9ನೇ ತರಗತಿ ಡ್ರಾಪ್‌ಔಟ್‌ ವ್ಯಕ್ತಿ ದೋಚಿದ್ದು ಬರೋಬ್ಬರಿ 2.11 ಕೋಟಿ ರೂ.; ಬಳ್ಳಾರಿ ಕಂಪೆನಿ ಹೆಸರಿನ ಹಣ ದೋಚಿದ್ದ ಖತರನಾಕ್‌ ಕಳ್ಳ ಅಂದರ್‌
ಕನ್ನಡ ಸುದ್ದಿ  /  ಕರ್ನಾಟಕ  /  9ನೇ ತರಗತಿ ಡ್ರಾಪ್‌ಔಟ್‌ ವ್ಯಕ್ತಿ ದೋಚಿದ್ದು ಬರೋಬ್ಬರಿ 2.11 ಕೋಟಿ ರೂ.; ಬಳ್ಳಾರಿ ಕಂಪೆನಿ ಹೆಸರಿನ ಹಣ ದೋಚಿದ್ದ ಖತರನಾಕ್‌ ಕಳ್ಳ ಅಂದರ್‌

9ನೇ ತರಗತಿ ಡ್ರಾಪ್‌ಔಟ್‌ ವ್ಯಕ್ತಿ ದೋಚಿದ್ದು ಬರೋಬ್ಬರಿ 2.11 ಕೋಟಿ ರೂ.; ಬಳ್ಳಾರಿ ಕಂಪೆನಿ ಹೆಸರಿನ ಹಣ ದೋಚಿದ್ದ ಖತರನಾಕ್‌ ಕಳ್ಳ ಅಂದರ್‌

ಬಳ್ಳಾರಿ ಮೂಲದ ಗಣಿ ಕಂಪೆನಿಗೆ ಬರಬೇಕಾಗಿದ್ದ ಕೋಟಿಗಟ್ಟಲೇ ಹಣವನ್ನು ನಕಲಿ ಐಡಿ ತಯಾರಿಸಿ ದೋಚಿದ್ದ ಮಧ್ಯಪ್ರದೇಶದ ಯುವಕನನ್ನು ಬಳ್ಳಾರಿ ಪೊಲೀಸರು ಬಂಧಿಸಿದ್ದಾರೆ.

ಬಳ್ಳಾರಿ ಸಂಸ್ಥೆ ಹಣ ದೋಚಿ ಸಿಕ್ಕಿಬಿದ್ದಿರುವ ಜೈಸ್ವಾಲ್‌ ಕುರಿತು ಎಸ್ಪಿ ಶೋಭಾ ರಾಣಿ ಮಾಹಿತಿ ನೀಡಿದರು.
ಬಳ್ಳಾರಿ ಸಂಸ್ಥೆ ಹಣ ದೋಚಿ ಸಿಕ್ಕಿಬಿದ್ದಿರುವ ಜೈಸ್ವಾಲ್‌ ಕುರಿತು ಎಸ್ಪಿ ಶೋಭಾ ರಾಣಿ ಮಾಹಿತಿ ನೀಡಿದರು.

