ಕನ್ನಡ ಸುದ್ದಿ  /  Karnataka  /  Bengaluru News Bhojana Bandi Banni Kulitu Oota Madona Bmtc Staff Turns Old Bus Into Mobile Canteen Shares Video Uks

ಬಿಎಂಟಿಸಿ ಹಳೆ ಬಸ್‌ ಈಗ ಭೋಜನ ಬಂಡಿ, ಬನ್ನಿ ಕುಳಿತು ಊಟ ಮಾಡೋಣ, ಉದ್ಯೋಗಿಗಳ ನವೋನ್ವೇಷಣೆ ವಿಡಿಯೋ ವೈರಲ್‌

ಬೆಂಗಳೂರಿನಲ್ಲಿ ಬಿಎಂಟಿಸಿ ಉದ್ಯೋಗಿಗಳ ಬವಣೆ ಒಂದೆರಡಲ್ಲ. ಇದನ್ನು ಗಮನಿಸಿ ನಾಲ್ವರು ಉದ್ಯೋಗಿಗಳು ಕಂಪನಿಯ ವ್ಯವಸ್ಥಾಪಕ ನಿರ್ದೇಶಕರ ಅನುಮೋದನೆ ಪಡೆದು ಬಿಎಂಟಿಸಿ ಹಳೆ ಬಸ್‌ ಅನ್ನು ಈಗ ಭೋಜನ ಬಂಡಿಯನ್ನಾಗಿ ಮಾಡಿದ್ದಾರೆ. ಬನ್ನಿ ಕುಳಿತು ಊಟ ಮಾಡೋಣ ಎಂಬ ಆಹ್ವಾನದ ಜತೆಗೆ ಉದ್ಯೋಗಿಗಳ ನವೋನ್ವೇಷಣೆ ಬಿಂಬಿಸುವ ವಿಡಿಯೋ ವೈರಲ್‌ ಆಗಿದೆ.

ಬಿಎಂಟಿಸಿ ಹಳೆ ಬಸ್‌ ಈಗ ಭೋಜನ ಬಂಡಿಯಾಗಿದ್ದು, ಬನ್ನಿ ಕುಳಿತು ಊಟ ಮಾಡೋಣ ಎಂಬ ಉಪಶೀರ್ಷಿಕೆ, ಉದ್ಯೋಗಿಗಳ ನವೋನ್ವೇಷಣೆ ಗಮನಸೆಳೆದಿದೆ. ಇದರ ವಿಡಿಯೋ ವೈರಲ್‌ ಆಗಿದೆ.
ಬಿಎಂಟಿಸಿ ಹಳೆ ಬಸ್‌ ಈಗ ಭೋಜನ ಬಂಡಿಯಾಗಿದ್ದು, ಬನ್ನಿ ಕುಳಿತು ಊಟ ಮಾಡೋಣ ಎಂಬ ಉಪಶೀರ್ಷಿಕೆ, ಉದ್ಯೋಗಿಗಳ ನವೋನ್ವೇಷಣೆ ಗಮನಸೆಳೆದಿದೆ. ಇದರ ವಿಡಿಯೋ ವೈರಲ್‌ ಆಗಿದೆ.

ಬೆಂಗಳೂರು: ಕೆಎಸ್‌ಆರ್‌ಟಿಸಿಯ ಹಳೆಯ ಗುಜರಿ ಬಸ್‌ಗಳು ಹೈಟೆಕ್ ಸ್ತ್ರೀ ಶೌಚಾಲಯಗಳಾಗಿ ಬದಲಾಗಿದ್ದು ಈಗ ಇತಿಹಾಸ. ಬಿಎಂಟಿಸಿ ಉದ್ಯೋಗಿಗಳ ನವೋನ್ವೇಷಣೆಯ ಭಾಗವಾಗಿ ಕಂಪನಿಯ ಹಳೆಯ ಬಸ್‌ ಈಗ ಭೋಜನ ಬಂಡಿಯಾಗಿ ಪರಿವರ್ತನೆಯಾಗಿದೆ.

