ಬೆಂಗಳೂರು ತ್ಯಾಜ್ಯ ವಿಲೇವಾರಿಯದ್ದೇ ಸಮಸ್ಯೆ; ಬೆಳ್ಳಹಳ್ಳಿ ಡಂಪಿಂಗ್ ಯಾರ್ಡ್ ಸಮೀಪ ಗ್ರಾಮಸ್ಥರ ಪ್ರತಿಭಟನೆ, ನಗರದಲ್ಲಿ ಕಸ ಸಂಗ್ರಹ ಸ್ಥಗಿತ
ಬೆಂಗಳೂರು ತ್ಯಾಜ್ಯ ವಿಲೇವಾರಿಯದ್ದೇ ಸಮಸ್ಯೆ. ಬಾಗಲೂರು ಸಮೀಪದ ಬೆಳ್ಳಹಳ್ಳಿ ಡಂಪಿಂಗ್ ಯಾರ್ಡ್ ಸಮೀಪ ಗ್ರಾಮಸ್ಥರ ಪ್ರತಿಭಟನೆ ವ್ಯಕ್ತವಾಗಿರುವ ಕಾರಣ ಶನಿವಾರದಿಂದ ನಗರದಲ್ಲಿ ಕಸ ಸಂಗ್ರಹ ಸ್ಥಗಿತವಾಗಿದೆ. ಬಿಕ್ಕಟ್ಟು ಪರಿಹಾರಕ್ಕೆ ಮಾತುಕತೆ ನಡೆದಿದೆ.
ಬೆಂಗಳೂರು ನಗರದ ಉತ್ತರ ಹೊರವಲಯದಲ್ಲಿರುವ ಬಾಗಲೂರು ಸಮೀಪದ ಬೆಳ್ಳಹಳ್ಳಿಯ ಕಸವಿಲೇವಾರಿ ಪ್ರದೇಶದ ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳು ಪ್ರತಿಭಟನೆ ನಡೆಸಿದ ಕಾರಣ ಶನಿವಾರದಿಂದ ಮಿಶ್ರ ತ್ಯಾಜ್ಯ ವಿಲೇವಾರಿಗೆ ಅಡ್ಡಿ ಉಂಟಾಗಿದೆ. ಬೆಂಗಳೂರಿನಲ್ಲಿ ವಿಶೇಷವಾಗಿ ದಕ್ಷಿಣ ಬೆಂಗಳೂರಿನಲ್ಲಿ ಕಸ ಸಂಗ್ರಹ ಮತ್ತು ವಿಲೇವಾರಿಗೆ ಅಡ್ಡಿಯಾಗಿದೆ.
ಬಿಬಿಎಂಪಿಯ ಕಸ ತುಂಬಿದ ಕಾಂಪ್ಯಾಕ್ಟರ್‌ಗಳು ಬೆಳ್ಳಹಳ್ಳಿ ತ್ಯಾಜ್ಯ ವಿಲೇವಾರಿ ಪ್ರದೇಶಕ್ಕೆ ಹೋದಾಗ ಅಲ್ಲಿ ಗ್ರಾಮಸ್ಥರು ಅವುಗಳನ್ನು ತಡೆಹಿಡಿದಿದ್ದಾರೆ. ಕಸ ಸುರಿಯಲು ಬಿಡಲಿಲ್ಲ. ಸೋಮವಾರವೂ ಈ ಪ್ರತಿಭಟನೆ ಮುಂದುವರಿದ ಕಾರಣ ಕಸ ಸಂಗ್ರಹ ಮತ್ತು ವಿಲೇವಾರಿ ನಡೆದಿಲ್ಲ. ಹೀಗಾಗಿ ಬೆಂಗಳೂರಿನಲ್ಲಿ ಸೋಮವಾರ ಮಿಶ್ರ ತ್ಯಾಜ್ಯ ಸಂಗ್ರಹ ನಿಲ್ಲಿಸಲಾಗಿದೆ. ಕೆಲವು ಕಡೆಗಳಲ್ಲಿ ಭಾನುವಾರವೇ ಮಿಶ್ರ ತ್ಯಾಜ್ಯ ಸಂಗ್ರಹ ಸ್ಥಗಿತವಾಗಿದೆ.
