ಈತ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಇದರಿಂದ ಹೆದರಿದ ಯುವತಿ ಮನೆಗೆ ಮರಳಿ ನಡೆದ ಘಟನೆಯನ್ನು ಪೋಷಕರೊಂದಿಗೆ ಹೇಳಿಕೊಂಡಿದ್ದಾರೆ. ಯುವತಿಯು ದೂರು ನೀಡಬಹುದು ಎಂದು ಊಹಿಸಿದ್ದ ಆರೋಪಿ ಅಣ್ಣಪ್ಪ ಪರಾರಿಯಾಗಿದ್ದ. ಯುವತಿಯ ಪೋಷಕರು ನೀಡಿದ ದೂರಿನನ್ವಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಮಾರಾಮಾರಿ; ಮುಖ್ಯರಸ್ತೆಯಲ್ಲೇ ಯುವಕನ ಕೊಚ್ಚಿ ಕೊಲೆ
ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹೊಯ್ಸಳ ನಗರದಲ್ಲಿ ನಡೆದ ಮಾರಾಮಾರಿಯಲ್ಲಿ ಯುವಕನೊಬ್ಬನನ್ನು ಕೊಚ್ಚಿ ಕೊಲೆ ಮಾಡಲಾಗಿದೆ. ಹೊಯ್ಸಳ ನಗರ ನಿವಾಸಿ 22 ವರ್ಷದ ಮನೋಜ್ ಕೊಲೆಯಾದ ಯುವಕ. ಶನಿವಾರ ಬೆಳಗ್ಗೆ ಮನೋಜ್ ಮೇಲೆ ಮುಖ್ಯ ರಸ್ತೆಯಲ್ಲೇ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ. ಕೊಲೆಯಲ್ಲಿ ಭಾಗಿಯಾದ ಇಬ್ಬರನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮನೋಜ್ ಪಿಜ್ಜಾ ಶಾಪ್ ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಸ್ನೇಹಿತರ ಜತೆ ನಡೆದುಕೊಂಡು ಹೋಗುತ್ತಿದ್ದಾಗ ಎದುರಿಗೆ ಬಂದ ಆರೋಪಿಗಳು ಮನೋಜ್ ಅವರನ್ನು ಕೆಣಕಿದ್ದಾರೆ. ಇದೇ ಕಾರಣಕ್ಕೆ ಜಗಳ ವಿಕೋಪಕ್ಕೆ ಹೋಗಿ ಕೊಲೆಯಲ್ಲಿ ಅಂತ್ಯವಾಗಿದೆ.
ಜಗಳ ನಡೆಯುತ್ತಿದ್ದ ಸಂದರ್ಭದಲ್ಲಿ ಆರೋಪಿಗಳು ಮನೋಜ್ ತಲೆಗೆ ಕಬ್ಬಿಣದ ರಾಡ್ ನಿಂದ ಬಲವಾಗಿ ಹೊಡೆದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮನೋಜ್ ಅವರನ್ನು ಸ್ನೇಹಿತರು ಹತ್ತಿರದ ಆಸ್ಪತ್ರೆಗೆ ಸೇರಿಸಿದರಾದರೂ ಬದುಕುಳಿದಿಲ್ಲ. ಮರಣೋತ್ತರ ಪರೀಕ್ಷೆ ನಡೆಸಿ ಮೃತ ದೇಹವನ್ನು ಕುಟುಂಬದವರಿಗೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೋರ್ಟ್ ಆವರಣದಲ್ಲೇ ಹಿಟಾಚಿ ಕಳವು ಮಾಡಿದ್ದ ಕಳ್ಳರ ಬಂಧನ
ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ನಿಲ್ಲಿಸಿದ್ದ ಹಿಟಾಚಿ ಯಂತ್ರವನ್ನುಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಹಲಸೂರು ಗೇಟ್ ಪೊಲೀಸ್ ಠಾಣೆ ಪೊಲೀಸರುಬಂಧಿಸಿದ್ದಾರೆ.
