ದಾಸನಿಗಿಲ್ಲ ಬಿಡುಗಡೆ ಭಾಗ್ಯ, ಇನ್ನೂ 13 ದಿನ ಸೆರೆವಾಸ: ಬಳ್ಳಾರಿಯಲ್ಲಿ ದರ್ಶನ್ ಭೇಟಿಯಾದ ಪತ್ನಿ ವಿಜಯಲಕ್ಷ್ಮೀ
ಕನ್ನಡ ಸುದ್ದಿ  /  ಕರ್ನಾಟಕ  /  ದಾಸನಿಗಿಲ್ಲ ಬಿಡುಗಡೆ ಭಾಗ್ಯ, ಇನ್ನೂ 13 ದಿನ ಸೆರೆವಾಸ: ಬಳ್ಳಾರಿಯಲ್ಲಿ ದರ್ಶನ್ ಭೇಟಿಯಾದ ಪತ್ನಿ ವಿಜಯಲಕ್ಷ್ಮೀ

ದಾಸನಿಗಿಲ್ಲ ಬಿಡುಗಡೆ ಭಾಗ್ಯ, ಇನ್ನೂ 13 ದಿನ ಸೆರೆವಾಸ: ಬಳ್ಳಾರಿಯಲ್ಲಿ ದರ್ಶನ್ ಭೇಟಿಯಾದ ಪತ್ನಿ ವಿಜಯಲಕ್ಷ್ಮೀ

ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ದರ್ಶನ್‌ ಸೇರಿದಂತೆ 17 ಆರೋಪಿಗಳಇಗೆ ಬೆಂಗಳೂರು ನ್ಯಾಯಾಲಯ ಸೆಪ್ಟೆಂಬರ್ 30ರವರೆಗೆ ನ್ಯಾಯಾಂಗ ಬಂಧನವನ್ನು ವಿಸ್ತರಿಸಿದೆ. (ವರದಿ-ಎಚ್.ಮಾರುತಿ)

ದರ್ಶನ್ ಮತ್ತು ಪವಿತ್ರಾ ಗೌಡ ಸೇರಿದಂತೆ 17 ಆರೋಪಿಗಳ ನ್ಯಾಯಾಂಗ ಬಂಧನ ವಿಸ್ತರಣೆಯಾಗಿದೆ.
ದರ್ಶನ್ ಮತ್ತು ಪವಿತ್ರಾ ಗೌಡ ಸೇರಿದಂತೆ 17 ಆರೋಪಿಗಳ ನ್ಯಾಯಾಂಗ ಬಂಧನ ವಿಸ್ತರಣೆಯಾಗಿದೆ.

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ತೂಗುದೀಪ, ಆಪ್ತ ಸ್ನೇಹಿತೆ ಪವಿತ್ರಾ ಗೌಡ ಅವರಿಗೆ ಬಿಡುಗಡೆಯ ಭಾಗ್ಯ ಇಲ್ಲವಾಗಿದೆ. ಈ ಪ್ರಕರಣದ ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನ ಅವಧಿಯನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಿಸಲಾಗಿದೆ. ಸೆಪ್ಟೆಂಬರ್ 17ಕ್ಕೆ ದರ್ಶನ್ ಮತ್ತು ಇತರ 17 ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಪೂರ್ಣಗೊಂಡಿತ್ತು.