ಬಳ್ಳಾರಿ: ಆತ ಎಸ್‌ಎಸ್‌ಎಲ್‌ಸಿಯನ್ನೂ ಪಾಸಾಗಿಲ್ಲ. ಕಂಪ್ಯೂಟರ್‌ ತರಬೇತಿ ಪಡೆದು ಡಿಟಿಪಿ ಆಪರೇಟರ್‌ ಆಗಿ ಸಣ್ಣ ಪುಟ್ಟ ಕೆಲಸ ಮಾಡಿಕೊಡುತ್ತಿದ್ದ. ಕಂಪೆನಿಯೊಂದರಲ್ಲಿ ಕೆಲಸ ಮಾಡಿ ಅಲ್ಲಿಂದಲೂ ಬಿಟ್ಟಿದ್ದ. ಕೆಲವು ದಿನಗಳ ನಂತರ ಆತನಿಗೆ ದುಡ್ಡು ಮಾಡುವ ಉಮೇದು ಬಂತು. ಅಲ್ಪಸ್ವಲ್ಪ ಕಂಪ್ಯೂಟರ್‌ ಕಲಿಕೆಯ ಅನುಭವ ಬಳಸಿಕೊಂಡು ಹೇಗೆ ದುಡ್ಡು ಮಾಡಿಕೊಳ್ಳಬೇಕು ಎಂದು ಯೋಚಿಸಿದ. ಇದಕ್ಕಾಗಿ ದೊಡ್ಡ ಕಂಪೆನಿಯೊಂದರ ಇಮೇಲ್‌ ಐಡಿ ರಚಿಸಿದ. ಮಧ್ಯಪ್ರದೇಶ ಮೂಲದವನರಾದರೂ ಕರ್ನಾಟಕದ ಬಳ್ಳಾರಿ ಗಣಿ ಕಂಪೆನಿಯಂದಿಗೆ ನಕಲಿ ಐಡಿ ನಡೆಸಿ ವಹಿವಾಟು ನಡೆಸಿ ದೋಚಿದ್ದು ಬರೋಬ್ಬರಿ 2.11 ಕೋಟಿ ರೂ. ಈಗ ಸಿಕ್ಕಿ ಬಿದ್ದಿದ್ದು 1.48 ಕೋಟಿ ರೂ. ನೋಟುಗಳ ಕಂತೆ ಕಂತೆಯೊಂದಿಗೆ ಆತನನ್ನು ಬಳ್ಳಾರಿ ಪೊಲೀಸರು ಬಲೆ ಬೀಸಿ ಹಿಡಿದಿದ್ದಾರೆ.

ಮಧ್ಯಪ್ರದೇಶದ ರೇವಾ ಜಿಲ್ಲೆಯ ನಿವಾಸಿ ಅಜಯ್ ಕುಮಾರ್ ಜೈಸ್ವಾಲ್(23) ಬಂಧಿತ ಆರೋಪಿ. ಮಧ್ಯಪ್ರದೇಶದ ಹಿಂದೂಸ್ತಾನ್ ಕ್ಯಾಲ್ಸಿನ್ಡ್ ಮೆಟಲ್ಸ್ ಪ್ರೈವೇಟ್ ಲಿಮಿಟೆಡ್ (HCMPL) ಕಂಪೆನಿಯೊಂದಿಗೆ ಬಳ್ಳಾರಿಯ ಅಗರ್ವಾಲ್ ಕೋಲ್ ಕಾರ್ಪೊರೇಷನ್ ಪ್ರೈವೇಟ್ ಲಿಮಿಟೆಡ್ (ಎಸಿಸಿಪಿಎಲ್) ಹಲವು ವರ್ಷದಿಂದ ಕಲ್ಲಿದ್ದಲು ಖರೀದಿ ವಹಿವಾಟು ನಡೆಸಿಕೊಂಡು ಬರುತ್ತಿದೆ. ಆನ್‌ಲೈನ್‌ ಮೂಲಕವೇ ಹಣದ ವಹಿವಾಟು ಕೂಡ ಹಲವಾರು ವರ್ಷಗಳಿಂದ ಮುಂದುವರಿದಿದೆ.

ತಿಂಗಳ ಹಿಂದೆ ಬಳ್ಳಾರಿಯ ಅಗರ್ವಾಲ್ ಕೋಲ್ ಕಾರ್ಪೊರೇಷನ್ ಪ್ರೈವೇಟ್ ಲಿಮಿಟೆಡ್ (ಎಸಿಸಿಪಿಎಲ್) ಕಂಪೆನಿಗೆ ಬಂದ ಇ ಮೇಲ್‌ ಆಧರಿಸಿ 2.11 ಕೋಟಿ ರೂಪಾಯಿ. ಹಣವನ್ನು ವರ್ಗಾವಣೆ ಮಾಡಲಾಗಿತ್ತು.