ಪ್ರಾಯೋಗಿಕವಾಗಿ ಒಂದು ಬಸ್‌ ಅನ್ನು ಭೋಜನ ಬಂಡಿಯನ್ನಾಗಿ ಪರಿವರ್ತಿಸಿದ್ದು, ಇದರ ವಿಡಿಯೋವನ್ನು ಬಿಎಂಟಿಸಿ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿದೆ. "ನೋಡಿ ಬೋಜನ ಬಂಡಿ! ಸ್ಕ್ರ್ಯಾಪ್ ವಾಹನ ಇದ್ದದ್ದು ಮೊಬೈಲ್ ಕ್ಯಾಂಟೀನ್‌ ಆಗಿ ರೂಪಾಂತರಗೊಂಡಿದೆ! ನಮ್ಮ ನುರಿತ ತಾಂತ್ರಿಕ ಸಿಬ್ಬಂದಿ ಮತ್ತು ಅಧಿಕಾರಿಗಳಿಂದ ಉತ್ಸಾಹ ಮತ್ತು ಹೆಮ್ಮೆಯಿಂದ ರಚಿಸಲಾಗಿದೆ. ನಾವೀನ್ಯತೆ ಮತ್ತು ಪಾಕಶಾಲೆಯ ಆನಂದವನ್ನು ಒಟ್ಟಿಗೆ ಆಚರಿಸೋಣ! ಹೆಮ್ಮೆಯ ಪರಿವರ್ತನೆ" ಎಂದು ಟ್ವೀಟ್‌ನಲ್ಲಿ ವಿಡಿಯೋ ಶೇರ್ ಮಾಡಲಾಗಿದೆ.

ಏನಿದು ಭೋಜನ ಬಂಡಿ ಯೋಜನೆ

ಬಿಎಂಟಿಸಿಯಲ್ಲಿ 10 ಲಕ್ಷ ಕಿ.ಮೀ.ಗೂ ಹೆಚ್ಚು ಓಡಿದ ಬಸ್‌ಗಳನ್ನು ಗುಜರಿಗೆ ಹಾಕಲಾಗಿದ್ದು, ಅವುಗಳ ಪೈಕಿ ಚೆನ್ನಾಗಿರುವುದನ್ನು ಒಂದೊಂದಾಗಿ ಭೋಜನ ಬಂಡಿಗಳನ್ನಾಗಿ ಮಾರ್ಪಾಡು ಮಾಡುವ ಯೋಜನೆ ಇದು.

ಪ್ರಾಯೋಗಿಕವಾಗಿ 10.64 ಕಿ.ಮೀ. ಓಡಿದ ಬಸ್‌ ಅನ್ನು ಭೋಜನ ಬಂಡಿಯನ್ನಾಗಿ ಪರಿವರ್ತಿಸಲಾಗಿದೆ. ಇದರಲ್ಲಿ ಬಸ್‌ಗೆ ಮೊಬೈಲ್‌ ಕ್ಯಾಂಟೀನ್‌ನ ರೂಪ ನೀಡಲಾಗಿದೆ. ದಾಸನಪುರದ ಕೇಂದ್ರೀಯ ಘಟಕದಲ್ಲಿ ಈ ಹೊಸ ಬಂಡಿಯನ್ನು ರೂಪಿಸಲಾಗಿದೆ. ಬಿಎಂಟಿಸಿ ಶೇರ್ ಮಾಡಿರುವ ವಿಡಿಯೋದಲ್ಲಿ ಭೋಜನ ಬಂಡಿಯ 360 ಡಿಗ್ರಿ ವೀಕ್ಷಣೆಯನ್ನು ಒದಗಿಸಲಾಗಿದೆ. ದಾಸನಪುರದ ಕೇಂದ್ರೀಯ ಘಟಕದ ವರ್ಕ್‌ಶಾಪ್‌ ವ್ಯವಸ್ಥಾಪಕ ಆರ್.ಆನಂದಕುಮಾರ್ ನೇತೃತ್ವದ ತಂಡ ಭೋಜನ ಬಂಡಿ ಸಿದ್ದಪಡಿಸಿದೆ.