ಜಿಗಣಿಯ ಶಕ್ತಿವೇಲು ಹಾಗೂ ಸಚ್ಚಿದಾನಂದ ಬಂಧಿತ ಆರೋಪಿಗಳು. ಇವರ ಜತೆ ಕಳ್ಳತನದಲ್ಲಿಭಾಗಿಯಾಗಿದ್ದ ಇನ್ನೂ ಇಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದು ಅವರಿಗಾಗಿ ಶೋಧ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಟಿ ಸಿವಿಲ್ ಕೋರ್ಟ್ ನಲ್ಲಿ ಲಿಫ್ಟ್ ಕಾಮಗಾರಿ ನಡೆಸಲು ಗೋವಿಂದರಾಜು ಎಂಬ ಗುತ್ತಿಗೆದಾರರು ಹಿಟಾಚಿ ಯಂತ್ರವನ್ನು ತಂದು ನಿಲ್ಲಿಸಿದ್ದರು. ಆರೋಪಿಗಳಾದ
ಗೋವಿಂದರಾಜು ಮತ್ತು ಶಕ್ತಿವೇಲು ಇವರ ಜತೆಯಲ್ಲೇ ಕೆಲಸ ಮಾಡುತ್ತಿದ್ದರು. ಜುಲೈ 17 ರಂದು ತಡರಾತ್ರಿ 1 ಗಂಟೆಯ ವೇಳೆಗೆ ಹಿಟಾಚಿ ಕೊಂಡೊಯ್ಯಲು ಲಾರಿಯ ಸಹಿತ ಆರೋಪಿಗಳು ಕೋರ್ಟ್ ಆವರಣಕ್ಕೆ ಆಗಮಿಸಿದ್ದರು. ಭದ್ರತಾ ಸಿಬ್ಬಂದಿ ಪ್ರಶ್ನಿಸಿದಾಗ ಹಿಟಾಚಿ ನಮ್ಮದೇ ಆಗಿದ್ದು, ಇಲ್ಲಿ ಕಾಮಗಾರಿ ಮುಕ್ತಾಯಗೊಂಡಿರುತ್ತದೆ. ಬೇರೆ ಕಡೆ ಕೆಲಸ ಮಾಡಲು ಕೊಂಡೊಯ್ಯಲು ಬಂದಿದ್ದೇವೆ ಎಂದು ನಂಬಿಸಿದ್ದರು. ನಂತರ ಹಿಟಾಚಿ ಯಂತ್ರವನ್ನು ಲಾರಿಯಲ್ಲಿ ಹಾಕಿಕೊಂಡು ಹೋಗಿದ್ದರು. ಬೆಳಗ್ಗೆ ಬಂದು ಕಾಮಗಾರಿ ನಡೆಸಲು ನೋಡಿದಾಗ ಹಿಟಾಚಿ ಕಣ್ಮರೆಯಾಗಿತ್ತು. ಆಗ ದೂರು ನೀಡಲಾಗಿತ್ತು. ನ್ಯಾಯಾಲಯದ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ಆರೋಪಿಗಳು ಹಿಟಾಚಿ ಕಳವು ಮಾಡುತ್ತಿರುವುದು ಕಂಡು ಬಂದಿತ್ತು. ಆರೋಪಿಗಳು ಮತ್ತು ಗುತ್ತಿಗೆದಾರರ ನಡುವೆ ಹಣಕಾಸಿನ ವ್ಯವಹಾರವಿತ್ತು. ಇದೇ ಕಾರಣಕ್ಕೆ ಇಬ್ಬರ ನಡುವೆ ವೈಮನಸ್ಸು ಉಂಟಾಗಿತ್ತು. ಇದೇ ದ್ವೇಷಕ್ಕೆ ಹಿಟಾಚಿ ಯಂತ್ರವನ್ನು ಕಳವು ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
(ವರದಿ: ಎಚ್.ಮಾರುತಿ, ಬೆಂಗಳೂರು)