ಕ್ರಾಸ್-ಚೆಕಿಂಗ್ ಇಲ್ಲದೆ, HCMPL ಆರು ವಹಿವಾಟುಗಳಲ್ಲಿ ಬಳ್ಳಾರಿಯ ಅಗರ್ವಾಲ್ ಕೋಲ್ ಕಾರ್ಪೊರೇಷನ್ ಪ್ರೈವೇಟ್ ಲಿಮಿಟೆಡ್ (ಎಸಿಸಿಪಿಎಲ್) ಹಣವನ್ನು ವರ್ಗಾಯಿಸಿದೆ. ಮೊದಲ ವಹಿವಾಟು ಆಗಸ್ಟ್ 21 ರಂದು ನಡೆದಿದ್ದರೂ, ಎಸಿಸಿಪಿಎಲ್‌ನ ಪ್ರತಿನಿಧಿಯೊಬ್ಬರು ಹಣ ಕೇಳಿದಾಗ ವಂಚನೆಯಾಗಿರುವುದು ತಿಳಿಯಿತು. ಮಾಹಿತಿ ಕಲೆ ಹಾಕಿದಾಗ ಸೆಪ್ಟೆಂಬರ್ 2 ರಂದು ವಂಚನೆಯಾಗಿರುವುದು ಬೆಳಕಿಗೆ ಬಂದಿತ್ತು. ಕೂಡಲೇ ಬಳ್ಳಾರಿ ಸೈಬರ್‌ ಠಾಣೆಯಲ್ಲಿ ಬಳ್ಳಾರಿಯ ಅಗರ್ವಾಲ್ ಕೋಲ್ ಕಾರ್ಪೊರೇಷನ್ ಪ್ರೈವೇಟ್ ಲಿಮಿಟೆಡ್ (ಎಸಿಸಿಪಿಎಲ್) ಸಂಸ್ಥೆಯಿಂದ ದೂರು ದಾಖಲಾಗಿತ್ತು.

ಕೂಡಲೇ ಬಳ್ಳಾರಿ ಎಸ್ಪಿ ಶೋಭಾ ರಾಣಿ ಅವರು ಡಿವೈಎಸ್ಪಿ ಸಂತೋಷ್ ಚೌಹಾಣ್ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಿದ್ದರು. ಮೂರು ತಂಡಗಳಾಗಿ ತನಿಖೆಯೂ ಚುರುಕುಗೊಂಡಿತ್ತು. ಹದಿನೈದು ದಿನಗಳ ಒಳಗೆ ಆರೋಪಿಯನ್ನು ವಶಕ್ಕೆ ಪಡೆದು ಪೊಲೀಸರು 1.48 ಕೋಟಿ ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ.

ಎರಡು ಇ ಮೇಲ್‌ ಐಡಿಗಳು ಹಾಗೂ ವಹಿವಾಟು ನಡೆಸಿದ ಮಾಹಿತಿ ಆಧರಿಸಿ ತನಿಖೆ ಶುರುವಾಯಿತು. ಮೊದಲು ಕಂಪೆನಿಯವರು ಯಾರೋ ಈ ಕೆಲಸ ಮಾಡಿರಬೇಕು ಎನ್ನುವ ಅನುಮಾನವಿತ್ತು. ವಿಚಾರಣೆ ನಡೆಸುತ್ತಾ ಹೋದಂತೆ ಹಾಗೂ ಬ್ಯಾಂಕ್‌ ವಹಿವಾಟು ಮಾಹಿತಿ ಕಲೆ ಹಾಕಿದಾಗ ಸಿಕ್ಕಿಬಿದ್ದವನೇ ಅಜಯ್ ಕುಮಾರ್ ಜೈಸ್ವಾಲ್(23)