ವಿವಿಧ ಜಿಲ್ಲಾ ಕಾರಾಗೃಹಗಳಿರುವ ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ 24ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ನ್ಯಾಯಾಧೀಶರು ಪ್ರತಿಯೊಬ್ಬರ ಹೆಸರನ್ನು ಕರೆದಾಗ ಪ್ರತಿಯೊಬ್ಬ ಅರೋಪಿಯೂ ಕೈ ಎತ್ತುವ ಮೂಲಕ ತಮ್ಮ ಹಾಜರಾತಿ ಖಾತ್ರಿಪಡಿಸಿದರು. 47 ವರ್ಷದ ದರ್ಶನ್ ಬಳ್ಳಾರಿ ಜೈಲಿನಲ್ಲಿದ್ದು, ಉಳಿದವರು ಬೆಂಗಳೂರಿನ ಪರಪ್ಪನ ಅಗ್ರಹಾರ, ಬೆಳಗಾವಿ, ಶಿವಮೊಗ್ಗ, ಧಾರವಾಡ, ವಿಜಯಪುರ, ಮೈಸೂರು ಮತ್ತು ತುಮಕೂರು ಕಾರಾಗೃಹದಲ್ಲಿದ್ದಾರೆ.

ದರ್ಶನ್ ಪರ ವಾದ ಮಂಡಿಸಿದ್ದೇನು?

ದರ್ಶನ್ ಪರ ವಾದ ಮಂಡಿಸಿದ ವಕೀಲರು ಬೆನ್ನು ನೋವು ಇದೆ ಎಂದು ಹೇಳಿದರೂ ಕುರ್ಚಿ ನೀಡುತ್ತಿಲ್ಲ. ಕುಟುಂಬದ ಸದಸ್ಯರು ಮತ್ತು ಸ್ನೇಹಿತರ ಭೇಟಿಗೆ ಅವಕಾಶ ನೀಡುತ್ತಿಲ್ಲ ಎಂದು ನ್ಯಾಯಾಧೀಶರ ಗಮನಕ್ಕೆ ತಂದರು. ನ್ಯಾಯಾಲಯದ ನಿಯಮಗಳ ಪ್ರಕಾರ ಏನು ಸೌಲಭ್ಯಗಳನ್ನು ಒದಗಿಸಬೇಕೋ ಅದನ್ನು ಕೊಡುತ್ತಾರೆ ಎಂದರು. 

ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್ ಶೀಟ್ ಮತ್ತು ಡಿಜಿಟಲ್ ಸಾಕ್ಷ್ಯಗಳನ್ನು ತಮಗೆ ಒದಗಿಸಿಲ್ಲ ಎಂದು ಆರೋಪಿಗಳ ಪರ ವಕೀಲರು ಆಪಾದಿಸಿದರು. ಆಗ ನ್ಯಾಯಾಧೀಶರು ಸೆಷೆನ್ಸ್ ಕೋರ್ಟ್ ನಲ್ಲಿ ಪಡೆದುಕೊಳ್ಳುವಂತೆ ಸೂಚಿಸಿದರು. ಇದೇ ಸಂದರ್ಭದಲ್ಲಿ ತನಿಖಾಧಿಕಾರಿಗಳು, ನ್ಯಾಯಾಲಯಕ್ಕೆ ತಾಂತ್ರಿಕ ಸಾಕ್ಷ್ಯಗಳ ಜೊತೆಗೆ ಕೇಂದ್ರ ವಿಧಿ ವಿಜ್ಞಾನ ಪ್ರಯೋಗಾಲಯದ ಪರೀಕ್ಷಾ (ಎಫ್​​ಎಸ್​ಎಲ್) ವರದಿ ಸಲ್ಲಿಸಿದರು.

ಕೊಲೆ ಪ್ರಕರಣದ 10ನೇ ಆರೋಪಿ ವಿನಯ್ ಮೊಬೈಲ್ ಅನ್ನು ಮತ್ತೆ ಎಫ್​ಎಸ್​ಎಲ್ ಪರೀಕ್ಷೆಗೆ ಕಳುಹಿಸಬೇಕಾಗಿದೆ ಎಂದು ಪೊಲೀಸರು ನ್ಯಾಯಾಲಯದ ಗಮನಕ್ಕೆ ತಂದರು. ಸೆ 4 ರಂದು ತನಿಖಾಧಿಕಾರಿಗಳು 3,991 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದರು. ಅತ್ತ ಬಳ್ಳಾರಿ ಜೈಲಿಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.

 

Whats_app_banner