ಬೆಳ್ಳಹಳ್ಳಿ ಲ್ಯಾಂಡ್‌ಫಿಲ್‌ಗೆ ಬೆಂಗಳೂರಿನಿಂದ 300 ರಿಂದ 350 ಕಾಂಪ್ಯಾಕ್ಟರ್ ತ್ಯಾಜ್ಯ ಸಾಗಣೆ
ಬೆಂಗಳೂರು ನಗರದಿಂದ ನಿತ್ಯವೂ 300 ರಿಂದ 350 ಕಾಂಪ್ಯಾಕ್ಟರ್‌ಗಳು ಮಿಶ್ರ ತ್ಯಾಜ್ಯವನ್ನು ಲ್ಯಾಂಡ್‌ಫಿಲ್‌ಗೆ ಸಾಗಿಸುತ್ತವೆ. ಪ್ರತಿ ಕಾಂಪ್ಯಾಕ್ಟರ್ 10 ಟನ್ ಕಸವನ್ನು ಹೊತ್ತೊಯ್ಯುತ್ತದೆ. ಮಿಶ್ರ ತ್ಯಾಜ್ಯವನ್ನು ಹೆಚ್ಚಾಗಿ ವಾಣಿಜ್ಯ ಸಂಸ್ಥೆಗಳಿಂದ ಸಂಗ್ರಹಿಸಲಾಗುತ್ತದೆ. ಬೆಂಗಳೂರಿನ ಕೆ.ಆರ್.ಮಾರುಕಟ್ಟೆ, ಚರ್ಚ್ ಸ್ಟ್ರೀಟ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸೋಮವಾರ ಕಸದ ರಾಶಿ ಬಿದ್ದಿತ್ತು. ದಕ್ಷಿಣ ಬೆಂಗಳೂರಿಗೆ ಹೆಚ್ಚು ಹಾನಿಯಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ವಿವರಿಸಿದ್ದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಬೆಳ್ಳಹಳ್ಳಿಯ ಈ ವಿದ್ಯಮಾನವನ್ನು ಬೆಂಗಳೂರು ಸಾಲಿಡ್ ವೇಸ್ಟ್ ಮ್ಯಾನೇಜ್‌ಮೆಂಟ್ ಲಿಮಿಟೆಡ್ (ಬಿಎಸ್‌ಡಬ್ಲ್ಯೂಎಂಎಲ್) ಅಧಿಕಾರಿಗಳು ಕೂಡ ಖಚಿತ ಪಡಿಸಿದ್ದು, ಬಿಕ್ಕಟ್ಟು ಪರಿಹರಿಸುವುದಕ್ಕಾಗಿ ಗ್ರಾಮಸ್ಥರೊಂದಿಗೆ ಬಿಬಿಎಂಪಿ ಅಧಿಕಾರಿಗಳು ಮಾತುಕತೆ ನಡೆಸಿರುವುದಾಗಿ ತಿಳಿಸಿದ್ದಾರೆ.
ಬೆಳ್ಳಹಳ್ಳಿ ಲ್ಯಾಂಡ್‌ಫಿಲ್ ಪರಿಸ್ಥಿತಿ ಹೇಗಿದೆ
ಬಾಗಲೂರು ಸಮೀಪದ ಬೆಳ್ಳಹಳ್ಳಿಯ ಕಸವಿಲೇವಾರಿ ಪ್ರದೇಶದ ಲ್ಯಾಂಡ್ ಫಿಲ್ 30 ಎಕರೆ ವಿಸ್ತೀರ್ಣದ್ದು. ಇಲ್ಲಿ ಹೂಳು ತುಂಬಿದ್ದು, ಇದರ ಎತ್ತರವನ್ನು ಹೆಚ್ಚಿಸಲು ಬೆಂಗಳೂರು ಸಾಲಿಡ್ ವೇಸ್ಟ್ ಮ್ಯಾನೇಜ್‌ಮೆಂಟ್ ಲಿಮಿಟೆಡ್ ಮುಂದಾಗಿದೆ. ಆದರೆ, ಕಾಮಗಾರಿ ನಡೆಸುವುದಕ್ಕೆ ಸುತ್ತಮುತ್ತಲಿನ ಗ್ರಾಮಸ್ಥರು ಅವಕಾಶ ನೀಡಲಿಲ್ಲ. ಅಷ್ಟೇ ಅಲ್ಲ, ಶನಿವಾರದಿಂದ ಬಿಬಿಎಂಪಿಯ ಕಾಂಪ್ಯಾಕ್ಟರ್‌ಗಳು ಬೆಳ್ಳಹಳ್ಳಿ ಪ್ರವೇಶಿಸದಂತೆ ತಡೆಹಿಡಿದಿದ್ದಾರೆ.