ಭೋಜನ ಬಂಡಿಯಲ್ಲಿರುವ ಅನುಕೂಲಗಳೇನು

ಭೋಜನ ಬಂಡಿಯಲ್ಲಿ ಕಾರ್ಮಿಕರು ತಿಂಡಿ, ಊಟ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಬಸ್ಸಿನೊಳಗೆ ಉದ್ದಕ್ಕೆ ಎರಡೂ ಬದಿಗೆ ಆಸನ ವ್ಯವಸ್ಥೆ ಮಾಡಲಾಗಿದ್ದು, ಮಧ್ಯದಲ್ಲಿ ಟೇಬಲ್ ಫಿಟ್ ಮಾಡಲಾಗಿದೆ. ಆರಾಮವಾಗಿ ಕುಳಿತು ಊಟ ಮಾಡುವುದಕ್ಕೆ ಬೇಕಾದ ವ್ಯವಸ್ಥೆ ಇದರಲ್ಲಿದೆ. ಫ್ಯಾನ್, ಕೈತೊಳೆಯಲು ವಾಶ್‌ ಬೇಸಿನ್, ಚಾವಣಿಯಲ್ಲಿ ಗಾಜಿನ ಕಿಟಕಿಯಿಂದ ಗಾಳಿ ಮತ್ತು ಬೆಳಕಿನ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ.

ಭೋಜನ ಬಂಡಿ ನೀಲಿ ಬಣ್ಣ ಹೊಂದಿದ್ದು, ಮುಂಭಾಗದಲ್ಲಿ ಭೋಜನ ಬಂಡಿ ಎಂಬ ಹೆಸರಿದೆ. ಎರಡೂ ಬದಿಯಲ್ಲಿ ಭೋಜನ ಬಂಡಿ ಬನ್ನಿ ಕುಳಿತು ಊಟ ಮಾಡೋಣ ಎಂದು ಬರೆಯಲಾಗಿದೆ. ಈ ಬಸ್‌ ಸಂಚರಿಸುವುದಿಲ್ಲ ಬದಲಾಗಿ, ಬಿಎಂಟಿಸಿ ಘಟಕಗಳಲ್ಲಿ ಒಂದೆಡೆ ಕ್ಯಾಂಟೀನ್ ಮಾದರಿಯಲ್ಲಿ ನಿಂತಿರುತ್ತದೆ.

ಬಿಎಂಟಿಸಿ ಕ್ಯಾಂಟೀನ್‌ ನಡೆಸುತ್ತಾ…

ಪ್ರಸ್ತುತ ಬಿಎಂಟಿಸಿಯ ಯಾವುದೇ ಡಿಪೋಗಳಲ್ಲಿ ಕ್ಯಾಂಟೀನ್‌'ಗಳಿಲ್ಲ. ಮೊಬೈಲ್ ಕ್ಯಾಂಟೀನ್‌ ಕೂ ಡಿಲ್ಲ. ಆದಾಗ್ಯೂ, ಬಿಎಂಟಿಸಿಯಿಂದ ಕ್ಯಾಂಟೀನ್ ಶುರುಮಾಡುವ ಯಾವುದೇ ಆಲೋಚನೆ ಇಲ್ಲ.ಭೋಜನ ಬಂಡಿಯನ್ನು ಪ್ರಾಯೋಗಿಕವಾಗಿ ಪರಿಚಯಿಸುತ್ತಿದ್ದು, ಇದು ಯಶಸ್ವಿಯಾದರೆ ಉಳಿದೆಡೆ ಕೂಡ ಜಾರಿಗೆ ಬರಲಿದೆ. ಮೊದಲ ಬಾರಿಗೆ ಇದನ್ನು ಪೀಣ್ಯ ಅಥವಾ ಯಶವಂತಪುರದಲ್ಲಿ ನಿಲ್ಲಿಸಬಹುದು ಎಂದು ಬಿಎಂಟಿಸಿ ಮೂಲಗಳು ತಿಳಿಸಿವೆ.

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point