ಡೇಟಾ ಎಂಟ್ರಿ ಆಪರೇಟರ್ ಆಗಿದ್ದು, ಕೆಲಸದ ನಿಮಿತ್ತ ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ವಾಸಿಸುತ್ತಿದ್ದ. ಆಗ ಹಿಂದೂಸ್ತಾನ್ ಕ್ಯಾಲ್ಸಿನ್ಡ್ ಮೆಟಲ್ಸ್ ಪ್ರೈವೇಟ್ ಲಿಮಿಟೆಡ್ ನಲ್ಲೂ ಸಣ್ಣ ಪುಟ್ಟ ಕೆಲಸ ಮಾಡಿಕೊಟ್ಟಿದ್ದ ಈತನಿಗೆ ಅಲ್ಲಿನ ವಹಿವಾಟು, ಇತರೆ ಚಟುವಟಿಕೆ ತಿಳಿದಿತ್ತು. ಇದನ್ನೇ ಬಳಸಿಕೊಂಡು ನಕಲಿ ಐಡಿಗಳನ್ನು ಮಾಡಿಕೊಂಡು ಬ್ಯಾಂಕ್‌ ಖಾತೆ ಬದಲಾಗಿರುವ ಮಾಹಿತಿ ನೀಡಿ ಹಣ ವರ್ಗಾಯಿಸಿಕೊಂಡಿದ್ದ. ಅಧಿಕೃತ ಇ ಮೇಲ್‌ ಹೋಲುವ ಐಡಿಯನ್ನೇ ಆತ ರಚಿಸಿಕೊಂಡಿರುವುದು ಅನುಮಾನ ಬಂದಿರಲಿಲ್ಲ. ಇದರಿಂದ ಹಿಂದೂಸ್ತಾನ್ ಕ್ಯಾಲ್ಸಿನ್ಡ್ ಮೆಟಲ್ಸ್ ಪ್ರೈವೇಟ್ ಲಿಮಿಟೆಡ್ ಹಣ ವರ್ಗಾವಣೆಯಾಗಿತ್ತು.

ಆತನನ್ನು ವಿಚಾರಣೆಗೆ ಒಳಪಡಿಸಿದಾಗ 18 ವಿವಿಧ ಖಾತೆಗಳಿಗೆ ವರ್ಗಾಯಿಸಿರುವುದು ಬಯಲಾಗಿದೆ.ಜೈಸ್ವಾಲ್ 1.21 ಕೋಟಿ ರೂಪಾಯಿಗಳನ್ನು ಖಾತೆಗಳಿಂದ ಹಿಂಪಡೆದಿದ್ದ. 27.97 ಲಕ್ಷ ರೂ.ಗಳನ್ನು ತನ್ನ ವಿವಿಧ ಖಾತೆಗಳಲ್ಲಿ ಇರಿಸಿದ್ದ. ಇದರಲ್ಲಿ ನಾವು 1.48 ಕೋಟಿ ರೂ ಹಣವನ್ನು ವಶಪಡಿಸಿಕೊಂಡಿದ್ದೇವೆ ಎಂದು ಎಸ್ಪಿ ಶೋಭಾ ರಾಣಿ ತಿಳಿಸಿದ್ದಾರೆ.

ಇಡೀ ಪ್ರಕರಣದಲ್ಲಿ ಸಂಸ್ಥೆಗಳ ಪ್ರಮುಖರು, ಬ್ಯಾಂಕ್‌ ಅಧಿಕಾರಿಗಳ ಪಾತ್ರ, ಆತನಿಗೆ ಸಹಕರಿಸಿದವರು ಇರುವ ಕುರಿತಾಗಿಯೂ ಮಾಹಿತಿ ಕಲೆ ಹಾಕಲಾಗುತ್ತಿದೆ ಎನ್ನುವುದು ಅಧಿಕಾರಿಗಳ ವಿವರಣೆ.

Whats_app_banner