ಬೆಳ್ಳಹಳ್ಳಿಯಿಂದ ಬೈಯಪ್ಪನಹಳ್ಳಿಗೆ ಸುಮಾರು 3 ಕಿ.ಮೀ. ದೂರು. ಅಲ್ಲಿ ಬೆಂಗಳೂರು ನಗರ ಜಿಲ್ಲಾಡಳಿತಕ್ಕೆ ಸಂಬಂಧ ಪಟ್ಟ ಜಮೀನು ಇದ್ದು ಅಲ್ಲಿ ತ್ಯಾಜ್ಯ ಡಂಪಿಂಗ್ ಯಾರ್ಡ್ ಮಾಡುವುದಕ್ಕೆ ಸ್ಥಳ ಹಸ್ತಾಂತರಿಸುವಂತೆ ಬೆಂಗಳೂರು ಸಾಲಿಡ್ ವೇಸ್ಟ್ ಮ್ಯಾನೇಜ್‌ಮೆಂಟ್ ಲಿಮಿಟೆಡ್ ಮನವಿ ಮಾಡಿದೆ. ಇದಕ್ಕೆ ನಗರ ಜಿಲ್ಲಾಡಳಿತ ಒಪ್ಪಿಗೆ ನೀಡಿದ್ದು, ಮಾಲೀಕತ್ವ ಹಸ್ತಾಂತರಿಸುವುದಕ್ಕೆ ತಯಾರಿ ನಡೆದಿದೆ ಎಂದು ಬೆಂಗಳೂರು ಸಾಲಿಡ್ ವೇಸ್ಟ್ ಮ್ಯಾನೇಜ್‌ಮೆಂಟ್ ಲಿಮಿಟೆಡ್ ಮೂಲಗಳು ತಿಳಿಸಿವೆ.
ಬೈಯಪ್ಪನಹಳ್ಳಿ ಸುತ್ತಮುತ್ತ ಗ್ರಾಮಸ್ಥರ ವಿರೋಧವೂ ಇದೆ
ಬೈಯಪ್ಪನಹಳ್ಳಿ ಸಮೀಪದ ಜಮೀನು ಸಿಕ್ಕರೂ ತ್ಯಾಜ್ಯ ವಿಲೇವಾರಿಗೆ ಬೇಕಾದ ಡಂಪಿಂಗ್ ಯಾರ್ಡ್ ಮಾಡುವುದಕ್ಕೆ ಸುತ್ತಮುತ್ತಲಿನ ಗ್ರಾಮಸ್ಥರ ವಿರೋಧ ಇದೆ. ಈ ಹಿಂದೆ ಕಳೆದ ವರ್ಷ ಏರ್ ಶೋ ವೇಳೆ ಇಲ್ಲಿ ಹೂಳನ್ನು ಡಂಪ್ ಮಾಡಲಾಗಿತ್ತು. ಆಗ ಅದು ತಾತ್ಕಾಲಿಕ ಡಂಪಿಂಗ್ ಯಾರ್ಡ್ ಎಂದು ಗ್ರಾಮಸ್ಥರನ್ನು ಸಮಾಧಾನ ಮಾಡಲಾಗಿತ್ತು ಎಂದು ಬೆಂಗಳೂರು ಸಾಲಿಡ್ ವೇಸ್ಟ್ ಮ್ಯಾನೇಜ್‌ಮೆಂಟ್ ಲಿಮಿಟೆಡ್‌ನ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ವರದಿ ಹೇಳಿದೆ.
ಬೆಂಗಳೂರು ಮಹಾನಗರದ ತ್ಯಾಜ್ಯ ವಿಲೇವಾರಿ ಸಮಸ್ಯೆ ತಪ್ಪಿಸಲು ಮುಂದಿನ 30 ವರ್ಷದ ಅವಧಿಗೆ ಬೇಕಾದಂತೆ ಶಾಶ್ವತ ಡಂಪಿಂಗ್ ಯಾರ್ಡ್ ಮಾಡುವುದಕ್ಕೆ ಭೂ ಸ್ವಾಧೀನ ನಡೆಸಬೇಕಾಗಿದೆ. ಈ ವಿಚಾರಕ್ಕೆ ಸಂಬಂಧಿಸಿ ಬಿಬಿಎಂಪಿ ಮತ್ತು ಬೆಂಗಳೂರು ಸಾಲಿಡ್ ವೇಸ್ಟ್ ಮ್ಯಾನೇಜ್‌ಮೆಂಟ್ ಲಿಮಿಟೆಡ್ ಅಧಿಕಾರಿಗಳು ಕೆಲಸ ಮಾಡುತ್ತಿದ್ಧಾರೆ. ಆದರೆ ಇದರ ವೇಗ ಹೆಚ್ಚಿಸುವ ಕೆಲಸ ಸರ್ಕಾರ ಮಾಡಬೇಕು ಎಂದು ಅಧಿಕಾರಿ ತಿಳಿಸಿದ್ದಾಗಿ ವರದಿ ವಿವರಿಸಿದೆ.
(This copy first appeared in Hindustan Times Kannada website. To read more like this please logon to kannada.hindustantimes.com)